Tulu ಲಿಪಿ ಯುನಿಕೋಡ್‌ಗೆ! ಹೊಸ ಮೈಲಿಗಲ್ಲು
ವಿಕಿಪೀಡಿಯಾ, ಗೂಗಲ್ ಮನ್ನಣೆ ಬಳಿಕ ಈಗ ತುಳುವಿಗೆ ಲಭ್ಯವಾದ ಹೊಸ ಅವಕಾಶ
Team Udayavani, Sep 9, 2024, 6:55 AM IST
ಮಂಗಳೂರು: ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಹಾಗೂ ಸಂವಿಧಾನದ 8ನೇ ಪರಿಚ್ಛೇದದಡಿ ತುಳು ಭಾಷೆ ಸೇರುವ ಅವಕಾಶವನ್ನು ಸರಕಾರ ಕಲ್ಪಿಸದಿದ್ದರೂ ತುಳು ಲಿಪಿ ಈಗ “ಯುನಿಕೋಡ್’ಗೆ ಸೇರ್ಪಡೆಯಾಗುವ ಮೂಲಕ ಮಹತ್ವದ ಮೈಲಿಗಲ್ಲು ದಾಖಲಿಸಿದೆ.
ತುಳು ವಿಕಿಪೀಡಿಯಾ, ಗೂಗಲ್ ನಲ್ಲಿ ತುಳು ಅನುವಾದದ ಅವಕಾಶ ಒದಗಿದ ಬಳಿಕ ತುಳು ಭಾಷಿಕರಿಗೆ ಈಗ ಯುನಿಕೋಡ್‌ನಲ್ಲಿ ತುಳು ಲಭ್ಯವಾಗಿರುವುದು ಉಲ್ಲೇಖನೀಯ ಅಂಶ.
ಯುನಿಕೋಡ್ ಆವೃತ್ತಿ 16ರಲ್ಲಿ ತುಳು ಸೇರ್ಪಡೆಯಾಗಿದೆ. ಸದ್ಯ ಒಟ್ಟು 80 ಅಕ್ಷರ ಸೇರಿಸಲಾಗಿದೆ.
ಯುನಿಕೋಡ್‌ನಲ್ಲಿ ತುಳು ಲಭ್ಯವಾಗಿರುವ ಕಾರಣ ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್, ಟೆಕ್ಸ್ಟ್ ಟು ಸ್ಪೀಚ್, ಸ್ಪೀಚ್ ಟು
ಟೆಕ್ಸ್ಟ್,ಆರ್ಟಿ ಫಿಶಿಯಲ್ ಇಂಟೆಲಿಜೆನ್ಸ್ ಇವೆಲ್ಲ ವನ್ನೂ ಮಾಡಲು ಸಾಧ್ಯವಾಗಲಿದೆ. ಗೂಗಲ್‌ನಲ್ಲಿ ಈಗಾಗಲೇ ಇಂಗ್ಲಿಷ್ ಟು ತುಳು ಟ್ರಾನ್ಸ್‌ಲೇಶನ್ ಒದಗಿರುವ ಕಾರಣ ಯುನಿಕೋಡ್‌ನಲ್ಲಿ ಹಲವು ಸಾಧ್ಯತೆಗಳು ಮುಂದಿನ ದಿನಗಳಲ್ಲಿ ತೆರೆದುಕೊಳ್ಳುವ ನಿರೀಕ್ಷೆ ಮೂಡಿದೆ.
ತುಳು ವಿಕಿಪೀಡಿಯ 2016ರ ಆ. 6ರಂದು ಆರಂಭವಾಯಿತು. ಮುಂದು ವರಿದ ಭಾಗವಾಗಿ ಯುನಿ ಕೋಡ್ ಅಗತ್ಯದ ಹಿನ್ನೆಲೆಯಲ್ಲಿ ತುಳು ಸಾಹಿತ್ಯ ಅಕಾಡೆಮಿಯು 2017ರಲ್ಲಿ ತುಳು ಅಕ್ಷರಗಳನ್ನು ಅಂತಿಮ ಗೊಳಿಸಲು ಒಂದು ಸಮಿತಿ ರಚಿಸಿತ್ತು. ಮಾಹಿತಿ ತಂತ್ರಜ್ಞಾನ ತಜ್ಞ ಯು.ಬಿ. ಪವನಜ ಅವರು ತಾಂತ್ರಿಕ ಸಲಹೆ ನೀಡಿದ್ದರು. ಇದರಂತೆ ತುಳು ಅಕ್ಷರಗಳ ಪಟ್ಟಿ ಮಾಡಲಾಗಿತ್ತು. 80 ಪುಟಗಳ ಪಟ್ಟಿಯನ್ನು ಯುನಿಕೋಡ್‌ಗೆ ಕಳುಹಿಸಲಾಗಿತ್ತು. ಇದೇ ಸಂದರ್ಭ “ತಿಗಳಾರಿ ಲಿಪಿ’ ಎಂದು ಪ್ರತ್ಯೇಕ ಪ್ರಸ್ತಾವನೆ ಕೂಡ ಸಲ್ಲಿಕೆ ಆಗಿತ್ತು. ಬಳಿಕ ಎರಡೂ ಕಡೆ ಹಲವು ಪತ್ರ ವ್ಯವಹಾರಗಳ ಅನಂತರ ಅಂತಿಮವಾಗಿ “ತುಳು-ತಿಗಳಾರಿ’ ಹೆಸರಿನಲ್ಲಿ ಲಿಪಿಯನ್ನು ಯುನಿಕೋಡ್‌ಗೆ ಸೇರಿಸಲಾಗಿದೆ.
