ಉಳ್ಳಾಲ: ನಗರಸಭೆ ವ್ಯಾಪ್ತಿಗೆ ಟ್ಯಾಂಕರ್ ನೀರೇ ಗತಿ
ಬರಿದಾಗಿದೆ ನೀರಿನ ಮೂಲ ;ಹಲವೆಡೆ ಕೆಂಪು,ಉಪ್ಪು ನೀರಿನ ಸಮಸ್ಯೆ
Team Udayavani, Apr 28, 2019, 6:00 AM IST
ಉಳ್ಳಾಲ ನಗರ ಸಭೆ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಬೇಸಗೆಯಲ್ಲಿ ಉಂಟಾಗುವ ನೀರಿನ ಕೊರತೆಗೆ ಶಾಶ್ವತ ಪರಿ ಹಾರ ಒದಗಿಸಬೇಕಿದೆ.ಇದಕ್ಕೆ ಪೂರಕವಾಗಿ “ಉದಯವಾಣಿ-ಸುದಿನ’ಮಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಅನುಭವಿಸುತ್ತಿರುವ ನೀರಿನ ಬವಣೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಈ ಪ್ರಯತ್ನ.
ಉಳ್ಳಾಲ: ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ನೀರಿಗೆ ಹಾಹಾಕಾರ ಹೆಚ್ಚಿದೆ. ಬಿಸಿಲ ತಾಪ ಏರುತ್ತಿದ್ದಂತೆ ಈ ವ್ಯಾಪ್ತಿಯಲ್ಲಿ ಸಮುದ್ರ ತಟ ಮತ್ತು ನದಿ ತಟದ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಉಪ್ಪು ನೀರಿನ ಸಮಸ್ಯೆ ಇದ್ದರೂ ನೀರಿನ ಸಮಸ್ಯೆ ಕಡಿಮೆಯಿದ್ದರೆ ಕೆಲವೆಡೆ ಅಂತರ್ಜಲದಲ್ಲಿ ಕೆಂಪು ನೀರಿನ ಸಮಸ್ಯೆ ಉದ್ಭವಿಸಿದೆ. ನಗರಸಭೆಯ ಹೆಚ್ಚಿನ ನೀರಿನ ಮೂಲಗಳು ಬರಿದಾಗಿದ್ದು, ಟ್ಯಾಂಕರ್ ನೀರನ್ನೇ ಆಶ್ರಯಿಸುವ ಸ್ಥಿತಿ ಎದುರಾಗಿದೆ.
ನಗರಸಭೆಯ 12 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, 13 ವಾರ್ಡ್‌ಗಳಲ್ಲಿ ಸಮಸ್ಯೆ ಪ್ರಮಾಣ ಕಡಿಮೆಯಿದೆ. 6 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇಲ್ಲದಿದ್ದರೂ ನಿಯಮಿತವಾಗಿ ಬರುವ ನೀರಿನಲ್ಲಿ ವ್ಯತ್ಯಯ ಕಂಡು ಬಂದಿದೆ ಪಂಡಿತ್‌ಹೌಸ್, ಶಿವಾಜಿನಗರ, ಸೇವಂತಿಗುಡ್ಡೆ, ಕಲ್ಲಾಪು ಹಿದಾಯತ್‌ನಗರ, ಕಾಪಿಕಾಡು ಗಾಂಧಿನಗರ, ಚೆಂಬುಗುಡ್ಡೆ, ಮಾರ್ಗತಲೆ, ಮಂಚಿಲ, ಕಕ್ಕೆತೋಟ, ಉಳ್ಳಾಲಬೈಲ್ ಬೈದರಪಾಲು, ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಒಂಭತ್ತುಕೆರೆಯಲ್ಲಿ ಎಪ್ರಿಲ್ ತಿಂಗಳ ಅಂತ್ಯದಿಂದ ಸಮಸ್ಯೆ ಆರಂಭವಾಗಿದೆ.
ಪ್ರಥಮ ಬಾರಿಗೆ ದೊಡ್ಡ ಮಟ್ಟದಲ್ಲಿ ಸಮಸ್ಯೆ
ಈ ಹಿಂದೆ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯಾಗಿದ್ದರೂ ಈ ಬಾರಿ ಸಮಸ್ಯೆಯ ಪ್ರಮಾಣ ಹೆಚ್ಚಾಗಿದೆ. ಸಮುದ್ರ ತಟದ ಪ್ರದೇಶದಲ್ಲಿ ಉಪ್ಪು ನೀರಿನ ಸಮಸ್ಯೆ ಇದ್ದರೂ ಕುಡಿಯುವ ನೀರನ್ನು ಅಗತ್ಯವಿದ್ದ ಪ್ರದೇಶಗಳಿಗೆ ಮಾತ್ರ ಪೂರೈಸಲಾಗುತ್ತಿದೆ.
