ಇನ್ನು ದಿನ ಬಿಟ್ಟು ದಿನ ತ್ಯಾಜ್ಯ ಸಂಗ್ರಹ ಮಾಡಲು ಮುಂದಾದ ನಗರಸಭೆ
Team Udayavani, Jun 2, 2018, 4:10 AM IST
ನಗರ: ಡೋರ್- ಟು- ಡೋರ್ ತ್ಯಾಜ್ಯ ಸಂಗ್ರಹದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಇದುವರೆಗೆ ಪ್ರತಿದಿನ ಸಂಗ್ರಹಿಸುತ್ತಿದ್ದ ತ್ಯಾಜ್ಯವನ್ನು, ಇನ್ನು ಮುಂದೆ ದಿನ ಬಿಟ್ಟು ದಿನ ಸಂಗ್ರಹ ಮಾಡಲು ಪುತ್ತೂರು ನಗರಸಭೆ ಮುಂದಾಗಿದೆ. ಒಟ್ಟು 14 ಪೌರಕಾರ್ಮಿಕರನ್ನು ಬಳಸಿಕೊಂಡು ಪುತ್ತೂರು ನಗರಸಭೆ ವ್ಯಾಪ್ತಿಯ 27 ವಾರ್ಡ್‌ಗಳ 14,948 ಮನೆ, 5,136 ವಾಣಿಜ್ಯ ಸಂಕೀರ್ಣ ಹಾಗೂ ಸರಕಾರಿ ಕಚೇರಿಗಳಿಂದ ಪ್ರತಿದಿನ ತ್ಯಾಜ್ಯ ಸಂಗ್ರಹ ಮಾಡುವುದು ಪ್ರಾಯೋಗಿಕವಾಗಿ ಕಷ್ಟವೇ. ಒಂದು ತಂಡ ದಿನಕ್ಕೆ ಹೆಚ್ಚೆಂದರೆ 700 ಬಾಗಿಲುಗಳನ್ನು ತಲುಪಲಷ್ಟೇ ಸಾಧ್ಯ ಎನ್ನುತ್ತಾರೆ ಪೌರಕಾರ್ಮಿಕರು. ತ್ಯಾಜ್ಯ ಸಂಗ್ರಹಕ್ಕೆ ಹಿನ್ನಡೆ ಆಗಿದೆ. ದಿನ ಬಿಟ್ಟು ದಿನ ಪ್ರತಿ ಬಾಗಿಲುಗಳನ್ನು ತಲುಪುವ ವ್ಯವಸ್ಥೆ ಮಾಡಲಾಗಿದೆ.
ನಿವೃತ್ತ ಆರೋಗ್ಯ ನಿರೀಕ್ಷಕ ಅಬೂಬಕ್ಕರ್ ಅವರ ಸಲಹೆಯನ್ನು ಪರಿಗಣಿಸಿರುವ ಪುತ್ತೂರು ನಗರಸಭೆ, ಅದರಂತೆ ಬೆಳಗ್ಗೆ ಪೌರಕಾರ್ಮಿಕರನ್ನು ವಿವಿಧ ರೂಟ್‌ಗಳಿಗೆ ಹಂಚಿ ಹಾಕಲಿದೆ. ಇದರ ಹೊಣೆಯನ್ನು ಎಂಜಿನಿಯರ್ ಅರುಣ್ ಅವರಿಗೆ ನೀಡಲಾಗಿದೆ. ಬೆಳಗ್ಗೆ ಸುಮಾರು 7 ಗಂಟೆ ಹೊತ್ತಿಗೆ ಆಗಮಿಸುವ ಇವರು, ಎಲ್ಲ ಪೌರಕಾರ್ಮಿಕರಿಗೆ ಕೆಲಸ ಹಂಚಲಿದ್ದಾರೆ. ಸಂಜೆ ಹೊತ್ತಿಗೆ ಇವರೆಲ್ಲ ಎಂಜಿನಿಯರ್‌ಗೆ ವರದಿ ನೀಡಬೇಕು. ಇದನ್ನು ಪೌರಾ ಯುಕ್ತರು ಟ್ರಾಪ್ ಮಾಡುತ್ತಾರೆ. ಈಗ ನಗರಸಭೆ ಅಧಿಕಾರಿಗಳು ಹಾಕಿಕೊಂಡ ಯೋಜನೆಯಂತೆ ಮುಂದುವರಿದರೆ, ಜೂನ್ ತಿಂಗಳಾಂತ್ಯಕ್ಕೆ ಘನತ್ಯಾಜ್ಯ ವಿಲೇವಾರಿಯ ದೊಡ್ಡ ಸಮಸ್ಯೆ ಬಗೆಹರಿದಂತೆ.