“2001ರಲ್ಲಿ ಯುನಿಕೋಡ್ ಕನ್ಸೋರ್ಶಿಯಂಗೆ ಹೋಗಿದ್ದಾಗ ಯುನಿಕೋಡ್‌ನಲ್ಲಿ ಕನ್ನಡವನ್ನು ಸರಿಪಡಿಸಲು ಅವರಿಗೆ ಸಹಾಯ ಮಾಡಿದ್ದೆ. ತುಳುವನ್ನು ಕೂಡ ಸೇರಿಸಬೇಕೆಂದು ಆಗ ನಾನು ಮನವಿ ಮಾಡಿದ್ದೆ. ಅದರಂತೆ ತುಳುವಿಗೆ ಒಂದು ಜಾಗ ಕಾಯ್ದಿಟ್ಟಿದ್ದರು. ತುಳು ಯೂನಿಕೋಡ್ ಲಿಪಿ ಹೇಗಿರಬೇಕು ಎಂಬ ಕಡತ ಕಳುಹಿಸಿ ಎಂದು ಆಗ ಕೇಳಿಕೊಂಡಿದ್ದರು’ ಎನ್ನುತ್ತಾರೆ ಮಾಹಿತಿ ತಂತ್ರಜ್ಞಾನ ತಜ್ಞ ಯು.ಬಿ. ಪವನಜ.
“ತುಳು ಅಕಾಡೆಮಿ ಕಳುಹಿಸಿದ ಅಕ್ಷರಗಳ ಪಟ್ಟಿಗೂ ಈಗ ತುಳು-ತಿಗಲಾರಿ ಹೆಸರಿನಲ್ಲಿ ಯುನಿಕೋಡ್‌ನವರು ಅಂತಿಮಗೊಳಿಸಿದ ಪಟ್ಟಿಗೂ ಸಣ್ಣಪುಟ್ಟ ವ್ಯತ್ಯಾಸಗಳಿವೆ. ಆದರೆ ಬಹುತೇಕ ಅಕ್ಷರಗಳು ಬಂದಿವೆ. ಒಂದು ಪ್ರಮುಖ ಸ್ವರ ಬಾಕಿಯಾಗಿದೆ, ತುಳು ಅಂಕೆಗಳನ್ನು ಬಿಟ್ಟಿದ್ದಾರೆ. ತುಳುವಿಗೆ ಅಗತ್ಯವಿಲ್ಲದ, ಆದರೆ ತುಳು ಲಿಪಿಯಲ್ಲಿ ಸಂಸ್ಕೃತವನ್ನು ಬರೆಯಲು ಬೇಕಾದ ಕೆಲವು ಸಂಜ್ಞೆಗಳನ್ನು ಸೇರಿಸಿರುವುದು ವಿಶೇಷ. ಹೀಗಾಗಿಯೇ ದಂಡ, ಅನುದಾತ, ಉದಾತ ಇತ್ಯಾದಿ ಅಕ್ಷರಗಳು ತುಳುವಿಗೆ ಬೇಡವಾದರೂ ತುಳು ಲಿಪಿಯಲ್ಲಿ ಸಂಸ್ಕೃತ ಶ್ಲೋಕ ಬರೆಯುವಾಗ ಬೇಕಾಗುತ್ತದೆ ಎಂಬ ಕಾರಣದಿಂದ ಸೇರ್ಪಡೆಯಾಗಿದೆ’ ಎನ್ನುತ್ತಾರೆ ಯು.ಬಿ. ಪವನಜ.
