ಬಳಕೆಗಿಲ್ಲದ ಶಾಲೆ, ಬಸ್ ಬಾರದ ಕಾಲನಿಯಲ್ಲಿ ನಿಲ್ದಾಣ!
Team Udayavani, Dec 27, 2017, 12:24 PM IST
ಬಜಪೆ: ಮಂಗಳೂರು ವಿಮಾನ ನಿಲ್ದಾಣದ ವಿಸ್ತರಣ ಯೋಜನೆಗೆ ಭೂಸ್ವಾಧೀನವಾಗಿ, ಸಂತ್ರಸ್ತರಿಗಾಗಿ ನಿರ್ಮಿಸಿದ ಸೌಹಾರ್ದನಗರ ಪುನರ್ವಸತಿ ಕಾಲನಿಯಲ್ಲಿ ಬಹುತೇಕ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಪಾಳುಬಿದ್ದಿವೆ. ಈ ಪ್ರದೇಶದಲ್ಲೆಲ್ಲ ಹುಲ್ಲು- ಪೊದೆಗಳು ಬೆಳೆದಿದ್ದು, ಯಾವ ಕಟ್ಟಡವೂ ಉಪಯೋಗಕ್ಕಿಲ್ಲ ಎಂಬಂತಾಗಿದೆ.
ಮಳವೂರು, ಕೆಂಜಾರು, ಅದ್ಯಪಾಡಿ ಹಾಗೂ ಕೊಳಂಬೆ ಪ್ರದೇಶದ ನಿವಾಸಿಗಳಿಗೆ ಸಿದ್ಧಾರ್ಥನಗರ ಹಾಗೂ ಸೌಹಾರ್ದನಗರದಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದು, ಅಲ್ಲಿ ಸರಕಾರದಿಂದ ಬಿಡುಗಡೆಯಾದ 51.05 ಲಕ್ಷ ರೂ. ಅನುದಾನದಲ್ಲಿ ಜಿಲ್ಲಾಡಳಿತ ಹಲವು ಕಾಮಗಾರಿಗಳಿಗೆ ಕ್ರಮ ಕೈಗೊಂಡಿತ್ತು. ಈಗ ಈ ಪ್ರದೇಶದಲ್ಲಿ ಹುಲ್ಲು ಬೆಳೆದು, ಕಟ್ಟಡಗಳೆಲ್ಲ ಪಾಳುಬಿದ್ದು, ಯಾವುದೂ ಉಪಯೋಗಕ್ಕಿಲ್ಲದಂತಾಗಿದೆ.
ಪುನರ್ವಸತಿ ಕಾಲನಿಯಲ್ಲಿ ಸುಮಾರು 178 ಕುಟುಂಬಗಳು ವಾಸವಾಗಿವೆ. ಸುಮಾರು 17 ವರ್ಷಗಳ ಹಿಂದೆಯೇ (2000-2001ರಲ್ಲಿ) ನಿರ್ಮಾಣವಾದ ಶಾಲಾ ಕಟ್ಟಡ, ಮೈದಾನ, ಅಂಗನವಾಡಿ, ಸಮುದಾಯ ಭವನ, ಪ್ರಾಥಮಿಕ ಆರೋಗ್ಯ ಕೇಂದ್ರ, ಉದ್ಯಾನವನಗಳು ಈಗ ಪಾಳುಬಿದ್ದಿವೆ. ಇದರ ಸುತ್ತ ಹುಲ್ಲು ಬೆಳೆದಿದೆ. ಈ ಪೈಕಿ ಸಮುದಾಯ ಭವನ ಮಾತ್ರ ಕೆಲಕಾಲ ಬಳಕೆಯಾಗಿದ್ದು, ಉಳಿದವು ಉಪಯೋಗಕ್ಕೇ ಬಂದಿಲ್ಲ.
ಶಾಲೆಯ ಕಟ್ಟಡ, ಆಟದ ಮೈದಾನ ಹಾಗೂ ಅಂಗನವಾಡಿಗೆ ಸಂಬಂಧಿಸಿ ಒಟ್ಟು 22.45 ಲಕ್ಷ ರೂ., ಸಮುದಾಯ ಭವನಕ್ಕೆ 18.1 ಲಕ್ಷ ರೂ., ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದಾದಿಯರ ವಸತಿ ಕೇಂದ್ರಕ್ಕೆ ಸಂಬಂಧಿಸಿ 5.50 ಲಕ್ಷ ರೂ., ಉದ್ಯಾನವನ ನಿರ್ಮಾಣಕ್ಕೆ 5 ಲಕ್ಷ ರೂ. ವ್ಯಯಿಸಲಾಗಿತ್ತು.
