ಸಂಚಾರಿ ಪೊಲೀಸರು ಸಾರ್ವಜನಿಕರ ನಡುವೆ ತಿಕ್ಕಾಟ!
ಹೊಸ ಸಂಚಾರ ನಿಯಮದ ದಂಡ ಪ್ರಯೋಗ
Team Udayavani, Sep 23, 2019, 5:39 AM IST
ವಿಶೇಷ ವರದಿ- ಮಹಾನಗರ: ಕೇಂದ್ರ ಸರಕಾರವು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಬಳಿಕ ನಗರದಲ್ಲಿ ಕೆಲವು ಕಡೆ ಸಂಚಾರಿ ನಿಯಮ ಉಲ್ಲಂಘಿಸುವ ವಿಚಾರವಾಗಿ ಜನರೊಂದಿಗೆ ನಡೆದು ಕೊಳ್ಳುವಾಗ ಕಾನೂನು ಪಾಲನೆ ಹೆಸರಿನಲ್ಲಿ ಮಾನವೀಯತೆಯನ್ನೇ ಮರೆತು ಬಿಟ್ಟ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನಿನಡಿ ದಂಡ ಹಾಕುವುದು ಸೇರಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಹೊಸ ರೀತಿಯ ದಂಡ ಪ್ರಯೋಗ ಶುರುವಾದ ಬಳಿಕ ನಗರದಲ್ಲಿಯೂ ಸಂಚಾರಿ ಪೊಲೀ ಸರನ್ನು ಕಂಡರೆ ಭಯಭೀತರಾಗುವ, ಸಣ್ಣಪುಟ್ಟ ವಿಚಾರಕ್ಕೂ ನಡು ರಸ್ತೆ ಯಲ್ಲೇ ವಾಹನ ಸವಾರರೊಂದಿಗೆ ಅನು ಚಿತವಾಗಿ ವರ್ತಿಸುವ ಬಗ್ಗೆ ಇದೀಗ ಸಾರ್ವಜನಿಕರಿಂದ ಉದಯವಾಣಿ ಕಚೇರಿಗೂ ದೂರುಗಳು ಬರುತ್ತಿವೆ. ವಾಹನ ಸವಾರರೊಂದಿಗೆ ಸಭ್ಯತೆಯಿಂದ ಅಥವಾ ಮಾನವೀಯ ನೆಲೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಬಗ್ಗೆ ಕೆಳ ಹಂತದ ಸಿಬಂದಿಗೆ ಸೂಕ್ತ ಮಾರ್ಗದರ್ಶನ ಅಥವಾ ತಿಳಿವಳಿಕೆಯ ಕೊರತೆಯಿಂದಲೋ ಗೊತ್ತಿಲ್ಲ; ಮಂಗಳೂರು ಸೇರಿದಂತೆ ರಾಜ್ಯ ದೆಲ್ಲೆಡೆ ಈ ಮಾದರಿಯ ಘಟನೆಗಳು ನಡೆಯುತ್ತಿರುವುದನ್ನು ನೋಡಿದರೆ, ಇಡೀ ಪೊಲೀಸ್ ಸಮುದಾಯವನ್ನೇ ಜನರು ಸಂಶಯದಿಂದ ನೋಡುವಂತೆ ಮಾಡಿರುವುದು ವಿಪರ್ಯಾಸ.
