ಉಪ್ಪಿನಂಗಡಿ: ಆಧಾರ್ ಸೇವಾ ಕೇಂದ್ರ ಪುನಾರಂಭಕೆ ಸಿದ್ಧತೆ
Team Udayavani, Jan 4, 2018, 3:55 PM IST
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ತಡೆ ಎಚ್ಚರಿಕೆ ನೀಡಿದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿ ವರ್ಗ ಕೊನೆಗೂ ಉಪ್ಪಿನಂಗಡಿ ನಾಡ ಕಚೇರಿಯಲ್ಲಿ ಆಧಾರ್ ಸೇವಾ ಕೇಂದ್ರವನ್ನು ಪುನಾರಂಭಿಸಲು ಸಿದ್ಧತೆ ಕೈಗೊಂಡಿದ್ದಾರೆ.
ಸುಮಾರು 20 ಗ್ರಾಮಗಳನ್ನೊಳಗೊಂಡ ಉಪ್ಪಿನಂಗಡಿ ನಾಡ ಕಚೇರಿಯಲ್ಲಿದ್ದ ಆಧಾರ್ ಸೇವಾ ಕೇಂದ್ರವನ್ನು ಎಂಟು ತಿಂಗಳ ಹಿಂದೆ ತಾಂತ್ರಿಕ ಸಮಸ್ಯೆ ನೆಪವೊಡ್ಡಿ ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಎಲ್ಲ ಸರಕಾರಿ ಕೆಲಸಗಳಿಗೆ ಆಧಾರ್ ಕಡ್ಡಾಯವಾಗಿದ್ದು, ತಾ| ಕೇಂದ್ರವಾದ ಪುತ್ತೂರನ್ನೇ ಅವಲಂಬಿಸಬೇಕಾಗಿತ್ತು. ಪುತ್ತೂರಿಗೆ ತೆರಳಿದರೆ ಅಲ್ಲೂ ಟೋಕನ್ ಸಿಗದೆ ಅಲೆದಾಟ ಭಾಗ್ಯ ಒದಗಿತ್ತು. ಆಧಾರ್ ಕಾರ್ಡ್ ಮಾಡಿಸಲು, ತಿದ್ದುಪಡಿಗೆ ಸಮಸ್ಯೆಯಾಗುತ್ತಿತ್ತು.
ಎಂಟು ತಿಂಗಳಾದರೂ ಆಧಾರ್ ಸೇವಾ ಕೇಂದ್ರ ಪುನಾರಂಭಿಸಲು ಅಧಿಕಾರಿಗಳು ಮುಂದಾಗಲಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್ ‘ನಮ್ಮೂರು- ನೆಕ್ಕಿಲಾಡಿ’ ಹಾಗೂ ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕರ ಸಂಘ ಮತ್ತು ಸಾರ್ವಜನಿಕರೊಂದಿಗೆ ಕೂಡಿಕೊಂಡು ನಾಡ ಕಚೇರಿ ಎದುರು ಪ್ರತಿಭಟನೆ ನಡೆಸಿತ್ತು. ವಾರದೊಳಗೆ ಆಧಾರ್ ಸೇವಾ ಕೇಂದ್ರ ತೆರೆಯುವ ಭರವಸೆ ಅಧಿಕಾರಿಗಳಿಂದ ಸಿಕ್ಕಿತಾದರೂ, ತಿಂಗಳಾಗುತ್ತಾ ಬಂದರೂ ಈಡೇರಲಿಲ್ಲ. ಕೇಳಿದರೆ, ಆಧಾರ್ ಕಾರ್ಡ್‌ಗೆ ಹೊಸ ಸಾಫ್ಟ್ವೇರ್ ಹೊಸದಿಲ್ಲಿಯಲ್ಲಿದ್ದು, ಅದು ಅಲ್ಲಿ ಲಾಗಿನ್ ಆಗಬೇಕು.
ಹಾಗಾಗಿ ವಿಳಂಬವಾಗಿದೆ ಎಂಬ ಉತ್ತರ ಸಿಗುತ್ತಿತ್ತು. ಬಳಿಕ ಮತ್ತೂಮ್ಮೆ ಸಂಘಟನೆಗಳು ಹಾಗೂ ಸಾರ್ವಜನಿಕರನ್ನು
ಕೂಡಿಕೊಂಡು ಉಪ್ಪಿನಂಗಡಿಯಲ್ಲಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರವಾಗಿ ಪ್ರತಿಭಟಿಸುವ ಎಚ್ಚರಿಕೆಯನ್ನು ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯಾಧ್ಯಕ್ಷ ಅಬ್ದುರ್ರಹ್ಮಾನ್
ಯುನಿಕ್ ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದರು. ಈ ಬಗ್ಗೆ ಇಲಾಖೆಗಳಿಗೆ ಮನವಿಯನ್ನೂ ನೀಡಲಾಗಿತ್ತು. ಹೀಗಾಗಿ,
ಅಧಿಕಾರಿಗಳು ಆಧಾರ್ ಸೇವಾ ಕೇಂದ್ರ ಪುನಾರಂಭಿಸುವ ಕೆಲಸ ತ್ವರಿತವಾಗಿ ಮಾಡಿದ್ದು, ಲಾಗಿನ್ ಆಗುವ ಮೂಲಕ
ಈ ಭಾಗದವರ ಬೇಡಿಕೆ ಈಡೇರಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯಾಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್, ಅಧಿಕಾರಿಗಳು ಇನ್ನು ಮುಂದಾದರೂ ಸರಕಾರಿ ಯೋಜನೆಗಳ ಅನುಷ್ಠಾನಕ್ಕೆ ವಿಳಂಬ ತೋರದೆ, ತ್ವರಿತವಾಗಿ ಅನುಷ್ಠಾನಗೊಳಿಸಿ, ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಲಿ. ಪ್ರತಿಭಟನೆ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಅಧಿಕಾರಿಗಳೇ ಇಚ್ಛಾಶಕ್ತಿ ಪ್ರದರ್ಶಿಸಿ, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕೆಂದು ಒತ್ತಾಯಿಸಿದರು.
ಅಂತಿಮ ಕೆಲಸ ನಡಯುತ್ತಿದೆ
ಉಪ್ಪಿನಂಗಡಿಗೆ ಆಧಾರ್ ಸೇವಾ ಕೇಂದ್ರ ನೋಂದಣಿಯಾಗಿ ಬಂದಿದ್ದು, ಅದರ ಮುದ್ರಣ ಯಂತ್ರದ ಜೋಡಣೆಯ ಅಂತಿಮ ಕೆಲಸ ನಡೆಯುತ್ತಿದೆ. ಅದು ಮುಗಿದರೆ ನಾಳೆಯಿಂದಲೇ ಉಪ್ಪಿನಂಗಡಿಯ ನಾಡಕಚೇರಿಯಲ್ಲಿ ಆಧಾರ್ ಸೇವಾ ಕೇಂದ್ರ ಪುನಾರಂಭವಾಗಲಿದೆ.
– ಸದಾಶಿವ ನಾಯ್ಕ
ಉಪ ತಹಶೀಲ್ದಾರ್, ನಾಡಕಚೇರಿ, ಉಪ್ಪಿನಂಗಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.