ನನ್ನ ತಂದೆಯದು ನೀರಿನ ಗುಣ
Team Udayavani, Oct 12, 2019, 5:55 AM IST
ಈ ವರ್ಷದ ಜೂನ್ 22ರಂದು ಮಂಗಳೂರಿನಲ್ಲಿ ನೀಡಿದ ಕೊನೆಯ ಸಂಗೀತ ಕಛೇರಿ.
ಮಂಗಳೂರು: ತಂದೆಯದು ನೀರಿನ ಗುಣ; ಎಲ್ಲರ ಜತೆಗೆ ಬೆರೆಯುವ ಗುಣ. ನಾನು ಬಾಲ್ಯದಲ್ಲಿ ಎಡವಿ ಬಿದ್ದಾಗ ಕೈ ಹಿಡಿದು ಮುನ್ನಡೆಸಲು ಕಲಿಸಿದ ತಂದೆಯಾಗಿ, ಬದುಕಿಗೆ ದಾರಿ ತೋರಿದ ಗುರುವಾಗಿ, ಸಂಗೀತ ಬದುಕಿಗೆ ಮಾರ್ಗದರ್ಶನ ನೀಡಿದ ಕಲಾಶ್ರೇಷ್ಠನಾಗಿದ್ದ ತಂದೆ ಇನ್ನಿಲ್ಲ ಎಂಬ ಭಾವನೆ ಯಾವತ್ತಿಗೂ ನನ್ನನ್ನು ಕಾಡದು. ಅವರು ಎಂದೆಂದಿಗೂ ನನ್ನ ಬದುಕಿಗೆ ಬೆಂಗಾವಲಾಗಿದ್ದಾರೆ, ಅವರ ನೆರಳು ನಿತ್ಯ ನನ್ನೊಡನೆ ಇರುತ್ತದೆ. ಅವರೇ ನನ್ನ ಮೊದಲ ಗುರು.
ಮೇರು ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂರಿಂದ ತೊಡಗಿ ಯುವ ಸಂಗೀತಗಾರರ ಜತೆಗೂ ಪ್ರೀತಿಯಿಂದ ಬೆರೆತು ಮಾದರಿಯಾಗಿದ್ದರು. ತನ್ನ ಜತೆಗೆ ಎಳೆಯ ಸಂಗೀತಗಾರರ ಕಛೇರಿ ಅದಕ್ಕಿಂತ ನನ್ನದು ಶ್ರೇಷ್ಠವಾಗಬೇಕು ಎಂದು ವರ್ತಿಸಿದ ವರಲ್ಲ; ಜತೆಗಾರನ ಸಂಗೀತ ಕೊಂಚ ಇಳಿಮುಖವಾದಾಗ ತಾನೂ ಅದೇ ಸ್ತರಕ್ಕೆ ಇಳಿದು ಜತೆ ನೀಡುತ್ತ ಪ್ರೋತ್ಸಾಹಿಸುತ್ತಿದ್ದರು. ಸವಾಲುಗಳು ಎದುರಾದಾಗ ಪರಿಶ್ರಮ, ದೇವರ ದಯೆ, ಪಾಂಡಿತ್ಯ, ವಿಧೇಯತೆಯೇ ಅವರ ಕೈ ಹಿಡಿದಿತ್ತು.
ಮನೆಯಲ್ಲಿದ್ದಾಗ ಅವರು ತನ್ನ ಸಾಧನೆಯ ವಿರಾಟ್ ರೂಪವನ್ನು ತೋರಿಸಿದವರಲ್ಲ. ಹೀಗಾಗಿ ಮನೆಯಲ್ಲಿದ್ದಾಗ ಸಾದಾ ಸದಸ್ಯ. ಚೆನ್ನೈಗೆ ನಾನು ತೆರಳಿದಾಗಲೇ ಅವರ ನಿಜವಾದ ಸಾಧನೆ ಅರ್ಥವಾದದ್ದು. ಚೆನ್ನೈ ರೈಲು ನಿಲ್ದಾಣದಲ್ಲಿ ತಂದೆಯ ಜತೆಗೆ ನಡೆದು ಹೋಗುವಾಗ 75ರ ವಯಸ್ಸಿನ ಹಿರಿಯರಿಬ್ಬರು ಅವರ ಕಾಲಿಗೆರಗಿದರು. ಅದಕ್ಕೆ ತಂದೆ, “ನೀವು ಹೀಗೆ ಮಾಡಿದರೆ ನನ್ನ ಆಯುಸ್ಸು ಕಡಿಮೆ ಆಗುತ್ತದೆ. ಯಾಕೆ ಹೀಗೆ ಮಾಡುತ್ತೀರಿ?’ ಎಂದು ವಿನಯದಿಂದ ಕೇಳಿದರು. ಅದಕ್ಕೆ “ನಿಮಗಲ್ಲ; ನಿಮ್ಮಲ್ಲಿರುವ ಸಂಗೀತ ಸರಸ್ವತಿಗೆ’ ಎಂದು ಅವರಾಡಿದ ಮಾತು ನನಗೀಗಲೂ ನೆನಪಿದೆ. ನಾನೂ ತಂದೆಯ ಜತೆಗೆ ಸ್ಯಾಕ್ಸೋಫೋನ್ ಕಲಿಯುತ್ತಿದ್ದೆ. ಆದರೆ ಅದರಲ್ಲಿಯೇ ಮುಂದುವರಿಯಲು ಸಾಧ್ಯವಾಗಲಿಲ್ಲ.