ಈಡೇರಿದ ಬಹು ವರ್ಷಗಳ ಕನಸು
ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಹಾಗೂ ಸಮಸ್ತ ತುಳುವರ ಬಹು ವರ್ಷದ ಕನಸು ಈಡೇರಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿಪ್ರಾಯಪಟ್ಟಿದ್ದಾರೆ.
ಹಲವು ತಜ್ಞರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದ ಸಂದರ್ಭದಲ್ಲಿ 2017ರಲ್ಲಿ ಅಂದಿನ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಅವರು ವಿಷಯ ಸಮನ್ವಯಕ್ಕಾಗಿ ತಜ್ಞರ ಸಮಿತಿ ರಚಿಸಿದ್ದರು, ಅಕಾಡೆಮಿ ವತಿಯಿಂದ ಸಹಕಾರ ನೀಡಲಾಗಿತ್ತು. ಅನಂತರದ ದಿನಗಳಲ್ಲಿ ತಜ್ಞರು ನಿರಂತರವಾಗಿ ಈ ವಿಷಯದ ಬಗ್ಗೆ ಸತತ ಮನವಿಯನ್ನು, ಪರಿಷ್ಕರಣೆಗಳನ್ನು ಕಳುಹಿಸಿ ತುಳು ಲಿಪಿಯನ್ನು ಯುನಿಕೋಡ್ ಅಂಗೀಕರಿಸುವಂತೆ ಮಾಡಿದ್ದಾರೆ.
ತುಳು ಲಿಪಿಯನ್ನು ಯುನಿಕೋಡ್ ಅಂಗೀಕರಿಸುವ ನಿಟ್ಟಿನಲ್ಲಿ ತಜ್ಞರಾದ ಕೆ.ಪಿ. ರಾವ್, ಯು.ಬಿ.ಪವನಜ, ವೈಷ್ಣವಿ ಮೂರ್ತಿ, ಎಸ್.ಎ. ಕೃಷ್ಣಯ್ಯ, ರಾಧಕೃಷ್ಣ ಬೆಳ್ಳೂರು, ಭಾಸ್ಕರ್ ಶೇರಿಗಾರ್, ಎಸ್.ಆರ್. ವಿಘ್ನರಾಜ್, ಆಕಾಶ್ ರಾಜ್ ಸಹಿತ ಅನೇಕರು ಕೊಡುಗೆ ನೀಡಿದ್ದಾರೆ. ಈ ಮೂಲಕ ಜಾಗತಿಕವಾಗಿ ತುಳು ಲಿಪಿಯಲ್ಲಿ ಪಠ್ಯಗಳು ಓದಲು ತೆರೆದುಕೊಳ್ಳುವ ಅವಕಾಶ ಲಭಿಸಿದೆ ಎಂದವರು ತಿಳಿಸಿದ್ದಾರೆ.
ಯುನಿಕೋಡ್‌ನಲ್ಲಿ ಬಂದ ತುಳು ಅಕ್ಷರಗಳನ್ನು ಒಳಗೊಂಡ, ಯುನಿಕೋಡ್ ಸಂಕೇತೀಕರಣಗೊಳಿಸಿದ ಓಪನ್‌ಟೈಪ್ ಫಾಂಟ್ ತಯಾರಿ, ತುಳು ಯುನಿಕೋಡ್ ಪ್ರಕಾರ ಮಾಹಿತಿ ಊಡಿಸಲು ಒಂದು ಕೀಬೋರ್ಡ್ ತಂತ್ರಾಂಶ ಹಾಗೂ ಈಗಾಗಲೇ ಕನ್ನಡ ಲಿಪಿಯಲ್ಲಿ ದಾಖಲಿಸಿದ ಮಾಹಿತಿಗಳನ್ನು ಈ ಹೊಸ ಸಂಕೇತಕ್ಕೆ ಪರಿವರ್ತಿಸಲು ಒಂದು ಪರಿವರ್ತಕ ತಂತ್ರಾಂಶ ಅಗತ್ಯವಾಗಿ ಇನ್ನು ಮುಂದೆ ಬೇಕಾಗಿದೆ. ತುಳು ಸಾಹಿತ್ಯ ಅಕಾಡೆಮಿ ಅಥವಾ ಮಂಗಳೂರು ವಿ.ವಿ.ಯ ತುಳು ಅಧ್ಯಯನ ಪೀಠ ಇದನ್ನು ಆದ್ಯತೆಯ ನೆಲೆಯಲ್ಲಿ ಪರಿಗಣಿಸಬೇಕಾಗಿದೆ.
– ಯು.ಬಿ. ಪವನಜ,
ಮಾಹಿತಿ ತಂತ್ರಜ್ಞಾನ ತಜ್ಞ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.