ಅಂದುಕೊಂಡಿದ್ದು ವಕೀಲಗಿರಿ, ಏರಿದ್ದು ಸಿಪಾಯಿಗಿರಿ!
Team Udayavani, Jan 26, 2019, 5:04 AM IST
ಬೆಳ್ತಂಗಡಿ: ನ್ಯಾಯಾಲಯದಲ್ಲಿ ಕರಿಕೋಟು ಹಾಕಿ ಕಾರ್ಯನಿರ್ವಹಿಸಬೇಕು ಬಯಸಿದ್ದವರು ಅವರು. ಅದು ಅವರ ಬಾಲ್ಯದ ಆಸಕ್ತಿ. ಆದರೆ ಬಳಿಕ ಯೋಧರ ಯೂನಿಫಾರ್ಮ್ಗೆ ಮನಸೋತು ಸೇರಿದ್ದು ಸೇನೆಗೆ ದೇಶ ಸೇವೆ ಮಾಡಲಿಕ್ಕೆ.
ಹದಿನೈದು ವರ್ಷಗಳಿಂದ ದೇಶ ಸೇವೆ ಯಲ್ಲಿ ನಿರತರಾಗಿರುವ ತಿಲಕ್ ಎಸ್.ಪಿ ಅವರಿಗೆ ಈ ಅವಕಾಶಕ್ಕಾಗಿ ಸದಾ ತಮ್ಮ ತಂದೆ-ತಾಯಿಯನ್ನು ನೆನಪಿಸಿಕೊಳ್ಳುತ್ತಾರೆ.
ಮೂಡುಬಿದಿರೆ ಆಲಂಗಾರಿನ ಅಂಬೂರಿ ನಿವಾಸಿ, ನಿವೃತ್ತ ಸೈನಿಕ ಪರಮೇಶ್ವರ ಬಂಗೇರ-ಶಾರದಾ ದಂಪತಿಯ ಪುತ್ರ ತಿಲಕ್ ಪ್ರಸ್ತುತ ಭಾರತೀಯ ಸೇನೆಯಲ್ಲಿ ಗುಜರಾತ್‌ನ ಬರೋಡದಲ್ಲಿ ನಾಯಕ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ನ ಸರ್ವೀಸ್‌ನ ಬಹುತೇಕ ಅವಧಿಯನ್ನು ಪೂರ್ಣಗೊಳಿಸಿರುವ ಅವರೀಗ ಪದೋನ್ನತಿಯ ನಿರೀಕ್ಷೆಯಲ್ಲಿದ್ದಾರೆ.
ತಾನೇ ದುಡಿದು ಕಲಿಕೆ!
ಪರಮೇಶ್ವರ್ ಅವರ ಐವರು ಮಕ್ಕಳಲ್ಲಿ ಕೊನೆಯವರಾದ ತಿಲಕ್ ಸ್ವಾಭಿಮಾನಿ. ಕಾಲೇಜು ಕಲಿಕೆಯ ಅವಧಿಯಲ್ಲಿ ರಜೆಯ ಸಂದರ್ಭ ತನ್ನ ಖರ್ಚಿಗಾಗಿ ಮರದ ಮಿಲ್ಲ್ನಲ್ಲಿ ದುಡಿಯುತ್ತಿದ್ದರು. ಆರಂಭದ ಮೂವರು ಮಕ್ಕಳು ಹೆಣ್ಣು ಮಕ್ಕಳಾದ ಕಾರಣ ಅವರ ಮದುವೆಯ ಹೊಣೆ ಪೋಷಕರಿಗಿತ್ತು. ಹಾಗಾಗಿ ತಿಲಕ್ ಪೋಷಕರಿಗೆ ಹೊರೆಯಾಗದೇ ತಾವೇ ದುಡಿದು ಪದವಿ ಪೂರೈಸಿದ್ದರು.
ತಿಲಕ್ ಅವರ ತಂದೆಯೂ ಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ತಿಲಕ್ ಸೈನ್ಯಕ್ಕೆ ಸೇರುವುದಕ್ಕೂ ಇವರ ಪ್ರೇರಣೆಯೂ ಇತ್ತು. 2003-04ರಲ್ಲಿ ಬೆಂಗಳೂರಿನ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನಲ್ಲಿ ಸಿಪಾಯಿಯಾಗಿ ಸೇನೆಗೆ ಸೇರ್ಪಡೆಗೊಂಡ ತಿಲಕ್, 2 ಬಡ್ತಿ ಪಡೆದಿದ್ದಾರೆ. 15 ವರ್ಷಗಳಿಗಿಂತಲೂ ಹೆಚ್ಚು ಕರ್ತವ್ಯ ನಿರ್ವಹಿಸಬಹುದು ಎಂಬ ಹಿನ್ನೆಲೆ ಯಲ್ಲಿ ಸೇನೆಯಲ್ಲಿ ಮುಂದುವರಿ ಯುವ ಆಸಕ್ತಿ ಹೊಂದಿದ್ದಾರೆ.
