ಉಪ್ಪಿನಂಗಡಿ: ವಿಜಯ-ವಿಕ್ರಮ ಕಂಬಳ ಉದ್ಘಾಟನೆ
Team Udayavani, Mar 3, 2019, 6:04 AM IST
ಉಪ್ಪಿನಂಗಡಿ: ಕರಾವಳಿ ಭಾಗದ ಜನರ ಜಾನಪದ ಕ್ರೀಡೆ ಕಂಬಳಕ್ಕೆ ವಿಶಿಷ್ಟವಾದ ಸ್ಥಾನಮಾನ ಇದ್ದು, ಹಿಂದಿನ ಅರಸು ಕಾಲದಿಂದ ಹಿಡಿದು ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಕಂಬಳ ಕೃಷಿ ಪರಂಪರೆಯ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿದೆ ಎಂದು ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಹೇಳಿದರು.
ಅವರು ಮಾ. 2ರಂದು ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯ ಕೂಟೇಲು ಬಳಿಯಲ್ಲಿ ಎರಡು ದಿನಗಳ ಕಾಲ ನಡೆಯುವ ವಿಜಯ-ವಿಕ್ರಮ ಕಂಬಳವನ್ನು ಉದ್ಘಾಟಿಸಿ ಮಾತನಾಡಿದರು. ಕಂಬಳಕ್ಕೆ ಇದ್ದ ಎಲ್ಲ ಅಡೆತಡೆಗಳು ನಿವಾರಣೆ ಆಗಿವೆ. ಇದರ ಹಿಂದೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಅವರ ಶ್ರಮ ಬಹಳಷ್ಟಿತ್ತು. ಇದರ ಹೋರಾಟದಲ್ಲಿ ಅವರು ಗೆಲುವು ಸಾಧಿಸಿದ್ದು, ಮುಂದುವರಿಸುವ ಜವಾಬ್ದಾರಿ ಎಲ್ಲರಿಗೂ ಇದೆ ಎಂದರು.
ಅಂತಾರಾಷ್ಟ್ರೀಯ ಕ್ರೀಡೆಯಾಗಲಿ
ಜಿ.ಪಂ. ಸದಸ್ಯೆ ಶಯನಾ ಜಯಾನಂದ ಮಾತನಾಡಿ, ಕಂಬಳ ಕ್ರೀಡೆ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಅದರಲ್ಲೂ ವಿದೇಶಿಗರು ಬಂದು ಇಲ್ಲಿ ನೋಡುತ್ತಿದ್ದಾರೆ. ಮುಂದೆ ಇದು ಅಂತಾರಾಷ್ಟ್ರೀಯ ಕ್ರೀಡೆಯಾಗಲಿ ಎಂದರು.
ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ ಮಾತನಾಡಿ, ಇಲ್ಲಿ ನಡೆಯುವ ಕಂಬಳ ಕ್ರೀಡೆ ಸಲುವಾಗಿ ಇದರ ಸಮಿತಿ ಪದಾಧಿಕಾರಿಗಳು ಒಂದು ತಿಂಗಳಿನಿಂದ ತಯಾರಿ ನಡೆಸುತ್ತಿದ್ದಾರೆ. ಅದರ ಫಲವಾಗಿ ಇಂದು ಇಲ್ಲಿ ಉತ್ಸವದ ರೀತಿಯಲ್ಲಿ ನಡೆಯುತ್ತಿದ್ದು, ಮುಂದೆಯೂ ಒಳ್ಳೆಯ ರೀತಿಯಲ್ಲಿ ನಡೆಯುವಂತಾಗಲಿ ಎಂದರು.
ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ ಮಾತನಾಡಿದರು. ವಿಜಯ-ವಿಕ್ರಮ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ರಘುನಾಥ ರೈ, ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಬಂಗಾಡಿಕೊಲ್ಲಿ ಕಂಬಳ ಸಮಿತಿ ಅಧ್ಯಕ್ಷ ಡಾ| ಎಂ.ಎಂ. ದಯಾಕರ್, ಕಂಬಳ ಜಿಲ್ಲಾ ಸಮಿತಿ ತೀರ್ಪುಗಾರ ಎಡ್ತೂರು ರಾಜೀವ ರೈ,ಕದಿಕ್ಕಾರು ಬೀಡು ಪ್ರವೀಣ್ ಕುಮಾರ್, ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರ ಸಂಕಪ್ಪ ಶೆಟ್ಟಿ, ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಮಹಾಲಿಂಗ ಕಜೆಕ್ಕಾರು, ಕಂಬಳ ಸಮಿತಿ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ರಾಮಚಂದ್ರ ಮಣಿಯಾಣಿ, ವಿಟ್ಠಲ ಶೆಟ್ಟಿ ಕೊಲ್ಲೊಟ್ಟು, ಸದಾಶಿವ ಸಾಮಾನಿ ಸಂಪಿಗೆದಡಿ, ಉದ್ಯಮಿ ಯು. ರಾಮ, ಸುಮಾ ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು.
ರಾಷ್ಟ್ರಧ್ವಜ ಹಸ್ತಾಂತರಿಸಿ ಕಂಬಳಕ್ಕೆ ಚಾಲನೆ
ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂದೆ ಯೋಧ ವಿಶ್ವನಾಥ ಶೆಣೈ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಕಂಬಳ ಕೋಣಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಕಂಬಳ ಕರೆಯಲ್ಲಿ ಧಾರ್ಮಿಕ ವಿಧಿ-ವಿಧಾನದ ಮೂಲಕ ಕಂಬಳ ಕ್ರೀಡೆಗೆ ಚಾಲನೆ ನೀಡಲಾಯಿತು. ಅನಂತರ ಸಭಾ ವೇದಿಕೆ ಮುಂದೆ ಇರಿಸಲಾಗಿದ್ದ ಕೆಲ ದಿನಗಳ ಹಿಂದೆ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜರ್ಮನಿ ಮೂಲದ ಮಾರ್ಕೀಸ್ ದಂಪತಿ ಕಂಬಳ ವೀಕ್ಷಣೆ ಮಾಡುತ್ತಿರುವುದು ಕಂಡುಬಂತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.