ಹಳ್ಳಿಹಳ್ಳಿಗ್ ಬೊಳ್ಳಿ ಪರದೆ
Team Udayavani, Jan 31, 2018, 12:51 PM IST
ಬಂಟ್ವಾಳ: “ಹಳ್ಳಿಹಳ್ಳಿಗ್ ಬೊಳ್ಳಿ ಪರದೆ’ ಎಂಬ ತುಳು ಚಲನಚಿತ್ರ ಪ್ರದರ್ಶಕ ಸಂಚಾರಿ ಸಿನೆಮಾ ಥಿಯೇಟರ್ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರದಲ್ಲಿ ರೂಪುಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಟೆಂಟ್ ಯಕ್ಷಗಾನ ಮಾದರಿಯ ಈ ಸಂಚಾರಿ ಚಿತ್ರಮಂದಿರ ಗ್ರಾಮ ಮಟ್ಟದಲ್ಲಿ ಕಿಕ್ಕಿರಿದ ದೇಖಾವೆಗಳನ್ನು ನೀಡಿದರೆ ಅಚ್ಚರಿಯಿಲ್ಲ.
ಸ್ವರಾಜ್ ಮಾಜಾª ವಾಹನದಲ್ಲಿ ಸಂಚರಿಸುವ ಈ ಕಿರು ಚಿತ್ರಮಂದಿರದಲ್ಲಿ ಚಿತ್ರಪ್ರದರ್ಶನಕ್ಕೆ 8 ಅಡಿ ಅಗಲ, 6 ಅಡಿ ಎತ್ತರದ ಎಲ್‌ಇಡಿ ಪರದೆ ಇರುತ್ತದೆ. ಮೇಲ್ಬದಿ ಮತ್ತು ಸುತ್ತಲೂ ಶಾಮಿಯಾನ ವಿಸ್ತರಿಸುವ ಮೂಲಕ ಎಲ್ಲಿ ಬೇಕಾದರೆ ಅಲ್ಲಿ ಇದು ಚಿತ್ರ ಪ್ರದರ್ಶನಕ್ಕೆ ಸಿದ್ಧಗೊಳ್ಳುತ್ತದೆ. ಇದರ ಟೆಂಟ್ 40 ಅಡಿ ಅಗಲಕ್ಕೆ ವಿಸ್ತರಿಸಿ ತೆರೆದುಕೊಳ್ಳುವುದು. ಪ್ರೇಕ್ಷಕರು ಒಳಗೆ ಕುಳಿತಾಗ ಪಾರಂಪರಿಕ ಸಿನೆಮಾ ಮಂದಿರದ ಅನುಭವ ನೀಡುವುದು. ಒಳಾಂಗಣದಲ್ಲಿ ಶಬ್ದರಹಿತ ಫ್ಯಾನ್ ಅಳವಡಿಸಿ ಸೆಕೆಯ ಕಿರಿಕಿರಿ ಇಲ್ಲದೆ ಚಿತ್ರ ವೀಕ್ಷಿಸುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪರಿಶೀಲಿಸಲಾಗಿದೆ.
ನೂರು ಮಂದಿ ಕುರ್ಚಿಯಲ್ಲಿ, ಸುಮಾರು ಇಪ್ಪತ್ತೈದು ಮಕ್ಕಳು ಮುಂಭಾಗದಲ್ಲಿ ಕುಳಿತು ಸಿನೆಮಾ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಧ್ವನಿ ವರ್ಧಕ, ನೆರಳು ಬೆಳಕಿನ ವ್ಯವಸ್ಥೆಯನ್ನು ಆಯಾ ಪ್ರದೇಶಕ್ಕೆ ತಕ್ಕಂತೆ ಕಲ್ಪಿಸಿಕೊಳ್ಳುವ ಅವಕಾಶವಿದೆ. ಗ್ರಾಮಾಂತರ ಜನರಿಗಾಗಿ ಗ್ರಾಮಾಂತರ ಪ್ರದೇಶದ ಜನರಿಗೆ ಅವರ ಊರಿನಲ್ಲಿಯೇ ಚಿತ್ರ ವೀಕ್ಷಿಸುವ ಅವಕಾಶ ಒದಗಿಸಲು ಸಂಚಾರಿ ಟೆಂಟ್ ಮಾದರಿಯ ಚಿತ್ರಮಂದಿರ ರೂಪಿಸುವ ಚಿಂತನೆ ನಡೆಸಿದವರು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ. ತುಳು ಸಿನೆಮಾ ನೋಡುವ ಅಪೇಕ್ಷೆ ಅನೇಕರಲ್ಲಿದೆ, ಆದರೆ ಅದಕ್ಕಾಗಿ ನಗರದ ಥಿಯೇಟರ್‌ಗೆ ಬಂದು ನೋಡುವಷ್ಟು ಸಮಯ ಜನರಲ್ಲಿ ಇಲ್ಲ. ಅಂಥವರನ್ನು ಮುಟ್ಟುವುದಕ್ಕಾಗಿ ಸಂಚಾರಿ ಥಿಯೇಟರ್ ರೂಪಿಸಲಾಗಿದೆ ಎನ್ನುತ್ತಾರೆ ಅವರು.
