ವೇಣೂರು ಜಂಕ್ಷನ್: ವಿಸ್ತರಣೆಯೇ ಅಭಿವೃದ್ಧಿಗೆ ಪೂರಕ
Team Udayavani, Aug 25, 2018, 10:23 AM IST
ವೇಣೂರು: ಬಾಹುಬಲಿ ಮೂರ್ತಿಯಿಂದ ಪ್ರವಾಸಿ ತಾಣವಾಗಿರುವ ವೇಣೂರಿಗೆ ಶ್ರೀರಾಮ ನಗರ ಜಂಕ್ಷನ್ ಪ್ರವೇಶ ದ್ವಾರ, ಸದಾ ಚಟುವಟಿಕೆಯ ಕೇಂದ್ರ. ರಾಜ್ಯ ಹೆದ್ದಾರಿ 70 ಹಾದುಹೋಗುವ ಈ ಜಂಕ್ಷನ್ ಅಭಿವೃದ್ಧಿಗಾಗಿ ಕಾತರಿಸುತ್ತಿದೆ. ಇದು ರಾಜ್ಯ ಹೆದ್ದಾರಿ ಮೂಲಕ ಬೆಳ್ತಂಗಡಿ-ಮೂಡಬಿದಿರೆಗೆ ಹಾಗೂ ನಾರಾವಿಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿಂದ ತಾಲೂಕು ಕೇಂದ್ರ ಬೆಳ್ತಂಗಡಿಗೆ 19 ಕಿ.ಮೀ. ಹಾಗೂ ಮೂಡಬಿದಿರೆಗೆ 20 ಕಿ.ಮೀ. ಹಾಗೂ ನಾರಾವಿಗೆ 18 ಕಿ.ಮೀ. ಅಂದರೆ ಹೆಚ್ಚುಕಮ್ಮಿ ಇದು ಈ ಮೂರು ಸ್ಥಳಗಳ ಮಧ್ಯಭಾಗದಲ್ಲಿದೆ. ಧರ್ಮಸ್ಥಳಕ್ಕೆ ಇಲ್ಲಿಂದ 35 ಕಿ.ಮೀ.
ಏನೇನು ಅಗತ್ಯ?
ಇಕ್ಕಟ್ಟಾದ ಈ ಜಂಕ್ಷನ್‌ನಲ್ಲಿ ಹಲವು ಮೂಲ ಸೌಲಭ್ಯಗಳು ಬರಬೇಕಿವೆ. ಅದಕ್ಕೆ ಆಗಬೇಕಿರುವ ಮೊದಲ ಕೆಲಸ ಸ್ಥಳಾವಕಾಶ ರೂಪಿಸುವುದು. ಮುಖ್ಯವಾಗಿ ಬಸ್ ತಂಗುದಾಣ, ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಶೀಘ್ರ ಬೇಕು. ಸದ್ಯ 100 ಮೀ. ದೂರದಲ್ಲಿರುವ ನಾರಾವಿ ತಿರುವು ಸಮೀಪ ಅಥವಾ ಬಂಟ್ವಾಳ ತಿರುವು ರಸ್ತೆ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ತೆರಳಬೇಕು. ಇಲ್ಲಿ ಹೆದ್ದಾರಿ ಪದೇ ಪದೇ ಹೊಂಡ ಬೀಳುವುದರಿಂದ ಕಾಂಕ್ರೀಟ್ ಆಗಬೇಕೆನ್ನುವುದು ಜನರ ಬೇಡಿಕೆ. ಕಸ ಸಂಗ್ರಹ ತೊಟ್ಟಿ, ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ.
ಹೆಸರಿಗೆ ಇದು ಹೆದ್ದಾರಿಯಾದರೂ ಸಾಕಷ್ಟು ಅಗಲವಾಗಿಲ್ಲ. ರಸ್ತೆಯ ಒಂದು ಬದಿಯಲ್ಲಿ ಕಾಂಪ್ಲೆಕ್ಸ್‌ಗಳಿವೆ. ಮತ್ತೂಂದು ಬದಿ ಫಲ್ಗುಣಿ ನದಿ ಹರಿಯುತ್ತಿದೆ. ನದಿ ಬದಿಗೆ ಕಾಂಕ್ರೀಟ್ ತಡೆ ನಿರ್ಮಿಸಿ ಹೆದ್ದಾರಿಯನ್ನು ಅಗಲಗೊಳಿಸಿ ಇನ್ನುಳಿದ ಮೂಲಸೌಕರ್ಯ ಕಲ್ಪಿಸಿದರೆ ಈ ಜಂಕ್ಷನ್ ಪ್ರಮುಖ ಆರ್ಥಿಕ ಚಟುವಟಿಕೆಯ ಕೇಂದ್ರವಾಗಲು ಸಾಧ್ಯ.
