ನಿರೀಕ್ಷಿತ ಚೇತರಿಕೆ ಕಾಣದ ಅಡಿಕೆ ಧಾರಣೆ: ಬೆಳೆಗಾರ ಕಂಗಾಲು!
Team Udayavani, Oct 27, 2017, 4:04 PM IST
ಪುತ್ತೂರು: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಚೇತರಿಸುವ ಲಕ್ಷಣ ಕಾಣುತ್ತಿಲ್ಲ. ಜಿಎಸ್‌ಟಿ ಜಾರಿ ಅನಂತರ ಅಡಿಕೆ ಧಾರಣೆ ಜಿಗಿತದ ನಿರೀಕ್ಷೆ ಮೂಡಿಸಿದ್ದು, ಅದು ಹುಸಿಯಾಗಿದೆ. ಪರಿಣಾಮ ಬೆಳೆಗಾರ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ತೋಟದ ನಿರ್ವಹಣೆ ಹೊತ್ತು ಇದಾಗಿದ್ದು, ಗೊಬ್ಬರ, ಸೊಪ್ಪು ಕೆಲಸ ಅಂತಿಮ ಹಂತಕ್ಕೆ ತಲುಪಿದೆ. ಕೆಲವೆಡೆ ಹಣ್ಣಡಿಕೆಯು ಕೊಯಿಲಿಗೆ ಸಿದ್ಧವಾಗಿದೆ. ಆದರೆ, ಧಾರಣೆ ಕುಸಿತದಿಂದ ಬೆಳೆಗಾರನಿಗೆ ದಿನನಿತ್ಯದ ವ್ಯವಹಾರಕ್ಕೆ ಆರ್ಥಿಕ ಪರಿಸ್ಥಿತಿ ತೊಡಕಾಗಿದೆ. ಮಾರುಕಟ್ಟೆಯಲ್ಲಿಯು ಖರೀದಿಗೆ ಅಷ್ಟೊಂದು ಉತ್ಸಾಹ ಕಂಡು ಬರುತ್ತಿಲ್ಲ.
ಕಳೆದ ವರ್ಷ ಶೇಖರಣೆ ಮಾಡುವ ಬದಲು ಅದೇ ವರ್ಷ ಮಾರುತ್ತಿದ್ದರೆ ಈಗಿನ ಧಾರಣೆಗಿಂತ ಅಧಿಕ ಮೊತ್ತ ಸಿಗುತ್ತಿತ್ತು. ಹಳೆ ಅಡಿಕೆಗೆ ಧಾರಣೆ ಹೆಚ್ಚಾಗಬಹುದು ಎಂಬ ಲೆಕ್ಕಾಚಾರದಲ್ಲಿ ಅಡಿಕೆ ಭದ್ರವಾಗಿಟ್ಟಿದ್ದ ಬೆಳೆಗಾರನಿಗೆ ತಮ್ಮ ಲೆಕ್ಕಾಚಾರ ಕೈಕೊಟ್ಟಿದೆ. ಹಳೆ ಅಡಿಕೆಗೆ 2014ರಲ್ಲಿ 222, 2015ರಲ್ಲಿ 330, 2016ರಲ್ಲಿ 300 ರೂ. ಧಾರಣೆ ಹೊಂದಿತ್ತು. ಈ ಲೆಕ್ಕಾಚಾರದಲ್ಲಿ ಈ ಬಾರಿ ಹಳೆ ಅಡಿಕೆ ಧಾರಣೆ ಇಳಿಕೆ ಆಗಿದೆ. ಹೊಸ ಅಡಿಕೆ ಧಾರಣೆ ಅಸ್ಥಿರವಾಗಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ 5 ರೂ.ನಷ್ಟು ಹೆಚ್ಚಳ ಕಂಡಿದೆ. ಅಡಿಕೆಗೆ ಸ್ಥಿರ ಧಾರಣೆ ಬೇಕು ಎನ್ನುವ ಬೇಡಿಕೆಗೆ ಸರಕಾರ, ಅಡಿಕೆ ಖರೀದಿ ಸಂಸ್ಥೆಗಳು ಸ್ಪಂದಿಸುತ್ತಿಲ್ಲ ಎನ್ನುವ ಆಪಾದನೆ ಬೆಳೆಗಾರರದ್ದು. ಅಡಿಕೆ ತೋಟ ನಿರ್ವಹಣೆಗೆ ಬಳಸುವ ಗೊಬ್ಬರ, ಔಷಧ ಸಿಂಪಡಣೆ ಖರ್ಚು-ವೆಚ್ಚ ವರ್ಷಂಪ್ರತಿ ದುಪ್ಪಟ್ಟಾಗುತ್ತದೆ. ಧಾರಣೆ ಇಳಿಮುಖ ಆಗುತ್ತಿರುವುದು ಸ್ಥಿರ ಧಾರಣೆ ನಿಗದಿ ಬೇಡಿಕೆಗೆ ಇರುವ ಪ್ರಮುಖ ಕಾರಣವಾಗಿದೆ.