ಹಿಂದೆ ಯಕ್ಷಗಾನ, ಈಗ ಸಿನೆಮಾ
ಹಿಂದೆ ಟೆಂಟಿನೊಳಗಣ ಯಕ್ಷಗಾನ “ಟಿಕೆಟ್ ಆಟ’ವಾಗಿ ಬಹು ಜನಪ್ರಿಯವಾಗಿತ್ತು. ಈಗಲೂ ಹಲವೆಡೆ ಪ್ರದರ್ಶನ ಕಾಣುತ್ತಿದೆ. ಅದೇ ಮಾದರಿ ಯಲ್ಲಿ ತುಳು ಸಿನೆಮಾಗಳನ್ನು ಪ್ರದರ್ಶಿಸುವ ಈ ಸಂಚಾರಿ ಚಿತ್ರಮಂದಿರ ಜನಮನ ಗೆಲ್ಲುವುದರಲ್ಲಿ ಸಂಶಯವಿಲ್ಲ. ಇದೊಂದು ಹೊಸ ಪ್ರಯೋಗ ವಾಗಿ ಜನಪ್ರಿಯತೆ ಪಡೆಯಲಿದೆ ಎಂಬ ನಿರೀಕ್ಷೆ ಸಂಘಟಕರದು. ಸಂಘಸಂಸ್ಥೆಗಳು ಪ್ರಾಯೋಜಕತ್ವ ವಹಿಸುವ ಮೂಲಕ ಊರ ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಚಲನಚಿತ್ರ ಪ್ರದರ್ಶಿಸಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಸಭಾಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ವೈವಿಧ್ಯ ಸಂದರ್ಭ ಇಂತಹ ಸಿನೆಮಾ ಪ್ರದರ್ಶನವೂ ಒಂದು ಮಾದರಿಯಾಗಿ ಬೆಳೆಯುವ ಸಾಧ್ಯತೆಯಿದೆ.
ಖರ್ಚು ಕಡಿಮೆ
ನಾಟಕ ಪ್ರದರ್ಶನ, ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಖರ್ಚುವೆಚ್ಚಕ್ಕೆ ಹೋಲಿಸಿದರೆ ಸಂಚಾರಿ ಥಿಯೇಟರ್ ಸಿನೆಮಾ ಪ್ರದರ್ಶನ ತೀರಾ ಕಡಿಮೆ ಖರ್ಚಿನಲ್ಲಿ ಒದಗಬಹುದಾಗಿದೆ. ಇದರ ಇಡೀ ವ್ಯವಸ್ಥೆಯನ್ನು ಒಬ್ಬ ಅಥವಾ ಇಬ್ಬರು ತಂತ್ರಜ್ಞರು ನಿರ್ವಹಿಸಬಹುದು. ಸಮಯ ಹೊಂದಾಣಿಕೆ, ಪ್ರೇಕ್ಷಕರ ಅಪೇಕ್ಷೆಯ ಚಿತ್ರ ಪ್ರದರ್ಶ ನದ ಅನುಕೂಲ ಇದರಲ್ಲಿದೆ. ನಿರ್ಮಾಪಕರಿಂದ ಸಿನೆಮಾಗಳನ್ನು ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿ, ಅದನ್ನು ಪ್ರದರ್ಶಿಸಬಹುದು. ಹೀಗಾಗಿ ಹಳ್ಳಿಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಸೇರಿ ಜನಾಕರ್ಷಣೆ ಸಾಧ್ಯವಾಗಬಹುದು.
ಮನೆ ಬಾಗಿಲಿಗೆ ತುಳು ಚಿತ್ರ
ಇದೊಂದು ಹೊಸ ಪ್ರಯೋಗ, ತುಳು ಸಿನೆಮಾಗಳ ಪ್ರದರ್ಶನಕ್ಕೆ ಸಾಕಷ್ಟು ಥಿಯೇಟರ್ ಸಿಗುವುದಿಲ್ಲ ಎಂಬ ಕಾಲಘಟ್ಟದಲ್ಲಿ ನೇರವಾಗಿ ಗ್ರಾಮಾಂತರ ಪ್ರದೇಶದ ಪ್ರೇಕ್ಷಕರ ಮನೆ ಬಾಗಿಲಿಗೆ ತುಳು ಚಿತ್ರವನ್ನು ಮುಟ್ಟಿಸುವ ಪ್ರಯತ್ನ ಈ ಮೂಲಕ ನಡೆದಿದೆ.