ಆರ್ಥಿಕ ಚಟುವಟಿಕೆ
ಜಂಕ್ಷನ್ ಬಳಿ ಖಾಸಗಿ ಪ್ರಾಥಮಿಕ ಶಾಲೆ, ನವಚೇತನ ವಿಶೇಷ ಶಾಲೆ, ರಾಷ್ಟ್ರೀಕೃತ ಬ್ಯಾಂಕ್, ಎಟಿಎಂ, ಮೂರು ಸಹಕಾರಿ ಸಂಘಗಳು, ಕ್ಯಾಂಪ್ಕೊ ಶಾಖೆ, ಎರಡು ವೈದ್ಯಕೀಯ ಕ್ಲಿನಿಕ್‌ಗಳು, ಎರಡು ಸಭಾಭವನಗಳು ಹಾಗೂ ಒಂದು ಹಣಕಾಸು ಸಂಸ್ಥೆ ಇದೆ. ಭಜನಾ ಮಂದಿರ, ಕ್ರಿಸ್ತರಾಜ ದೇವಾಲಯ ಹಾಗೂ ಮಸೀದಿಯೂ ಸಮೀಪದಲ್ಲೇ ಇವೆ.
ದಿನವೊಂದಕ್ಕೆ ಖಾಸಗಿ ಬಸ್ಸುಗಳು ಸುಮಾರು 60ಕ್ಕೂ ಅಧಿಕ ಬಾರಿ ಮತ್ತು ಕೆಎಸ್‌ಆರ್‌ಟಿಸಿ ಬಸ್ಸುಗಳು ಸುಮಾರು 15 ಬಾರಿ ಈ ಜಂಕ್ಷನ್ ಮೂಲಕ ಹಾದುಹೋಗುತ್ತವೆ. ಎಲ್ಲ ವೇಗದೂತ ಕೆಎಸ್‌ಆರ್‌ಟಿಸಿ ಬಸ್ ಗಳಿಗೂ ಇಲ್ಲಿ ನಿಲುಗಡೆ ಇದೆ. ನೂರಾರು ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಮೂಡಬಿದಿರೆ ಹಾಗೂ ಬೆಳ್ತಂಗಡಿಗೆ ತೆರಳಲು ಇಲ್ಲಿ ಬಸ್ ಕಾಯುತ್ತಾರೆ.
ದೂರದ ಉಡುಪಿ, ಬೆಳಗಾವಿ, ಅಂಕೋಲ, ಬೆಂಗಳೂರು, ಬಾಗಲಕೋಟೆ, ತಿರುಪತಿ, ಮೈಸೂರು ಹಾಗೂ ಇನ್ನಿತರ ಕಡೆಗೆ ನೇರ ವೋಲ್ವೊ ಬಸ್ ಸಂಚಾರ ಇರುವುದರಿಂದ ತಡರಾತ್ರಿವರೆಗೂ ಸಕ್ರಿಯವಾಗಿರುತ್ತದೆ. ಬೆಳ್ತಂಗಡಿ ಕಡೆಗೆ ಸಂಚರಿಸುವವರಿಗೆ ಸಣ್ಣದಾದ ಬಸ್ ತಂಗುದಾಣ ಇದೆ. ಆದರೆ ಮೂಡಬಿದಿರೆ ಭಾಗಕ್ಕೆ ತೆರಳುವವರಿಗೆ ಅಂಗಡಿ ಬದಿಯೇ ಆಸರೆ. ಹೀಗಾಗಿ ಕುಡಿಯುವ ನೀರು, ಶೌಚಾಲಯ ಇತ್ಯಾದಿ ಮೂಲಸೌಕರ್ಯ ಸಹಿತ ಬಸ್ ತಂಗುದಾಣ ಇಲ್ಲಿನ ತುರ್ತು ಆವಶ್ಯಕತೆ.
ಮಾರ್ಗಸೂಚಿ ಬೇಕು!
