ಸಂಚಾರ ನಿಯಮ ಉಲ್ಲಂಘಿಸಿದರೆ ಕಠಿನ ಕ್ರಮ: ಕಮಿಷನರ್ ಸುರೇಶ್
Team Udayavani, Mar 10, 2018, 10:30 AM IST
ಮಹಾನಗರ: ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಬಸ್, ರಿಕ್ಷಾ, ಕಾರು, ಬೈಕ್ ಮತ್ತು ಇತರ ವಾಹನಗಳ ಚಾಲಕರ ಬಗ್ಗೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವರ ಬಗ್ಗೆ ವೀಡಿಯೋ ರೆಕಾರ್ಡಿಂಗ್ ಮಾಡಿ ಪ್ರಕರಣ ದಾಖಲಿಸಿ ಕಠಿನ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದರು. ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ಸಿಟಿ ಬಸ್ ಕಾರ್ಮಿಕರಿಗೆ ತರಬೇತಿ ಏರ್ಪಡಿಸಿ ವಾಹನ ಚಾಲನೆ ಮತ್ತು ಸಾರ್ವಜನಿಕರ ಜತೆ ವ್ಯವಹರಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದ್ದರೂ ಬಸ್ ಸಿಬಂದಿ ಸುಧಾರಿಸಿಲ್ಲ ಎಂದು ಸಾರ್ವಜನಿಕರು ತಿಳಿಸಿದರು. ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್, ಇನ್ನು ಮುಂದೆ ನೋಟಿಸ್ ನೀಡುವುದಿಲ್ಲ, ವೀಡಿಯೋ ಚಿತ್ರೀಕರಿಸಿ ಕೇಸು ದಾಖಲಿಸುತ್ತೇವೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಂಗವಿಕಲರಿಗೆ ಮತದಾನ ಮಾಡಲು ಸೌಲಭ್ಯ ಕಲ್ಪಿಸಬೇಕು ಎಂದು ಮೂಡಬಿದಿರೆಯ ವ್ಯಕ್ತಿಯೊಬ್ಬರು ಮನವಿ ಮಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುವ ಸಭೆಗಳಲ್ಲಿ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ಕಮಿಷನರ್ ವಿವರಿಸಿದರು.
ರಸ್ತೆ ಬದಿ ವಾಹನ ನಿಲುಗಡೆ
ದೇರಳಕಟ್ಟೆಯ ಯೇನಪೊಯ ಮತ್ತು ಕೆ.ಎಸ್. ಹೆಗ್ಡೆ ಆಸ್ಪತ್ರೆಗಳ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಾಹನ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ವಿದ್ಯಾರ್ಥಿಗಳು ರಸ್ತೆ ಬದಿ ವಾಹದ ನಿಲ್ಲಿಸಿ ಇತರ ವಾಹನಗಳ ಸಂಚಾರಕ್ಕೆ ಮತ್ತು ನಿಲುಗಡೆಗೆ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂಬ ದೂರು ಬಂತು. ಈ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ವೀಡಿಯೋ ಚಿತ್ರೀಕರಣ ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದು ಕಮಿಷನರ್ ತಿಳಿಸಿದರು.
ತಪಾಸಣೆಗೆ ವ್ಯವಸ್ಥೆ
ಮೀನಿನ ಲಾರಿಗಳು ರಸ್ತೆಯಲ್ಲಿ ನೀರು ಚೆಲ್ಲುತ್ತಾ ಸಾಗುತ್ತಿರುವ ಬಗೆಗಿನ ದೂರುಗಳಿಗೆ ಉತ್ತರಿಸಿದ ಕಮಿಷನರ್, ಈ ಕುರಿತಂತೆ ಮೀನಿನ ಲಾರಿಗಳನ್ನು ನಿರ್ಗಮನ ಪಾಯಿಂಟ್‌ನಲ್ಲಿ (ಹಳೆ ಬಂದರು) ತಪಾಸಣೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ಜ್ಯೋತಿ ಜಂಕ್ಷನ್- ಫಳ್ನೀರ್ ಬಲ್ಮಠ ನ್ಯೂರೋಡ್‌ನಲ್ಲಿ ಜಾರಿಗೊಳಿಸಲಾಗಿರುವ ವನ್ ವೇ ವ್ಯವಸ್ಥೆಯನ್ನು ಪುನರ್ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು. ಈ ಬಗ್ಗೆ ಹಲವಾರು ಜನರಿಂದ ಆಕ್ಷೇಪಣೆಗಳು ಬಂದಿವೆ. ಆದ್ದರಿಂದ ವನ್ ವೇ ವ್ಯವಸ್ಥೆಯನ್ನು ಸಡಿಲುಗೊಳಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಕಮಿಷನರ್ ತಿಳಿಸಿದರು.
