ಕೊಂಕಣಿ ಸಮಾಜದ ಸುಮಂಗಲಿಯರಿಗೆ ಚೂಡಿ ಪೂಜೆ ಸಂಭ್ರಮ
Team Udayavani, Aug 12, 2018, 10:33 AM IST
ಈಶ್ವರಮಂಗಲ: ಜಿಎಸ್‌ಬಿ ಸಮಾಜದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಸ್ಥಾನಮಾನವಿದೆ. ಶ್ರಾವಣ ಮಾಸ ಹಬ್ಬಗಳ ಹೆಬ್ಟಾಗಿಲನ್ನೇ ತೆರೆಯುತ್ತದೆ. ಈ ವರ್ಷ ಶ್ರಾವಣ ಮಾಸ ರವಿವಾರ ಪ್ರಾರಂಭವಾಗುತ್ತಿದ್ದು, ಚೂಡಿ ಪೂಜೆಯ ಸಂಭ್ರಮ ದ್ವಿಗುಣಗೊಳಿಸಿದೆ.
ಜಿಎಸ್‌ಬಿ ಸಮಾಜದ ಸುಮಂಗಲಿಯರು ಶ್ರಾವಣ ಮಾಸದಲ್ಲಿ ರವಿವಾರ-ಶುಕ್ರವಾರ ಚೂಡಿ ಪೂಜೆ ಆಚರಿಸುತ್ತಾರೆ. ರಕ್ಕಸ ದೊರೆ ಜಲಂಧರನ ಪತ್ನಿ ವೃಂದಾ ಪತಿವ್ರತೆಯಾಗಿದ್ದಳು. ವಿಷ್ಣುವಿನ ಪರಮ ಭಕ್ತೆ. ಜಲಂಧರನಿಂದ ದೇವತೆಗಳನ್ನು ರಕ್ಷಿಸಲು ವಿಷ್ಣು ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ಜಲಂಧರ ಸಾಯಬೇಕಾದರೆ ವೃಂದಾಳ ಪಾತಿವ್ರತ್ಯಕ್ಕೆ ಧಕ್ಕೆ ಬರಬೇಕು. ಹೀಗಾಗಿ, ಜಲಂಧರ ಯುದ್ಧಕ್ಕೆ ತೆರಳಿದ್ದ ಸಂದರ್ಭದಲ್ಲಿ ವಿಷ್ಣು ಆತನ ರೂಪದಲ್ಲಿ ವೃಂದಾಳ ಬಳಿಗೆ ಬರುತ್ತಾನೆ. ತನ್ನ ಗಂಡನೆಂದು ನಂಬಿ ವೃಂದಾ ವಿಷ್ಣುವನ್ನು ಕೂಡುತ್ತಾಳೆ. ಯುದ್ಧಭೂಮಿಯಲ್ಲಿ ಜಲಂಧರ ಸಾಯುತ್ತಾನೆ. ಪತಿಯ ಸಾವಿನಿಂದ ದುಃಖೀತಳಾದ ವೃಂದಾ ಮತ್ತೆ ಪಾತಿ ವ್ರತ್ಯ ಕೊಡಿಸುವಂತೆ ವಿಷ್ಣುವಿನ ಮೊರೆ ಹೋಗುತ್ತಾಳೆ. ಶ್ರಾವಣ ಮಾಸದಲ್ಲಿ ವಿವಿಧ ಹೂವುಗಳನ್ನು ನಾರಿನಿಂದ ಕಟ್ಟಿ ತುಳಸಿಗೆ ಅರ್ಪಿಸಿ, ತುಳಸೀ ದೇವಿಯನ್ನು ಪೂಜಿಸುವಂತೆ ವೃಂದಾಗೆ ತಿಳಿಸುತ್ತಾನೆ. ತುಳಸೀಯನ್ನು ಪೂಜಿಸಿ ವೃಂದಾ ಪವಿತ್ರಳಾಗುವ ಕಥೆಯೇ ಚೂಡಿ ಪೂಜೆಗೆ ಹಿನ್ನೆಲೆ.
ಚೂಡಿ ಪೂಜೆಯ ಅನಂತರ ಮೊದಲ ಚೂಡಿಯನ್ನು ಗಂಡನಿಗೆ ನೀಡಿ ಕಾಲಿಗೆರಗಿ ಆಶೀರ್ವಾದ ಬೇಡುತ್ತಾಳೆ. ಶ್ರಾವಣ ಮಾಸದ ಮೊದಲ ಚೂಡಿ ಪೂಜೆಗೆ ಗಂಡ ಉಡುಗೊರೆ ಕೊಡುವ ಸಂಪ್ರದಾಯವೂ ಇದೆ. ಆನಂತರ ಮನೆಯಲ್ಲಿರುವ ಹಿರಿಯರ ಆಶೀರ್ವಾದ ಪಡೆಯುತ್ತಾಳೆ. ನವವಿವಾಹಿತರಿಗೆ ಮೊದಲ ಚೂಡಿ ಪೂಜೆ ಸಂಭ್ರಮಕ್ಕೆ ಸಾಕ್ಷಿಯಾಗುತ್ತದೆ. ಗಂಡನ ಮನೆಯ ಸಂಬಂಧಿಕರು ಸೇರಿ ಚೂಡಿ ಪೂಜೆಯನ್ನು ಮಾಡಿ ಸಂಭ್ರಮಿಸಿದರೆ, ಉಳಿದ ದಿನಗಳ ಚೂಡಿ ಪೂಜೆಯನ್ನು ತವರು ಮನೆಯಲ್ಲಿ ಮಾಡುತ್ತಾಳೆ. ಕೊನೆಯಲ್ಲಿ ಅಳಿಯ, ಮಗಳಿಗೆ ತವರು ಮನೆಯವರು ಚೂಡಿ ಪೂಜೆಯ ಉಡುಗೊರೆ ನೀಡುತ್ತಾರೆ. ದೂರದ ಊರಿನಲ್ಲಿರುವ ಸಂಬಂಧಿಕರಿಗೆ ಅಂಚೆಯ ಮೂಲಕ ಚೂಡಿಯನ್ನು ಕಳುಹಿಸುವ ಕ್ರಮವೂ ಇದೆ.
