ಮನ-ಮನೆಗಳಲ್ಲಿ ಜಾಗೃತಿ ಮೂಡಿಸಿದ ಉದಯವಾಣಿಯ ಜಲ ಸಾಕ್ಷರತೆ
ಮೂರು ತಿಂಗಳು ಪೂರ್ಣಗೊಳಿಸಿದ 'ಮನೆ ಮನೆಗೆ ಮಳೆಕೊಯ್ಲು' ಅಭಿಯಾನ
Team Udayavani, Sep 8, 2019, 5:26 AM IST
ಮಹಾನಗರ: ದ.ಕ. ಜಿಲ್ಲೆಯ ಜನರಲ್ಲಿ ಜಲ ಸಂರಕ್ಷಣೆ, ಮಳೆ ನೀರಿನ ಸದ್ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಉದಯವಾಣಿಯು ಪ್ರಾರಂಭಿಸಿದ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ರವಿವಾರಕ್ಕೆ ಯಶಸ್ವಿ ಮೂರು ತಿಂಗಳನ್ನು ಪೂರ್ಣಗೊಳಿಸಿದೆ.
ಸಾಮಾನ್ಯವಾಗಿ ಯಾವುದೇ ಒಂದು ಅಭಿಯಾನವು ಹೆಚ್ಚು ಅಂದರೆ ಸುಮಾರು ಒಂದು ತಿಂಗಳ ಕಾಲ ನಡೆಸಿ ಅದನ್ನು ಒಂದು ಹಂತದ ಯಶಸ್ವಿನೊಂದಿಗೆ ಕೊನೆಗೊಳಿಸಲಾಗುತ್ತದೆ. ಆದರೆ ಉದಯವಾಣಿಯು ಜೂನ್ 8ರಂದು ಪ್ರಾರಂಭಿಸಿದ್ದ ಈ ಅಭಿಯಾನವು ಸುಮಾರು 90 ದಿನಗಳಿಂದ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ಅಭಿಯಾನವು ಇಷ್ಟೊಂದು ಸುದೀರ್ಘ ದಿನಗಳವರೆಗೆ ಮುಂದುವರಿಯುವುದಕ್ಕೆ ಓದುಗರ ಅಭೂತಪೂರ್ವ ಸ್ಪಂದನೆಯೆ ಮುಖ್ಯ ಕಾರಣ ಎನ್ನಬಹುದು. ‘ಮನೆ ಮನೆಗಳಲ್ಲಿ ಮಳೆಕೊಯ್ಲು’ ಅಭಿಯಾನದಿಂದ ಈಗ ಜಿಲ್ಲೆಯ ಹಲವಾರು ಮನೆ, ಸಾರ್ವಜನಿಕ ಸ್ಥಳ, ಶಾಲೆ, ಖಾಸಗಿ ಕಟ್ಟಡ, ಚರ್ಚ್‌ಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಕೆಯಾಗಿರುವುದು ಗಮನಾರ್ಹ.
ಅಭಿಯಾನ ಆರಂಭದಿಂದಲೂ ಆಸಕ್ತಿಯಿಂದ ಮಳೆಕೊಯ್ಲು ಮಾರ್ಗದರ್ಶನದಲ್ಲಿ ತೊಡಗಿಸಿಕೊಂಡ ನಿರ್ಮಿತಿ ಕೇಂದ್ರಕ್ಕೆ ಪ್ರಸ್ತುತ 400ಕ್ಕೂ ಹೆಚ್ಚು ಮಂದಿ ಕರೆ ಮಾಡಿ ತಮ್ಮ ಮನೆಯಲ್ಲಿ ಮಳೆಕೊಯ್ಲು ಅಳವಡಿಸಲು ಮಾರ್ಗದರ್ಶನ ನೀಡುವಂತೆ ಕೇಳಿ ಕೊಂಡಿರುವುದು, ಯಶಸ್ವಿಯಾಗಿ ಅಳವಡಿಕೆ ಮಾಡಿ ಕೊಂಡಿರುವುದು ಶ್ಲಾಘನೀಯ.
ಹಲವಾರು ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ತಮ್ಮ ಸದಸ್ಯರಿಗೆ, ವಿದ್ಯಾರ್ಥಿಗಳಿಗೆ ಮಳೆಕೊಯ್ಲು ಮಾಹಿತಿ ಕಾರ್ಯಕ್ರಮ ಏರ್ಪಡಿಸಿ ಇನ್ನಷ್ಟು ಮನೆಗಳಲ್ಲಿ ಮಳೆ ಕೊಯ್ಲು ಅಳವಡಿಸುವಂತೆ ಮಾಡಿರುವುದು ಯಶಸ್ಸಿನ ಹೆಜ್ಜೆಗೆ ಮತ್ತೂಂದು ಸೇರ್ಪಡೆ. ಶಿಕ್ಷಣ ಸಂಸ್ಥೆಗಳು, ಸಂಘ-ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಸ್ವತಃ ಮಳೆಕೊಯ್ಲು ಅಳವಡಿಸಿ ಮಾದರಿಯಾಗಿರುವುದು ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಿದೆ.
