ಅವೈಜ್ಞಾನಿಕ ಚರಂಡಿ ಕಾಮಗಾರಿ: ಕಂಡೂ ಕಾಣದಂತಿರುವ ಅಧಿಕಾರಿಗಳು
Team Udayavani, Nov 12, 2018, 11:17 AM IST
ಮಹಾನಗರ: ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದು ಹಾಗೂ ಚರಂಡಿಯ ಹೂಳೆತ್ತದೆ ಇರುವ ಕಾರಣದಿಂದಲೇ ಮೇ ತಿಂಗಳಲ್ಲಿ ನಗರದಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು. ಆ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕುವ ಬದಲು ಮನಪಾ ನಿರಾಸಕ್ತಿಯಿಂದ ಭವಿಷ್ಯದಲ್ಲಿ ಮತ್ತಷ್ಟು ಸಮಸ್ಯೆಗಳು ಸೃಷ್ಟಿಯಾಗುವ ಲಕ್ಷಣ ಕಂಡು ಬರುತ್ತಿದೆ.
ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದಿರುವುದರಿಂದ ಕೃತಕ ನೆರೆ ಉಂಟಾಗುತ್ತಿದೆ. ಇದರಿಂದ ಆಸ್ತಿಪಾಸ್ತಿ ಹಾನಿ ಸಹಿತ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ಮನಪಾಗೆ ಅರಿವಿದ್ದರೂ ನೂತನ ಕಾಮಗಾರಿಗಳನ್ನು ಬೇಜವಾಬ್ದಾರಿಯಿಂದ ಮಾಡಲಾಗುತ್ತಿದೆ. ಅದಕ್ಕೆ ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಚರಂಡಿ ಸಹಿತ ಇತರ ಕಾಮಗಾರಿಗಳೇ ಸಾಕ್ಷಿ.
ನಿಯಮ ಗಾಳಿಗೆ ತೂರಿ ಕಾಮಗಾರಿ
ಬಿಜೈ ಮಾರ್ಕೆಟ್‌ನಿಂದ ವಿವೇಕಾನಂದ ಉದ್ಯಾನವನದವರೆಗೆ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ಗಮನಿಸಿದರೆ ಜನಸಾಮಾನ್ಯರ ತೆರಿಗೆ ಹಣವನ್ನು ಪಾಲಿಕೆ ಅಧಿಕಾರಿಗಳು ಯಾವ ರೀತಿಯಲ್ಲಿ ಪೋಲು ಮಾಡುತ್ತಿದ್ದಾರೆ ಎಂಬುದು ಗೋಚರಿಸುತ್ತದೆ. ಬಿಜೈ ಮಾರ್ಕೆಟ್‌ನಿಂದ ವಿವೇಕಾನಂದ ಉದ್ಯಾನವನದವರೆಗೆ 1,080 ಮೀಟರ್ ದೂರ 1 ಕೋಟಿ 96 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಕಾಮಗಾರಿ ಕೆಲವು ದಿನಗಳಿಂದ ನಡೆಯುತ್ತಿದೆ. ಇಲ್ಲಿ ನಿಯಮಗಳನ್ನೇ ಗಾಳಿಗೆ ತೂರಿ ಚರಂಡಿ ಕಾಮಗಾರಿ ನಡೆಯುತ್ತಿದೆ.
ಅಧಿಕಾರಿಗಳ ನಿರಾಸಕ್ತಿ
ಕಾಮಗಾರಿ ನಡೆಯುತ್ತಿರುವ ಚರಂಡಿಯ ನಡುವೆ ಎರಡು ಕಡೆ ಮ್ಯಾನ್ ಹೋಲ್ ಇದ್ದು ಎರಡೂ ಬದಿಗಳಿಂದ ಗೋಡೆ ನಿರ್ಮಿಸಲಾಗುತ್ತಿದೆ. ಮ್ಯಾನ್ ಹೋಲ್ ಬಿಟ್ಟು ಚರಂಡಿಯ ಸ್ವರೂಪ ಬದಲಾಯಿಸುವ ಅವಕಾಶವಿದ್ದರೂ ಅಧಿಕಾರಿಗಳು ಆಸಕ್ತಿ ತೋರಿಲ್ಲ. ಇದರಿಂದ ರಭಸವಾಗಿ ಬರುವ ಮಳೆ ನೀರಿಗೆ ಅಲ್ಲಿ ತಡೆ ಉಂಟಾಗಿ ಕೃತಕ ನೆರೆ ಸೃಷ್ಟಿಯಾಗುತ್ತದೆ. ಅಲ್ಲದೆ ಅಲ್ಲಲ್ಲಿ ಕಬ್ಬಿಣದ ಸರಳುಗಳು ಮಡಚಿದ್ದು ಇದರ ಮೇಲೆಯೇ ಕಾಂಕ್ರೀಟ್ ಸುರಿಯಲಾಗಿದೆ. ಅಡಿಯಲ್ಲಿದ್ದ ಕೇಬಲ್, ಪೈಪ್‌ಗ್ಳನ್ನು ತೆರವುಗೊಳಿಸಿಲ್ಲ. ಅಚ್ಚರಿ ಎಂದರೆ ಮರವೊಂದರ ಕಾಂಡ ಚರಂಡಿಯ ಮಧ್ಯೆ ಇದೆ. ಕಾಲಕ್ರಮೇಣ ಇದರ ಬೇರುಗಳು ಬೆಳೆದು ಚರಂಡಿಗೆ ಹಾಕಲಾದ ಸಿಮೆಂಟ್‌ನಲ್ಲಿ ಬಿರುಕು ಬೀಳುವ ಸಾಧ್ಯತೆ ಇದೆ. ಸುಮಾರು 200 ಮೀಟರ್ ದೂರದಲ್ಲಿ ಈಗಾಗಲೇ ಕಾಮಗಾರಿ ಮುಗಿಸಲಾಗಿದೆ. ಅಲ್ಲಲ್ಲಿ ಕಬ್ಬಿಣದ ಸರಳುಗಳು ಹೊರ ಕಾಣುತ್ತಿವೆ. ನೆಲಕ್ಕೆ ಸಿಮೆಂಟ್ ಹಾಕದೆ ಕೆಲಸ ನಡೆಯುತ್ತಿದೆ. ಒಂದೆಡೆ ಗೋಡೆ ಕಾಮಗಾರಿ ಮುಗಿಯುತ್ತಿದ್ದಂತೆ ಇನ್ನೊಂದೆಡೆ ಅವ್ಯವಸ್ಥೆಗಳು ಕಾಣದಂತೆ ಸ್ಲ್ಯಾಬ್ ಗಳನ್ನು ಅಳವಡಿಸಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕುಡಿಯುವ ನೀರು ರಸ್ತೆ ಪಾಲು
ಕಾಂಕ್ರೀಟ್ ಕಾಮಗಾರಿ ನಡೆಯುವ ಸ್ಥಳದಲ್ಲಿ ವಿದ್ಯುತ್ ಕೇಬಲ್, ಟೆಲಿಫೋನ್ ಕೇಬಲ್, ನೀರಿನ ಪೈಪ್ ಗಳಿದ್ದು, ಎಲ್ಲವನ್ನೂ ಚರಂಡಿಯ ಅಡಿಗೆ ಹಾಕಲಾಗಿದೆ. ಅಲ್ಲಲ್ಲಿ ಪೈಪ್ ಒಡೆದು ನೀರು ಪೋಲಾಗುತ್ತಿದ್ದರೂ ಪಾಲಿಕೆ ಅಧಿಕಾರಿಗಳು, ಎಂಜಿನಿಯರ್ ಗಳು ಕ್ರಮವಹಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿ ಗಳು ಕಾಮಗಾರಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಜರಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ದುಡ್ಡು ಪೋಲು
ಚರಂಡಿ ಅಥವಾ ಇನ್ನಿತರ ಕಾಮಗಾರಿ ಮೂಲಕ ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗುತ್ತಿದೆ. ಇದೀಗ ಬಿಜೈಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಅವ್ಯವಸ್ಥಿತ ಕಾಮಗಾರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
– ಜೋಸೆಫ್ ಡಿ’ಸೋಜಾ, ಸ್ಥಳೀಯ
ಪರಿಶೀಲಿಸಿ ಕ್ರಮ
ಚರಂಡಿ ಕಾಮಗಾರಿಯಲ್ಲಿನ ಲೋಪದೋಷಗಳ ಬಗ್ಗೆ ನನಗೆ ಯಾವುದೇ ದೂರುಗಳು ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸುತ್ತೇನೆ.
- ಭಾಸ್ಕರ್ ಕೆ., ಮೇಯರ್
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಕೃಷಿ ಸದೃಢವಾದರೆ ಮಾತ್ರ ಭಾರತ ಶಕ್ತಿಶಾಲಿಯಾಗಲು ಸಾಧ್ಯ: ಉಪರಾಷ್ಟ್ರಪತಿ ಧನಕರ್
New Scam…ಇದು ನಿಮ್ಮ ಬ್ಯಾಂಕ್ ಖಾತೆಯ ಹಣವನ್ನು ಖಾಲಿ ಮಾಡಿಬಿಡುತ್ತೆ! ಕಾಮತ್ ಎಚ್ಚರಿಕೆ
ಥಿಯೇಟರ್‌ನಲ್ಲಿ ಇರುವಾಗಲೇ ಟಿವಿಯಲ್ಲಿ ಪ್ರಸಾರ ಕಂಡ ʼಗೇಮ್ ಚೇಜರ್ʼ: ಚಿತ್ರತಂಡ ಶಾಕ್
Video: ಆತ್ಮಹತ್ಯೆ ಮಾಡಿಕೊಳ್ಳಲು 13ನೇ ಮಹಡಿಯಿಂದ ಜಿಗಿದರೂ ಬದುಕುಳಿದ ಕಾರ್ಮಿಕ….
ISRO ಡಾಕಿಂಗ್ ಪ್ರಯೋಗ ಯಶಸ್ವಿ: ಭಾರತೀಯ ಬಾಹ್ಯಾಕಾಶ ಅನ್ವೇಷಣೆಯಲ್ಲೊಂದು ಬೃಹತ್ ಹೆಜ್ಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.