ಇಂದು ವಿಶ್ವ ಜಲದಿನ
Team Udayavani, Mar 22, 2018, 12:18 PM IST
ನೀರಿನ ಸಂರಕ್ಷಣೆ, ಶುದ್ಧ ನೀರಿನ ಸಾರ್ವತ್ರಿಕ ಲಭ್ಯತೆಯ ಮಹತ್ವನ್ನು ತಿಳಿಸುವುದು, ನೈರ್ಮಲ್ಯದ ಕುರಿತ ಅರಿವಿನ ಹಿನ್ನೆಲೆಯಲ್ಲಿ ಹುಟ್ಟಿಕೊಂಡದ್ದು ವಿಶ್ವ ಜಲ ದಿನ ಆಚರಣೆ. ವಿಶ್ವಾದ್ಯಂತ ಅಭಿವೃದ್ಧಿ ಶೀಲ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇದನ್ನು ಆಚರಿಸಲಾಗುತ್ತದೆ. ಹಲವಾರು ಸಂಘ ಸಂಸ್ಥೆಗಳು, ಜಲ ಸಾಕ್ಷರತೆ, ಸಂರಕ್ಷಣೆಗೆ ಜಲ ದಿನ ಹೆಸರಿನಲ್ಲಿ ಕೆಲಸ ಮಾಡುತ್ತವೆ. ವರ್ಷವೂ ಒಂದು ಧ್ಯೇಯವನ್ನಿಟ್ಟುಕೊಂಡು ಅದರ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಜಲ ಸಂರಕ್ಷಣೆ: ಈ ದೇಶಗಳೇ ಮಾದರಿ
ಒಂದು ಕಾಲದಲ್ಲಿ ತೊಟ್ಟು ನೀರಿಗೂ ಕೈ ಚಾಚುವ ಪರಿಸ್ಥಿತಿ. ಆದರೆ ಇಂದು ಬೇರೆ ದೇಶಕ್ಕೆ ನೀರು ರಫ್ತು ಮಾಡುವಷ್ಟು ಬೆಳೆದಿವೆ. ಇದು ವಿಶ್ವದ ಕೆಲವು ದೇಶಗಳ ಸಾಧನೆ. ಜಲಸಂರಕ್ಷಣೆಯಲ್ಲಿ ವಿಶ್ವಕ್ಕೇ ಮಾದರಿಯಾದ ದೇಶಗಳು ಹಲವಾರಿವೆ. ಅವುಗಳಲ್ಲೂ ಇಸ್ರೇಲ್, ಸಿಂಗಾಪುರದಂತಹ ದೇಶಗಳು ಬಳಸುತ್ತಿರುವ ತಂತ್ರಜ್ಞಾನ, ಜಲಸಂರಕ್ಷಣೆಯ ಮಾದರಿಗಳು ಅಪೂರ್ವ.
ಸಮುದ್ರ ನೀರು ರಫ್ತು ಮಾಡ್ತಾರೆ!
ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಿ ಕುಡಿವ ನೀರಾಗಿ ಪರಿವರ್ತಿಸುವುದೂ ಅಲ್ಲದೇ ಬಳಸಿದ ನೀರನ್ನು ಪುನರ್ಬಳಕೆ ಮಾಡುವುದರಲ್ಲಿ ನಿಸ್ಸೀಮ ರಾಷ್ಟ್ರ ಇಸ್ರೇಲ್. ಮಧ್ಯಪ್ರಾಚ್ಯದ ಈ ಪುಟ್ಟ ರಾಷ್ಟ್ರ ಬೆಂಗಾಡಿನಲ್ಲಿ ಇದ್ದರೂ ನೀರಿನ ಸದ್ಬಳಕೆಯನ್ನು ಕರತಲಾಮಲಕ ಮಾಡಿಕೊಂಡಿದೆ. ಬಳಸಿದ ನೀರಿನಲ್ಲಿ ಶೇ. 85ರಷ್ಟನ್ನು ಶುದ್ಧೀಕರಿಸಿ ಇಸ್ರೇಲ್ ಪುನರ್ಬಳಕೆ ಮಾಡುತ್ತಿದೆ. 2020ರ ವೇಳೆಗೆ ಇದೇ ನೀರನ್ನು ಬಳಸಿ ಶೇ. 50ರಷ್ಟು ಕೃಷಿ ಕಾರ್ಯಕ್ಕೆ ಬಳಸುವ ಗುರಿ ಹೊಂದಿದೆ. ಇಸ್ರೇಲ್‌ನಲ್ಲಿ 300ಕ್ಕೂ ಹೆಚ್ಚು ನೀರಿನ ತಂತ್ರಜ್ಞಾನದ ಕಂಪನಿಗಳಿದ್ದು, ಸಮುದ್ರ ನೀರನ್ನು ಶುದ್ಧೀಕರಿಸಿ ದೇಶದ ಜನರಿಗೆ ನೀಡುವುದಲ್ಲದೆ ನೆರೆಯ ರಾಷ್ಟ್ರಗಳಿಗೂ ಕುಡಿವ ನೀರನ್ನು ರಫ್ತು ಮಾಡುತ್ತಿವೆ.
ಒಂದು ಹನಿ ನೀರು ವ್ಯರ್ಥವಾಗಲ್ಲ
ಸಿಂಗಾಪುರದಲ್ಲಿ ಒಂದು ಹನಿ ನೀರನ್ನೂ ವ್ಯರ್ಥ ಮಾಡಲ್ಲ. ಮಳೆ ಬಂದರೆ, ಆ ನೀರನ್ನೂ ಹಿಡಿದಿಡುವ ಸುಸಜ್ಜಿತ ವ್ಯವಸ್ಥೆ, ಬಳಸಿದ ನೀರನ್ನೂ ಶುದ್ಧೀಕರಿಸಿ ಬಳಸುವ ವ್ಯವಸ್ಥೆ, ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಮಾಡುವ ವ್ಯವಸ್ಥೆ ಹೊಂದಿದೆ. ಜಗತ್ತಿನಲ್ಲೇ ಅತಿ ಸುಸಜ್ಜಿತ ಒಳಚರಂಡಿ, ನೀರು ಪುನರ್ಬಳಕೆ ವ್ಯವಸ್ಥೆ ಹೊಂದಿದ ದೇಶ ಸಿಂಗಾಪುರ. ಶೇ. 25ರಷ್ಟು ಸಮುದ್ರದ ನೀರನ್ನು ಕುಡಿವ ನೀರನ್ನಾಗಿ ಇಲ್ಲಿ ಪರಿವರ್ತಿಸಲಾಗುತ್ತದೆ. ಮನೆಗಳಿಗೆ ಬಳಸಿದ ನೀರನ್ನೇ ನೀಡಲಾಗುತ್ತಿದೆ. ಜಗತ್ತಿನ ಹೈಡ್ರೋಹಬ್ ಎಂದು ಕರೆಯುವ ಈ ದೇಶದಲ್ಲಿ ಜಲಸಂರಕ್ಷಣ, ಬಳಕೆ ಕುರಿತ 170ಕ್ಕೂ ಹೆಚ್ಚು ಕಂಪೆನಿಗಳು, ಸಂಶೋಧನ ಸಂಸ್ಥೆಗಳಿವೆ.