ಚೂಡಿ ಪೂಜೆಯ ತಯಾರಿ
ಶ್ರಾವಣ ಮಾಸದ ಪ್ರತಿ ರವಿವಾರ, ಶುಕ್ರವಾರ ಸುಮಂಗಲಿಯರು ಚೂಡಿ ಪೂಜೆಯನ್ನು ಮಾಡುತ್ತಾರೆ. ಈ ಪೂಜೆಗೆ ಗರಿಕೆ ಹುಲ್ಲು ಅತ್ಯಗತ್ಯ. ಆರತಿ , ಬೆಕ್ಕಿನ ಉಗುರು ಹಾಗೂ ಕುದುರೆ ಕಾಲನ್ನು ಹೋಲುವ ಸಸ್ಯ ಗಳು, ನೀರು ಕಡ್ಡಿ, ಅರಳಿ ಗಿಡ ಹಾಗೂ ಹಿತ್ತಿಲಲ್ಲಿ ಸಿಗುವ ಯಾವುದಾದರೂ ಐದು ಹೂವುಗಳನ್ನು ಸೇರಿಸಿ ಚೂಡಿಯನ್ನು ತಯಾರಿಸುತ್ತಾರೆ. ಪೂಜಿಸಲು ಬೆಸ ಸಂಖ್ಯೆಯಲ್ಲಿ ಚೂಡಿ ಬಳಸುತ್ತಾರೆ. ಔಷಧೀಯ ಗುಣವುಳ್ಳ ಚೂಡಿಯನ್ನು ತಲೆಯಲ್ಲಿ ಧರಿಸುವುದರಿಂದ ಶರೀರದ ಉಷ್ಣತೆ ಕಮ್ಮಿಯಾಗುತ್ತದೆ. ಸಮತೋಲನ ಸಾಧ್ಯವಾಗುತ್ತದೆ. ಭಕ್ತಿಯಿಂದ ಚೂಡಿ ಪೂಜೆ ಆಚರಿಸಿದರೆ ಆಧ್ಯಾತ್ಮಿಕ ಶಕ್ತಿ ಹೆಚ್ಚುತ್ತದೆ ಎಂಬುದು ಹಿರಿಯರ ಅಭಿಪ್ರಾಯ.
ಪೂಜೆಯ ವಿಧಾನ
ಮನೆ ಹಾಗೂ ತುಳಸೀ ಕಟ್ಟೆಯನ್ನು ಸ್ವಚ್ಛಗೊಳಿಸಿ ಸುಮಂಗಲಿಯರು ತಲೆಗೆ ಸ್ನಾನ ಮಾಡಿ, ಬಾವಿಯಿಂದ ನೀರು ತಂದು ತುಳಸೀ ಕಟ್ಟೆ ಸುತ್ತ ಮಾವಿನ ಎಲೆಯಿಂದ ಪ್ರೋಕ್ಷಣೆ ಮಾಡುತ್ತಾರೆ. ತುಳಸಿಗೆ ಅರಿಸಿನ, ಕುಂಕುಮ ಹಚ್ಚಿ, ಚೂಡಿಯನ್ನಿಟ್ಟು, ಹಣ್ಣುಕಾಯಿ, ನೈವೇದ್ಯ ಮಾಡಿ, ಆರತಿ ಎತ್ತಿ ಪೂಜೆ ಮಾಡುತ್ತಾರೆ. ಒಂದು ಚೂಡಿಯನ್ನು ತುಳಸಿ ಕಟ್ಟೆಗೆ ಹಾಗೂ ಸೂರ್ಯದೇವರಿಗೆ ಸಮರ್ಪಿಸುತ್ತಾರೆ. ಮನೆಯಲ್ಲಿರುವ ಎಲ್ಲ ಹೊಸ್ತಿಲುಗಳನ್ನು ರಂಗೋಲಿಯಿಂದ ಸಿಂಗರಿಸಿ, ಆರತಿ ಬೆಳಗಿ, ಚೂಡಿ ಇಟ್ಟು, ಅಕ್ಷತೆ ಹಾಕಿ ನಮಿಸುತ್ತಾರೆ. ದೇವರ ಕೋಣೆಯಲ್ಲಿ ದೇವರಿಗೆ ಚೂಡಿ ಇಟ್ಟು ಪೂಜಿಸುತ್ತಾರೆ.
ಮಾಧವ ನಾಯಕ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.