ಸಿದ್ದಕಟ್ಟೆ ಭಾಗದಲ್ಲಿ ರಸ್ತೆ ಅಭಿವೃದ್ಧಿಗೆ ಮರಗಳ ಅಡ್ಡಿ
ತೆರವಿಗೆ ಅರಣ್ಯ ಇಲಾಖೆ ಅನುಮತಿ ಬಾಕಿ; ಮೊತ್ತ ತುಂಬಿದ ಬಳಿಕ ಅನುಮತಿ
Team Udayavani, Apr 30, 2022, 9:54 AM IST
ಬಂಟ್ವಾಳ: ಬಂಟ್ವಾಳ- ಮೂಡು ಬಿದಿರೆ ರಸ್ತೆಯ ಸಿದ್ದಕಟ್ಟೆ ಭಾಗದಲ್ಲಿ ಸುಮಾರು 10 ಕಿ.ಮೀ. ಉದ್ದಕ್ಕೆ ರಸ್ತೆ ಅಭಿವೃದ್ಧಿಯು ಅರ್ಧಕ್ಕೆ ನಿಂತು ಹಲವು ಸಮಯಗಳೇ ಕಳೆದಿದೆ. ಪ್ರಸ್ತುತ ಮತ್ತೆ ಕಾಮಗಾರಿ ಆರಂಭಗೊಂಡಿದೆ. ಆದರೆ ರಸ್ತೆ ಅಗಲಗೊಳಿಸುವುದಕ್ಕೆ ಅಡ್ಡಿಯಾಗಿರುವ ಮರಗಳ ತೆರವಿಗೆ ಇನ್ನೂ ಕೂಡ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ.
ಬಂಟ್ವಾಳ-ಮೂಡುಬಿದಿರೆ ಜಿಲ್ಲಾ ಮುಖ್ಯ ರಸ್ತೆಯ (ಎಂಡಿಆರ್) 9.00 ಕಿ.ಮೀ.ನಿಂದ 19.00 ಕಿ.ಮೀ. ಅಭಿವೃದ್ಧಿಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಎಸ್‌ಎಚ್ ಡಿಪಿ) ಮೂಲಕ 13 ಕೋ. ರೂ.ಗಳ ಅನುದಾನ ಮಂಜೂರುಗೊಂಡು ಹಲವು ಸಮಯಗಳ ಹಿಂದೆಯೇ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಅರ್ಧ ನಡೆದ ಕಾಮಗಾರಿಯು ಕಳೆದ ಹಲವು ಸಮಯಗಳಿಂದ ನಿಂತು ಹೋಗಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕಾಮಗಾರಿ ಅರ್ಧಕ್ಕೆ ನಿಂತಿರುವ ವಿಚಾರಕ್ಕೆ ಬಂಟ್ವಾಳ ತಾ.ಪಂ. ಕೆಡಿಪಿ ಸಭೆಯಲ್ಲಿ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಆಕ್ರೋಶ ವ್ಯಕ್ತಪಡಿಸಿ ಲೋಕೋಪಯೋಗಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಜತೆಗೆ ಕಾಮಗಾರಿಯ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೂ ಸೂಚಿಸಿದ್ದರು. ಇದೀಗ ಕಾಮಗಾರಿ ಆರಂಭಗೊಂಡಿದ್ದರೂ, ಮರಗಳ ತೆರವಾಗದೆ ಕಾಮಗಾರಿ ಮುಂದುವರಿಸುವಂತಿಲ್ಲ.
