ಉಪ್ಪಿನಂಗಡಿ: ನೀರಿಲ್ಲದೆ 7 ಕುಟುಂಬ ವಲಸೆ
Team Udayavani, May 2, 2018, 12:36 PM IST
ಉಪ್ಪಿನಂಗಡಿ: ಇಳಂತಿಲ ಗ್ರಾಮದ ನೇಜಿಕಾರು ಜನತಾ ಕಾಲನಿಯಿಂದ ನೇತ್ರಾವತಿ ನದಿಗೆ ದೂರ ಕೇವಲ ಎರಡು ಕಿ.ಮೀ. ಮಾತ್ರ. ಆದರೆ ಇಲ್ಲಿನ 7 ಕುಟುಂಬಗಳು ಪ್ರತೀ ವರ್ಷವೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತವೆ. ಈ ಬಾರಿ ತೊಂದರೆಗೆ ಪರಿಹಾರ ಕಾಣದೆ ಇವರು ಕಳೆದ 1 ತಿಂಗಳ ಹಿಂದೆ ಮನೆ ಖಾಲಿ ಮಾಡಿ ವಲಸೆ ಹೋಗಿದ್ದಾರೆ.
ನೇಜಿಕಾರು ಪ್ರದೇಶ ಇಳಂತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿದ್ದು, ಅತಿ ಎತ್ತರದಲ್ಲಿದೆ. ಇಲ್ಲಿ 7 ಮನೆಗಳಿದ್ದು, ಎಲ್ಲರೂ ಕೂಲಿ ಕೆಲಸಗಾರರು. ಗ್ರಾ.ಪಂ. ಸರಬರಾಜು ಮಾಡುವ ನಳ್ಳಿ ನೀರನ್ನೇ ಅವಲಂಬಿಸಿದ್ದಾರೆ. ಮಳೆಗಾಲ ಮುಗಿಯುತ್ತಿದ್ದಂತೆ ಕುಡಿಯುವ ನೀರು ಸಮಸ್ಯೆ ಇಲ್ಲಿ ಸಾಮಾನ್ಯ. ಈ ಬಗ್ಗೆ ಹಲವು ಬಾರಿ ಗ್ರಾ.ಪಂ. ಗಮನಕ್ಕೆ ತಂದಿದ್ದರೂ ಪ್ರಯೋಜನ ಆಗದೆ ಈಗ ಅನಿವಾರ್ಯವಾಗಿ ಮನೆ ಬಿಟ್ಟು ಹೋಗಿದ್ದಾರೆ.
ಮನೆ ಅಪೂರ್ಣ
ಇಲ್ಲಿ ಐದು ಮನೆಗಳು ನಿರ್ಮಾಣ ಹಂತದಲ್ಲಿದ್ದು, ನೀರಿಲ್ಲದ ಕಾರಣ ಕೆಲಸ ಅರ್ಧಕ್ಕೆ ನಿಂತಿದೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಈ ಸಮಸ್ಯೆತಲೆದೋರುತ್ತಿದೆ. ಈ ವರ್ಷ ನಾವು ವಾಸ್ತವ್ಯ ಇರುವ ಮನೆ ನಿವೇಶನಕ್ಕೆ 94/ಸಿ ಅನ್ವಯ ಮಂಜೂರಾತಿ ದೊರೆತಿದ್ದರೂ ನೀರಿನ ಸಮಸ್ಯೆಯಿಂದಾಗಿ ಏನೂ ಮಾಡುವಂತಿಲ್ಲ ಎಂದು ಸಂತ್ರಸ್ತರು ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ.