ಮಗ ದೀಪಾವಳಿಗೆ ಬಂದೇ ಐದು ವರ್ಷ ಆಯಿತು
Team Udayavani, Nov 9, 2018, 9:25 AM IST
ಅಮಾಡಿ (ಬಂಟ್ವಾಳ ತಾ): ಪ್ರತಿ ಬಾರಿ ಬರಲು ಪ್ರಯತ್ನಿಸುತ್ತೇನೆ ಎನ್ನುತ್ತಾನೆ. ಆದರೆ ಕೊನೆಗಳಿಗೆಯಲ್ಲಿ ರಜೆ ಸಿಗದೇ ರದ್ದಾಗುತ್ತದೆ ಎಂದೇ ಮಾತು ಆರಂಭಿಸುತ್ತಾರೆ ಯೋಧ ಸುಧಾಕರ ಅವರ ಮನೆಯವರು.
ಬಂಟ್ವಾಳ ತಾಲೂಕು ಅಮಾಡಿ ಗ್ರಾಮದ ಕಿನ್ನಿಬೆಟ್ಟುವಿನ ಸಂಜೀವ ಶೆಟ್ಟಿ-ಪದ್ಮಾವತಿ ಶೆಟ್ಟಿ ದಂಪತಿಯ ಕಿರಿಯ ಪುತ್ರ ಸುಧಾಕರ್ ಶಟ್ಟಿ. ಈಗ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಕಮಾಂಡೋ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸದಾ ಕೆಲಸ. ಯಾವುದೇ ಕ್ಷಣಕ್ಕೂ ಸಿದ್ಧರಾಗಿರಬೇಕಾದ ಸ್ಥಿತಿ. ಸಂಜೀವ ಶೆಟ್ಟಿಯವರು ಸುಧಾಕರ ಚಿಕ್ಕವರಿದ್ದಾಗಲೇ ತೀರಿ ಹೋಗಿದ್ದರು.
ಕಿನ್ನಿಬೆಟ್ಟುವಿನ ಮನೆಯಲ್ಲಿ ತಾಯಿ ಪದ್ಮಾವತಿ ಶೆಟ್ಟಿ, ಅಕ್ಕ ಬಬಿತಾ, ಭಾವ ಜಯಾನಂದ ಶೆಟ್ಟಿ, ಅಕ್ಕನ ಮಕ್ಕಳಾದ ನವೀನ್ ಹಾಗೂ ನಿವೇದಿತಾ ಇದ್ದಾರೆ. ಪ್ರತಿ ದೀಪಾವಳಿಗೆ ಸಿದ್ಧತೆ ನಡೆಸುವುದು ಮಗನ ನಿರೀಕ್ಷೆಯಲ್ಲೇ. ಈ ಬಾರಿ ಯಾದರೂ ಹಬ್ಬಕ್ಕೆ ಬರಬಹುದು ಎಂಬ ನಿರೀಕ್ಷೆ ತಪ್ಪುವುದಿಲ್ಲ.
ಅವನು ಮನೆಯಲ್ಲಿದ್ದರೇ ಒಂದು ಸೊಗಸು ಎಂದು ಹೇಳುವ ಅಕ್ಕ ಕಣ್ಣಂಚಿನಲ್ಲಿ ಬಂದ ಹನಿಯನ್ನು ಹಾಗೆಯೇ ಅದುಮಿಡಲು ಪ್ರಯತ್ನಿಸುತ್ತಾ, “ತಮ್ಮನಿಲ್ಲದೇ ಹಬ್ಬ ಆಚರಿಸಲು ಮನಸ್ಸೇ ಬರುವುದಿಲ್ಲ. ಪ್ರತಿ ಹಬ್ಬ ಬಂದಾಗಲೂ ನಮಗಿರುವ ಕೊರಗು ಒಂದೇ. ಅವನಿರಬೇಕಿತ್ತು..ಅವನಿದ್ದರೆ ಚೆನ್ನಾಗಿರುತ್ತಿತ್ತು. ಅವನೊಬ್ಬನಿಲ್ಲವಲ್ಲ. ಅವನು ದೂರದಲ್ಲೆಲ್ಲೋ ಇರುವಾಗ ನಾವಿಲ್ಲಿ ಹೇಗೆ ಸಂಭ್ರಮಿಸುವುದು? ಇತ್ಯಾದಿ ಪ್ರಶ್ನೆಗಳು ಬರುತ್ತಲೇ ಇರುತ್ತವೆ’ ಎಂದರು. ಎರಡು ಹನಿಗಳೂ ಜಿನುಗದೇ ಉಳಿಯಲಿಲ್ಲ. ಆದರೂ ಸಾವರಿಸಿಕೊಂಡು, ಮುಂದಿನ ದೀಪಾವಳಿಗೆ ತಮ್ಮ ಬರಬಹುದು ಎಂದು ನಿರೀಕ್ಷೆಯ ದೀಪ ಹಚ್ಚಿದರು.
