ವಿಟ್ಲ ಹಳೆ ಬಸ್ ನಿಲ್ದಾಣ: ರಿಕ್ಷಾಗಳಿಗೆ ಲಕ್ಷ್ಮಣ ರೇಖೆ
Team Udayavani, Sep 22, 2018, 12:02 PM IST
ವಿಟ್ಲ: ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಸಂಭವಿಸುವ ಟ್ರಾಫಿಕ್ ಜಂಜಾಟ ಹಾಗೂ ಅಕ್ರಮವಾಗಿ ನಿಲ್ದಾಣ ಪ್ರವೇಶಿಸುವ ಆಟೋ ರಿಕ್ಷಾಗಳನ್ನು ತಡೆಯುವ ಉದ್ದೇಶ ದಿಂದ ವಿಟ್ಲ ಪ.ಪಂ. ಆಟೋ ರಿಕ್ಷಾಗಳು ಸರದಿ ಸಾಲಲ್ಲಿ ಮುಂದುವರಿಯುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಅದಕ್ಕಾಗಿ ಕಬ್ಬಿಣದ ತಡೆಬೇಲಿ ಯನ್ನು ನಿರ್ಮಿಸಿದೆ. ಈ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರಗಿಸಲು ಪಂ. ಮುಂದಾಗಿದೆ.
ವಾಹನ ಜಂಜಾಟ
ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಟೂರಿಸ್ಟ್ ಕಾರುಗಳು, ಆಟೋ ರಿಕ್ಷಾಗಳು, ಖಾಸಗಿ ಬಸ್‌ಗಳು ತಂಗುತ್ತವೆ. ವಿಟ್ಲ ಪ.ಪಂ. ಕಚೇರಿಗೂ ಇದೇ ನಿಲ್ದಾಣದೊಳಗಿಂದಲೇ ಸಾಗಬೇಕು. ಬಸ್ ನಿಲ್ದಾಣದ ಮೂರು ದಿಕ್ಕಿನಲ್ಲಿಯೂ ಅಂಗಡಿ, ಹೊಟೇಲ್ ಇತ್ಯಾದಿ ವ್ಯಾಪಾರ ವಹಿವಾಟು ನಡೆಯುತ್ತದೆ. ಪರಿಣಾಮವಾಗಿ ವಾಹನ ದಟ್ಟಣೆ ಹೆಚ್ಚು. ಸಾರ್ವಜನಿಕರು ನಿತ್ಯವೂ ತೊಂದರೆ ಅನುಭವಿಸುತ್ತಿ ರುವುದು ಸತ್ಯ. ಇದಕ್ಕಾಗಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲೇಬೇಕಾದ ಅನಿವಾರ್ಯತೆಯಿತ್ತು.
ಅಕ್ರಮ ಪ್ರವೇಶ
ಹಳೆ ಬಸ್ ನಿಲ್ದಾಣದಲ್ಲಿ ಎರಡು ಕಡೆಗಳಲ್ಲಿ ಆಟೋ ರಿಕ್ಷಾಗಳು ನಿಲ್ಲುತ್ತಿವೆ. ವಿಟ್ಲ ಪ.ಪಂ. ವ್ಯಾಪ್ತಿಗೆ ಒಳಪಡದ ಹೊರಗಿನ ಹಲವು ರಿಕ್ಷಾಗಳು ಇಲ್ಲಿ ಪಾರ್ಕಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಹೊರಗಡೆಯ ಆಟೋ ರಿಕ್ಷಾಗಳು ಇಲ್ಲಿಗೆ ಅಕ್ರಮ ಪ್ರವೇಶ ಮಾಡುತ್ತಿರುವುದರಿಂದ, ಅಧಿಕೃತ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ ಎಂದು ಈ ಹಿಂದೆ ಆಟೋ ಚಾಲಕರು ಪ.ಪಂ.ಗೆ ಮನವಿ ಸಲ್ಲಿಸಿದ್ದರು. ಹಲವು ಬಾರಿ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಅನಧಿಕೃತ ರಿಕ್ಷಾ ಚಾಲಕರು ಪರಾರಿಯಾಗುತ್ತಿದ್ದರು.
ಕಬ್ಬಿಣದ ರಾಡ್
ಈ ಎಲ್ಲ ಸಮಸ್ಯೆಗಳನ್ನು ಮನಗಂಡ ವಿಟ್ಲ ಪ.ಪಂ. ಹಳೆ ಬಸ್ ನಿಲ್ದಾಣದ ಎರಡು ಕಡೆಗಳಲ್ಲಿ ರೇಲಿಂಗ್ (ಕಬ್ಬಿಣದ ರಾಡ್) ಹಾಕಿದೆ. ಇದರೊಳಗಡೆ ಎರಡು ಸಾಲು ಮಾತ್ರ ಆಟೋ ರಿಕ್ಷಾ ನಿಲ್ಲಿಸಲು ಸಾಧ್ಯವಾಗುತ್ತದೆ. ಹೆಚ್ಚುವರಿ ರಿಕ್ಷಾಗಳು ಇಲ್ಲಿ ನಿಲ್ಲುವಂತಿಲ್ಲ. ಒಂದು ವೇಳೆ ನಿಲ್ಲಿಸಿದರೆ ಪೊಲೀಸರು ದಂಡ ವಿಧಿಸುತ್ತಾರೆ. ದೂರವಾಣಿ ಕರೆ ಬಂದರೆ ಮಧ್ಯದಿಂದ ಹೋಗುವಂತಿಲ್ಲ. ಕ್ರಮ ಪ್ರಕಾರವೇ ಬಾಡಿಗೆಗೆ ತೆರಳಬೇಕು ಎಂಬ ನಿಯಮ ಇದರಿಂದ ಜಾರಿಯಾಗಲಿದೆ.