ವೈನ್ ಶಾಪ್ ಸ್ಥಳಾಂತರಿಸಿ
ಮಿಜಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ಇರುವ ವೈನ್ ಶಾಪ್‌ನ್ನು ಬೇರೆ ಕಡೆಗೆ ಸ್ಥಳಾಂತರಿಸ ಬೇಕೆಂಬ ಒತ್ತಾಯ ಕೇಳಿ ಬಂತು. ಇದಕ್ಕೆ ಉತ್ತರಿಸಿದ ಪೊಲೀಸ್ ಆಯುಕ್ತರು, ವೈನ್‌ಶಾಪ್ ಸ್ಥಳಾಂತರದ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಬೇಕು. ಆದರೆ ವೈನ್ ಶಾಪ್‌ನಿಂದ ಜನರಿಗೆ ಸಮಸ್ಯೆಗಳೇನಾದರೂ ಆಗುತ್ತಿದ್ದರೆ ಪೊಲೀಸರು ಕ್ರಮ ಜರಗಿಸುತ್ತಾರೆ ಎಂದರು.
ಕಿನ್ನಿಗೋಳಿ ಪೇಟೆಯಲ್ಲಿ ರಸ್ತೆ ಬದಿ ಅಗೆದು ಹಾಕಿ ಮೂರು ತಿಂಗಳಾದರೂ ಇನ್ನೂ ಗುಂಡಿ ಮುಚ್ಚಿಲ್ಲ ಎಂಬ ದೂರಿಗೆ ಸ್ಪಂದಿಸಿದ ಕಮಿಷನರ್, ಈ ಬಗ್ಗೆ ಈಗಾಗಲೇ ಪಂಚಾಯತ್ ಗಮನಕ್ಕೆ ತರಲಾಗಿದೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಪಂ. ಅಧ್ಯಕ್ಷರನ್ನು ಕರೆಸಿ ಸೂಚಿಸಲಾಗುವುದು ಎಂದರು.
ನರ್ಮ್ ಬಸ್‌ಗಳು ಕೆಲವು ಮಾರ್ಗಗಳಲ್ಲಿ ರಾತ್ರಿ ಏಳೂವರೆ ಗಂಟೆ ಬಳಿಕ ಓಡಾಡುತ್ತಿಲ್ಲ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಕಮಿಷನರ್ ತಿಳಿಸಿದರು. ವಾಮಂಜೂರು ಪರಿಸರದಲ್ಲಿ ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ತಡ ರಾತ್ರಿ ತನಕ ಮೈಕ್ ಇಟ್ಟು ಕಾರ್ಯಕ್ರಮ ನಡೆಸುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.
ಈಗ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದು, ಅವರ ಓದಿಗೆ ಅನಾನುಕೂಲ ಆಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಟಿ.ಆರ್. ಸುರೇಶ್ ಅವರು, ರಾತ್ರಿ 10 ಗಂಟೆ ಬಳಿಕ ಹೊರ ಆವರಣದಲ್ಲಿ ಮೈಕ್ ಇಟ್ಟು ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ ಎಂದರು.
ಇದು 74ನೇ ಫೋನ್ ಇನ್ ಕಾರ್ಯಕ್ರಮವಾಗಿದ್ದು, ಒಟ್ಟು 32 ಕರೆಗಳು ಬಂದವು. ಡಿಸಿಪಿಡಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿಗಳಾದ ಮಂಜುನಾಥ ಶೆಟ್ಟಿ ಮತ್ತು ವೆಲೆಂಟೈನ್ ಡಿ’ಸೋಜಾ, ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್‌ಗಳಾದ ಶಿವಪ್ರಕಾಶ್, ಕುಮಾರ ಸ್ವಾಮಿ, ಚಂದ್ರ, ಎಎಸ್‌ಐ ಯೂಸುಫ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಜಿಲ್ಲಾ ಬಸ್ ಮಾಲಕರ (ಸಿಟಿ ಬಸ್) ಸಂಘದ ಜತೆ ಕಾರ್ಯದರ್ಶಿ ರಾಮಚಂದ್ರ ಪಿಲಾರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.