ಸಂಚಾರಿ ಥಿಯೇಟರ್ ರೆಡಿ ಆಗಿದ್ದರೂ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಜನರ ಬಳಿಗೆ ತಲುಪುವುದಕ್ಕೆ ಇನ್ನಷ್ಟು ಕಾಲಾವಕಾಶ ಬೇಕಾಗಿದೆ. ಜಿಲ್ಲಾಡಳಿತ, ಸಂಬಂಧ ಪಟ್ಟ ಇಲಾಖೆಗಳ, ಚಿತ್ರ ನಿರ್ಮಾಪಕರ, ಅಕಾ ಡೆಮಿಯ ಪೂರ್ಣ ಪ್ರಮಾಣದ ಅನುಮತಿ ಅವಶ್ಯವಿದೆ.
ಉಭಯ ಜಿಲ್ಲೆಯಲ್ಲಿ 150ಕ್ಕೂ ಅಧಿಕ ಶಾಲೆಗಳಲ್ಲಿ ಮಕ್ಕಳ ಚಿತ್ರ ಪ್ರದರ್ಶನ ನೀಡಿ ಅನುಭವ ಹೊಂದಿದ್ದೇನೆ. ಅದರ ಆಧಾರದಲ್ಲಿ ಕೆಲವು ಮಾರ್ಪಾಡುಗಳ ಮೂಲಕ ಹೊಸತನ ಸೇರಿಸಿ ಸಂಚಾರಿ ಥಿಯೇಟರ್ ನಿರ್ಮಾಣ ಮಾಡಿದ್ದೇವೆ. ಪ್ರಾಯೋಗಿಕ ಪ್ರದರ್ಶನ ಬಳಿಕ ಪ್ರೇಕ್ಷಕರ, ಪ್ರಮುಖರ ಅಭಿಪ್ರಾಯ ಪಡೆದು ಅವಶ್ಯ ಬದಲಾವಣೆ ಸಾಧ್ಯ. ಶೀಘ್ರ ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕ ಇದರ ಸಾರ್ವಜನಿಕ ಪ್ರದರ್ಶನ ನೀಡಲಾಗುವುದು.
– ಕೇಶವ ಸುವರ್ಣ ಥಿಯೇಟರ್ ನಿರ್ವಾಹಕರು, ಚಲನಚಿತ್ರ ಕಲಾ ನಿರ್ದೇಶಕರು
ಸಂಚಾರಿ ಥಿಯೇಟರ್ ನಿರ್ಮಾಣದ ಚಿಂತನೆ ಅಕಾಡೆಮಿಯದ್ದು. ಇದನ್ನು ಕಾರ್ಯಗತಗೊಳಿಸಿ ನಿರ್ವಹಿಸುವ ಜವಾಬ್ದಾರಿ ಸಂಪೂರ್ಣ ನಿರ್ವಾಹಕರದು. ಅಕಾಡೆಮಿ ನೈತಿಕ ಬೆಂಬಲ ನೀಡುವುದು, ಕಾನೂನು ಪ್ರಕ್ರಿಯೆಯಲ್ಲಿ ಸಹಕರಿಸುವುದು.
– ಎ.ಸಿ. ಭಂಡಾರಿ, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
ಪ್ರತೀ ಸಿನೆಮಾ ಕನಿಷ್ಟ 2ರಿಂದ 2.30 ತಾಸು ಅವಧಿಯದ್ದಾಗಿರುತ್ತದೆ. ಜನರಿಗೆ ಇದೊಂದು ಕಾಲಮಿತಿಯ ಮನೋರಂಜನೆ ಆಗಲಿದೆ. ಸಂಚಾರಿ ಥಿಯೇಟರ್ ಒಳಗೆ ಮಧ್ಯಂತರ ವಿರಾಮ ಅವಧಿಯಲ್ಲಿ ತಿಂಡಿತಿನಿಸು ಹಂಚಲು ಅವಕಾಶವಿದೆ. ಮೊದಲೇ ಬುಕ್ಕಿಂಗ್ ಮಾಡಿಕೊಂಡು ರಸ್ತೆ ಸಂಪರ್ಕ ಇರುವ ಯಾವುದೇ ಸ್ಥಳಕ್ಕೆ ತೆರಳಿ ಸಿನೆಮಾ ಪ್ರದರ್ಶನ ನೀಡುವ ಚಿಂತನೆ ಇದರ ಹಿಂದಿದೆ.
ರಾಜಾ ಬಂಟ್ವಾಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.