ನೀರು ಶುದ್ಧೀಕರಣ ಘಟಕಕ್ಕೆ ಸೋಲಾರ್ ಪವರ್
ಅತ್ಯಧಿಕ ಪ್ರಮಾಣದಲ್ಲಿ ಸಮುದ್ರದ ನೀರನ್ನು ಸಿಹಿ ನೀರಾಗಿಸುವ ದೇಶಗಳಲ್ಲೊಂದು ಸೌದಿ ಅರೇಬಿಯಾ. ಇಲ್ಲಿನ ನೀರು ಶುದ್ಧೀಕರಣ ಘಟಕಕ್ಕೆ ಅದು ಸೋಲಾರ್ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ನೀರು ಪುನರ್ಬಳಕೆಗೂ ಸುಧಾರಿತ ತಂತ್ರಜ್ಞಾನವನ್ನು ಅದು ಹೊಂದಿದೆ. 2019ರ ವೇಳೆಗೆ ದೇಶದಲ್ಲಿರುವ ಎಲ್ಲ ಉಪ್ಪು ನೀರು ಶುದ್ಧೀಕರಣ ಘಟಕಗಳನ್ನೂ ಸೋಲಾರ್ ಶಕ್ತಿ ಬಳಸಿಯೇ ಉಪಯೋಗಿಸುವ ಪ್ಲಾನ್ ಅದರದ್ದು, ಅಲ್‌ಖಾಫ್ಜಿಹೆಸರಿನ ನಗರದಲ್ಲಿ ಜಗತ್ತಿನ ಅತಿ ದೊಡ್ಡ ಉಪ್ಪುನೀರು ಸಂಸ್ಕರಣ ಘಟಕವನ್ನು ಅದು ಹೊಂದಿದ್ದು, ಸೋಲಾರ್ ಮೂಲಕ ಅದು ಕಾರ್ಯನಿರ್ವಹಿಸುತ್ತದೆ.
ಮಳೆ ನೀರೇ ಎಲ್ಲ …
ದಕ್ಷಿಣ ಕೊರಿಯಾ ನಿರ್ಮಿಸಿದ ಕೃತ ದ್ವೀಪ ಸೊಂಗ್ಡೋದಲ್ಲಿ ಮಳೆ ನೀರೇ ಜೀವಾಳ. ಅಲ್ಲೂ ನೀರಿನ ಕೊರತೆ ಇದ್ದು, ಸ್ವಲ್ಪವೂ ನೀರು ಪೋಲಾಗದಂತೆ ಹಿಡಿದಿಡುವ ವ್ಯವಸ್ಥೆ ಮಾಡಲಾಗಿದೆ. ಮಳೆ ನೀರು ಭೂಮಿಯಡಿಗೆ ಹೋಗಿ, ನಿರ್ದಿಷ್ಟ ಟ್ಯಾಂಕ್‌ನಲ್ಲಿ ಶೇಖರಣೆಗೊಂಡು ಅಲ್ಲಿಂದ ನೀರು ಶುದ್ಧೀಕರಣ ಘಟಕಕ್ಕೆ ರವಾನೆಯಾಗಿ ಶುದ್ಧೀಕರಣವಾಗಿ ಬಳಿಕ ಮನೆಬಳಕೆಗೆ ಬಳಸಲಾಗುತ್ತದೆ. 12 ವರ್ಷಗಳ ಹಿಂದೆ ಈ ತಂತ್ರಜ್ಞಾನ ರೂಪಿಸಲಾಗಿದ್ದು ದ.ಕೊರಿಯಾದ ಇತರ ಸಾವಿರಕ್ಕೂ ಮಿಕ್ಕಿದ ಪುಟಾಣಿ ದ್ವೀಪಗಳಲ್ಲಿ ಜಾರಿಗೆ ತರುವ ಉದ್ದೇಶವಿದೆ.
ಜಲ ದಿನ ಘೋಷಣೆಯಾಗಿದ್ದು ಯಾವಾಗ?
1992ರಲ್ಲಿ ಬ್ರೆಜಿಲ್‌ನ ರಿಯೋಡಿ ಜನೈರೋದಲ್ಲಿ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಕುರಿತ ಸಮ್ಮೇಳನದಲ್ಲಿ ವಿಶ್ವ ಜನ ದಿನ ಕುರಿತ ಆಚರಣೆಯ ಬಗ್ಗೆ ಮೊದಲ ಬಾರಿಗೆ ಶಿಫಾರಸು ಮಾಡಲಾಗಿತ್ತು. ಇದಕ್ಕೆ ವಿಶ್ವಸಂಸ್ಥೆ ಅಂಗೀಕಾರ ಸಿಕ್ಕಿದ್ದು, ಪರಿಣಾಮ ಅದೇ ಸಭೆಯಲ್ಲಿ ಮಾ. 22ರಂದು ಜಲ ದಿನ ಆಚರಣೆಗೆ ನಿರ್ಣಯ ಕೈಗೊಳ್ಳಲಾಗಿತ್ತು. ವರ್ಷವೂ ಒಂದು ಧ್ಯೇಯವನ್ನಿಟ್ಟುಕೊಂಡು ಆಚರಣೆ ಮಾಡುವ ಬಗ್ಗೆ ನಿರ್ಧರಿಸಲಾಗಿತ್ತು. ಅದರಂತೆ 1993ರಿಂದ ವಿಶ್ವ ಜಲ ದಿನ ಆಚರಣೆ ನಡೆಯುತ್ತಿದೆ.