ಈ ಬಾರಿ ಮದ್ದು ಸಿಂಪಡಣೆ ಕೂಲಿ 1,200 ರೂ. ದಾಟಿದೆ. ಐದು ವರ್ಷದ ಹಿಂದೆ 500 ರೂ. ಇತ್ತು. ರಾಸಾಯನಿಕ ಗೊಬ್ಬರ ಧಾರಣೆ ಈಗ ರೂ. 980ಕ್ಕೆ ಏರಿದೆ. 5 ವರ್ಷದ ಹಿಂದೆ 600 ರೂ. ಆಸುಪಾಸಿನಲ್ಲಿತ್ತು. ಆದರೆ, ಅಡಿಕೆ ಧಾರಣೆ ಈಗ ರೂ. 267 ಇದೆ. 5 ವರ್ಷದ ಹಿಂದೆ 350ಕ್ಕೂ ಹೆಚ್ಚಿತ್ತು. ಅಡಿಕೆ ಬೆಳೆಯಲು ರೈತ ವ್ಯಯಿಸುವ ಖರ್ಚು ವರ್ಷಂಪ್ರತಿ ಏರಿಕೆ ಪ್ರಮಾಣದಲ್ಲಿ ಇದ್ದರೆ, ಆತನಿಗೆ ದೊರೆಯುವ ಧಾರಣೆ ಪ್ರತಿ ವರ್ಷ ಇಳಿಕೆಯತ್ತ ಸಾಗುತ್ತಿದೆ.
ನಿರಾಶೆ ಮೂಡಿಸಿದ ಬೆಲೆ
ಇದೇ ವರ್ಷ ಜುಲೈಯಲ್ಲಿ ಪುತ್ತೂರು ಮಾರುಕಟ್ಟೆಯಲ್ಲಿ ಹಳೆ ಅಡಿಕೆಯನ್ನು ಕೆಜಿಗೆ 282 ರೂ. ಗಳಿಗೆ ಖರೀದಿಸಲಾಗಿತ್ತು. ಆದರೆ ಅನಂತರ ಕುಸಿತದ ಹಾದಿ ಹಿಡಿದ ಸಿಂಗಲ್ ಚೋಲ್ ಹಾಗೂ ಹೊಸ ಅಡಿಕೆ ಧಾರಣೆ ಚೇತರಿಕೆ ಕಂಡಿಲ್ಲ. ಗುರುವಾರ ಕ್ಯಾಂಪ್ಕೋ ಮಾರುಕಟ್ಟೆ ಯಲ್ಲಿ ಹಳೆ ಅಡಿಕೆ 267, ಹೊಸ ಅಡಿಕೆ 255 ರೂ. ಗೆ ಖರೀದಿ ಆಗಿದೆ. ಸಾಮಾನ್ಯವಾಗಿ ಹೊಸ ಮತ್ತು ಹಳೆ ಅಡಿಕೆ ಮಧ್ಯೆ 40ರಿಂದ 50ರ ತನಕ ವ್ಯತ್ಯಾಸ ಇರುತಿತ್ತು. ಈ ಬಾರಿ ಅದು 15ರೊಳಗೆ ಇರುವುದು ಅಡಿಕೆಯನ್ನು ಶೇಖರಿಸಿಟ್ಟ ಬೆಳೆಗಾರನಲ್ಲಿ ನಿರಾಶೆ ಮೂಡಿಸಿದೆ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.