ತಾ.ಪಂ. ಅಧ್ಯಕ್ಷರ ಕಚೇರಿಯಲ್ಲಿ ಸಿ.ಎಂ. ಫೋಟೋ!
Team Udayavani, Dec 29, 2017, 2:42 PM IST
ಪುತ್ತೂರು: ತಾ.ಪಂ. ಅಧ್ಯಕ್ಷರ ಕಚೇರಿಯಲ್ಲಿ ಅವರ ಗಮನಕ್ಕೆ ಬಾರದೇ ಮುಖ್ಯಮಂತ್ರಿಗಳ ಫೋಟೋ ಅಳವಡಿಸಿದ ಕ್ರಮಕ್ಕೆ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಗರಂ ಆದ ಘಟನೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ.
ತಾ.ಪಂ. ಸಾಮಾನ್ಯ ಸಭೆಯು ಅಧ್ಯಕ್ಷೆ ಭವಾನಿ ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ಗುರುವಾರ ತಾ.ಪಂ. ಸಭಾಂಗಣದಲ್ಲಿ ನಡೆಯಿತು. ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ರಾಧಾಕೃಷ್ಣ ಬೋರ್ಕರ್, ಶಿವರಂಜನ್, ನಾವು ಮುಖ್ಯಮಂತ್ರಿ ಅವರ ಫೋಟೋ ಅಳವಡಿಸಿದ್ದನ್ನು ವಿರೋಧಿಸುತ್ತಿಲ್ಲ. ಆದರೆ ತಾ.ಪಂ. ಅಧ್ಯಕ್ಷರ ಗಮನಕ್ಕೆ ತಾರದೇ ಏಕಾಏಕಿ ಅಳವಡಿಸುವ ಜರೂರತ್ತು ಏನಿತ್ತು? ಯಾರು ಅಳವಡಿಸಿದ್ದು? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ತಾ.ಪಂ. ಇಓ ಜಗದೀಶ್ ಎಸ್., ಸದಸ್ಯರೊಬ್ಬರು ಫೋಟೋ ತಂದುಕೊಟ್ಟಿದ್ದರು. ಅದನ್ನು ಅಧ್ಯಕ್ಷರ ಕಚೇರಿಯಲ್ಲಿ ಅಳವಡಿಸಲಾಗಿದೆ. ಅದಕ್ಕೂ ಮೊದಲು ಅಧ್ಯಕ್ಷರನ್ನು ಸಂಪರ್ಕಿಸಿದ್ದು, ಅವರು ಬೇರೆ ಕಾರ್ಯಕ್ರಮದಲ್ಲಿ ಇದ್ದ ಕಾರಣ ಪೂರ್ಣ ಮಾಹಿತಿ ನೀಡಲಾಗಿಲ್ಲ ಎಂದು ಉತ್ತರಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯೆ ತೇಜಸ್ವಿನಿ ಕಟ್ಟೆಪುಣಿ, ಹಾಗಾದರೆ ಅಧ್ಯಕ್ಷರಿಗೆ ಬೆಲೆ ಇಲ್ಲವೇ? ಅವರು ಇಲ್ಲದೆ ನೀವು ನಿರ್ಧಾರ ತೆಗೆದುಕೊಳ್ಳುವುದಾದರೆ ಏನರ್ಥ ಎಂದು ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಇಒ, ಅಧ್ಯಕ್ಷರಿಗೆ ಮಾಹಿತಿ ನೀಡಬೇಕಿತ್ತು. ಹಾಗೆ ಮಾಡದೇ ಅಳವಡಿಸಿದ್ದಕ್ಕೆ ಕ್ಷಮೆ ಕೇಳುವುದಾಗಿ ಹೇಳಿದರು.
