ಪಿಡಿಒ ಬದಲಾಯಿಸಲು ಗ್ರಾಮಸ್ಥರ ಆಗ್ರಹ
ಬಾರ್ಯ ಗ್ರಾಮ ಪಂಚಾಯತ್ ಗ್ರಾಮಸಭೆ
Team Udayavani, Apr 24, 2022, 10:12 AM IST
ಉಪ್ಪಿನಂಗಡಿ: ಗ್ರಾಮಸ್ಥರಿಗೆ ಕಾನೂನಿನ ಪಾಠ ಹೇಳಿ ಕರ್ತವ್ಯ ಅವಧಿಗೆ ತಡವಾಗಿ ಬರುತ್ತಿದ್ದ ಗ್ರಾ.ಪಂ. ಪಿಡಿಒವನ್ನು ತತ್‌ಕ್ಷಣ ಬದಲಾಯಿಸಿ ಎಂದು ಬಾರ್ಯ ಗ್ರಾ. ಪಂ. ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪಟ್ಟು ಹಿಡಿದರು.
ಬಾರ್ಯ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯ ನೋಡಲ್ ಅಧಿಕಾರಿಯಾಗಿ ವಿರೂಪಾಕ್ಷಪ್ಪ ಕಾರ್ಯ ನಿರ್ವಹಿಸಿದರೆ, ಗ್ರಾ.ಪಂ. ಅಧ್ಯಕ್ಷೆ ಉಷಾ ಶರತ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ. ಮಾಜಿ ಸದಸ್ಯ ಬಿ.ಕೆ. ಸುಲೈಮಾನ್ ಮಾತನಾಡಿ, ಎಲ್ಲ ಕಾನೂನು ಹೇಳುವ ಪಿಡಿಒ ಗಣರಾಜ್ಯ ದಿನದಂದು ಧ್ವಜಾರೋಹಣ ಯಾಕೆ ನೆರವೇರಿಸಿಲ್ಲ? ದಿನ ನಿತ್ಯ ಕಚೇರಿಗೆ ನಿಗದಿತ ಸಮಯಕ್ಕೆ ಬಾರದೆ ಗ್ರಾಮ ಸ್ಥರಿಗೆ ತೊಂದರೆ ಕೊಡುತ್ತಿದ್ದಾರೆ. ಕೆಲಸ ನಿಭಾಯಿಸಲು ಸಾಧ್ಯವಾಗದಿದ್ದರೆ ವರ್ಗಾವಣೆ ಮಾಡಿಕೊಳ್ಳಬಹುದು ಎಂದರು.
ದಾರಿದೀಪ ಅಳವಡಿಸುವಲ್ಲಿ ತಾರತಮ್ಯ ಯಾಕೆ? ಸಧರ್ಮಗಿರಿ ತಿರುವಿನಲ್ಲಿ ಈ ಹಿಂದೆ ಹಲವು ಜೀವಗಳು ಬಲಿಯಾಗಿದ್ದು, ಊರಿನವರು ಹಂಪ್ಸ್ ಹಾಕಿದರೂ ದಾರಿದೀಪ ಅಳವಡಿಸದೇ ಖಾಸಗಿ ವ್ಯಕ್ತಿಯ ಜಮೀನಿಗೆ ತೆರಳುವಲ್ಲಿ ಅಳವಡಿಸಿರುವುದು ಯಾಕೆ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.
ಬಾರ್ಯ ಸಿಎ ಬ್ಯಾಂಕ್ ಉಪಾಧ್ಯಕ್ಷ ಪ್ರವೀಣ ರೈ ಮಾತನಾಡಿ, ಏಕ ವಿನ್ಯಾಸ ಭೂಪರಿವರ್ತನೆ ಅನು ಮೋದನೆ ಯನ್ನು ಜಿಲ್ಲಾಮಟ್ಟದ ಇಲಾಖೆಗೆ ವರ್ಗಾಯಿಸಿರುವುದರಿಂದ ತೊಂದರೆಯಾಗಿದೆ. ಸಣ್ಣ ಪುಟ್ಟ ಮನೆಗಳ ನಿರ್ಮಾಣಕ್ಕೆ ಏಕ ವಿನ್ಯಾಸ ಇಲ್ಲದೆ ಸಾಲ ಪಡೆಯಲು ಅಸಾಧ್ಯವಾಗಿದೆ. ಈ ಬಗ್ಗೆ ಪರಿಹಾರ ಕಂಡುಕೊಳ್ಳಲಾಗಿಲ್ಲ ಎಂದರು.
