ಉದಯವಾಣಿ ಪುತ್ತೂರು-ಸುಳ್ಯ: ಏಜೆಂಟರು, ವಿತರಕರ ಸೌಹಾರ್ದ ಕೂಟ
Team Udayavani, Apr 26, 2017, 11:17 AM IST
ಪುತ್ತೂರು: ಉದಯವಾಣಿ ದಿನ ಪತ್ರಿಕೆಯ ಸುಳ್ಯ ಹಾಗೂ ಪುತ್ತೂರು ತಾಲೂಕುಗಳ ಎಲ್ಲ ಏಜೆಂಟರು ಹಾಗೂ ವಿತರಕರ ಸೌಹಾರ್ದ ಕೂಟವು ಪುತ್ತೂರಿನ ಖಾಸಗಿ ಹೊಟೇಲಿನಲ್ಲಿ ಮಂಗಳ ವಾರ ನಡೆಯಿತು.
ಮಣಿಪಾಲ ಮೀಡಿಯ ನೆಟ್‌ವರ್ಕ್ ಲಿಮಿಟೆಡ್ ವತಿಯಿಂದ ಏರ್ಪಡಿಸಲಾಗಿದ್ದ ಈ ಸೌಹಾರ್ದ ಕೂಟದಲ್ಲಿ ಎರಡೂ ತಾಲೂಕುಗಳಲ್ಲಿ ಉದಯವಾಣಿ ಪತ್ರಿಕೆಯ ಯಶಸ್ವಿ ವಿತರಣೆ ಮತ್ತು ಮಾರಾಟದಲ್ಲಿ ದಶಕಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸುಮಾರು 200ಕ್ಕೂ ಹೆಚ್ಚು ಸಂಖ್ಯೆಯ ಏಜೆಂಟರು ಹಾಗೂ ವಿತರಕರು ಭಾಗವಹಿಸಿದ್ದರು.
ಜ್ಞಾನ, ಸಂಸ್ಕೃತಿ ಪ್ರಸರಣ
ಸೌಹಾರ್ದ ಕೂಟ ಉದ್ದೇಶಿಸಿ ನ್ಯಾಶನಲ್ ಹೆಡ್ (ಮ್ಯಾಗಜಿನ್ಸ್ ಆ್ಯಂಡ್ ಸ್ಪೆಶಲ್ ಇನೀಶಿಯೇಟಿವ್ಸ್) ರಾಮಚಂದ್ರ ಮಿಜಾರು ಮಾತನಾಡಿ, ನಮ್ಮ ದೈನಂದಿನ ಜೀವನದಲ್ಲಿ ಶಬ್ದಗಳೇ ಅರ್ಥ ಕಳೆದುಕೊಳ್ಳುತ್ತಿರಬೇಕಾದರೆ ಉದಯವಾಣಿ ಪತ್ರಿಕೆಯೊಂದಿಗೆ ಏಜೆಂಟರು ಮತ್ತು ವಿತರಕರು ಹೊಂದಿರುವ ಸಂಬಂಧವೇ “ಬಾಂಧವ್ಯ’. ಪುತ್ತೂರು ಹಾಗೂ ಸುಳ್ಯ ತಾಲೂಕಿನ ಹಳ್ಳಿ-ಹಳ್ಳಿಗಳಲ್ಲಿ ಈ ಪತ್ರಿಕೆ ಬಲಿಷ್ಠವಾಗಿ ಯಶಸ್ವಿಯಾಗಿ ಕಾಲೂರುವಲ್ಲಿ ಏಜೆಂಟರು ಹಾಗೂ ವಿತರಕರ ಪರಿಶ್ರಮ ಬಹಳವಿದೆ. ಕಳೆದ 48 ವರ್ಷಗಳಿಂದ ವಿತರಕರು ಅಥವಾ ಏಜೆಂಟರು ಕೇವಲ ಪತ್ರಿಕೆಯನ್ನು ವಿತರಣೆ ಮಾಡುತ್ತಿಲ್ಲ; ಜತೆಗೆ ಓದುಗರಲ್ಲಿ ಜ್ಞಾನ, ಸಂಸ್ಕೃತಿ,ಸಂಸ್ಕಾರವನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಎಜಿಎಂ (ವ್ಯಾಪಾರ ಅಭಿವೃದ್ಧಿ) ಸತೀಶ್ ಶೆಣೈ ಅವರು ಮಾತನಾಡಿ, ಉದಯವಾಣಿ ಪತ್ರಿಕೆಯನ್ನು ಮತ್ತಷ್ಟು ತಾಜಾ ಸುದ್ದಿಯೊಂದಿಗೆ ಇನ್ನಷ್ಟು ವೇಗವಾಗಿ ಓದುಗರ ಮನೆ ಬಾಗಿಲಿಗೆ ತಲುಪಿಸಲು ಶೀಘ್ರದಲ್ಲೇ ಮಂಗಳೂರಿನಲ್ಲಿ ಹೊಸ ಪ್ರಿಂಟಿಂಗ್ ಪ್ರಸ್ ಪ್ರಾರಂಭಿಸಲಾಗುವುದು. ಉದಯವಾಣಿ ತನ್ನ 48 ವರ್ಷಗಳ ಸುದೀರ್ಘ ಪಯಣದೊಂದಿಗೆ ಇಂದಿಗೂ ಓದುಗರಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡಿದೆ. ಏಜೆಂಟರ ಕೆಲವು ಸಮಸ್ಯೆಗಳು ಹಾಗೂಬೇಡಿಕೆಗಳಿಗೆ ಸಂಸ್ಥೆಯು ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ತಿಳಿಸಿದರು.
ಮಾರುಕಟ್ಟೆ ವಿಭಾಗದ ಸಹಉಪಾಧ್ಯಕ್ಷ ಆನಂದ್ ಕೆ. ಸ್ವಾಗತಿಸಿದರು. ಸಂಪಾದಕ ಬಾಲಕೃಷ್ಣ ಹೊಳ್ಳ ವೇದಿಕೆಯಲ್ಲಿದ್ದರು. ಮಣಿಪಾಲ ಪ್ರಸರಣ ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಪುರಾಣಿಕ್ ವಂದಿಸಿದರು. ಮಂಗಳೂರು ಪ್ರಸರಣ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಯೋಗೀಶ್ ಕಾರ್ಯ ಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.