ಈ ಕಾಮಗಾರಿಗಳ ನಿರ್ವಹಣೆಗಾಗಿ ಜಿಲ್ಲಾಡಳಿತ ಇವುಗಳನ್ನು 2002ರಲ್ಲಿ ಕಂದಾವರ ಗ್ರಾಮಕ್ಕೆ ಹಸ್ತಾಂತರಿಸಿತ್ತು. ಕಂದಾವರ ಗ್ರಾ.ಪಂ. ಸಮುದಾಯ ಭವನವನ್ನು ಮಾತ್ರ ಕೆಲ ಕಾಲ ಸಭೆಗಳಿಗೆ ಬಳಸಿತ್ತು. ಬಳಿಕ ಅದೂ ಪಾಳುಬಿದ್ದಿದೆ. ವಿದ್ಯುತ್ ಸಂಪರ್ಕವೂ ಕಡಿದುಹೋಗಿದೆ. ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ದಾದಿಯರ ವಸತಿ ಕೇಂದ್ರ,
ಶೌಚಾಲಯ, ಉದ್ಯಾನ- ಎಲ್ಲದರ ಸ್ಥಿತಿಯೂ ಇದೇ. ಬಸ್ ಬಾರದ ಪುನರ್ವಸತಿ ಕಾಲನಿಗೆ ಬಸ್ ತಂಗುದಾಣವೂ ವ್ಯರ್ಥ ನಿರ್ಮಾಣವೇ ಆಗಿದೆ.
ಕೊಳೆತ ಸ್ಥಿತಿಯಲ್ಲಿ ನಾಯಿ ಶವ
ಶಾಲಾ ಕಟ್ಟಡಕ್ಕೆ ಬಾಗಿಲೇ ಇಲ್ಲ. ಇಲ್ಲಿ ಕೊಳೆತ ಸ್ಥಿತಿಯಲ್ಲಿ ನಾಯಿಯ ಹೆಣ ಪತ್ತೆಯಾಗಿದೆ. ಶಾಲೆಯ ವಠಾರದಲ್ಲಿ ಹುಲ್ಲು ತುಂಬಿದ್ದು, ಕಟ್ಟಡದ ಹತ್ತಿರಕ್ಕೂ ಹೋಗದ ಸ್ಥಿತಿ ಇದೆ. ಶಾಲೆಯನ್ನು ತೆರೆದೇ ಇಲ್ಲ. ಈ ನಿಟ್ಟಿನಲ್ಲಿ ಯಾರೂ ಪ್ರಯತ್ನವನ್ನೂ ಮಾಡಿಲ್ಲ. ಹತ್ತಿರದಲ್ಲಿ ಬೇರೆ ಶಾಲೆಗಳಿರುವಾಗ ಇಲ್ಲೇಕೆ ಶಾಲೆ ಕಟ್ಟಿಸಲಾಯಿತು? ಈ ಕಟ್ಟಡದ ಅಗತ್ಯವೇನಿತ್ತು? ಶಾಲೆ ಅಲ್ಲವಾದರೆ ಬೇರೆ ಉದ್ದೇಶಕ್ಕಾದರೂ ಈ ಕಟ್ಟಡ ಉಪಯೋಗಿಸಬಹುದಿತ್ತು. ಅಥವಾ ಇದೇ ಹಣವನ್ನು ಬೇರೆ ಮೂಲಸೌಕರ್ಯಗಳಿಗೆ ಬಳಸಬಹುದಿತ್ತು ಎಂಬ ಮಾತುಗಳು ಸ್ಥಳೀಯರಿಂದಲೇ ಕೇಳಿಬರುತ್ತಿವೆ.