ಸಾಧನೆ, ಉನ್ನತಿಗೆ ಪ್ರೇರಣೆ
ಮುಖ್ಯವಾಗಿ ಗಮನಿಸಬೇಕಾದ್ದು ಎಂದರೆ ತಂದೆಯಾಗಿ ಅವರು ನನ್ನ ಸಂಗೀತದ ಬಗ್ಗೆ ಮಗನೆಂಬ ಮೋಹದಿಂದ ಮೆಚ್ಚುಗೆ ವ್ಯಕ್ತಪಡಿಸದೆ ಪ್ರೋತ್ಸಾಹದಾಯಕ ಮಾತುಗಳನ್ನಾಡುತ್ತಿದ್ದರು. “ಮಣಿಕಾಂತ್ ನನ್ನ ಮಗ’ ಎಂಬ ಅವರ ಮಾತು ನನಗೆ ಚಿತ್ರ ಸಂಗೀತ ನಿರ್ದೇಶನದ ಅವಕಾಶಗಳನ್ನು ಒದಗಿಸಿ ಕೊಟ್ಟಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ನಾನು ಸ್ವಸಾಮರ್ಥ್ಯದಿಂದ ಅವಕಾಶಗಳನ್ನು ಪಡೆಯಬೇಕೆಂಬ ಉದ್ದೇಶವೂ ಅವರದ್ದಾಗಿತ್ತು. ಹೊಸತನ, ಹೊಸ ಯೋಚನೆ ಬಗ್ಗೆ ತುಡಿಯುತ್ತಿರ ಬೇಕು. ಬದಲಾಗಿ ಗೆಲುವು ಬಂದಾಗಿದೆ ಎಂದು ಭಾವಿಸಿದರೆ ಅದು ಸಾಧನೆಯೇ ಅಲ್ಲ ಎಂದು ಹೇಳಿಕೊಟ್ಟವರು ಅವರು. ಕದ್ರಿಯವರ ಮಗ ಎನ್ನುವುದರ ಬದಲಾಗಿ ಮಣಿಕಾಂತ್ ಕದ್ರಿಯಾಗಿಯೇ ಗುರುತಿಸಿಕೊಳ್ಳಲು, ಬೆಳೆಯಲು ಪ್ರಯತ್ನಿಸು ಎಂದು ಕಿವಿಮಾತು ಹೇಳಿದವರು. ನನ್ನ ಸಂಗೀತವನ್ನು ನನ್ನ ಎದುರು ಶ್ಲಾ ಸದಿದ್ದರೂ ಬೇರೆಯವರಲ್ಲಿ ಮೆಚ್ಚಿ ಮಾತಾಡಿದ್ದಾರೆ, ಅದೇ ಸಂತೋಷ.
ನಾಲ್ಕೂವರೆ ವರ್ಷಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಕಾರ್ಯಕ್ರಮಕ್ಕೆ ಸಮಸ್ಯೆ ಆಗದಂತೆ ಮತ್ತು ಅವರ ಮನಸ್ಸಿಗೆ ನೋವಾಗಬಾರದೆಂದು ನಾವು ಅವರಿಗೆ ತಿಳಿಸಿರಲಿಲ್ಲ. ಉಪಾಯವಾಗಿ ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದೆವು. 8 ತಿಂಗಳಿ ನಿಂದ ಈ ಸಮಸ್ಯೆಯ ಬಗ್ಗೆ ತಂದೆಯ ಗಮನಕ್ಕೆ ಬಂದಿತ್ತು.