ಎರಡು ದಿನಕ್ಕೊಮ್ಮೆ ನೀರು
ನಗರಸಭೆಯ ಹೆಚ್ಚಿನ ಪ್ರದೇಶಗಳಿಗೆ ಎರಡು ದಿನಕ್ಕೊಮ್ಮೆ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ತುಂಬೆ ವೆಂಟೆಡ್ ಡ್ಯಾಂನಿಂದ ದಿನವೊಂದಕ್ಕೆ 3 ಎಂಎಲ್‌ಡಿ ನೀರು ಪೂರೈಕೆಯ ಒಪ್ಪಂದವಾಗಿದ್ದರೂ ಉಳ್ಳಾಲಕ್ಕೆ ಬರುತ್ತಿರುವುದು ಕೇವಲ 1.5 ಎಂಎಲ್‌ಡಿ. ಈ ತಿಂಗಳಿನಿಂದ ನಾಲ್ಕು ದಿನಕ್ಕೊಮ್ಮೆ ನೀರಿನ ಪೂರೈಕೆಯಾಗುತ್ತಿದ್ದು, ಇದರಿಂದ ಪಂಡಿತ್‌ಹೌಸ್, ಶಿವಾಜಿನಗರ ಪ್ರದೇಶಗಳಿಗೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ.
ಉಳ್ಳಾಲ ನಗರಸಭಾ ವ್ಯಾಪ್ತಿಯ 15ನೇ ವಾರ್ಡಿನ ಕಲ್ಲಾಪು, ಅಂಬತ್ತಡಿ, ಹಿದಾಯತ್‌ನಗರಗಳಲ್ಲಿ ಕೊಳವೆ ಬಾವಿಯ ನೀರಿನ ಮಟ್ಟ ತೀರಾ ಕಡಿಮೆಯಾಗಿದ್ದು, ಮಣ್ಣು ಮಿಶ್ರಿತ ನೀರು ಸರಬರಾಜಾಗುತ್ತಿದೆ. ಗಾಂಧಿ ನಗರದಲ್ಲಿರುವ ಕೊಳವೆಬಾವಿಯ ನೀರಿನ ಮಟ್ಟ ಕಡಿಮೆಯಾಗಿ ಎತ್ತರ ಪ್ರದೇಶದಲ್ಲಿರುವ 6ನೇ ಅಡ್ಡ ರಸ್ತೆಯಲ್ಲಿರುವ ಮನೆಗಳಿಗೆ ಸರಿಯಾಗಿ ನೀರು ಸರಬರಾಜು ಆಗುವುದಿಲ್ಲ. ಒಂಭತ್ತುಕೆರೆ ಪ್ರದೇಶದಲ್ಲಿರುವ ಕೊಳವೆಬಾವಿಯಲ್ಲಿ ಕೂಡ ಮಣ್ಣು ಮಿಶ್ರಿತ ನೀರು, ನಗರಸಭಾ ವ್ಯಾಪ್ತಿಯಲ್ಲಿ 5,186 ನೀರಿನ ಬಳಕೆದಾರರಿದ್ದು, ಇರುವ 68 ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಮೂರು ತೆರೆದ ಬಾವಿಗಳಲ್ಲೂ ನೀರಿನ ಮೂಲ ಕಡಿಮೆಯಾಗಿದೆ.
ಕೆರೆ ಅಭಿವೃದ್ದಿಯಾಗಬೇಕಾಗಿದೆ
ಉಳ್ಳಾಲ ನಗರಸಭೆಯಲ್ಲಿ ಕೆರೆಯಿಂದಲೇ ಪ್ರಸಿದ್ಧವಾಗಿರುವ ಕೆರೆಬೈಲ್ ವಾರ್ಡ್‌ಗೆ ಈ ಬಾರಿ ಟ್ಯಾಂಕರ್‌ನಿಂದ ನೀರು ಒದಗಿಸಲಾಗುತ್ತಿದೆ. ಇಲ್ಲಿರುವ ಕೆರೆ ಅಭಿವೃದ್ಧಿಗೆ ಸುಮಾರು ಒಂದು ಕೋಟಿ ರೂ. ಯೋಜನೆಯ ಅಗತ್ಯ ಇದ್ದು, ಈ ಕೆರೆ 40 ಸೆಂಟ್ಸ್ ಇದ್ದು, ಹಳೆಕೋಟೆಯ 25 ಸೆಂಟ್ಸ್ ಕೆರೆ ಅಭಿವೃದ್ಧಿಗೆ ಅನುದಾನದ ಅಗತ್ಯವಿದೆ. ಮುಖ್ಯವಾಗಿ ಈ ಕೆರೆಗಳಿಗೆ ಮಲಿನ ನೀರಿನ ಸಮಸ್ಯೆಯಿದ್ದು, ಸಮರ್ಪಕವಾಗಿ ಅಭಿವೃದ್ಧಿಯಾದರೆ ಮಾತ್ರ ಈ ಕೆರೆಗಳ ನೀರನ್ನು ಕುಡಿಯುವ ನೀರಾಗಿ ಬಳಸಬಹುದು. ಈ ಕೆರೆಗಳ ಅಭಿವೃದ್ಧಿಯಿಂದ ಸುತ್ತಮುತ್ತಲಿನ ನೀರಿನ ಮೂಲಗಳಲ್ಲಿಯೂ ಅಂತರ್ಜಲ ಹೆಚ್ಚಾಗಲಿದೆ.