ಕಡತ ನಾಪತ್ತೆ: ಬಿಸಿ ಚರ್ಚೆ
ಅಕ್ರಮ-ಸಕ್ರಮ ಅರ್ಜಿಗೆ ಸಂಬಂಧಿಸಿ ಕಂದಾಯ ಇಲಾಖೆ ಸ್ಪಂದನೆ ನೀಡದೆ ಇರುವ ಬಗ್ಗೆ ಕೆ.ಟಿ. ವಲ್ಸಮ್ಮಾ ಪರವಾಗಿ ಉಷಾ ಅಂಚನ್, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಮಾತನಾಡಿದರು. ಹತ್ತು ವರ್ಷದಿಂದ ಕಡತ ಕಾಣಿಸುತ್ತಿಲ್ಲ. ಸಿಬಂದಿ ಹುಡುಕಾಡುತ್ತಿದ್ದಾರೆ ಎಂಬ ಉತ್ತರಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಹತ್ತು ವರ್ಷ ಹಿಂದೆಯೇ ಕಡತ ನಾಪತ್ತೆ ಆಗಿದ್ದರೆ ಗಂಭೀರ ವಿಚಾರ ಎಂದರು. ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ ಧ್ವನಿಗೂಡಿಸಿ, ಒಬ್ಬ ಗ್ರಾಮ ಕರಣಿಕರಿಗೆ ಎರಡು ಮೂರು ಕಡೆ ಚಾರ್ಜ್
ಕೊಡುತ್ತಾರೆ. ಆತ ಒಂದು ಕಚೇರಿಯ ಕಡತವನ್ನು ಇನ್ನೊಂದು ಕಚೇರಿಗೆ ತರುತ್ತಾರೆ. ಅದು ಅಲ್ಲೇ ಬಾಕಿ ಆಗುತ್ತದೆ ಎಂದರು. ಕಡತ ಸಿಕ್ಕಿಲ್ಲ ಅಂದರೆ ಅರ್ಜಿಗೆ ಸ್ಪಂದನೆ ಹೇಗೆ ನೀಡುತ್ತಿರಿ ಎಂದು ಉಷಾ ಅಂಚನ್ ಪ್ರಶ್ನಿಸಿದಾಗ, ಸಿಗದಿದ್ದರೆ ಸಹಾಯಕ ಕಮಿಷನರ್ ಅವರಿಗೆ ಬರೆಯುತ್ತೇವೆ. ಅಕ್ರಮ-ಸಕ್ರಮ ಬೈಠಕ್‌ನಲ್ಲಿ ಇಟ್ಟು ಪರಿಹಾರ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿ ಉತ್ತರಿಸಿದರು.
ತಾ.ಪಂ. ಸದಸ್ಯೆಗೆ ಹಳೆ ಕಟ್ಟಡ ಬಾಡಿಗೆ!
ತಾ.ಪಂ. ಸದಸ್ಯರಾದ ರಾಧಾಕೃಷ್ಣ ಬೋರ್ಕರ್, ಶಿವರಂಜನ್ ಮಾತನಾಡಿ, ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕಟ್ಟಡವನ್ನು ಏಲಂ ಮಾಡದೆ, ಬಾಡಿಗೆ ನೀಡಲು ಅವಕಾಶ ಇದೆಯೇ? ಐದು ವರ್ಷದ ತನಕ ನೀಡಬಹುದೆ? ಎಂದು ಇಒ ಅವರನ್ನು ಪ್ರಶ್ನಿಸಿದರು. ಮೂರು ವರ್ಷದ ತನಕ ನೀಡಬಹುದು ಎಂದು ಇಒ ಉತ್ತರಿಸಿದರು. ತಾ.ಪಂ. ಸದಸ್ಯೆ ಉಷಾ ಅಂಚನ್ ಅವರಿಗೆ ನೆಲ್ಯಾಡಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ವಸತಿ ಗೃಹದ ಹಳೆ ಕಟ್ಟಡವನ್ನು 300 ರೂ.ನಂತೆ ಐದು ವರ್ಷಗಳ ತನಕ ನೀಡಲಾಗಿದೆ. ಇದು ನಿಯಮ ಬಾಹಿರ ಅಲ್ಲವೇ ಎಂದು ಆಡಳಿತಾರೂಢ ಸದಸ್ಯರು ಪ್ರಶ್ನಿಸಿದರು. ಈ ಚರ್ಚೆಯಲ್ಲಿ ಉಷಾ ಅಂಚನ್ ಪರ ಪಿ.ಪಿ. ವರ್ಗೀಸ್, ಫಜ್ಲು ಲ್ ಕೋಡಿಂಬಾಳ ಹಾಗೂ ಪರಮೇಶ್ವರ ಭಂಡಾರಿ ಧ್ವನಿಗೂಡಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಉಷಾ ಅಂಚನ್, ಹಳೆ ಕಟ್ಟಡವನ್ನು 3 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಪಡಿಸಿದ್ದೇನೆ. ಖರ್ಚು ಮಾಡಿದ ಹಣ ತಿಂಗಳಿಗೆ 4750 ರೂ. ಮತ್ತು 300 ರೂ. ಬಾಡಿಗೆ ಕಟ್ಟುತ್ತಿದ್ದೇನೆ. ದುರಸ್ತಿ ಮಾಡಿದ 3 ಲಕ್ಷ ರೂ. ನನ್ನ ಸ್ವಂತ ಹಣ. ಇದನ್ನು ಪಂಚಾಯತ್‌ನಿಂದ ಕೇಳುವುದಿಲ್ಲ. ಕಟ್ಟಡವೂ ಗ್ರಾಮ ಪಂಚಾಯತ್‌ಗೆ ಸೇರಿದ್ದು. ಕಾನೂನು ಬಾಹಿರ ಕೆಲಸ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ಆಡಳಿತ ಪಕ್ಷದ ಸದಸ್ಯರು ಒಪ್ಪದೇ ಇದ್ದಾಗ, ಸಂಬಂಧಿಸಿದ ಪಿಡಿಒ ಅವರಿಗೆ ನೋಟಿಸ್ ನೀಡಿ ವಿವರಣೆ ಕೇಳಲಾಗುವುದು. ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಇಒ ಹೇಳಿದರು. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಗೌಡ, ತಾ.ಪಂ. ಯೋಜನಾಧಿಕಾರಿ ಗಣಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಸುದಿನ ವರದಿ ಫಲಶ್ರುತಿ
ಮುಡಿಪಿನಡ್ಕ-ಮೈಂದನಡ್ಕ ರಸ್ತೆಗೆ ಜಲ್ಲಿ ಹಾಕಿ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಉದಯವಾಣಿ ‘ಸುದಿನ’ ವರದಿ
ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಪತ್ರಿಕಾ ವರದಿಯನ್ನು ಪ್ರದರ್ಶಿಸಿದ ಸದಸ್ಯ ರಾಧಾಕೃಷ್ಣ ಬೋರ್ಕರ್, ರಸ್ತೆಗೆ ಜಲ್ಲಿ ಹಾಕಿದ ಅನಂತರ ಕಾಮಗಾರಿ ನಡೆದಿಲ್ಲ. ಜನರು ಮೂಗು ಮುಚ್ಚಿ ಕೊಂಡು ಸಂಚರಿಸಬೇಕಿದೆ. ಈ ಬಗ್ಗೆ ಉತ್ತರಿಸುವಂತೆ ಆಗ್ರಹಿಸಿದರು. ಇದಕ್ಕೆ ಸದಸ್ಯ ಹರೀಶ್ ಬಿಜತ್ರೆ ಧ್ವನಿಗೂಡಿಸಿದರು. ಲೋಕೋಪಯೋಗಿ ಇಲಾಖೆಯ ಅಧಿಕಾರಿ, ಕಾಮಗಾರಿಗೆ ಟೆಂಡರ್ ಆಗಿಲ್ಲ ಎಂದು ಉತ್ತರಿಸಿದರು. ಆಗದಿದ್ದರೆ ಕಾಮಗಾರಿ ಹೇಗೆ ಆರಂಭವಾದದ್ದು ಎಂದು ಸದಸ್ಯ ರಾಧಾಕೃಷ್ಣ ಮರು ಪ್ರಶ್ನಿಸಿದಾಗ ಅಧಿಕಾರಿ ನಿರುತ್ತರರಾದರು. ಮಧ್ಯ ಪ್ರವೇಶಿಸಿದ ಸದಸ್ಯೆ ಉಷಾ ಅಂಚನ್ ಹಾಗೂ ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕಾಮಗಾರಿ ನಿಂತಿಲ್ಲ. ಟೆಂಡರ್ ಆಗಿದ್ದು, ಬೇರೆ ಕಡೆ ಕೆಲಸ ಮಾಡುವುದರಿಂದ ಸ್ಥಗಿತಗೊಂಡಿದೆ ಎಂದರು. ಲೋಕೋಪಯೋಗಿ ಇಲಾಖೆ ಅಧಿಕಾರಿ ಟೆಂಡರ್ ಆಗಿದೆ, ಇಲ್ಲ ಎಂದು ಇಬ್ಬಗೆಯ ಉತ್ತರ ಕೊಡುತ್ತಿದ್ದ ಬಗ್ಗೆ ಕೆಲ ಕಾಲ ಚರ್ಚೆ ನಡೆಯಿತು.
ಕಪ್ಪು ಧರಿಸಿ ಪ್ರತಿಭಟನೆ
ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ತಾ.ಪಂ. ಸದಸ್ಯೆ ಕೆ.ಟಿ. ವಲ್ಸಮ್ಮ ಈ ಸಭೆಯಲ್ಲೂ ಕಪ್ಪು ಪಟ್ಟಿ ಧರಿಸಿ ಭಾಗವಹಿಸಿದ್ದರು. ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ವಿಷಯ ಪ್ರಸ್ತಾಪಿಸಿ, ಸದಸ್ಯರ ಬೇಡಿಕೆಗೆ ಸಮರ್ಪಕ ಉತ್ತರ ನೀಡಿ ಎಂದರು. ಅವರ ನಾಲ್ಕು ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಅನಂತಶಂಕರ ಹೇಳಿದ ಮೇಲೆ ಕಪ್ಪು ಪಟ್ಟಿ ತೆಗೆದ ಸದಸ್ಯೆ ಪ್ರತಿಭಟನೆ ಕೈಬಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.