ವಿಟ್ಲ: ನಾಪತ್ತೆಯಾದಾತನ ಮೃತದೇಹ ಗುಡ್ಡದಲ್ಲಿ ಪತ್ತೆ
Team Udayavani, Dec 22, 2022, 1:41 AM IST
ವಿಟ್ಲ: ಮೈಸೂರಿಗೆ ಕೆಲಸಕ್ಕೆಂದು ಮನೆಯಲ್ಲಿ ಹೇಳಿ ಕಳೆದ ಅ. 25 ರಂದು ತೆರಳಿದ್ದ ಪುಣಚ ಗ್ರಾಮದ ಮೊಟ್ಟೆತ್ತಡ್ಕ-ಕೆದುಮೂಲೆ ನಿವಾಸಿ ಯುವಕ, ದಿ| ವೀರಪ್ಪ ನಾಯ್ಕ ಅವರ ಪುತ್ರ ಕಮಲಾಕ್ಷ (32) ಅವರ ಅಸ್ಥಿಪಂಜರ ಬುಧವಾರ ಪುಣಚ ಗ್ರಾಮದ ನೆಲ್ಲಿಗುಡ್ಡೆಯಲ್ಲಿ ಪತ್ತೆಯಾಗಿದೆ.
ಗ್ರಾಮದ ನೆಲ್ಲಿಗುಡ್ಡೆ ಜರಿಮೂಲೆ ಯಲ್ಲಿ ಮೃತದೇಹ, ಮೊಬೈಲ್ ಮತ್ತು ಹಗ್ಗ ಪತ್ತೆಯಾಗಿತ್ತು. ಅಪರಿಚಿತ ವ್ಯಕ್ತಿಯ ದೇಹ ಮತ್ತು ಕೊಳೆತು ಅಸ್ಥಿಪಂಜರ ಮಾತ್ರ ಕಾಣುತ್ತಿತ್ತು. ಆದರೆ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡ ಬಳಿಕ ಮೃತ ಯುವಕನ ಬಗ್ಗೆ ಮಾಹಿತಿ ಸಿಗಲಾರಂಭವಾಯಿತು. ತಾಯಿ ರೇವತಿ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಮಗ ಕಮಲಾಕ್ಷ ಅ. 25ರಂದು ಮನೆಯಲ್ಲಿ ತಾನು ಮತ್ತು ಮಗಳು ಇರುವಾಗ ಬೆಳಗ್ಗೆ 10 ಗಂಟೆಗೆ ಮೈಸೂರಿಗೆ ಕೆಲಸಕ್ಕೆಂದು ಹೋಗುವುದಾಗಿ ಹೇಳಿ ಒಂದು ಜತೆ ಬಟ್ಟೆ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಆತ ಯಾವುದೇ ರೀತಿಯಲ್ಲಿ ಸಂಪರ್ಕಿಸಲಿಲ್ಲ. ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆದರೆ ಆತ ಮನೆಗೆ ಬರಬಹುದೆಂದು ನಿರೀಕ್ಷಿಸಿ ಯಾವುದೇ ದೂರು ನೀಡದೇ ಸುಮ್ಮನೆ ಇದ್ದೆವು ಎಂದಿದ್ದಾರೆ.
ಮೃತದೇಹದ ಬಳಿ ತೆರಳಿ ಅವರ ತಾಯಿ ಮತ್ತು ಸಹೋದರಿ ಪರಿಶೀಲಿಸಿದ್ದು, ಕಮಲಾಕ್ಷ ಧರಿಸಿದ ಬಟ್ಟೆ, ಚಪ್ಪಲಿ, ಫೋನ್ ಅನ್ನು ಗುರುತಿಸಿದ್ದಾರೆ. ಇದರ ಆಧಾರದಲ್ಲಿ ಕಮಲಾಕ್ಷನ ಮೃತದೇಹ ಎಂದು ಗುರುತಿಸಲಾಗಿದೆ.
ಕಮಲಾಕ್ಷ ಯಾವುದೋ ವಿಚಾರಕ್ಕೆ ಮನೆಯಿಂದ ಹೋದವನು ನೆಲ್ಲಿಗುಡ್ಡೆ ಕಾಡು ಪ್ರದೇಶದಲ್ಲಿ ಅಕೇಶಿಯಾ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವಿಟ್ಲ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.