ತಾಯಿ ಪ್ರೇರೇಪಿಸಿದ್ದರು
ಇವರು ಸೇನೆಗೆ ಸೇರುವಾಗ ಕೊಂಚ ಆತಂಕಿತರಾಗಿದ್ದ ತಾಯಿಯವರು ಬಳಿಕ ಅವರೇ ಪ್ರರಣೆ ನೀಡಿದ್ದರು. ಕರ್ತವ್ಯದ ಸಂದರ್ಭ ಎಚ್ಚರಿಕೆ ವಹಿಸಿ, ಆದರೆ ಯಾವುದೇ ಕಾರಣಕ್ಕೂ ಬೆನ್ನು ತೋರಿಸಬೇಡ. ಕೆಲಸ ಕಷ್ಟ ಆಗುತ್ತದೆ ಎಂದು ಅರ್ಧದಿಂದ ಬಾರದೆ ಮನೆಯ ಮರ್ಯಾದೆ ಉಳಿಸು ಎಂದು ಧೈರ್ಯ ತುಂಬಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ತಿಲಕ್. ತಮ್ಮ ಇಂದಿನ ಯಶಸ್ಸಿಗೆ ಪೋಷಕ ರಲ್ಲದೇ, ಪತ್ನಿ ಪ್ರಫುಲ್ಲಾ, ಪುಟ್ಟ ಮಗು ಯಶ್ವಿಯ ಸಹಕಾರ ವನ್ನೂ ನೆನಪಿಸಿಕೊಳ್ಳಲು ಮರೆಯುವುದಿಲ್ಲ.
ಕಣ್ಣೆದುರೇ ಹತನಾಗಿದ್ದ
ತಿಲಕ್ ಅವರು 2011ರಲ್ಲಿ ಜಮ್ಮು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಅವರ ತಂಡಕ್ಕೆ ಭಯೋತ್ಪಾದಕನ ಕುರಿತು ಮಾಹಿತಿ ಬಂದಿತ್ತು. ಭಾರತೀಯ ಸೇನೆಯ ಎರಡು ತಂಡಗಳು ಆತನ ವಿರುದ್ಧ ಕಾರ್ಯಾಚರಣೆಗೆ ತೆರಳಿದ್ದವು. ಆಗ ಆತ ಮನೆಯೊಂದರಿಂದ ಇವರ ವಿರುದ್ಧ ಫೈರ್ ಮಾಡಿಕೊಂಡು ಓಡಿಕೊಂಡು ಬರುತ್ತಿದ್ದ. ಆಗ ಆತನನ್ನು ಇವರ ತಂಡದ ಸದಸ್ಯನೊಬ್ಬ ಹೆಡ್‌ಶೂಟ್ ಮಾಡಿದ್ದ. ಆ ಸಂದರ್ಭ ಭಯೋತ್ಪಾದಕ ರಕ್ತದ ಮಡುವಿನಲ್ಲಿ ಬಿದ್ದು, ನಮ್ಮ ಕಣ್ಣೆದುರೇ ಹತನಾಗಿದ್ದ ಎಂದು ತಿಲಕ್ ನೆನಪಿಸಿಕೊಳ್ಳುತ್ತಾರೆ.
ಕುಟುಂಬಕ್ಕೇ ಹೆಮ್ಮೆ
ಯೋಧರು ಹಾಗೂ ಪೊಲೀಸ್ ಇಲಾಖೆಯ ಕುರಿತು ನನಗೆ ಹೆಚ್ಚಿನ ಆಸಕ್ತಿ ಹಾಗೂ ಗೌರವ. ಪ್ರಸ್ತುತ ಮದುವೆಯಾಗಿ ಭಾರತೀಯ ಯೋಧನ ಹೆಂಡತಿ ಎಂದು ಹೇಳಿಕೊಳ್ಳಲು ನಾನು ಹೆಮ್ಮೆ ಪಡುತ್ತೇನೆ. ಅವರಿಂದಾಗಿ ನಮ್ಮ ಕುಟುಂಬದ ಗೌರವವೂ ಹೆಚ್ಚಿದೆ.
-ಪ್ರಫುಲ್ಲಾ,
ತಿಲಕ್ ಅವರ ಪತ್ನಿ
ಜನರು ಸ್ಮರಿಸುವ ಹುದ್ದೆ
ಆರಂಭದಲ್ಲಿ ಎಲ್‌ಎಲ್‌ಬಿ ಮಾಡಿ ನ್ಯಾಯವಾದಿ ಆಗಬೇಕು ಎಂಬ ಆಸೆಯಿತ್ತು. ಆದರೆ ಬಳಿಕ ಮೆರಿಟ್ ಬೇಕು, ಹಣಬೇಕು ಎಂದೆನಿಸತೊಡಗಿತ್ತು. ನನಗೆ ಸೇನೆಯ ಯೂನಿಫಾರ್ಮ್ ಬಹಳ ಇಷ್ಟವಾಗುತ್ತಿತ್ತು. ಅದರ ಮೇಲಿನ ಪ್ರೀತಿ ಕೈ ಹಿಡಿಯಿತು. ನಾವು ಇದ್ದರೂ, ಇಲ್ಲದಿದ್ದರೂ ನಾಲ್ಕು ಜನ ನಮ್ಮನ್ನು ಸ್ಮರಿಸಬೇಕು ಎಂಬ ಕಲ್ಪನೆಯಿಂದ ಸೇನೆಗೆ ಸೇರಿದೆ. ಅದಕ್ಕೆ ನನಗೆ ಹೆಮ್ಮೆಯಿದೆ.
-ತಿಲಕ್ ಎಸ್.ಪಿ.,
ಭಾರತೀಯ ಯೋಧ
ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.