ಘಟನೆ 1
ಬೆಂದೂರ್‌ವೆಲ್‌ನಲ್ಲಿ ನಡೆದ ಘಟನೆಯಿದು. ಅಸೌಖ್ಯದಿಂದ ಆಸ್ಪತ್ರೆ ಬೆಡ್‌ನಲ್ಲಿ ಮಲಗಿರುವ ತಾಯಿಗೆ ತುರ್ತಾಗಿ ಔಷಧ ತರಲು ಯುವಕನೋರ್ವ ದ್ವಿಚಕ್ರ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಪಕ್ಕದ ಔಷಧ ಅಂಗಡಿಗೆ ತೆರಳಿದ್ದ. ಔಷಧ ಖರೀ ದಿಸುತ್ತಿದ್ದಂತೆ ಅಂಗಡಿ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಸಂಚಾರಿ ಪೊಲೀಸರು ಟೋಯಿಂಗ್ ವಾಹನಕ್ಕೆ ಹತ್ತಿಸುತ್ತಿದ್ದರು. ಆ ಕೂಡಲೇ ಆ ಯುವಕ ಓಡೋಡಿ ಬಂದು ಮೆಡಿಕಲ್ ಬಿಲ್ ತೋರಿಸಿ ತನ್ನ ತಾಯಿಯ ಪರಿಸ್ಥಿತಿಯನ್ನು ಅವರ ಬಳಿ ಹೇಳಿಕೊಂಡ. ಪೊಲೀಸರು ಆಗಲೇ ನೋ ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಲಿಸಿದ ನಿಯಮದಡಿ 1,600 ರೂ. ದಂಡ ಹಾಕಿ ರಶೀದಿ ಕೊಟ್ಟಿದ್ದರು. ಆ ಯುವಕ “ನಾನು ತಪ್ಪು ಮಾಡಿದ್ದೇನೆ. ದಂಡ ಹಾಕಿ; ಅದನ್ನು ಇಲ್ಲೇ ಪಾವತಿಸುತ್ತೇನೆ. ಆದರೆ ತುರ್ತಾಗಿ ಆಸ್ಪತ್ರೆಗೆ ಹೋಗ ಬೇಕಿದೆ. ದಯವಿಟ್ಟು ಗಾಡಿ ಕೊಡಿ ಎಂದು ಪೊಲೀಸರ ಕಾಲಿಗೆ ಬಿದ್ದು ಅಂಗಲಾಚಿದ್ದಾನೆ. ಅದಕ್ಕೆ ಅತ್ತ ಕಡೆಯಿಂದ “ನೀನು ಬೇಕಿದ್ದರೆ ವಿಮಾನದಲ್ಲಿ ಹೋಗು; ಗಾಡಿ ಬಿಡಲ್ಲ’. ಆ ಯುವಕನ ಸ್ಥಿತಿ ನೋಡಿ ಅಲ್ಲಿ ನೆರೆದಿದ್ದವರೆಲ್ಲ ನೋಡಿ “ಅಯ್ಯೋ ಪಾಪ’ ಎಂದು ಮರುಗಿದರು. ಆದರೆ ಆ ಟೋಯಿಂಗ್‌ನಲ್ಲಿದ್ದ ಪೊಲೀಸರ ಮನಸ್ಸು ಮಾತ್ರ ಕರಗಲೇ ಇಲ್ಲ.
ಘಟನೆ 2
ಸೆಂಟ್ರಲ್ ಮಾರ್ಕೆಟ್ ಪರಿಸರದಲ್ಲಿ ನಡೆದ ಮತ್ತು ನಿತ್ಯ ನಡೆಯುತ್ತಿರುವ ಘಟನೆ. ಮಾರ್ಕೆಟ್ ಒಳಗಿಂದ, ಹೊರಗಿನ ಅಂಗಡಿಗಳಿಂದ ಸರಕು ಸರಂಜಾಮುಗಳನ್ನು ಖರೀದಿಸುವ ಮಂದಿ ತಮ್ಮ ದ್ವಿಚಕ್ರ ವಾಹನ ಗಳಲ್ಲಿ ಹೊರಡುವಾಗ ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರ ತಪಾಸಣೆ ಈಗ ಬಿಗಿಯಾಗಿದೆ. ದ್ವಿಚಕ್ರ ವಾಹನದಲ್ಲಿ ತುಂಬಿಸಿರುವ ಸರಕು ಸಾಮಗ್ರಿ ವಾಹನದ ಬಾಡಿ (ಕವಚ) ಗಿಂತ ಹೊರ ಭಾಗದಲ್ಲಿ ಕಾಣಿಸಿಕೊಂಡರೆ ತಡೆದು ನಿಲ್ಲಿಸಿ ಪೊಲೀ ಸರು ದಂಡ ವಿಧಿಸುತ್ತಾರೆ. ಈ ಬಗ್ಗೆ ವಿಚಾರಿಸಿದರೆ ಪ್ರಯಾಣಿಕರನ್ನು ಸಾಗಿಸುವ ವಾಹನದಲ್ಲಿ ಸರಕು ಸಾಗಿಸುವಂತಿಲ್ಲ ಎಂದು ಪೊಲೀಸರು ಸಿದ್ಧ ಉತ್ತರ ನೀಡುತ್ತಾರೆ.
