ಅಪಾಯಕಾರಿಯಾಗಿ ವಸ್ತು ಸಾಗಾಟ
Team Udayavani, May 18, 2018, 9:58 AM IST
ಮಹಾನಗರ: ಯಾವುದೇ ಮುನ್ನೆಚ್ಚರಿಕೆ ವಹಿಸದೆ ವಿದ್ಯುತ್ ಕಂಬಗಳನ್ನು ಮಿನಿ ಲಾರಿಯಲ್ಲಿ ಸಾಗಿಸಿದ ಪರಿಣಾಮ ಕುದ್ರೋಳಿಯಲ್ಲಿ ಆಟೋರಿಕ್ಷಾವೊಂದು ಬುಧವಾರ ಹಾನಿಯಾಗಿದೆ. ಇದು ಒಂದು ಘಟನೆಯಲ್ಲ. ಮಂಗಳೂರಿನ ಬಹುತೇಕ ಭಾಗದಲ್ಲಿ ಇಂತಹ ಘಟನೆ ಮತ್ತೆ ಮತ್ತೆ ಎದುರಾಗುತ್ತಿದೆ.
ತೆರೆದ ವಾಹನದಲ್ಲಿ ಕಲ್ಲು, ವಿದ್ಯುತ್ ಕಂಬ ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಸಾಗಿಸುತ್ತಿರುವುದರಿಂದ ಇತರ ವಾಹನ ಸವಾರರು ಆತಂಕ ಎದುರಿಸುವಂತಾಗಿದೆ. ವಾಹನ ದಟ್ಟಣೆ ಹೆಚ್ಚಿರುವ ನಗರ ಪ್ರದೇಶಗಳಲ್ಲಿ ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ಅದಕ್ಕೆ ಬೇಕಾದ ಸಾಮಗ್ರಿ ಸೇರಿದಂತೆ, ವಿದ್ಯುತ್ ಕಂಬ, ಲೋಡುಗಟ್ಟಲೆ ದೈತ್ಯಾಕಾರದ ಕಲ್ಲುಗಳನ್ನು ಯಾವುದೇ ಮುಂಜಾಗೃತ ಕ್ರಮ ಗಳನ್ನು ಕೈಗೊಳ್ಳದೆ ಅಧಿಕಾರಿಗಳ ಕಣ್ಣೇದುರೇ ಸಾಗಿಸುತ್ತಿದ್ದರೂ ಯಾವುದೇ ಕ್ರಮ ಜರಗಿಸದೆ ಇರುವುದು ದ್ವಿಚಕ್ರ ವಾಹನ ಸವಾರರು ಹಾಗೂ ಇತರ ವಾಹನ ಸವಾರರಲ್ಲಿ ಭಯ ಮೂಡಿಸಿದೆ. ಈ ಮೂಲಕ ಮೋಟಾರ್ ವಾಹನ ಕಾಯ್ದೆಯನ್ನು ಗಾಳಿಗೆ ತೂರಲಾಗಿದೆ.
ಅಪಾಯದಿಂದ ಪಾರಾದ ಕಾರು ಚಾಲಕ
ರಿಕ್ಷಾ ಸೇರಿದಂತೆ ಗೂಡ್ಸ್ ವಾಹನದಲ್ಲಿ ಅಲ್ಯೂಮಿನಿಯಂ ಕಬ್ಬಿಣ ರಾಡ್‌ಗಳನ್ನು ಕೂಡ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಕೊಂಡೊಯ್ಯುತ್ತಿರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ನಗರದ ಬಿಜೈಯಲ್ಲಿ ಗೂಡ್ಸ್ ರಿಕ್ಷಾದಲ್ಲಿ ಕಬ್ಬಿಣದ ಸರಳು ಕೊಂಡೊಯ್ಯುತ್ತಿದ್ದಾಗ ರಿಕ್ಷಾ ಚಾಲಕ ತತ್‌ಕ್ಷಣ ಬ್ರೇಕ್ ಹಾಕಿದ್ದರಿಂದ ರಾಡ್ ಹಿಂಬದಿಯ ಕಾರಿನ ಗ್ಲಾಸ್ ಒಳಭಾಗಕ್ಕೆ ಹೋಗಿದೆ. ಕಾರು ಚಾಲಕ ಸ್ವಲ್ಪ ದರಲ್ಲಿ ಅಪಾಯದಿಂದ ಪಾರಾಗಿದ್ದಾನೆ. ಇಂತಹ ಘಟನೆಗಳು ನಗರದಲ್ಲಿ ಪದೇ ಪದೇ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕಠಿನ ಕ್ರಮ ಜರಗಿಸದೆ ಇರುವುದು ಅಚ್ಚರಿ ಮೂಡಿಸಿದೆ.
ಅಪಾಯ ಕಟ್ಟಿಟ್ಟ ಬುತ್ತಿ
ಹೀಗೆ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸದೆ ಅಪಾಯಕಾರಿ ವಸ್ತುಗಳನ್ನು ಸಾಗಾಟ ಮಾಡುವುದರಿಂದ ಇತರ ವಾಹನಗಳಿಗೆ ಅಪಾಯ ವಾಗುವ ಸಾಧ್ಯತೆ ಹೆಚ್ಚು. ಇದರ ವಿರುದ್ಧ ಟ್ರಾಫಿಕ್ ಪೊಲೀಸರು ದೂರು ದಾಖಲಿಸಿ ದಂಡ ಹಾಕಿ ಕಳುಹಿಸುತ್ತಾರೆ. ಆದ್ದರಿಂದ ಚಾಲಕರ ವಿರುದ್ಧ ಕಠಿನ ಕ್ರಮ ಜರಗಿಸಿದರೆ ಮತ್ತೆ ಇಂತಹ ಘಟನೆಗಳು ಮರುಕಳಿಸದು.
ನಿಯಮಪಾಲಿಸದೆ ಇದ್ದಲ್ಲಿ ದಂಡ
ಯಾವುದೇ ಭಾಗದಲ್ಲಿ ಅಪಾಯಕಾರಿ ವಸ್ತುಗಳನ್ನು ಸಾಗಾಟ ಮಾಡುವಾಗ ಕೆಂಪು ಬಣ್ಣದ ದೀಪ ಅಥವಾ ಬಟ್ಟೆಗಳನ್ನು ಹಾಕಲೇ ಬೇಕು. ಇಲ್ಲವಾದಲ್ಲಿ ಅಂತಹ ವಾಹನ ಚಾಲಕರ ವಿರುದ್ಧ ಕ್ರಮ ಜರಗಿಸಲಾಗುತ್ತದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ವಾಹನ ಚಲಾಯಿಸಿ ಯಾವುದೇ ಅಪಘಾತಗಳು ಸಂಭವಿಸಿದ್ದಲ್ಲಿ ನಿರ್ಲಕ್ಷ್ಯತನ ಪ್ರಕರಣ ದಾಖಲಿಸಲಾಗುತ್ತದೆ.
– ಮಂಜುನಾಥ ಶೆಟ್ಟಿ
ಎಸಿಪಿ, ಟ್ರಾಫಿಕ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.