ಕೆಲವೊಂದು ನಿರ್ಜನ ಪ್ರದೇಶಗಳಲ್ಲಿ ರಾತ್ರಿ ಗಾಂಜಾ ವ್ಯವಹಾರ ನಿರಂತರ ನಡೆಯುತ್ತಿದ್ದು ಹದಿಹರೆಯದವರು ಬಲಿಯಾಗುತ್ತಿದ್ದಾರೆ. ತಡರಾತ್ರಿ ಅಪರಿಚಿತ ವ್ಯಕ್ತಿಗಳು ಕೇರಳ ಮೂಲದ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪೊಲೀಸ್ ಇಲಾಖೆ ನಿಗಾವಹಿಸಬೇಕು ಎಂದು ಬಿ.ಕೆ. ಸುಲೈಮಾನ್ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಉಪ್ಪಿನಂಗಡಿ ಠಾಣೆ ಹೆಡ್ ಕಾನ್ಸ್‌ಸ್ಟೆಬಲ್ ಕುಶಾಲಪ್ಪ ಅಂತಹ ಪ್ರಕರಣ ಕಂಡು ಬಂದರೆ 112ಕ್ಕೆ ಕರೆ ಮಾಡಿ ಎಂದರು. ಉಪಾಧ್ಯಕ್ಷ ಪಿ.ಕೆ.ಉಸ್ಮಾನ್, ಸದಸ್ಯರಾದ ಧರ್ಣಪ್ಪ ಗೌಡ, ವಸಂತ, ಜಯಶ್ರೀ, ಪವಿತ್ರ, ಕಮಲಾಕ್ಷ, ಬಾಲಕೃಷ್ಣ ಶೆಟ್ಟಿ, ಸರೋಜಿನಿ, ಯಶೋದಾ, ನಝಿಯಾ, ಮೈಮುನಾ, ನವೀನ ಪ್ರಸಾದ್, ಅನುರಾಗ್, ಪುಷ್ಪಾ, ಪ್ರಶಾಂತ್ ಪೈ, ರಾಜೇಶ ರೈ, ನವೀನ ರೈ, ಅಶ್ರಫ್, ಆದಂ, ಜಯಪೂಜಾರಿ, ಗೀತಾ ಎಂ., ವಿಠಲ ಬಂಗೇರ ಉಪಸ್ಥಿತರಿದ್ದರು. ಪಿಡಿಒ ಸುಶೀಲಾ ನಿರೂಪಿಸಿದರು.
ಹಳ್ಳ ಹಿಡಿದ ತನಿಖೆ
ಅಕ್ರಮ ವ್ಯವಹಾರ ಸಮಗ್ರ ತನಿಖೆಗೆ ಒತ್ತಾಯಿಸಿ ವರ್ಷ ಕಳೆದರೂ ಈ ತನಕವು ಸಮಗ್ರ ತನಿಖೆ ವರದಿ ಬಂದಿಲ್ಲ. ತನಿಖೆ ಹಳ್ಳ ಹಿಡಿಯುವಂತಾಗಿದೆ ಎಂದು ಟಿ.ಕೆ. ಸುಲೈಮಾನ್ ಹೇಳಿದರು.
ಮಾಹಿತಿ ಕೊರತೆ
ಗ್ರಾ. ಪಂ.ಮಾಜಿ ಅಧ್ಯಕ್ಷ ರಾಜೇಶ ರೈ ಮಾತನಾಡಿ, ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಅಂತರ್ಜಲ ವೃದ್ಧಿಯ ಯೋಜನೆಯ ಮಾಹಿತಿ ಕೊರತೆ ಇದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.