![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Jan 21, 2023, 2:05 PM IST
ಮಂಗಳೂರು: ಉಪ್ಪಿನಂಗಡಿಯ ಸಹೋದರರ ಕಿಡ್ನ್ಯಾಪ್ ಕೇಸ್ ಮತ್ತು ಅರ್ಕುಳದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣವನ್ನು ಬೇಧಿಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಉಪ್ಪಿನಂಗಡಿ ಸಹೋದರರ ಅಪಹರಣಕ್ಕೆ ಕುಮ್ಮಕ್ಕು ನೀಡಿರುವ ರೌಡಿಶೀಟರ್ ಒಬ್ಬನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಂಧಿತರನ್ನು ಉಪ್ಪಿನಂಗಡಿಯ ಅಬೂಬಕ್ಕರ್ ಸಿದ್ದಿಕ್ ಯಾನೆ ಜೆಸಿಬಿ ಸಿದ್ದಿಕ್ (39), ಬಂಟ್ವಾಳದ ಕಲಂದರ್ ಶಾಫಿ ಗಡಿಯಾರ (22), ಬಂಟ್ವಾಳದ ಇರ್ಫಾನ್ (38), ಪಾಂಡೇಶ್ವರದ ಮೊಹಮ್ಮದ್ ರಿಯಾಜ್ (33) ಮತ್ತು ಬೆಳ್ತಂಗಡಿಯ ಮೊಹಮ್ಮದ್ ಇರ್ಷಾದ್ (28) ಎಂದು ಗುರುತಿಸಲಾಗಿದೆ.
ಆಗಿದ್ದೇನು?
ಘಟನೆ: 1
ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ನೆ ಬಳಿ ವಿದೇಶದಿಂದ ಬಂದ ಸಹೋದರರಿಬ್ಬರನ್ನು ಗುರುವಾರ ಅಪಹರಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅವರಲ್ಲಿ ತಮ್ಮನನ್ನು ಒತ್ತೆ ಇರಿಸಿಕೊಂಡು ಹಣ ತರುವಂತೆ ಬೇಡಿಕೆಯಿಟ್ಟು ಅಣ್ಣನನ್ನು ಮನೆಗೆ ಕಳುಹಿಸಿದ್ದರು. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಣ್ಣ ನಿಜಾಮುದ್ದೀನ್ ಮತ್ತು ತಮ್ಮ ಶಾರುಕ್ ನನ್ನು ಅಪಹರಿಸಲಾಗಿತ್ತು.
ಘಟನೆ: 2
ಗುರುವಾರ ತಡರಾತ್ರಿ ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಅರ್ಕುಳ ಗ್ರಾಮದ ತುಪ್ಪೆಕಲ್ಲು ಎಂಬಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಅಂಗಡಿ ಮತ್ತು ಪ್ರದೀಪ್ ಎಂಬವರು ಗಸ್ತು ತಿರುಗುತ್ತಿದ್ದರು. ಈ ವೇಳೆ ರೈಲ್ವೆ ಹಳಿ ಬಳಿ ಕೆಲವರು ಮಾತನಾಡುತ್ತಿದ್ದದ್ದನ್ನು ಕಂಡು ವಿಚಾರಿಸಲು ಹೋದಾಗ ಅವರು ಪೊಲೀಸರ ಮೇಲೆ ಕಲ್ಲು ಎಸೆದು ಹಲ್ಲೆ ಮಾಡಿ, ಕಾರು ಹಾಯಿಸಿ ಕೊಲೆ ಯತ್ನ ನಡೆಸಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಮಂಗಳೂರು ಪೊಲೀಸರು ಸಿದ್ದಿಕ್, ಕಲಂದರ್ ಶಾಫಿ ಗಡಿಯಾರ, ಇರ್ಫಾನ್ ಮತ್ತು ಮೊಹಮ್ಮದ್ ಇರ್ಷಾದ್ ನನ್ನು ದಸ್ತಗಿರಿ ಮಾಡಿದ್ದರು. ಇವರನ್ನು ವಿಚಾರಣೆ ಮಾಡುವ ವೇಳೆ ಉಪ್ಪಿನಂಗಡಿ ಕಿಡ್ನಾಪ್ ರಹಸ್ಯ ಹೊರಬಿದ್ದಿದೆ.