11 ಮರಗಳ ತೆರವಿಗೆ ಪತ್ರ
ಕಾಮಗಾರಿ ನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆಯು ರಸ್ತೆ ವಿಸ್ತರಣೆಗಾಗಿ 11 ಮರಗಳ ತೆರವಿಗೆ ಅನುಮತಿಗಾಗಿ ಈಗಾಗಲೇ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದು, ಸೂಚಿತ ಮರಗಳನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿಯವರು ಪರಿಶೀಲಿಸಿ ಈಗಾಗಲೇ ಅನುಮತಿಗಾಗಿ ಮಂಗಳೂರು ಉಪ ಅರಣ್ಯ ಸಂರಕ್ಷಣಾ ಧಿಕಾರಿ(ಡಿಸಿಎಫ್) ಅವರಿಗೆ ಬರೆದಿದ್ದಾರೆ. ಅವರು ಮರಗಳ ತೆರವಿನ ಕುರಿತು ಮೌಲ್ಯವನ್ನು ನಿಗದಿ ಪಡಿಸಿ ಅದನ್ನು ಲೋಕೋಪಯೋಗಿ ಇಲಾಖೆಯು ಅರಣ್ಯ ಇಲಾಖೆಗೆ ಪಾವತಿಸಿ ಬಳಿಕ ಮರ ತೆರವಿಗೆ ಆದೇಶ ಸಿಗುತ್ತದೆ. ಮರ ಜತೆಗೆ ರಸ್ತೆ ಬದಿಯ ವಿದ್ಯುತ್ ಕಂಬಗಳ ಸ್ಥಳಾಂತರಗೊಳ್ಳಬೇಕಿದೆ. ಆದರೆ ಮರಗಳನ್ನು ಕಡಿಯದೇ ಇದ್ದರೆ ತೆರವುಗೊಂಡ ವಿದ್ಯುತ್ ಕಂಬಗಳನ್ನು ಹಾಕುವುದಕ್ಕೆ ಸ್ಥಳ ಇಲ್ಲವಾಗುತ್ತದೆ. ಹೀಗಾಗಿ ಕಾಮಗಾರಿಗಳಿಗೆ ಒಂದಕ್ಕೊಂದು ಸಂಬಂಧ ಇರುವುದರಿಂದ ಪ್ರಸ್ತುತ ಮರಗಳ ತೆರವು ಅನಿವಾರ್ಯವಾಗಿದೆ. ಪ್ರಸ್ತುತ ಮರಗಳ ತೆರವಿನ ಅನುಮತಿಗಾಗಿ ಅರಣ್ಯ ಇಲಾಖೆಗೆ ಬರೆದಿರುವ ಪತ್ರದ ಕಡತ ಡಿಸಿಎಫ್ ಅವರ ಬಳಿ ಇದ್ದು, ಅವರು ರಸ್ತೆ ಕಾಮಗಾರಿಯ ಅನುಷ್ಠಾನ ಇಲಾಖೆಯು ಸರಕಾರದ ನಿಯಮ ಪ್ರಕಾರ ಮರಗಳ ತೆರವಿನ ಮೊತ್ತವನ್ನು ಇನ್ನೂ ಅಂತಿಮಗೊಳಿಸಿಲ್ಲ.
ಶೀಘ್ರ ಆದೇಶ
ಮರಗಳ ತೆರವಿನ ಕಡತ ನಮ್ಮ ಭಾಗದಲ್ಲಿ ಪೂರ್ಣಗೊಂಡು ಆದೇಶಕ್ಕಾಗಿ ಡಿಸಿಎಫ್ ಅವರಿಗೆ ಕಳುಹಿಸಿ ಕೊಡಲಾಗಿದೆ. ಪ್ರಸ್ತುತ ಅವರು ಕೆಲವೊಂದು ಮೀಟಿಂಗ್ ಗಳಲ್ಲಿ ಬ್ಯುಸಿ ಇದ್ದು, ಶೀಘ್ರ ಸರಕಾರದ ನಿಯಮದ ಪ್ರಕಾರ ಅವರು ಮರಗಳ ತೆರವಿನ ಮೊತ್ತವನ್ನು ತುಂಬಲು ಆದೇಶ ಮಾಡಲಿದ್ದಾರೆ. ಮೊತ್ತ ತುಂಬಿದ ಬಳಿಕ ಮರಗಳ ತೆರವಿಗೆ ಅನುಮತಿ ಸಿಗುತ್ತದೆ. –ರಾಜೇಶ್ ಬಳಿಗಾರ್, ವಲಯ ಅರಣ್ಯಾಧಿಕಾರಿ, ಬಂಟ್ವಾಳ
ಅರಣ್ಯ ಇಲಾಖೆಗೆ ಪತ್ರ
ಕಾಮಗಾರಿ ಮುಂದುವರಿಸಲು ವಿದ್ಯುತ್ ಕಂಬಗಳ ಶಿಫ್ಟ್‌ಗಾಗಿ ಮರಗಳ ತೆರವು ಅಗತ್ಯವಾಗಿದೆ. ಈಗಾಗಲೇ ಮರಗಳನ್ನು ಕಡಿಯಲು ಅನುಮತಿಗಾಗಿ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದ್ದು, ಅದರ ಕಡತ ಡಿಸಿಎಫ್ ಅವರ ಕಚೇರಿಯಲ್ಲಿದೆ. ಅವರು ಅನುಮತಿ ನೀಡಿದ ತತ್‌ಕ್ಷಣ ಮರಗಳನ್ನು ತೆರವು ಮಾಡುತ್ತೇವೆ. ಮರಗಳನ್ನು ತೆರವು ಮಾಡದೆ ಇದ್ದರೂ, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. –ಷಣ್ಮುಗಂ, ಸ. ಕಾರ್ಯ ಪಾಲಕ ಎಂಜಿನಿಯರ್, ಪಿಡಬ್ಲ್ಯುಡಿ, ಬಂಟ್ವಾಳ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.