ಹೊಂಡಮಯ ರಸ್ತೆ
ಕಾಲನಿಯ ರಸ್ತೆಗಳು ಹೊಂಡಮಯವಾಗಿವೆ. ಕೆಲವೆಡೆ ಚರಂಡಿಗಳೇ ಇಲ್ಲ. ಕೆಲವು ಕಡೆಗಳಲ್ಲಿ ರಸ್ತೆಗಳು ಕಾಂಕ್ರೀಟ್ ಕಂಡಿವೆ. ಈ ಪ್ರದೇಶದ ದೊಡ್ಡ ಸಮಸ್ಯೆ ಎಂದರೆ ನೀರಿನದು. ಗುರುಪುರ ನದಿಯಿಂದ ಕೆಐಎಡಿಬಿ ವತಿಯಿಂದ ಈಶ್ವರ ಕಟ್ಟೆಯ ಓವರ್‌ಹೆಡ್ ಟ್ಯಾಂಕ್ ಮೂಲಕ ವಾರದ ಕೆಲವು ದಿನ ಇಲ್ಲಿ ನೀರು ಸರಬರಾಜಾಗುತ್ತದೆ.ಮರವೂರು ವೆಂಟಡ್ ಡ್ಯಾಂನಿಂದ ಪೈಪ್ ಅಳವಡಿಸಿದ್ದರೂ, ನೀರು ಸರಬರಾಜು ಇನ್ನೂ ಆರಂಭವಾಗಿಲ್ಲ.
ಸಮುದಾಯ ಭವನ ದುರಸ್ತಿ
ನಿರ್ವಹಣೆಗಾಗಿ ಸಮುದಾಯ ಭವನವನ್ನು 2002ರಲ್ಲಿ ಗ್ರಾ.ಪಂ.ಗೆ ಹಸ್ತಾಂತರಿಸಿದ್ದಾರೆ. ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ದಾದಿಯರ ವಸತಿ ಕೇಂದ್ರದ ಕಟ್ಟಡ, ಉದ್ಯಾನವನ ಎಲ್ಲವೂ ಆಯಾ ಇಲಾಖೆಗೆ ಸಂಬಂಧಿಸಿದವು. ಸಮುದಾಯ ಭವನದ ದುರಸ್ತಿ ಕಾಮಗಾರಿಗೆ 2 ಲಕ್ಷ ರೂ. ಕ್ರಿಯಾಯೋಜನೆ ತಯಾರಿಸಲಾಗಿದೆ. ಸದ್ಯದಲ್ಲೇ ಕಾಮಗಾರಿ ನಡೆಯಲಿದೆ. ಮಳವೂರು ವೆಂಟೆಡ್ ಡ್ಯಾಂನಿಂದ ನೀರು ಸರಬರಾಜು ಆರಂಭಿಸಿ, ನೀರಿನ ಸಮಸ್ಯೆ ನಿವಾರಿಸಲಾಗುವುದು.
– ವಿಜಯಾ ಗೋಪಾಲ ಸುವರ್ಣ,ಕಂದಾವರ ಗ್ರಾ.ಪಂ. ಅಧ್ಯಕ್ಷೆ
ನೀರು, ರಸ್ತೆ ಸಮಸ್ಯೆ
ಕೊಳಂಬೆ ಗ್ರಾಮದ ಸೌಹಾರ್ದನಗರ ಪುನರ್ವಸತಿ ಕಾಲನಿಯ ನಿರ್ವಸಿತರಿಗೆ ವಿಮಾನ ನಿಲ್ದಾಣ ವಿಸ್ತರಣೆಗಾಗಿ ಭೂಸ್ವಾಧೀನ ಸಂದರ್ಭದಲ್ಲಿ ಸರಿಯಾದ ಪ್ಯಾಕೇಜ್ ನೀಡಿಲ್ಲ. ನಮ್ಮ ಬೇಡಿಕೆ ಈಡೇರಿಸಿಲ್ಲ. ಇಲ್ಲಿ ನಿರ್ಮಾಣವಾದ ಅಭಿವೃದ್ಧಿ ಕಾಮಗಾರಿಗಳು ಉಪಯೋಗಕ್ಕೆ ಬಾರದಂತಿವೆ. ನೀರು, ರಸ್ತೆ ಮತ್ತು ಚರಂಡಿ ಸಮಸ್ಯೆ ಕಾಡುತ್ತಿದೆ.
– ರಾಧಾಕೃಷ್ಣ ಎ.,
ಪುನರ್ವಸತಿ ಸಮಿತಿಯ ಸದಸ್ಯ
ಸುಬ್ರಾಯ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.