ಈ ಅರೋಪಿಗಳನ್ನು ಹಿಡಿಯುವ ವೇಳೆ ಅವರ ಜೊತೆ ಉಪ್ಪಿನಂಗಡಿಯಲ್ಲಿ ಕಿಡ್ನಾಪ್ ಆಗಿದ್ದ ಶಾರುಕ್ ಕೂಡಾ ಜೊತಗಿದ್ದ. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಎಲ್ಲಾ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಕಿಡ್ನಾಪ್ ಆಗಿದ್ದ ಶಾರುಕ್ ನ ಸೋದರ ಸಂಬಂಧಿ ಶಾರುಕ್ ಎಂಬಾತ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಗೋಲ್ಡ್ ಬಿಸ್ಕಿಟ್ ತಲುಪಿಸುವ ಕೆಲಸ ವಹಿಸಿಕೊಂಡಿದ್ದ. ಆದರೆ ಸುಮಾರು 40 ಲಕ್ಷ ರೂ ಮೌಲ್ಯದ ಚಿನ್ನದ ಗಟ್ಟಿಯನ್ನು ಆತ ತಲುಪಿಸರಲಿಲ್ಲ. ಹೀಗಾಗಿ ಇದಕ್ಕೆ ಸಂಬಂಧ ಪಟ್ಟ ದಕ್ಷಿಣ ಕನ್ನಡ ಮೂಲದ ಬೆಂಗಳೂರು ಆಸುಪಾಸಿನಲ್ಲಿ ವಾಸವಿರುವ ರೌಡಿ ಶೀಟರ್ ಒಬ್ಬನ ಸೂಚನೆಯಂತೆ ಆರೋಪಿಗಳು ಕೃತ್ಯದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಉಪ್ಪಿನಂಗಡಿಯಲ್ಲಿ ಸಹೋದರರ ಅಪಹರಣ ಪ್ರಕರಣ: ಹಣಕ್ಕಾಗಿ ತಮ್ಮನ ಒತ್ತೆ; ಅಣ್ಣ ಮನೆಗೆ
ರೌಡಿ ಶೀಟರ್ ಸೂಚನೆಯಂತೆ ಆರೋಪಿಗಳು ಶಾರುಕ್ ಮತ್ತು ನಿಜಾಮುದ್ದೀನ್ ನನ್ನು ಅಪಹರಿಸಿ ಆತನ ಮೂಲಕ ದುಬೈ ಶಾರುಕ್ ನಿಂದ ಚಿನ್ನ ಪಡೆಯಲು ಯತ್ನಿಸಿದ್ದಾರೆ. ಅಲ್ಲದೆ 22500 ರೂ ಹಣ ಮತ್ತು ಮೊಬೈಲ್ ಫೋನ್ ಕಿತ್ತುಕೊಂಡಿದ್ದಾರೆ. ನಿಜಾಮುದ್ದೀನ್ ಗೆ ಹಲ್ಲೆ ಮಾಡಿ ಮನೆಯಿಂದ ಹಣ ತರಲೆಂದು ಬಿಡುಗಡೆ ಮಾಡಿದ್ದರು.
ಅರ್ಕುಳ ಬಳಿಯ ಪೊಲೀಸರ ಕೊಲೆ ಯತ್ನ ಪ್ರಕರಣದ ಹಿಂದೆ ಬಿದ್ದ ಪೊಲೀಸರು ಉಪ್ಪಿನಂಗಡಿ ಅಪಹರಣ ಪ್ರಕರಣವನ್ನು ಬೇಧಿಸಿದ್ದಾರೆ.
ಈ ಪ್ರಕರಣಕ್ಕೆ ಗೋಲ್ಡ್ ಮಾಫಿಯಾ ನಂಟು ಇರುವ ಬಗ್ಗೆ ಅನುಮಾನಗಳಿದ್ದು, ಈ ದಿಕ್ಕಿನಲ್ಲಿಯೂ ತನಿಖೆ ನಡೆಸಲಾಗುವುದು ಎಂದು ಆಯುಕ್ತರು ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.