ಎದ್ದುಕಾಣುವ ಮಾರ್ಗಸೂಚಿಯಾಗಲೀ, ವೃತ್ತವಾಗಲೀ ಇಲ್ಲದೆ ಮೂಡಬಿದಿರೆಯಿಂದ ನೇರವಾಗಿ ಬರುವ ವಾಹನಗಳು ಈ ಜಂಕ್ಷನ್‌ನಲ್ಲಿ ದಾರಿ ತಪ್ಪುತ್ತವೆ. ಇಲ್ಲಿ ತಿರುವು ಇರುವುದೇ ಕಾರಣ. ನೇರವಾಗಿ ಬರುವ ವಾಹನಗಳಿಗೆ ತಿರುವಿನಲ್ಲಿರುವ ಫಲ್ಗುಣಿ ನದಿಯ ಸೇತುವೆ ಗೋಚರಿಸುವುದಿಲ್ಲ. ಹೀಗಾಗಿ ಪ್ರತಿದಿನವೂ ಹತ್ತಾರು ವಾಹನಗಳು ನೇರವಾಗಿ ನಾರಾವಿ ರಸ್ತೆಗೆ ಮುನ್ನುಗ್ಗುತ್ತವೆ. ಇದು ಅಪಘಾತಗಳಿಗೂ ಕಾರಣ ಆಗಿದೆ. ರಸ್ತೆ ಅಗಲಗೊಳಿಸಿ ವೃತ್ತ ನಿರ್ಮಾಣ ಇದಕ್ಕೆ ಪರಿಹಾರ ಎನ್ನುವುದು ಜನರ ಅಭಿಪ್ರಾಯ.
ಪಾರ್ಕಿಂಗ್ ಸ್ಥಳ ಅಗತ್ಯ
ಇಕ್ಕಟ್ಟಾದ ಜಂಕ್ಷನ್‌ನಲ್ಲಿ ವಾಹನ ಪಾರ್ಕಿಂಗ್‌ಗೆ ಜಾಗವಿಲ್ಲ. ಅಂಗಡಿಗಳ ಮುಂಭಾಗದಲ್ಲೇ ಬಾಡಿಗೆ ಮತ್ತಿತರ ವಾಹನಗಳು ನಿಲುಗಡೆಯಾಗುತ್ತವೆ. ಜೀಪ್, ಟೆಂಪೋ ಪಾರ್ಕಿಂಗ್ ಇದ್ದರೂ ಇನ್ನಷ್ಟು ವ್ಯವಸ್ಥಿತವಾಗಿ ಆಗಬೇಕು.
ಸಂಪರ್ಕ ಗ್ರಾಮಗಳು
ಕರಿಮಣೇಲು, ಗಾಂ ನಗರ, ಪಡ್ಡಂದಡ್ಕ, ಕುರ್ಲೊಟ್ಟು, ಪೆರಿಂಜೆ, ಹೊಸಂಗಡಿ, ಪರಾರಿ, ಮೂಡುಕೋಡಿ, ಉಂಬೆಟ್ಟು, ನಡ್ತಿಕಲ್ಲು, ಕೊಪ್ಪದಬಾಕಿಮಾರು, ಅಂಡಿಂಜೆ, ಬಜಿರೆ, ಮುದ್ದಾಡಿ, ಗುಂಡೂರಿ, ಹೊಸಪಟ್ಣ ಗ್ರಾಮಗಳ ಜನರು ವೇಣೂರು ಜಂಕ್ಷನನ್ನು ಅವಲಂಬಿಸುತ್ತಾರೆ.
ಜಾಗದ ಕೊರತೆ
ಜಂಕ್ಷನ್‌ನಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಜಾಗದ ಕೊರತೆ ಇದೆ. ಬಸ್ ನಿಲ್ದಾಣ ಇದೆ, ಮತ್ತೊಂದು ಬದಿಯಲ್ಲಿ ನದಿ ಪರಂಬೋಕು ಬರುತ್ತದೆ. ತಂಗುದಾಣದ ಕಟ್ಟಡಕ್ಕೆ ಜಾಗ ಸಾಲದು. ಅನುದಾನ ದೊರೆತರೆ ತಡೆಗೋಡೆ ನಿರ್ಮಿಸಿ ಪಿಲ್ಲರ್ ಹಾಕಿ ನಿರ್ಮಿಸಬಹುದು. ಕುಡಿಯುವ ನೀರಿನ ಒದಗಣೆಗೆ ಆದ್ಯತೆ ನೀಡುತ್ತೇವೆ. ಮುಖ್ಯ ಜಂಕ್ಷನ್‌ನಲ್ಲಿ ಬಸ್ ನಿಲ್ದಾಣ ಶೀಘ್ರ ನಿರ್ಮಾಣ ಆಗಲಿದ್ದು , ಬಳಿಕ ಒತ್ತಡ ಕಡಿಮೆಯಾಗಬಹುದು.
– ಕೆ. ವೆಂಕಟಕೃಷ್ಣರಾಜ
ಪಿಡಿಒ, ವೇಣೂರು ಗ್ರಾ.ಪಂ.
ಪದ್ಮನಾಭ ವೇಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.