ಹೆಚ್ಚುವರಿ ಲಾರಿ
ಡೋರ್-ಟು- ಡೋರ್ ಕಸ ಸಂಗ್ರಹ ದಲ್ಲಿ ಇದುವರೆಗೆ 7 ವಾಹನಗಳು ತೊಡಗಿಸಿಕೊಂಡಿದ್ದವು. ಇದೀಗ ಗುತ್ತಿಗೆದಾರರ ಬಳಿ ಮಾತನಾಡಿ, 1 ಹೆಚ್ಚುವರಿ ಟಿಪ್ಪರ್ ಲಾರಿಯನ್ನು ತರಿಸಿಕೊಳ್ಳಲಾಗಿದೆ. ಪಿಕಪ್ ನಲ್ಲಿ ಎರಡು ಬಾರಿ ಕೊಂಡೊಯ್ಯುವ ತ್ಯಾಜ್ಯವನ್ನು, ಟಿಪ್ಪರ್ ಒಂದೇ ಬಾರಿಗೆ ಕೊಂಡೊಯ್ಯುವುದರಿಂದ ಕೆಲಸದ ವೇಗ ಹೆಚ್ಚಲಿದೆ. ತ್ಯಾಜ್ಯ ಹೆಚ್ಚಿರುವ ಪ್ರದೇಶಗಳನ್ನು ಆಯ್ದುಕೊಂಡು, ಆ ಪ್ರದೇಶಕ್ಕೆ ಟಿಪ್ಪರ್ ಲಾರಿಯನ್ನು ಕಳುಹಿಸಿಕೊಡಲಿದೆ.
ರಸ್ತೆ ಬದಿಯ ತ್ಯಾಜ್ಯ ತೆರವಾಗುತ್ತಿದೆ
ರಸ್ತೆ ಬದಿಯಲ್ಲಿ ಡಸ್ಟ್‌ಬಿನ್ ಇಟ್ಟು, ತ್ಯಾಜ್ಯ ಹಾಕುವ ವ್ಯವಸ್ಥೆಗೆ ಈಗಾಗಲೇ ಇತಿಶ್ರೀ ಹಾಡಲಾಗಿದೆ. ಇದನ್ನು ಮತ್ತೂಮ್ಮೆ ಮುಂದುವರಿಸುವ ವಿಚಾರಕ್ಕೆ ಈಗಾಗಲೇ ನ್ಯಾಯಾಲಯ ಕಡಿವಾಣ ಹಾಕಿದೆ. ಹಾಗೆಂದು ಈಗ ವಿಷಮ ಪರಿಸ್ಥಿತಿಗೆ ತಲುಪಿರುವ ಘನತ್ಯಾಜ್ಯ ಸಮಸ್ಯೆ ಸಮ ಸ್ಥಿತಿಗೆ ಬರುವವರೆಗೆ ಡಸ್ಟ್‌ಬಿನ್ ನ ತ್ಯಾಜ್ಯ ವನ್ನು ಪೌರಕಾರ್ಮಿಕರ ಮೂಲಕ ತೆರವುಗೊಳಿಸುವ ಕೆಲಸ ನಡೆಯಲಿದೆ. ಒಮ್ಮೆ ಡೋರ್-ಟು-ಡೋರ್ ವ್ಯವಸ್ಥೆಗೆ ಜನರು ಒಗ್ಗಿಕೊಂಡರೆ, ಬಳಿಕ ರಸ್ತೆ ಬದಿ ತ್ಯಾಜ್ಯ ರಾಶಿ ಬೀಳುವ ಪರಿಸ್ಥಿತಿ ಉದ್ಭವಿಸದು ಎನ್ನುವುದು ಲೆಕ್ಕಾಚಾರ. ಇದಕ್ಕೆ ನಾಗರಿಕರ ಸಹಕಾರ ಅಗತ್ಯ. ರಸ್ತೆ ಬದಿ ರಾಶಿ ಬೀಳುವ ತ್ಯಾಜ್ಯ ಇದೇ ರೀತಿ ಮುಂದುವರಿದರೆ, ದಂಡ ವಿಧಿಸುವ ಕೆಲಸಕ್ಕೆ ನಗರಸಭೆ ಚಾಲನೆ ನೀಡಬೇಕಾದ ಅನಿವಾರ್ಯತೆ ಇದೆ.
ಸುಪರ್ ವಿಷನ್
ಹೆಚ್ಚುವರಿ ಲಾರಿ ನೀಡಿದಂತೆ ತ್ಯಾಜ್ಯ ಸಂಗ್ರಹದ ಮೇಲುಸ್ತುವಾರಿ ನೋಡಿಕೊಳ್ಳಲು ಒಬ್ಬ ಸುಪರ್ ವೈಸರ್ ಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ನಾಗರಿಕರಿಂದ ದೂರು ವ್ಯಕ್ತವಾಗದಂತೆ, ಪೌರಕಾರ್ಮಿಕರನ್ನು ದುಡಿಸಿಕೊಳ್ಳಬೇಕಾದ ಸವಾಲು ನಗರಸಭೆ ಮುಂದಿದೆ. ಆದ್ದರಿಂದ ಸೂಪರ್ ವೈಸರನ್ನು ನೇಮಿಸಿ, ಆತನ ಮೂಲಕ ಮೇಲುಸ್ತುವಾರಿ ಕೆಲಸ ನೋಡಿಕೊಂಡರೆ ಕೆಲಸ ಸಲೀಸು.
ಶುಚಿತ್ವಕ್ಕೆ ಬಳಕೆ
ದಿನಕ್ಕೆ 1 ರೂ.ನಂತೆ ಮನೆಗಳ ಮಾಲೀಕರಿಂದ ಘನತ್ಯಾಜ್ಯಕ್ಕಾಗಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. 1 ರೂ. ನೀಡಿದ್ದಾರೆ ಎಂದು ಕೆಲವರು ಹಕ್ಕು ಚಲಾಯಿಸಲು ಬರುತ್ತಾರೆ. ಹೀಗೆ ಮಾಡಿದರೆ ಕೆಲಸಕ್ಕೆ ಹಿನ್ನಡೆ ಆಗುತ್ತದೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇನ್ನು ಮುಂದೆ ದಿನ ಬಿಟ್ಟು ದಿನ ತ್ಯಾಜ್ಯ ಸಂಗ್ರಹ ಮಾಡುವುದರಿಂದ, ಜನರ ಸಹಕಾರ ಅಗತ್ಯ. ನೀಡಿರುವ 1 ರೂ. ಶುಚಿತ್ವಕ್ಕೆ ಬಳಕೆ ಮಾಡಲಾಗುವುದು.
– ರೂಪಾ ಶೆಟ್ಟಿ, ಪೌರಾಯುಕ್ತೆ, ಪುತ್ತೂರು ನಗರಸಭೆ
— ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.