ಉಜಿರೆ ಗಾಂಧಿನಗರ: ಕಸ ಎಸೆದು ಸೌಂದರ್ಯಕ್ಕೆ ಧಕ್ಕೆ
Team Udayavani, Apr 4, 2022, 9:36 AM IST
ಬೆಳ್ತಂಗಡಿ: ಉಜಿರೆ ಗ್ರಾ.ಪಂ. ತನ್ನ ನಗರದ ಎಲ್ಲ ಪ್ರದೇಶಗಳಿಗೆ ಸ್ವತ್ಛತ ವಾಹನ ಕಳುಹಿಸಿ ತ್ಯಾಜ್ಯಗಳನ್ನು ಸಂಗ್ರಹಿಸಿ, ವಿಂಗಡಿಸಿ ಆದಾಯ ಸಂಪನ್ಮೂಲವಾಗಿ ಪರಿವರ್ತಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಆದರೆ ಇನ್ನೂ ನಗರದ ಕೆಲವು ಭಾಗಗಳಲ್ಲಿ ಸ್ಥಳೀಯರು ತಮ್ಮ ಮನೆಗಳ ಕಸ-ತ್ಯಾಜ್ಯಗಳನ್ನು ರಸ್ತೆ ಬದಿಗಳಲ್ಲಿ,ಚರಂಡಿ-ಮೋರಿಗಳಲ್ಲಿ ಎಸೆಯುವ ಮೂಲಕ ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದಾರೆ.
ಉಜಿರೆ ಗ್ರಾಮದ ಗಾಂಧಿನಗರ ಪ್ರದೇಶದ ಮೋರಿಯ ಇಕ್ಕೆಡೆಗಳಲ್ಲಿ ತ್ಯಾಜ್ಯಗಳ ರಾಶಿಯೇ ಕಂಡುಬರುತ್ತಿದೆ. ಬಟ್ಟೆ ಬರೆಗಳ ಮೂಟೆಗಳು, ಹೊಟೇಲಿನ ತ್ಯಾಜ್ಯಗಳು, ಪದಾರ್ಥಗಳನ್ನು ತಂದು ಸುರಿಯುತ್ತಿರುವುದರಿಂದ ಪರಿಸರ ದುರ್ನಾತದಿಂದ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಗರಿಕರು ಹಾಗೂ ಹೊರಗಿನವರು ಇಲ್ಲಿ ತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದ ದಿನದಿನಕ್ಕೆ ಕಸದ ರಾಶಿ ಬೆಳೆಯುತ್ತಿದೆ.
ಕಸ ಎಸೆಯುವವರ ಮೇಲೆ ಗ್ರಾ.ಪಂ. ದಂಡ ವಿಧಿಸಿ ಎಚ್ಚರಿಕೆಯ ಜಾಗೃತಿ ಮೂಡಿಸಿದರೆ ಎಲ್ಲೆಂದರಲ್ಲಿ ಕಸ ಎಸೆಯುವುದು ನಿಲ್ಲಬಹುದು. ಸ್ವತ್ಛ ಉಜಿರೆ ಗ್ರಾ.ಪಂ. ಕಾರ್ಯದೊಂದಿಗೆ ನಾಗರಿಕರೂ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗಿದೆ.
ಕಸ-ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವವರ ವಿರುದ್ಧ ಈಗಾಗಲೇ ಉಜಿರೆ ಗ್ರಾ.ಪಂ. ಪತ್ತೆ ಹಚ್ಚಿ ಅವರಿಂದಲೇ ಕಸ ತೆಗೆಸಿ ಸ್ವತ್ಛಗೊಳಿಸಿದ ಮತ್ತು ಅಂಥವರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಿದ ನಿದರ್ಶನಗಳಿದ್ದರೂ ಸಾರ್ವಜನಿಕರು ಇನ್ನೂ ತ್ಯಾಜ್ಯಗಳನ್ನು ರಸ್ತೆ ಬದಿ ಹಾಗೂ ಮೋರಿ-ತೋಡುಗಳಿಗೆಸೆದು ತಮ್ಮ ಅನಾಗರಿಕತೆಯನ್ನು ಬಿಂಬಿಸುತ್ತಿದ್ದಾರೆ.
ಅದನ್ನು ಪತ್ತೆಹಚ್ಚಿ ಗ್ರಾ.ಪಂ. ಅವರ ಮೇಲೆ ಹೆಚ್ಚಿನ ದಂಡ ವಿಧಿಸಿ ಎಚ್ಚರಿಕೆ ನೀಡಬೇಕಾಗಿದೆ ಎಂದು ಸಾರ್ವಜನಿಕರು, ವರ್ತಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.