ಕಸ ಎಸೆಯುತ್ತಿದ್ದ ಜಾಗದಲ್ಲಿ ಜಲಧಾರೆ
ಕಸ ಎಸೆಯುತ್ತಿದ್ದ ಜಾಗವನ್ನೇ ಶುಚಿಗೊಳಿಸಿ ನೀರು ನಿಲ್ಲಿಸಿದ ಯಶೋಗಾಥೆ ಇದು. ಕಟೀಲು ಕೊಂಡೇಲ ಪಾದೆ ಮನೆಯ ತಾರನಾಥ ಶೆಟ್ಟಿ ಮತ್ತು ಊರಿನವರ ಈ ಪ್ರಯತ್ನದಿಂದಾಗಿ ಪ್ರಸ್ತುತ ಕೆರೆಯಲ್ಲಿ ನೀರು ನಳನಳಿಸುವಂತಾಗಿದೆ.
ಈ ಸ್ಥಳದ ತಗ್ಗು ಪ್ರದೇಶವೊಂದರ ಜಾಗವನ್ನು ಕಸ ಎಸೆಯಲು ಬಳಕೆ ಮಾಡಲಾಗುತ್ತಿತ್ತು. ‘ಉದಯವಾಣಿ’ ಮನೆಮನೆಗೆ ಮಳೆಕೊಯ್ಲು ಅಭಿಯಾನವನ್ನು ನೋಡಿ ಪ್ರೇರಣೆಗೊಂಡ ತಾರನಾಥ ಶೆಟ್ಟಿ ಅವರು, ಕಸ ಎಸೆಯುವ ಅದೇ ಸ್ಥಳದಲ್ಲಿ ನೀರಿಂಗಿಸಿದರೆ ಹೇಗೆಂಬ ಯೋಚನೆ ತಳೆದು ಊರಿನವರೊಂದಿಗೆ ಹಂಚಿಕೊಂಡರು.
ಅದರಂತೆ ಕಾರ್ಯಪ್ರವೃತ್ತರಾದ ಅವರು, ಕಸ ಎಸೆಯುತ್ತಿದ್ದ ಜಾಗವನ್ನು ಶುಚಿಗೊಳಿಸಿ 4 ಅಡಿ ಆಳ, 15 ಅಡಿ ಅಗಲ ಮಾಡಿ ಮಳೆ ನೀರನ್ನು ಆ ಗುಂಡಿಯಲ್ಲಿ ಇಂಗಿಸಲು ಬಿಟ್ಟರು.
ಇದೀಗ ಮಳೆ ನೀರು ಇಂಗುವುದರೊಂದಿಗೆ, ಹೊಂಡದಲ್ಲಿ ನೀರು ನಳನಳಿಸುತ್ತಿದೆ.
ಸುತ್ತಮುತ್ತಲು ಸುಮಾರು 90ರಷ್ಟು ಮನೆಗಳಿದ್ದು, ಯಾರು ಬೇಕಾದರೂ, ಈ ನೀರನ್ನು ಬಳಕೆ ಮಾಡಲು ಅವಕಾಶವಿದೆ ಎನ್ನುತ್ತಾರೆ ತಾರನಾಥ ಶೆಟ್ಟಿ.
ಮುಂದಿನ ದಿನಗಳಲ್ಲಿ ಇನ್ನಷ್ಟು ಆಳ ಮಾಡಿ ನೀರಿಂಗಿಸುವ ಯೋಚನೆ ಇದೆ. ಬೇಸಗೆಯಲ್ಲಿ ನೀರು ಹೇಗಿರಲಿದೆ ಎಂಬುದನ್ನು ಗಮನಿಸಿಕೊಂಡು ಮುಂದುವರಿಯಲಾಗುವುದು ಎಂದವರು ತಿಳಿಸಿದ್ದಾರೆ.
ಒಂದು ವ್ಯವಸ್ಥಿತ ಕಾರ್ಯಕ್ರಮ
“ಮನೆಮನೆಗೆ ಮಳೆಕೊಯ್ಲು’ ಅಭಿಯಾನವು ಜನರನ್ನು ಬಡಿದೆಬ್ಬಿಸಿದ ಅಭಿಯಾನ. ಎಪ್ರಿಲ್-ಮೇ ತಿಂಗಳಲ್ಲಿ ಆಗುವ ನೀರಿನ ಬರವನ್ನು ನೀಗಿಸುವ ಒಂದು ವ್ಯವಸ್ಥಿತ ಕಾರ್ಯಕ್ರಮ. ಪೋಲಾಗಿ ಹೋಗುವ ನೀರನ್ನು ಹಿಡಿದಿಟ್ಟು ನೀರನ್ನು ಇಂಗಿಸುವುದು, ಇದು ನೀರಿನ ಒರತೆಗೂ ಉತ್ತಮ ಚಿಂತನೆ.
- ಯೋಗೀಶ್ ಕಾಂಚನ್,ಬೈಕಂಪಾಡಿ
ಉತ್ತಮ ಅಭಿಯಾನ
ಮಳೆಕೊಯ್ಲು ಅಭಿಯಾನ ಉತ್ತಮವಾಗಿ ಮೂಡಿ ಬರುತ್ತಿದೆ. ಅಭಿಯಾನ ನೋಡಿದ ಮೇಲೆ ಪ್ರತಿಯೊಬ್ಬರೂ ಇದನ್ನು ಅಳವಡಿಸುತ್ತಿರುವುದು ಶ್ಲಾಘನೀಯ. ಮನೆಯಲ್ಲಿಯೂ ಅಳವಡಿಸಲು ಯೋಜಿಸಿದ್ದೇವೆ.
– ಪ್ರಮೀಳಾ ಮಸ್ಕರೇನ್ಹಸ್, ಕೊಟ್ಟಾರ ಚೌಕಿ
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.9900567000
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.