ತುಳು ಸಿನೆಮಾ ನಿರ್ಮಾಣಕ್ಕೆ ಚಿನ್ನದ ಮೆರುಗು!
Team Udayavani, Sep 4, 2020, 6:54 AM IST
ತುಳುವಿನ ಮೊದಲ ಚಿತ್ರ ನಿರ್ಮಾಣ ಸಂಸ್ಥೆಯಾದ 'ಶ್ರೀ ಶರಾವು ಪಿಕ್ಚರ್' ಶುಭಾರಂಭಗೊಂಡ ಕ್ಷಣ.
ಇಂದಿಗೆ (ಸೆ. 4) ಕೋಸ್ಟಲ್‌ವುಡ್‌ನ ಮೊಟ್ಟ ಮೊದಲ ಚಿತ್ರ ನಿರ್ಮಾಣ ಸಂಸ್ಥೆಯ ಮೂಲಕ ಮೊದಲ ತುಳು ಸಿನೆಮಾ ನಿರ್ಮಾಣ ಆರಂಭವಾಗಿ 50 ವರ್ಷಗಳು ಪೂರ್ಣಗೊಂಡಿವೆ.
1970ರ ಸೆ. 4ರಂದು ನಗರದ ಶರವು ಮಹಾಗಣಪತಿ ಸನ್ನಿಧಿಯಲ್ಲಿ ‘ಶ್ರೀ ಶರಾವು ಪಿಕ್ಚರ್’ ಎಂಬ ಹೆಸರಿನಲ್ಲಿ ತುಳುವಿನ ಮೊದಲ ಚಿತ್ರ ನಿರ್ಮಾಣ ಸಂಸ್ಥೆಯು ತುಳು ಭಾಷೆಯ ಚಲನಚಿತ್ರ ನಿರ್ಮಾಣ ಕಾರ್ಯ ಆರಂಭಿಸಿತ್ತು.
ಬಳಿಕ ನೂರಕ್ಕೂ ಅಧಿಕ ಸಿನೆಮಾಗಳ ಮೂಲಕ ಕೋಸ್ಟಲ್‌ವುಡ್ ಹಲವಾರು ವೈಶಿಷ್ಟ್ಯ ಮತ್ತು ಹಿರಿಮೆಯ ಮೂಲಕ ಜನಮೆಚ್ಚುಗೆ ಪಡೆಯುವಂತಾಯಿತು.
ಖ್ಯಾತ ಕಲಾವಿದ ಕೆ.ಎನ್. ಟೇಲರ್ ಅವರು 1958ರಲ್ಲಿ ಶ್ರೀ ಗಣೇಶ ನಾಟಕ ಸಭಾ ಎಂಬ ಸಂಸ್ಥೆಯನ್ನು ಕಟ್ಟಿದ್ದರು. ಕಾಸರಗೋಡಿನಿಂದ ಕುಂದಾಪುರದವರೆಗೆ ತುಳು ನಾಟಕ ಪ್ರದರ್ಶಿಸಿ ಜನಮೆಚ್ಚುಗೆ ಪಡೆದಿದ್ದರು.
1967ರಲ್ಲಿ ಮದ್ರಾಸಿನಲ್ಲಿದ್ದ ತುಳುವರ ಸಹಾಯ ಪಡೆದು ಕೆ.ಎನ್. ಟೇಲರ್ ಅವರು ತುಳು ಸಿನೆಮಾ ಮಾಡುವ ಯೋಜನೆ ಹಾಕಿದರು. ಇದೇ ವೇಳೆ ಕರ್ನಾಟಕ ಸರಕಾರ ಚಲನ ಚಿತ್ರಗಳಿಗೆ ಸಹಾಯಧನದ ಭರವಸೆ ನೀಡಿತ್ತು.
ಈ ಧೈರ್ಯದಿಂದಾಗಿ ಕೆ.ಎನ್. ಟೇಲರ್ ಅವರು ತುಳು ಸಿನೆಮಾ ಮಾಡುವ ಸಾಹಸಕ್ಕೆ ಮುಂದಾದರು. ಹಲವರ ಸಹಾಯ ಪಡೆಯಲಾಯಿತು. ಅಂತಿಮವಾಗಿ ನಾರಾಯಣ ಪುತ್ರನ್ ಜತೆ ಸೇರಿ 1970ರ ಸೆ. 4ರಂದು ಚಿತ್ರ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡಿದರು.
‘ದಾರೆದ ಬುಡೆದಿ’
ತುಳುನಾಡಿನವರೇ ಆಗಿರುವ ಚಿತ್ರ ನಿರ್ದೇಶಕ ಆರೂರು ಪಟ್ಟಾಭಿ ಅವರನ್ನು ಸಂಪರ್ಕಿಸಿ ಚಿತ್ರೀಕರಣದ ಸಿದ್ಧತೆ ಆರಂಭಿಸಿದರು. ಪ್ರಥಮ ಹಂತದ ಕಾರ್ಯದಂತೆ ಮದ್ರಾಸಿನ ವಿಜಯ ಸ್ಟುಡಿಯೋದಲ್ಲಿ ಚಿತ್ರದ ಕಥೆಗೆ ಅಗತ್ಯವಿರುವ ಹಾಡುಗಳನ್ನು ರೆಕಾರ್ಡ್ ಮಾಡಿದರು. ಮಲ್ಪೆ ಮಧ್ವರಾಜರ ಸಹಾಯ ಪಡೆದು ಮಲ್ಪೆಯ ಸ್ವಾಗತ ಮನೆಯಲ್ಲಿ ‘ದಾರೆದ ಬುಡೆದಿ’ ಎಂಬ ಹೆಸರಿನ ಪ್ರಥಮ ತುಳು ಸಿನೆಮಾ ಚಿತ್ರೀಕರಣ ಆರಂಭಿಸಿತು. ಮಣಿಪಾಲದ ಟಿಎಂಎ ಪೈ ಅವರ ದಿವ್ಯ ಹಸ್ತದಿಂದ ಚಿತ್ರೀಕರಣದ ಉದ್ಘಾಟನೆ ನಡೆದಿತ್ತು. ಇದೇ ಸಂದರ್ಭ ಬೆಂಗಳೂರಿನ ಎಸ್.ಆರ್. ರಾಜನ್ ಅವರು ಮಂಗಳೂರಿನ ಕೆಲವು ಸ್ನೇಹಿತರ ಸಹಾಯ ಪಡೆದು ತುಳು ಸಿನೆಮಾ ನಿರ್ಮಾಣ ಮಾಡಲು ಅಣಿಯಾದರು.