ಘಟನೆ 3
ಇದು ಬಂಟ್ವಾಳ ತಾಲೂಕು ಪಾಣೆ ಮಂಗಳೂರಿನಲ್ಲಿ ನಡೆದ ಮತ್ತು ನಡೆಯುತ್ತಿರುವ ಘಟನೆ. ಬೆಳ್ಳಂಬೆಳಗ್ಗೆ ಇಲ್ಲಿ ಸಂಚಾರ ನಿರ್ವಹಣೆ/ಗಸ್ತು ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಅಕ್ರಮ ಜಾನುವಾರು ಸಾಗಾಟ ತಡೆಯುವ ನೆಪದಲ್ಲಿ ದ್ವಿಚಕ್ರ ವಾಹನ ಸವಾರರನ್ನು ತಡೆದು ನಿಲ್ಲಿಸುತ್ತಾರೆ. ದ್ವಿಚಕ್ರದಲ್ಲಿ ತರಕಾರಿ ಮೂಟೆ, ಹಾಲು, ಪೇಪರ್ ಇತ್ಯಾದಿ ಕಂಡು ಬಂದರೆ ಸರಕು ಸಾಗಿಸುವಂತಿಲ್ಲ ಎಂದು ಹೇಳಿ ಸವಾರರಿಗೆ ದಂಡ ವಿಧಿಸುತ್ತಾರೆ. ಹೀಗೆ ದಂಡ ವಿಧಿಸುವಾಗ ಕೆಲವರಿಗೆ ರಶೀದಿ ಕೊಡುತ್ತಾರೆ, ಕೆಲವರಿಗೆ ಇಲ್ಲ!
ಘಟನೆ 4
ಹೊರ ಜಿಲ್ಲೆಯ ಓರ್ವ ಮಹಿಳೆ ಮಂಗಳೂರಿಗೆ ಬಂದವರು ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಕಾರ್ಯ ನಿಮಿತ್ತ ತಾಲೂಕು ಕಚೇರಿಗೆ ಹೋಗಿದ್ದರು. ವಾಪಸ್ ಬರುವಷ್ಟರಲ್ಲಿ ಅವರ ದ್ವಿಚಕ್ರ ವಾಹನ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ. ಅದು ಕಳವಾಯಿತೇ ಅಥವಾ ಟೋಯಿಂಗ್ ಮಾಡಲಾಯಿತೇ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಏಕೆಂದರೆ ಗಾಡಿ ನಿಲ್ಲಿಸಿದ್ದ ಜಾಗದಲ್ಲಿ ಯಾವುದೇ ನೋ ಪಾರ್ಕಿಂಗ್ ಬೋರ್ಡ್ ಇರಲಿಲ್ಲ. ಬಳಿಕ ಆತಂಕದಿಂದ ಅಕ್ಕಪಕ್ಕದವರ ಬಳಿ ವಿಚಾರಿಸಿದಾಗ ಟೋಯಿಂಗ್ ಮಾಡಿರಬಹುದು ಎನ್ನುವ ಅನುಮಾನ ಬಂತು. ಆದರೆ ಅದನ್ನು ಎಲ್ಲಿಗೆ ಕೊಂಡೊಯ್ದಿದ್ದರು ಎನ್ನುವುದನ್ನು ತಿಳಿದು ಕೊಳ್ಳುವುದಕ್ಕೆ ಆಟೋದಲ್ಲಿ ಗಂಟೆಗಟ್ಟಲೆ ಅಲೆದಾಡಿ ಸಮಯ ಹಣ ವ್ಯರ್ಥ ಮಾಡಿದ್ದಾರೆ. ಕೊನೆಗೆ ದಂಡ ಪಾವತಿ ಮಾಡಿ ಗಾಡಿ ಬಿಡಿಸಿಕೊಂಡರು.
ನಗರದ ಕಾರ್‌ಸ್ಟ್ರೀಟ್‌ನಲ್ಲಿ ಎರಡು ದಿನಗಳ ಹಿಂದೆ ಪೊಲೀಸ್ ವಾಹನವೊಂದನ್ನು ರಸ್ತೆಯಲ್ಲಿ ನಿಲ್ಲಿಸಿದ ಕಾರಣ ಸಂಚಾರ ಸಮಸ್ಯೆ ಉಂಟಾಗಿ, ಈ ಬಗ್ಗೆ ಮನವಿ ಮಾಡಲು ಹೋಗಿದ್ದ ಸಾರ್ವಜನಿಕರಿಗೆ ಪೊಲೀಸರು ಅವಾಚ್ಯವಾಗಿ ಬೈದು ನಿಂದಿಸಿದ್ದರು ಎಂಬ ವಿಷಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಯನ್ನೂ ಕೈಗೊಂಡಿದ್ದಾರೆ. ಹೀಗಿರುವಾಗ, ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಈ ಸಂಬಂಧ ಕೂಡಲೇ ಮಧ್ಯ ಪ್ರವೇಶ ಮಾಡಿ ಕೆಳ ಹಂತದ ಸಿಬಂದಿಗೆ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವ ಜತೆಗೆ ನಿಂದನಾತ್ಮಕ ಪದಗಳನ್ನು ಬಳಸದಂತೆ ತಿಳಿ ಹೇಳಬೇಕೆಂಬುದು ನಾಗರಿಕರ ಆಗ್ರಹ.