“ನಮ್ಮಲ್ಲಿ ವಿಶೇಷವಾಗಿ ಏನೂ ಇರುವುದಿಲ್ಲ. ಊರೆಲ್ಲಾ ಹಬ್ಬ ಆಚರಿಸುವಾಗ ನಮ್ಮ ಮನೆಯಲ್ಲಿ ಇಲ್ಲ ಎಂದಾಗಬಾರದೆಂದು ಸರಳವಾಗಿ ಆಚರಿಸುತ್ತೇವೆ. ದೇವರಿಗೆ ಅವಲಕ್ಕಿ ಇಟ್ಟು, ಮನೆಯ ಮುಂದೆ ಹಣತೆ ಹಚ್ಚುತ್ತೇವೆ. ಮಕ್ಕಳು ಚಿಕ್ಕ ವಯಸ್ಸು. ಸ್ವಲ್ಪ ಪಟಾಕಿ ಹಚ್ಚಿ ಖುಷಿ ಪಡುತ್ತಾರೆ. ಉಳಿದಂತೆ ಹೆಚ್ಚಿನ ತಿಂಡಿ ತಿನಿಸು ಏನನ್ನೂ ಮಾಡುವುದಿಲ್ಲ’ ಎನ್ನುತ್ತಾರೆ ಅಕ್ಕ ಬಬಿತಾ.
“ಅವನು ಮನೆಗೆ ಬಂದರೆ ಖುಷಿಯೋ ಖುಷಿ. ಅಂದೇ ನಿಜವಾದ ಹಬ್ಬ. ಕೋಳಿ, ಮೀನು ಇತ್ಯಾದಿ ವಿಶೇಷ ಖಾದ್ಯಗಳನ್ನು ಮಾಡಿ, ಒಟ್ಟಾಗಿ ಕುಳಿತು ಊಟ ಮಾಡಿ, ಒಂದಿಷ್ಟು ತಮಾಷೆ ಮಾಡಿ ಸಂಭ್ರಮಿಸುತ್ತೇವೆ’ ಎಂದು ಹೇಳಲು ಮರೆಯುವುದಿಲ್ಲ ಭಾವ. ಹಬ್ಬ ಎಂದರೆ ಅದೇ ತಾನೇ. ಎಲ್ಲರೂ ಸೇರಿ ಸಂಭ್ರಮಿಸುವುದು.
ಅಂದಹಾಗೆ ಸುಧಾಕರ್ ಸೇನೆಗೆ ಸೇರಿ ಆರು ವರ್ಷಗಳಾಗಿವೆ. ಐದು ವರ್ಷಗಳಿಂದಲೂ ದೀಪಾವಳಿಗೆ ಬರಲು ಪ್ರಯತ್ನಿಸುತ್ತಿದ್ದಾರೆ, ಆಗುತ್ತಿಲ್ಲ.
“ಮಾವನನ್ನು ನಾವು ಮಿಸ್ ಮಾಡಿಕೊಳ್ಳು ತ್ತಿರುವುದು ನಿಜ. ಯಾವುದೇ ಹಬ್ಬದಲ್ಲೂ ಅವರು ನಮಗೆ ಸಿಗುವುದಿಲ್ಲ’ ಎನ್ನುವ ನವೀನ್ ಮತ್ತು ನಿವೇದಿತಾ, “ಅವರಿದ್ದರೆ ಮಜಾವೇ ಬೇರೆ’ ಎನ್ನುತ್ತಾರೆ.
ನಿಜ, ಕುಟುಂಬವೆಂದರೆ ಹಾಗೆಯೇ. ಒಂದರ ಕೊರತೆಯೂ ಗಾಢವಾಗಿ ಕಾಡುತ್ತದೆ. ನಮ್ಮ ಹಬ್ಬದ ಸಂಭ್ರಮಗಳಲ್ಲಿ ದೇಶವನ್ನು ಕಾಯುತ್ತಿರುವ ಯೋಧರಿಗೂ ಒಂದು ಪಾಲು ನೀಡೋಣ. ಅವರ ಕುಟುಂಬಗಳಲ್ಲೂ ಸಂಭ್ರಮವನ್ನು ತುಂಬೋಣ.