ಸಿನೆಮಾ ಬಗ್ಗೆ ಅನುಭವ ಹೊಂದಿದ್ದ ರಾಜನ್ ಅವರು ಕಾಲಹರಣ ಮಾಡದೆ ಕ್ಷಿಪ್ರಗತಿಯಲ್ಲಿ ‘ಎನ್ನ ತಂಗಡಿ’ ಸಿನೆಮಾ ನಿರ್ಮಿಸಿದರು. ಇದಕ್ಕೆ ಆರ್ಥಿಕ ಸಹಾಯ ನೀಡಿ ಖರೀದಿಸಿದ ಟಿ. ಎ. ಶ್ರೀನಿವಾಸ್ ಅವರು 1971ರ ಫೆಬ್ರವರಿಯಲ್ಲಿ ಸಿನೆಮಾ ಬಿಡುಗಡೆ ಮಾಡಿದರು. ಬಳಿಕ ಶರಾವು ಪಿಕ್ಚರ್ನ ‘ದಾರೆದ ಬುಡೆದಿ’ ಸಿನೆಮಾ ದ್ವಿತೀಯ ಸಿನೆಮಾವಾಗಿ 1971ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿ ಯಶಸ್ವಿ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಶರಾವು ಪಿಕ್ಚರ್ನವರು ಮುಂದೆ ‘ಧರ್ಮಪತ್ನಿ’ ಎಂಬ ಕನ್ನಡ ಸಿನೆಮಾ ನಿರ್ಮಾಣ ಮಾಡಿದ್ದರು. ಈ ಸಂಸ್ಥೆ ಸ್ಥಾಪಿತವಾದ ಅನಂತರ ಕೆ. ಎನ್. ಟೇಲರ್ ಅವರು ಆರಂಭದಲ್ಲಿ 9 ತುಳು ಸಿನೆಮಾಗಳನ್ನು ನಿರ್ಮಾಣ ಮಾಡಿದ್ದರು.
50 ವರ್ಷ: 111 ಸಿನೆಮಾ!
50 ವರ್ಷಗಳಲ್ಲಿ ತುಳುವಿನಲ್ಲಿ ಬರೋಬ್ಬರಿ 111 ಸಿನೆಮಾಗಳು ಪ್ರದರ್ಶನಗೊಂಡಿವೆ. ‘ಎನ್ನ’ ಇತ್ತೀಚೆಗೆ ಪ್ರದರ್ಶನಗೊಂಡ ಸಿನೆಮಾ. ಬಳಿಕ ಕೋವಿಡ್ 19 ಲಾಕ್‌ಡೌನ್ ಕಾರಣದಿಂದಾಗಿ ಸಿನೆಮಾ ಪ್ರದರ್ಶನಕ್ಕೆ ತಡೆಯಾಗಿತ್ತು. ಸದ್ಯ 10 ಸಿನೆಮಾಗಳು ಪ್ರದರ್ಶನಕ್ಕೆ ಸಿದ್ಧವಾಗಿದ್ದರೆ, 15 ಸಿನೆಮಾಗಳು ಶೂಟಿಂಗ್ ಹಂತದಲ್ಲಿವೆ. ತುಳು ಸಿನೆಮಾ ಪ್ರದರ್ಶನ ಆರಂಭವಾಗಿ ಮುಂದಿನ ವರ್ಷಕ್ಕೆ 50 ವರ್ಷಗಳು ಪೂರ್ಣಗೊಳ್ಳಲಿವೆ.
1970ರ ಸೆ.4ರಂದು ಚಲನಚಿತ್ರ ನಿರ್ಮಾಣ ಮಾಡುವ ತುಳು ಭಾಷೆಯ ಮೊದಲ ಸಂಸ್ಥೆ ಶರಾವು ಪಿಕ್ಚರ್ ಸ್ಥಾಪನೆಯಾಯಿತು. ತುಳು ಸಿನೆಮಾ ರಂಗ ಉದಯಿಸಿದ ಕಾಲ ಅದಾಗಿದ್ದು, ಬಳಿಕ 50 ವರ್ಷಗಳಲ್ಲಿ ತುಳು ಸಿನೆಮಾ ಲೋಕ ಅದ್ವಿತೀಯ ಸಾಧ ನೆಯ ಮೂಲಕ ಜನಮೆಚ್ಚುಗೆ ಪಡೆಯಲು ಸಾಧ್ಯವಾಯಿತು.
– ತಮ್ಮ ಲಕ್ಷ್ಮಣ, ಮಂಗಳೂರು, ಹಿರಿಯ ಕಲಾ ನಿರ್ದೇಶಕರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.