ಕಾನೂನು ಹೊಸತಲ್ಲ; ಹಿಂದೆಯೂ ಇತ್ತು
ದ್ವಿಚಕ್ರ ವಾಹನದಲ್ಲಿ ಸರಕು ಸಾಗಾಟ ಮಾಡುವುದನ್ನು ನಿರ್ಬಂಧಿಸಿರುವುದು ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಮಾಡಿರುವ ಕಾನೂನು. ಇದು ಹೊಸತಲ್ಲ; ಈ ಹಿಂದೆಯೇ ಇದ್ದ ಕಾನೂನು. ಆದರೆ ಈ ಮೊದಲು ಅದು ಕಟ್ಟು ನಿಟ್ಟಾಗಿ ಪಾಲನೆ ಆಗುತ್ತಿರಲಿಲ್ಲ. ಈಗ ಪರಿಷ್ಕೃತ ಮೋಟಾರು ವಾಹನ ಕಾಯ್ದೆ ಜಾರಿಯಾದ್ದರಿಂದ ಕಟ್ಟು ನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಎನ್ನುವುದು ಪೊಲೀಸರ ಹೇಳಿಕೆ.
ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ
ನಗರದಲ್ಲಿ ಬಹುತೇಕ ವಾಣಿಜ್ಯ ಸಂಕೀರ್ಣಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇಂತಹ ಮಳಿಗೆಗಳ ವಿರುದ್ಧ ಕ್ರಮ ಜರಗಿಸುವ ಬದಲು ರಸ್ತೆ ಬದಿ ಪಾರ್ಕಿಂಗ್ ಮಾಡುವ ವಾಹನ ಚಾಲಕರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿರುವುದು ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಈ ಹಿಂದಿನ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೂ ಈ ಬಗ್ಗೆ ದೂರುಗಳು ಬಂದಾಗ, ನಗರದಲ್ಲಿ ಸಾರ್ವಜನಿಕರ ವಾಹನ ಪಾರ್ಕಿಂಗ್‌ಗೆ ಜಾಗಗಳನ್ನು ಗುರುತಿಸುವಂತೆ ಪಾಲಿಕೆಗೆ ಮನವಿ ಮಾಡಿದ್ದರು. ಅದು ಕಾರ್ಯಗತವಾಗುವ ಮೊದಲೇ ಪೊಲೀಸರು ಏಕಾಏಕಿ ಬಂದು ವಾಹನಗಳನ್ನು ಕೊಂಡೊಯ್ದು ಸಾವಿರಕ್ಕೂ ಅಧಿಕ ರೂ. ದಂಡ ಹಾಕುತ್ತಿರುವುದಕ್ಕೆ ನಗರವಾಸಿಗಳು ಗರಂ ಆಗುತ್ತಿದ್ದಾರೆ.
ಪೊಲೀಸ್ ಸಿಬಂದಿಗೆ ಸೂಚನೆ ಕೊಡಲಾಗುತ್ತಿದೆ
ಜನರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ, ಹೊಸ ಕಾನೂನಿನ ಕುರಿತಂತೆ ಜಾಗೃತಿ ಮೂಡಿಸುವಂತೆ ಸಂಚಾರ ನಿರ್ವಹಣೆಯ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬಂದಿಗೆ ನಾವು ನಿರಂತರವಾಗಿ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿದ್ದೇವೆ; ಈಗಲೂ ತಿಳಿ ಹೇಳುತ್ತಿದ್ದೇವೆ. ಕೆಲವು ಮಂದಿ ಪೊಲೀಸರ ವರ್ತನೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಂದ ಚಿತ್ರ, ವರದಿಗಳ ಬಗ್ಗೆ ತನಿಖೆ ನಡೆಸಲಾಗಿದೆ.
-ಲಕ್ಷ್ಮೀ ಗಣೇಶ್, ಡಿ.ಸಿ.ಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.