ಕಡಲನಗರಿಯಲ್ಲಿ ಪ್ರವಾಸಿಗರ ಕಲರವ
Team Udayavani, Apr 4, 2018, 10:00 AM IST
ಮಹಾನಗರ: ಬೇಸಗೆ ರಜೆ ಸಮೀಪಿಸುತ್ತಿದ್ದಂತೆ ಕರಾವಳಿಯಲ್ಲಿ ಅದರಲ್ಲೂ ಮಂಗಳೂರು ನಗರ ಹಾಗೂ ಸುತ್ತಮುತ್ತ ಇರುವ ಬೀಚ್, ಧಾರ್ಮಿಕ ಕ್ಷೇತ್ರಗಳತ್ತ ಪ್ರವಾಸಿಗರು ಆಕರ್ಷಿತರಾಗುತ್ತಿದ್ದಾರೆ. ಈಗಾಗಲೇ ಕೆಲವು ಕಡೆಗಳಲ್ಲಿ ಶಾಲೆಗಳಿಗೆ ಬೇಸಗೆ ರಜೆ ದೊರೆತಿದ್ದು, ಒಂದು ವಾರದಿಂದ ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಿದೆ.
ಮಂಗಳೂರು ಅಂದರೆ, ಒಂದೆಡೆ ಬೇಸಗೆಯ ಧಗೆ; ಇನ್ನೊಂದೆಡೆ ಸುಂದರ ಕಡಲ ಕಿನಾರೆ ಜತೆಗೆ ಆಕರ್ಷಕ ಪ್ರವಾಸಿ ತಾಣಗಳು. ಹೀಗಾಗಿ, ಇಲ್ಲಿನ ಸುಡು ಬಿಸಿಲಿನ ಬೇಗೆಯನ್ನೂ ಲಕ್ಕಿಸದೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಈಗ ಇಲ್ಲಿನ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟು ಆಗಿದೆ.
ಬೀಚ್‌ಗಳಿಗೆ ಬರುವವರ ಸಂಖ್ಯೆ ಹೆಚ್ಚಳ
ಮಂಗಳೂರಿಗೆ ಆಗಮಿಸುವ ಬಹುತೇಕ ಪ್ರವಾಸಿಗರು ಮೊದಲು ಭೇಟಿ ನೀಡುವುದು ಇಲ್ಲಿನ ಬೀಚ್‌ಗಳಿಗೆ. ಕೆಲವು ತಿಂಗಳುಗಳಿಗೆ ಹೋಲಿಕೆ ಮಾಡಿದರೆ ಪಣಂಬೂರು ಮತ್ತು ತಣ್ಣೀರುಬಾವಿ ಬೀಚ್‌ಗಳಿಗೆ ಬರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಪಣಂಬೂರಿಗೆ ಸಾಮಾನ್ಯ ದಿನಗಳಲ್ಲಿ ಸುಮಾರು 1,000 ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಸದ್ಯ ಪ್ರತಿ ದಿನ ಸುಮಾರು 4,000ಕ್ಕೂ ಹೆಚ್ಚಿನ ಮಂದಿ ಬರುತ್ತಿದ್ದಾರೆ.
ವೀಕೆಂಡ್ ಬಂತೆಂದರೆ ಈ ಸಂಖ್ಯೆ ಸುಮಾರು 15,000 ದಾಟುತ್ತದೆ. ಇನ್ನು ಸುಲ್ತಾನ್ ಬತ್ತೇರಿ ಬೀಚ್‌ಗೆ ಪ್ರತಿನಿತ್ಯ ಸುಮಾರು 3,000 ಮಂದಿ ಆಗಮಿಸುತ್ತಾರೆ. ವೀಕೆಂಡ್‌ಗಳಲ್ಲಿ 10,000 ಮಂದಿ ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಪ್ರವಾಸೋದ್ಯಮ ಇಲಾಖೆ ಕೂಡ ಪ್ರವಾಸಿಗರಿಗೆ ಮೂಲ ಸೌಕರ್ಯ ನೀಡುವತ್ತ ಹೆಚ್ಚಿನ ಗಮನಹರಿಸುತ್ತಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪಣಂಬೂರು ಬೀಚ್‌ನಲ್ಲಿ ಬೋಟಿಂಗ್ ಸ್ಟಾಪ್ ಸೇರಿದಂತೆ ಲೈಫ್ ಗಾರ್ಡ್‌ಗಳ ಸಂಖ್ಯೆಯನ್ನು ಕೂಡ 16ಕ್ಕೆ ಏರಿಕೆ ಮಾಡಲಾಗಿದೆ. ಜತೆಗೆ ಬೀಚ್ ಬದಿಗಳಲ್ಲಿ ನಾನಾ ರೀತಿಯ ತಿನಿಸುಗಳ ಅಂಗಡಿ ಕೂಡ ತಲೆಯೆತ್ತಿವೆ.