ಬರ ಕಲಿಸಿದ ಪಾಠ
ಅಮೆರಿಕದ ಕ್ಯಾಲಿಫೋರ್ನಿಯಾ ಹಿಂದೆಂದೂ ಕಂಡು ಕೇಳರಿಯದ ಬರಕ್ಕೆ ತುತ್ತಾಗಿದ್ದು ಹಳೇ ಸುದ್ದಿ. ಇದರಿಂದ ಅದು ಪಾಠ ಕಲಿತಿದ್ದು, ಈಗ ನೀರಿನ ಸದ್ಬಳಕೆ, ಪುನರ್ಬಳಕೆ, ಸಮುದ್ರ ನೀರನ್ನು ಶುದ್ಧೀಕರಣಗೊಳಿಸುವತ್ತ ದಾಪುಗಾಲಿಟ್ಟಿದೆ. ಒಂದು ದಶಕದಿಂದ ಬರದ ಪರಿಣಾಮ ನಿತ್ಯದ ಬಳಕೆಗೂ ನೀರಿಲ್ಲದಂತಾದ್ದರಿಂದ ಕುಟುಂಬಗಳಿಗೆ ಇಲ್ಲಿ ನೀರು ಬಳಕೆ ಕಡಿಮೆ ಮಾಡಲು ಹೇಳಲಾಗಿತ್ತು. ಇದರೊಂದಿಗೆ ನೀರು ಪುನರ್ಬಳಕೆಗೆ ವ್ಯಾಪಕ ಶುದ್ಧೀಕರಣ ಘಟಕಗಳ ಸ್ಥಾಪನೆ, ಸಮುದ್ರ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಯ್ತು. 2016ರ ಹೊತ್ತಿಗೆ ಇಲ್ಲಿ ಪಶ್ಚಿಮ ದೇಶಗಳಲ್ಲೇ ಅತಿ ದೊಡ್ಡ ಸಮುದ್ರ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಯ್ತು. ಮಳೆ ನೀರು ಸಂಗ್ರಹಣೆ, ನೀರಿನ ಸದ್ಭಳಕೆ ಬಗ್ಗೆ ಇಲ್ಲಿ ವ್ಯಾಪಕ ಆಂದೋಲನ ನಡೆದಿದೆ.
ನೀರಿಗಾಗಿ ಪ್ರಕೃತಿ
ವಿಶ್ವ ಜಲದಿನದಲ್ಲಿ ಈ ವರ್ಷದ ಧ್ಯೇಯ `ನೀರಿಗಾಗಿ ಪ್ರಕೃತಿ’ 21ನೇ ಶತಮಾನದಲ್ಲಿ ನೀರಿಗಾಗಿ ಪ್ರಕೃತಿ ಎದುರಿಸುತ್ತಿರುವ
ಸವಾಲುಗಳನ್ನು ಪರಿಹರಿಸಲು ಯತ್ನಿಸಬೇಕು ಎನ್ನುವುದು ಇದರ ಹಿಂದಿನ ಆಶಯ. ವಿಶ್ವಸಂಸ್ಥೆ ಜಲ ಒಕ್ಕೂಟ (ಯುಎನ್ ವಾಟರ್) ವರ್ಷವೂ ಧ್ಯೇಯವನ್ನು ಆಯ್ಕೆ ಮಾಡುತ್ತದೆ.
ಈಶ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.