ಉಪ್ಪಿನಂಗಡಿ-ಕಡಬ ರಸ್ತೆಯಲ್ಲಿ ಅಪಾಯಕಾರಿ ತಿರುವುಗಳು
Team Udayavani, Oct 16, 2017, 3:53 PM IST
ಕಡಬ: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಇರುವ ಅಪಾಯಕಾರಿ ತಿರುವುಗಳು ನಿರಂತರ ಅಪಘಾತಕ್ಕೆ ಕಾರಣವಾಗುವ ಮೂಲಕ ವಾಹನ ಚಾಲಕರಿಗೆ ಸಮಸ್ಯೆಯಾಗಿ ಪರಿಣಮಿಸಿವೆ.
ಉಪ್ಪಿನಂಗಡಿ-ಕಡಬ-ಮರ್ದಾಳ (ರಾಜ್ಯ ಹೆದ್ದಾರಿ 113) ರಸ್ತೆ ಅಗಲವಾಗಿ, ಪ್ರಯಾಣಿಕರಿಗೆ ಅನುಕೂಲಕರವಾದ ರೀತಿಯಲ್ಲಿ ಸುಂದರವಾಗಿ ನಿರ್ಮಾಣಗೊಂಡಿದೆ. ಆದರೆ ಕೆಲವು ಕಡೆಯ ರಸ್ತೆ ತಿರುವುಗಳು ಚಾಲಕರನ್ನು ಕಾಡುತ್ತಿವೆ.
ಉಪ್ಪಿನಂಗಡಿ ಭಾಗದಿಂದ ನೇರ ರಸ್ತೆಯಲ್ಲಿ ವೇಗವಾಗಿ ಬರುವ ವಾಹನಗಳು ಹಠಾತ್ತಾಗಿ ಎದುರಾಗುವ ತಿರುವುಗಳಿಂದಾಗಿ ನಿಯಂತ್ರಣ ಕಳೆದು ಕೊಂಡು ರಸ್ತೆಯ ಪಕ್ಕದ ಚರಂಡಿಗೆ ಉರುಳುವುದು ಇಲ್ಲಿ ಮಾಮೂಲಾಗಿದೆ. ಕಡಬದ ತಹಶೀಲ್ದಾರ್ ಕಚೇರಿ ಬಳಿಯ ಒಂದು ತಿರುವಿನಲ್ಲೇ ಎರಡು ತಿಂಗಳ ಅವಧಿಯಲ್ಲಿ 10ಕ್ಕೂ ಹೆಚ್ಚು ಅಪಘಾತಗಳಾಗಿವೆ. ಸಣ್ಣಪುಟ್ಟ ಗಾಯಗಳೊಂದಿಗೆ ವಾಹನಗಳಲ್ಲಿದ್ದ ಪ್ರಯಾಣಿಕರು ಪಾರಾದರೆ, ವಾಹನಗಳು ಮಾತ್ರ ಭಾರಿ ಹಾನಿಗೊಳ್ಳುತ್ತಿವೆ.
ರಸ್ತೆ ಸುರಕ್ಷತೆ ಫಲಕ ಅಳವಡಿಸಿ
ಉತ್ತಮ ರೀತಿಯ ಅಭಿವೃದ್ಧಿ ಕಾಮಗಾರಿ ನಡೆದು ರಸ್ತೆ ಸುಂದರವಾಗಿ ನಿರ್ಮಾಣವಾಗಿದ್ದರೂ ಸುರಕ್ಷತಾ ಕ್ರಮಗಳ ಕುರಿತು ರಸ್ತೆಯ ಪಕ್ಕದಲ್ಲಿ ಯಾವುದೇ ಸೂಚನ ಫಲಕಗಳನ್ನು ಅಳವಡಿಸದೇ ಇರುವುದು ತೊಂದರೆಗೆ ಕಾರಣವಾಗಿದೆ.
ಬೆಳಗಿನ ಜಾವ ಮತ್ತು ರಾತ್ರಿ ವೇಳೆ ಇಲ್ಲಿ ಅಪಘಾತಗಳಾಗುವುದು ಹೆಚ್ಚು. ರಸ್ತೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದರಿಂದ ಪರವೂರಿನ ವಾಹನಗಳು ಇಲ್ಲಿ ಪದೇ ಪದೇ ಅಪಘಾತಕ್ಕೀಡಾಗುತ್ತಿವೆ. ತಿರುವುಗಳ ಬಗ್ಗೆ ಮೊದಲೇ ಸೂಚನೆ ನೀಡುವ ರಿಫ್ಲೆಕ್ಟರ್ ಫಲಕಗಳನ್ನು ಅಳವಡಿಸಿದರೆ ಅಪಘಾತಗಳನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಬಹುದು. ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಂಡು ವರ್ಷ ಕಳೆದರೂ ಸುರಕ್ಷತಾ ಕ್ರಮಗಳ ಕುರಿತು ಇಲಾಖೆ
ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ಸುರಕ್ಷತಾ ಕ್ರಮ ಕೈಗೊಳ್ಳಲಿ
ಕಡಬ ತಹಶೀಲ್ದಾರ್ ಕಚೇರಿಯ ಸಮೀಪ ಇರುವ ನಮ್ಮ ಪೆಟ್ರೋಲ್ ಪಂಪ್ ಹತ್ತಿರದ ರಸ್ತೆ ತಿರುವಿನಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ರಾತ್ರಿ ಮತ್ತು ಬೆಳಗಿನ ಜಾವ ನಡೆಯುವ ಅಪಘಾತಗಳ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯವುದೇ ದೊಡ್ಡ ಸವಾಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯವರು ಕೂಡಲೇ ತಿರುವುಗಳು ಹಾಗೂ ಸತತ ಅಪಘಾತ ನಡೆಯುತ್ತಿರುವ ಸ್ಥಳಗಳನ್ನು ಗುರುತಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.
ಸೀತಾರಾಮ ಎ.,
ಪೆಟ್ರೋಲ್ ಪಂಪ್ ಮ್ಯಾನೇಜರ್,
ಕಡಬ
ಉನ್ನತಾಧಿಕಾರಿಗಳಿಗೆ ವರದಿ ಸಲ್ಲಿಸಿದೆ
ಉಪ್ಪಿನಂಗಡಿ-ಕಡಬ-ಮರ್ದಾಳ ರಾಜ್ಯ ಹೆದ್ದಾರಿಯ ತಿರುವುಗಳಲ್ಲಿ ಅಗಾಗ ಅಪಘಾತಗಳು ಸಂಭವಿಸುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಸದ್ರಿ ರಸ್ತೆಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇಲಾಖೆಯ ಉನ್ನತಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
ನಾಗರಾಜ್, ಎಂಜಿನಿಯರ್,
ಲೋಕೋಪಯೋಗಿ ಇಲಾಖೆ
ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.