ತಾ.ಪಂ. ಕಲಾಪ ನುಂಗಿದ ಸಿಎಂ ಫೋಟೋ
Team Udayavani, Oct 29, 2017, 3:14 PM IST
ನಗರ: ತಾಲೂಕು ಪಂಚಾಯತ್ ಅಧ್ಯಕ್ಷರ ಕೊಠಡಿಯಲ್ಲಿ ಪ್ರಧಾನ ಮಂತ್ರಿಗಳ ಫೋಟೋ ಹಾಕಿದ್ದು ಸ್ವಾಗತಾರ್ಹ ವಿಚಾರ. ಇದರ ಜತೆಗೆ ಮುಖ್ಯಮಂತ್ರಿಗಳ ಫೋಟೋವನ್ನು ಹಾಕಬೇಕು ಎಂಬ ಆಗ್ರಹ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಶನಿವಾರ ವ್ಯಕ್ತವಾಯಿತು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಅವರ ತಾ.ಪಂ. ಕೊಠಡಿಯಲ್ಲಿ ಹಾಕಿರುವ ಫೋಟೋ ಆಡಳಿತ ಪಕ್ಷ ಹಾಗೂ ವಿಪಕ್ಷ ಸದಸ್ಯರ ನಡುವೆ ಚರ್ಚೆಗೆ ಗ್ರಾಸವಾಯಿತು. ಕೊಡುಗೆ ನೀಡಿದ ಫೋಟೋವನ್ನಷ್ಟೇ ಇಡಲಾಗಿದೆ ಎಂದು ಅಧ್ಯಕ್ಷೆ ತಿಳಿಸಿದರು.
ವಿಷಯ ಪ್ರಸ್ತಾಪಿಸಿದ ಸದಸ್ಯೆ ಉಷಾ ಅಂಚನ್, ಮುಖ್ಯಮಂತ್ರಿಗಳ ಫೋಟೋವನ್ನು ಹಾಕುವಂತೆ ವಿನಂತಿಸಿದರು. ಇದಕ್ಕೆ ಬೇಕಾದರೆ ಫೋಟೋವನ್ನು ಕೊಡುಗೆ ನೀಡುವುದಾಗಿ ತಿಳಿಸಿದರು. ತೇಜಸ್ವಿನಿ ಮಾತನಾಡಿ, ಅದು ಅಧ್ಯಕ್ಷರ ಕೊಠಡಿ, ಇಒ ಕೊಠಡಿ ಅಲ್ಲ ಎಂದರು. ಈ ವಿಚಾರ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.ಮಧ್ಯ ಪ್ರವೇಶಿಸಿದ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಫೋಟೋದ ವಿಚಾರಕ್ಕಾಗಿ ಕಲಾಪವನ್ನು ಹಾಳು ಮಾಡುವುದು ಬೇಡ. ಮನವಿ ಕೊಡಿ, ಪರಿಶೀಲನೆ ನಡೆಸಿ ಅಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಮಾತನಾಡಿ, ಫೋಟೋ ಹಾಕುವುದಿಲ್ಲ ಎಂದು ಅಧ್ಯಕ್ಷರು ತಿಳಿಸಿಲ್ಲ. ಹಾಗಿದ್ದ ಮೇಲೆ ಸುಮ್ಮನೆ ಚರ್ಚೆ ನಡೆಸುವುದು ಯಾಕೆ ಎಂದರು. ಅಧ್ಯಕ್ಷೆ ಮಾತನಾಡಿ, ಪ್ರೊಟೋಕಾಲ್ ಪ್ರಕಾರ ಯಾವುದೆಲ್ಲ ಫೋಟೋವನ್ನು ಹಾಕಬೇಕು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಬಳಿಕ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.
ಆರೋಪಿಗಳ ಬಂಧಿಸಿ
ಮುಡಿಪಿನಡ್ಕ ಔಷಧವನದಲ್ಲಿ ದೇಯಿ ಬೈದ್ಯೆತಿ ಮೂರ್ತಿಗೆ ಅವಮಾನಮಾಡಿದ ಇತರ ಆರೋಪಿಗಳನ್ನು ಬಂಧಿಸುವಂತೆ ಶಿವರಂಜನ್ ಆಗ್ರಹಿಸಿದರು. ಫೋಟೋ ತೆಗೆದ ಆರೋಪಿಗಳ ಬಂಧನ ಇನ್ನೂ ಆಗಿಲ್ಲ. ಇದರ ಹಿಂದಿರುವ ಕೈಗಳ ಕೂಲಂಕಷ ತನಿಖೆ ಆಗಬೇಕು ಎಂದರು.