ಕೆಲವರ ಸ್ವಾಗತ
ಪ.ಪಂ. ಈ ನೂತನ ನಿಯಮವನ್ನು ಬಹಳಷ್ಟು ಮಂದಿ ಆಟೋ ಚಾಲಕರು ಸ್ವಾಗತಿಸಿದ್ದಾರೆ. ಕೆಲವು ಆಟೋ ಚಾಲಕರು ಈ ಹಿಂದೆ ನಾವು ಕಷ್ಟ ಅನುಭವಿಸುತ್ತಿದ್ದೆವು. ಈ ನಿಯಮ ನಮಗೆ ನ್ಯಾಯ ನೀಡಬಹುದು ಎಂದು ತಿಳಿದುಕೊಂಡಿದ್ದೇವೆ. ಎಲ್ಲರೂ ಸರದಿ ಸಾಲಿನಲ್ಲಿ ಸಾಗಬೇಕಾಗಿರುವುದರಿಂದ ಸೂಕ್ತ ವ್ಯವಸ್ಥೆ ನಿರೀಕ್ಷಿಸಲಾಗಿದೆ ಎನ್ನುತ್ತಾರೆ.
ಅಪಸ್ವರವೂ ಇದೆ
ಈ ಪದ್ಧತಿಗೆ ಕೆಲವು ಮಂದಿ ಆಟೋ ಚಾಲಕರ ಅಪಸ್ವರವೂ ಇದೆ. ಇದು ನಮ್ಮ ಹೊಟ್ಟೆಗೆ ಹೊಡೆಯುವ ತಂತ್ರವಾಗಿದೆ. ತುರ್ತು ಸಂದರ್ಭದ ಕರೆ ಬಂದಾಗ ನಮಗೆ ತೊಂದರೆಯಾಗುತ್ತದೆ. ಈ ಪದ್ಧತಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆಟೋ ಚಾಲಕರಲ್ಲಿ ಪರ-ವಿರೋಧ ಧ್ವನಿಗಳು ಕೇಳಿ ಬರುತ್ತಿರುವುದರಿಂದ ಈ ಯೋಜನೆಯ ಒಟ್ಟು ಫಲಿತಾಂಶ ಹೇಗಿರಬಹುದು ಎಂದು ಕಾದುನೋಡಬೇಕಾಗಿದೆ.
ರಿಕ್ಷಾಗಳ ಸಾಲು
ಅಪಸ್ವರದ ಎತ್ತಿದ ಕೆಲವು ರಿಕ್ಷಾ ಚಾಲಕರು ಪುತ್ತೂರು ಮುಖ್ಯರಸ್ತೆಯಲ್ಲಿ ಬಾಡಿಗೆ ಮಾಡಲು ಆರಂಭಿಸಿದ್ದಾರೆ. ಸಂತೆ ರಸ್ತೆಯ ಮುಂಭಾಗದಲ್ಲಿ ಆಟೋ ರಿಕ್ಷಾಗಳ ಸಂಖ್ಯೆ ಹೆಚ್ಚಾಗಿದೆ. ಪ್ರಮುಖ ರಸ್ತೆಯ ಬದಿಯಲ್ಲೇ ರಿಕ್ಷಾ ಸಾಲುಗಳು ಕಂಡುಬರುತ್ತಿದ್ದು, ಅದು ತಾತ್ಕಾಲಿಕವೇ ಅಥವಾ ಶಾಶ್ವತ ವ್ಯವಸ್ಥೆಯೇ ಎಂಬ ಬಗ್ಗೆ ಗೊಂದಲ ಆರಂಭವಾಗಿದೆ.
ಬಣ್ಣದ ಗೆರೆ ಹೋಯಿತು
ವಿಟ್ಲ ಪ.ಪಂ. ಈ ಹಿಂದೆ ಬಿಳಿ ಬಣ್ಣವನ್ನು ಎಳೆದು ರಿಕ್ಷಾಗಳು ಸರದಿ ಸಾಲಲ್ಲಿ ನಿಲ್ಲಿಸಿ, ಮುಂದುವರಿಯಲು ಸೂಚಿಸಿತ್ತು. ಕೆಲವು ಸಮಯಗಳ ಕಾಲ ಅದು ಮುಂದುವರಿದಿತ್ತು. ಪ. ಪಂ. ಮತ್ತು ಪೊಲೀಸ್ ಇಲಾಖೆ ಹಲವು ಪ್ರಯೋಗ ಮಾಡಿದ್ದರೂ ಪರಿಣಾಮ ಕಾರಿಯಾಗಿ ಜಾರಿಗೆ ಬಂದಿರಲಿಲ್ಲ.
ಸಂಘದ ಬೇಡಿಕೆ
ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕೆಂದು ಚಾಲಕ-ಮಾಲಕರ ಸಂಘದವರು ಮನವಿ ಸಲ್ಲಿಸಿದ್ದರು. ಪ.ಪಂ. ಪ್ರವೇಶಿಸುವ ಜಾಗದಲ್ಲೂ ಅಡ್ಡಾದಿಡ್ಡಿ ಆಟೋ ರಿಕ್ಷಾ ನಿಲ್ಲಿಸುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಈ ನೂತನ ಯೋಜನೆಯಿಂದ ವಾಹನ ದಟ್ಟಣೆ ಕಡಿಮೆಯಾಗಲಿದೆ.
– ಅರುಣ್ ಎಂ. ವಿಟ್ಲ
ಅಧ್ಯಕ್ಷರು, ವಿಟ್ಲ ಪ.ಪಂ.