ಪಿಲಿಕುಳ ನಿಸರ್ಗಧಾಮದತ್ತ ಜನ
ಪಿಲಿಕುಳ ನಿಸರ್ಗಧಾಮ ವಿಕ್ಷಣೆಗೂ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಈ ಹಿಂದೆ ಸುತ್ತಮುತ್ತಲ ಪ್ರದೇಶದ ನಿರ್ವಹಣೆಯ ಸಲುವಾಗಿ ಪ್ರತಿ ಸೋಮವಾರ ನಿಸರ್ಗಧಾಮಕ್ಕೆ ಪ್ರವಾಸಿಗರಿಗೆ ಪ್ರವೇಶವಿರಲಿಲ್ಲ. ಆದರೆ, ಪ್ರವಾಸಿಗರ ಬೇಡಿಕೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ನಿಗದಿಯಾಗಿದ್ದ ರಜೆ ಕೂಡ ರದ್ದಾಗಿದೆ. ಇಲ್ಲಿಗೆ ದಿನಂಪ್ರತಿ ಎರಡು ಸಾವಿರಕ್ಕೂ ಅಧಿಕ ಮಂದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಾರದ ಏಳು ದಿನವೂ ಎಲ್ಲ ವಿಭಾಗಗಳು ಕೂಡ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತವೆ. ಸದ್ಯ ಇಲ್ಲಿ ಸಾವಿರದ ಇನ್ನೂರಕ್ಕೂ ಅಧಿಕ ವಿವಿಧ ಪ್ರಾಣಿಗಳಿವೆ. ಇನ್ನು ಕೆಲವು ದಿನಗಳಲ್ಲಿ ಹೊಸದಾಗಿ ಕಾಡು ಕೋಣ, ಕಾಡು ನಾಯಿ, ಕತ್ತೆ ಕಿರುಬಗಳನ್ನು ಕೂಡ ಕರೆತರಲಾಗುತ್ತದೆ.
ವಿಶೇಷ ರಿಯಾಯಿತಿ
ಪಿಲಿಕುಳ ನಿಸರ್ಗಧಾಮದಲ್ಲಿ ಮೃಗಾಲಯ ವಿಕ್ಷಣೆಗೆ 60 ರೂ., ತಾರಾಲಯಕ್ಕೆ 60 ರೂ., ಗುತ್ತಿನ ಮನೆ ವೀಕ್ಷಣೆಗೆ 50 ರೂ. ಮತ್ತು ಕೆರೆ ವೀಕ್ಷಣೆಗೆ 25 ರೂ. ಟಿಕೆಟ್ ದರ ನಿಗದಿಯಾಗಿತ್ತು. ಇದೀಗ ಬೇಸಗೆ ಕಾಲದಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾದ ಕಾರಣ ವಿಶೇಷ ರಿಯಾಯಿತಿ ಆಧಾರದಲ್ಲಿ ಇಡೀ ಪಿಲಿಕುಳದ ಎಲ್ಲ ವಿಭಾಗಗಳ ವೀಕ್ಷಣೆಗೆ ಕೇವಲ 100 ರೂ. ದರ ನಿಗದಿ ಮಾಡಲಾಗಿದೆ.
ವಿಲ್ಲಾ, ಹೊಟೇಲ್ ಫುಲ್
ನಗರ ವ್ಯಾಪ್ತಿಯ ಬಹುತೇಕ ಪಂಚತಾರಾ ಹೊಟೇಲ್‌ಗಳು, ವಿಲ್ಲಾಗಳು, ಹೋಮ್‌ಸ್ಟೇಗಳು ವೀಕೆಂಡ್‌ಗಳಲ್ಲಿ ಪ್ರವಾಸಿಗರಿಂದ ತುಂಬಿರುತ್ತವೆ. ಬೀಚ್ ಕಡೆ ಇರುವಂತಹ ವಿಲ್ಲಾಗಳಿಗೆ ಬೇಡಿಕೆ ಹೆಚ್ಚು. ಈ ಬಗ್ಗೆ ‘ಸುದಿನ’ಕ್ಕೆ ಪ್ರತಿಕ್ರಿಯಿಸಿದ ಕುಳಾಯಿಯ ವಿಲ್ಲಾವೊಂದರ ಮಾಲಕಿ ಸುಹಾಸಿನಿ, ಹೆಚ್ಚಾಗಿ ಬೀಚ್ ವೀಕ್ಷಣೆಗೆ ಆಗಮಿಸಿದ ಹೊರ ಜಿಲ್ಲೆ, ರಾಜ್ಯದ ಮಂದಿ ವಿಲ್ಲಾಗಳಲ್ಲಿ ಇರಲು ಇಷ್ಟಪಡುತ್ತಾರೆ. ಆನ್‌ಲೈನ್ ಮೂಲಕ ನಮ್ಮಲ್ಲಿರುವ ಎಲ್ಲ ವಿಲ್ಲಾಗಳು ಬುಕ್ ಮಾಡುತ್ತಾರೆ. ಹೆಚ್ಚಾಗಿ ಎಂಟರಿಂದ ಒಂಬತ್ತು ಮಂದಿ ಒಂದು ವಿಲ್ಲಾದಲ್ಲಿ ಇರಲು ಅವಕಾಶವಿದೆ ಎನ್ನುತ್ತಾರೆ.