ರಸ್ತೆ ನಿರ್ವಹಣೆಯಿಲ್ಲ
ಸದಸ್ಯ ಹರೀಶ್ ಬಿಜತ್ರೆ ಮಾತನಾಡಿ, ಮಾಣಿ- ಮೈಸೂರು ರಸ್ತೆಯ ಇಕ್ಕೆಲಗಳಲ್ಲಿ ಪೊದೆ ಬೆಳೆದಿದೆ. ಪಾದಚಾರಿಗಳಿಗೆ ಸಮಸ್ಯೆಯಾಗಿದೆ. ರಸ್ತೆಯ ಹೊಂಡಗಳನ್ನು ಮುಚ್ಚಿಲ್ಲ. 2018ರವರೆಗೆ ಕೆಆರ್‌ಡಿಸಿಎಲ್ ನಿರ್ವಹಣೆ ಮಾಡಬೇಕೆಂಬ ನಿಯಮವಿದೆ. ಆದರೆ ಇದನ್ನು ಪಾಲಿಸುತ್ತಿಲ್ಲ ಎಂದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಾ.ಪಂ. ಇಒ ಹೇಳಿದರು.
ಪರಿಹಾರ ನೀಡಬೇಕು
ಸದಸ್ಯ ಶಿವರಂಜನ್ ಮಾತನಾಡಿ, ಭಕ್ತಕೋಡಿಯ ಕಟ್ಟೆಯನ್ನು ಎಸ್‌ಐ, ಡಿವೈಎಸ್ಪಿ ತೆರವು ಮಾಡಿದ್ದಾರೆ. ಸಾರ್ವಜನಿಕ ಸ್ವತ್ತನ್ನು ತೆರವು ಮಾಡಿದ್ದು ಯಾಕೆ? ದೂರು ಕೊಟ್ಟು ಪ್ರಕರಣ ದಾಖಲಾಗಿಲ್ಲ. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು. ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಮೋದ್ ಮಾತನಾಡಿ, ಮಾರ್ಗಸೂಚಿಗೆ ಇಲಾಖೆ ಅನುಮತಿ ನೀಡಿತ್ತು. ಆದರೆ ತೆರವಿಗೆ ಆದೇಶ ನೀಡಿಲ್ಲ ಎಂದರು. ಶಿವರಂಜನ್ ಮಾತನಾಡಿ, ಹಿಂದಿನ ತನ್ನ ದೂರಿಗೆ ಯಾರೂ ಸ್ಪಂದಿಸಿಲ್ಲ. ಮಾರ್ಗಸೂಚಿ ಕಟ್ಟೆಯನ್ನು ತೆರವು ಮಾಡುವುದಾದರೆ ಎಲ್ಲವನ್ನು ತೆಗೆಯಲಿ. ಅನುಮತಿ ಪಡೆದು ನಿರ್ಮಿಸಿದ ಕಟ್ಟೆಗೆ 50 ಸಾವಿರ ರೂ. ಖರ್ಚಾಗಿದ್ದು, ಪರಿಹಾರ ನೀಡುವಂತೆ ಆಗ್ರಹಿಸಿದರು.
ವೈನ್‌ಶಾಪ್‌ಗೆ ಅನುಮತಿ ಬೇಡ
ಸದಸ್ಯೆ ಕುಸುಮಾ ಮಾತನಾಡಿ, ಮರ್ದಾಳದಲ್ಲಿ ವೈನ್‌ಶಾಪ್ ಮಾಡಲು ಅನುಮತಿ ಕೊಡಬೇಡಿ ಎಂದು ಮನವಿ ಮಾಡಿಕೊಂಡರು. ಅಬಕಾರಿ ಇಲಾಖೆ ಎಸ್‌ಐ ಸುಜಾತಾ ಉತ್ತರಿಸಿ, ಅಲ್ಲಿ ವೈನ್ ಶಾಪ್ ಆಗುವ ಕುರಿತು ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದರು. ಆಕ್ಷೇಪಿಸಿದ ಸದಸ್ಯ ಗಣೇಶ್ ಕೈಕುರೆ, ನೀವು ಬಾರ್‌ಗಳಿಗೆ ರಕ್ಷಣೆ ಕೊಡುವವರು. ಗ್ರಾಮಸ್ಥರಿಗೆ ರಕ್ಷಣೆ ಕೊಡುವವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.