ತಂದೆಯ ಸಂಗೀತ ಶ್ರೇಷ್ಠ
ಒಂದಂತೂ ಸತ್ಯ. ಸಿನೆಮಾದಲ್ಲಿ ನಾವೆಲ್ಲ ಮಾಡುವ ಸಂಗೀತ ನಿಜವಾದುದಲ್ಲ. ತಂದೆ ನುಡಿಸುತ್ತಿದ್ದದ್ದೇ ನಿಜವಾದ ಸಂಗೀತ. ನಾವು “ಮಾಸ್’ ಅನ್ನು ಮನಸ್ಸಲ್ಲಿಟ್ಟುಕೊಂಡು ಸಂಗೀತಕ್ಕೆ ಗಮನ ನೀಡಿದರೆ ತಂದೆ ಸಂಗೀತವನ್ನೇ “ಮಾಸ್’ ಎಂದು ತಿಳಿದವರು. ಹೀಗಾಗಿ ನಮ್ಮ ಸಂಗೀತ “ಫಾಸ್ಟ್ ಫುಡ್’ ಎನ್ನಬಹುದು.ಸಂಗೀತದಲ್ಲಿ ತಂದೆ ಇಳಿದಷ್ಟು ಆಳಕ್ಕೆ ಇಳಿಯಲು ನನಗೆ ಸಾಧ್ಯವಿಲ್ಲವೇನೋ! ನಾವು ಬೇಸರ, ಪ್ರೀತಿ, ಖುಷಿ, ನೆಮ್ಮದಿ ಹೀಗೆ ಬೇರೆ ಬೇರೆ ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ಸಂಗೀತದ ಮೊರೆಹೊಕ್ಕರೆ, ತಂದೆ ಒಂದೇ ಸಂಗೀತದಲ್ಲಿ ಆಳವಾಗಿ ಬೇರೂರಿ ಅದರಿಂದಲೇ ಎಲ್ಲವನ್ನೂ ಉಣಬಡಿಸಿದರು. ಇದುವೇ ನಿಜವಾದ ಸಂಗೀತ.
ಮಣಿಕಾಂತ್ ಕದ್ರಿ
ಸ್ಯಾಕ್ಸೋಫೋನ್‌ಗಾಗಿಯೇ ಅವರ ಜನ್ಮ
ಹಲವರ ವಿದ್ಯಾಭ್ಯಾಸಕ್ಕೆ, ದೇವಸ್ಥಾನಗಳಲ್ಲಿ ಧರ್ಮಕಾರ್ಯದ ಮೂಲಕವೂ ತಂದೆ ಸದ್ದಿಲ್ಲದೆ ಸಮಾಜಸೇವೆ ನಡೆಸಿದ್ದಾರೆ. ಸಂಗೀತವೇ ದೇವರು ಎಂದು ನಂಬಿ ಅದನ್ನೇ ಉಸಿರಾಡಿದವರು. ಕಾರ್ಗಿಲ್ ಯುದ್ಧ ಸಂದರ್ಭ ನಿಧಿ ಸಂಗ್ರಹ, ಪ್ರಧಾನಿ ಮೋದಿ ಕರೆಯ ಮೇರೆಗೆ ಸ್ವಚ್ಛ ಭಾರತ್ ಯೋಜನೆಯಡಿ ಬೆಂಗ್ರೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದ್ದರು. ಇವೆಲ್ಲವೂ ಮನಸ್ಸಿನ ತೃಪ್ತಿಗೆ ಮಾಡಿದ್ದು. ಇಂದು ದೇಶದ ಯಾವುದೇ ಭಾಗದಲ್ಲಿ ಯಾವುದೇ ಮಂಗಲ ಕಾರ್ಯ ನಡೆಯುವಾಗಲೂ ಕದ್ರಿಯವರ ಸ್ಯಾಕ್ಸೋಫೋನ್ ಮಾಧುರ್ಯ ಕೇಳಬಹುದು. ಶುಭಕಾರ್ಯಗಳಲ್ಲಿ ಸ್ಯಾಕ್ಸೋಫೋನ್ ಬೇಕೇಬೇಕು ಎಂಬ ಟ್ರೆಂಡ್‌ಗೆ ತಂದೆಯವರು ಹುಟ್ಟಿಸಿದ ಕ್ರೇಜ್ ಕಾರಣ. ಆಕಾಶವಾಣಿಯಲ್ಲಿ ಅವರು ಸ್ಯಾಕ್ಸೋಫೋನ್ ಆಡಿಶನ್‌ಗೆ ಹೋದಾಗ ಅಲ್ಲಿಯ ಪಟ್ಟಿಯಲ್ಲಿ ಆ ವಾದ್ಯದ ಹೆಸರೇ ಇರಲಿಲ್ಲ. ಅವರು ಆಕಾಶವಾಣಿಗೆ ಪತ್ರ ಬರೆದ ಅನಂತರ ಅದಕ್ಕೆ ಮನ್ನಣೆ ದೊರೆಯುವಂತಾಯಿತು. ಸ್ಯಾಕ್ಸೋಫೋನ್‌ಗಾಗಿಯೇ ಅವರ ಜನ್ಮ ಎಂಬುದನ್ನು ಹೆಮ್ಮೆಯಿಂದ ಹೇಳಬಲ್ಲೆ. ಪಾಂಡಿತ್ಯದ ಜತೆಗೆ ವಿನಯ ಹೊಂದಿದ್ದ ಸಾಧಕ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.