ದಿನಕ್ಕೆ 84 ಟ್ರಿಪ್ ನೀರು
ಇಡೀ ಉಳ್ಳಾಲ ನಗರಸಭೆಗೆ ಉಳ್ಳಾಲ ದರ್ಗಾ ಬಾವಿ ನೀರು ಪೂರೈಕೆಯ ಮೂಲವಾಗಿದ್ದು, ದಿನವೊಂದಕ್ಕೆ 84 ಟ್ರಿಪ್ ಟ್ಯಾಂಕರ್ ನೀರು ಇಲ್ಲಿಂದ ಸರಬರಾಜು ಆಗುತ್ತಿದೆ. ಕಳೆದ ಬಾರಿ ಇದೇ ಬಾವಿಯಿಂದ 11567 ಕೆ.ಎಲ್. 3305 ಟ್ರಿಪ್ ನೀರನ್ನು ಟ್ಯಾಂಕರ್‌ನಲ್ಲಿ ಒದಗಿಸಲಾಗಿದ್ದು, ಈ ಬಾರಿ ಹೆಚ್ಚಾಗುವ ಸಾಧ್ಯತೆ ಇದೆ.
ನೀರಿನ ಸಮಸ್ಯೆ ಹೆಚ್ಚಳ
ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಎರಡು ಮೂರು ದಿನಕ್ಕೊಮ್ಮೆ ಪೈಪ್‌ನಲ್ಲಿ ನೀರು ಸರಬರಾಜು ಆಗುತ್ತಿದೆ. ಕಳೆದ ಕೆಲವು ದಿನಗಳಿಂದ ನಾವು ಸ್ನಾನ ಸೇರಿದಂತೆ ಬಟ್ಟೆಗಳನ್ನು ಒಗೆಯಲು ಉಳ್ಳಾಲದಲ್ಲಿರುವ ಸಂಬಂಧಿಕರ ಮನೆಯನ್ನು ಆಶ್ರಯಿಸುವಂತಾಗಿದೆ.
– ಮಹಮ್ಮದ್ ಹನೀಫ್,
ಟಿ.ಸಿ. ರೋಡ್ ನಿವಾಸಿ
ಸಮಸ್ಯೆ ಇದ್ದರೆ ಕರೆ ಮಾಡಿ
ಈ ಬಾರಿ ಮಾರ್ಚ್ ತಿಂಗಳಿನಿಂದಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭಿಸಲಾಗಿದೆ. ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಪ್ರಸ್ತುತ 13,600 ಕಿ.ಲೀ. ನೀರಿನ ಬೇಡಿಕೆ ಅಂದಾಜಿಸಲಾಗಿದ್ದರೂ ಹೆಚ್ಚಿನ ನೀರಿನ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ತುರ್ತು ನೀರಿನ ಕರೆ ಬಂದಲ್ಲಿ ನೀರನ್ನು ಪೂರೈಸುವ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ತುಂಬೆಯಿಂದ ಉಳ್ಳಾಲ ಸೇರಿದಂತೆ ಪರಿಸರದ ಗ್ರಾಮಗಳಿಗೆ ನೀರು ಪೂರೈಕೆಗೆ ತುಂಬೆಯಿಂದ ಪ್ರತ್ಯೇಕ ಪೈಪ್‌ಲೈನ್‌ಗೆ ಅನುದಾನ ಬಿಡುಗಡೆಯಾಗಲಿದೆ.
– ರೇಣುಕಾ,ಕಿರಿಯ ಅಭಿಯಂತರರು ,
ನೀರು ಸರಬರಾಜು ವಿಭಾಗ,ಉಳ್ಳಾಲ ನಗರಸಭೆ
– ವಸಂತ ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.