ಧಾರ್ಮಿಕ ಕ್ಷೇತ್ರ ದರ್ಶನ
ನಗರ ಹಾಗೂ ಸುತ್ತಮುತ್ತ ಇರುವ ಧಾರ್ಮಿಕ ಕ್ಷೇತ್ರಗಳಿಗೂ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅದರಲ್ಲಿಯೂ, ಕುದ್ರೋಳಿ, ಕದ್ರಿ, ಮಂಗಳಾದೇವಿ ದೇವಸ್ಥಾನ ಸಹಿತ ಇನ್ನಿತರ ಧಾರ್ಮಿಕ ಕ್ಷೇತ್ರದಲ್ಲಿ ಈ ಹಿಂದಿಗಿಂತ ಜಾಸ್ತಿ ಪ್ರವಾಸಿಗರು ಬರುತ್ತಿದ್ದಾರೆ. ಸೇಂಟ್ ಅಲೋಶಿಯಸ್ ಚಾಪೆಲ್, ಉಳ್ಳಾಲ ದರ್ಗಾ ಹಾಗೂ ಮೂಡಬಿದಿರೆಯ ಜೈನ ಬಸದಿಗೂ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚು
ಬಿಸಿಲಿನ ತಾಪ ಹೆಚ್ಚಿದ್ದರೂ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಲಿಲ್ಲ. ಹೆಚ್ಚಾಗಿ ಹೊರ ಜಿಲ್ಲೆಯ ಮಂದಿ ಮಧ್ಯಾಹ್ನದ ವೇಳೆ ಬೀಚ್‌ಗೆ ಆಗಮಿಸುತ್ತಿದ್ದಾರೆ. ಬೀಚ್‌ಗಳಲ್ಲಿ ಸಾಹಸ ಜಲ ಕ್ರೀಡೆಗಳಿಗೆ ಆಗಮಿಸುವ ಮಂದಿ ಹೆಚ್ಚಾಗಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಲೈಪ್‌ಗಾರ್ಡ್‌ಗಳು ಪ್ರವಾಸಿಗರ ಮೇಲೆ ನಿಗಾವಹಿಸುತ್ತಾರೆ. ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಮಳೆಗಾಲದಲ್ಲಿಯೇ ಅತೀ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ.
– ಯತೀಶ್ ಬೈಕಂಪಾಡಿ, ಸಿಇಒ,
ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆ
ಟ್ಯಾಕ್ಸಿಗೂ ಬೇಡಿಕೆ ಹೆಚ್ಚು
ಬೇಸಗೆ ರಜೆಯಲ್ಲಿ ಟ್ಯಾಕ್ಸಿಗಳಿಗೆ ಬೇಡಿಕೆ ಹೆಚ್ಚು. ಈಗಾಗಲೇ ಅನೇಕ ಮಂದಿ ಆನ್‌ಲೈನ್‌ನಲ್ಲಿಯೇ ಟ್ಯಾಕ್ಸಿ ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಪ್ರವಾಸಿಗರಿಗಾಗಿಯೇ ಈಗಾಗಲೇ ಎರಡು ವಿಧದ ಬೆಲೆಗಳು ನಿಗದಿಯಾಗಿವೆ. ಟ್ಯಾಕ್ಸಿಗಳಲ್ಲಿ ಒಂದು ದಿನ 250 ಕಿ.ಲೋ. ಸುತ್ತಿದರೆ ಪ್ರತೀ ಕಿ.ಮೀ.ಗೆ 10 ರೂ. ದರ ಮತ್ತು ಚಾಲಕನ ದಿನದ ಸಂಬಳ ಪ್ರತ್ಯೇಕ. ಅದರಂತೆಯೇ ಮಂಗಳೂರು ಸುತ್ತಮುತ್ತ 8 ಗಂಟೆಗಳ ಕಾಲ ಸುತ್ತಾಟ ನಡೆಸಿದರೆ 1,500 ರೂ. ಬೆಲೆ ನಿಗದಿ ಮಾಡಲಾಗಿದೆ.
– ನಾಗಪ್ಪ, ಉಪಾಧ್ಯಕ್ಷ,
ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.