ನೇಮಕ್ಕೆ ಬರುತ್ತಾನೆ, ಅದೇ ಅದೃಷ್ಟ
ಕೊರತೆಗಳು ಬದುಕಿನಲ್ಲಿ ಬರುತ್ತಲೇ ಇರುತ್ತವೆ, ಮುನ್ನಡೆಯುವಾಗ ಸಣ್ಣದೊಂದು ಸಮಾಧಾನ ಮಾಡಿಕೊಳ್ಳುವುದಿದೆಯಲ್ಲ. ಹಾಗೆಯೇ ಸುಧಾಕರ ಅವರ ಮನೆಯವರು, “ಸಾಮಾನ್ಯವಾಗಿ ಆರು ತಿಂಗಳಿಗೊಮ್ಮೆ ಊರಿಗೆ ಬರುತ್ತಾನೆ. ಬಂದರೆ 20 ದಿವಸ ಮನೆಯಲ್ಲೇ. ಉಳಿದಂತೆ ಯಾವುದೇ ಮದುವೆ ಕಾರ್ಯಕ್ರಮವಿದ್ದರೂ ಬರಲು ಆತನಿಗೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಬರುವುದಾಗಿ ಮೊದಲು ಹೇಳಿದರೂ ಕೊನೆ ಗಳಿಗೆಯಲ್ಲಿ ರಜೆ ಸಿಗಲಿಲ್ಲ, ರದ್ದಾಯಿತು ಎನ್ನುತ್ತಾನೆ. ಸ್ವಲ್ಪ ಸಮಯದ ಹಿಂದೆ ತಾಯಿಗೆ ಹುಷಾರಿರಲಿಲ್ಲ. ಆಗ ಬಂದಿದ್ದ. ಊರಿನ ನೇಮ ಪ್ರತಿ ವರ್ಷ ಎಪ್ರಿಲ್ 24ಕ್ಕೆ ಬರುತ್ತದೆ. ಆ ಸಮಯದಲ್ಲಿ ಹೆಚ್ಚಾಗಿ ಬರುತ್ತಾನೆ. ಅದೇ ಸಂತೋಷ’ ಎನುತ್ತಾರೆ ಮನೆಯವರು.
ಎಪ್ರಿಲ್‌ನಲ್ಲಿ ಊರಿನ ನೇಮದ ಸಂದರ್ಭ ಮನೆಗೆ ಬಂದಿದ್ದೆ. ಹಬ್ಬಕ್ಕೆ ರಜೆಯೇ ಸಿಗುವುದಿಲ್ಲ. ಮೊದಲ ಮೂರು ವರ್ಷ ಕಾಶ್ಮೀರದಲ್ಲಿದ್ದೆ. ದೀಪಾವಳಿಗೆ ಬರಲು ಸಾಧ್ಯವೇ ಇರಲಿಲ್ಲ. ಕಳೆದ ವರ್ಷ ರಾಜಸ್ಥಾನದಲ್ಲಿ ಕರ್ತವ್ಯ ನಿರತನಾಗಿದ್ದೆ. ಆಗಲೂ ಸಾಧ್ಯವಾಗಲಿಲ್ಲ. ಈ ಬಾರಿ ಕೆಲವರು ಊರಿಗೆ ಹೋಗಿದ್ದಾರೆ. ರಜೆ ಸಿಗಲಿಲ್ಲ. ನಮ್ಮ ಕೆಲಸದಲ್ಲಿ ಇವೆಲ್ಲಾ ಸಾಮಾನ್ಯ. ಈ ಮಾಸಾಂತ್ಯಕ್ಕೆ ಬರಬೇಕೆಂದಿದ್ದೇನೆ. ಅದಿನ್ನೂ ಖಚಿತವಾಗಿಲ್ಲ.
ಸುಧಾಕರ್ ಶೆಟ್ಟಿ , ಯೋಧ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla: ರಿಕ್ಷಾ- ಬೈಕ್ ಢಿಕ್ಕಿ; ಮೂವರಿಗೆ ಗಾಯ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
Bantwal: ಕೆಎಸ್‌ಆರ್‌ಟಿಸಿ ಬಸ್-ಬೈಕ್ ಢಿಕ್ಕಿ; ದಂಪತಿಗೆ ಗಾಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.