ವಿಟ್ಲ ಪಶುವೈದ್ಯಆಸ್ಪ ತ್ರೆ: ಕಟ್ಟಡ ಕಾಮಗಾರಿ ಸ್ಥಗಿತ
Team Udayavani, Dec 29, 2017, 4:58 PM IST
ವಿಟ್ಲ: ವಿಟ್ಲ ಪಶುವೈದ್ಯ ಆಸ್ಪತ್ರೆ 14 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. ಆದರೆ ಈ ಪ್ರಮುಖ ಆಸ್ಪತ್ರೆಗೆ ಸಹಾಯಕ ನಿರ್ದೇಶಕರಿಲ್ಲ, ಸಿಬಂದಿಯಿಲ್ಲ. ಹೊಸ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಐದು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ.
ವಿಟ್ಲ, ವಿಟ್ಲಪಟ್ನೂರು, ವಿಟ್ಲ ಮುಟ್ನೂರು, ಇಡ್ಕಿದು, ಕುಳ, ಪುಣಚ, ಕೇಪು, ಅಳಿಕೆ, ಕೊಳ್ನಾಡು, ಸಾಲೆತ್ತೂರು, ಕನ್ಯಾನ, ಕರೋಪಾಡಿ, ಪೆರುವಾಯಿ, ಮಾಣಿಲ ಗ್ರಾಮಗಳಿಗೆ ಈ ಪಶುವೈದ್ಯ ಆಸ್ಪತ್ರೆಯ ವ್ಯಾಪ್ತಿಯಿದೆ. ಕೊಳ್ನಾಡಿನ ಕುಡ್ತಮುಗೇರು, ಕನ್ಯಾನ ಮತ್ತು ಪುಣಚ ಗ್ರಾಮದ ಪರಿಯಾಲ್ತಡ್ಕದಲ್ಲಿ ಉಪ ಕೇಂದ್ರಗಳಿವೆ. ವಿಟ್ಲದ ಸಹಾಯಕ ನಿರ್ದೇಶಕರಿಗೆ 2016ನೇ ಸಾಲಿನ ಸೆಪ್ಟಂಬರ್ ತಿಂಗಳಲ್ಲಿ ವರ್ಗಾವಣೆ ಆಗಿದೆ. ಆ ಬಳಿಕ ಹುದ್ದೆ ಖಾಲಿಯಿದೆ. ಕೇಪು ಗ್ರಾಮದ ಅಡ್ಯನಡ್ಕವನ್ನು ಕೇಂದ್ರವಾಗಿ ಇರಿಸಿಕೊಂಡು ಕೇಪು, ಪೆರುವಾಯಿ, ಮಾಣಿಲ ಗ್ರಾಮಗಳನ್ನು ಅಡ್ಯನಡ್ಕದ ಪಶು ವೈದ್ಯಾಧಿಕಾರಿ ಡಾ| ಪರಮೇಶ್ವರ ನಾಯ್ಕ ಅವರು ನೋಡಿಕೊಳ್ಳಬೇಕು. ಅವರಿಗೇ ವಿಟ್ಲದ ಪ್ರಭಾರ ವಹಿಸಲಾಗಿದೆ. ಎರಡೂ ಕಡೆ ಸಿಬಂದಿಯಿಲ್ಲ. ಒಬ್ಬರು ಪಶು ವೈದ್ಯಾಧಿಕಾರಿ ಮತ್ತು ಇಬ್ಬರು ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಇಷ್ಟೊಂದು ಗ್ರಾಮಗಳಿಗೆ ಓಡಾಡಬೇಕು. ಒಂದಿಬ್ಬರು ಗ್ರೂಪ್ ‘ಡಿ ‘ ಸಿಬಂದಿ ಇದ್ದಾರೆ. ಗುತ್ತಿಗೆ ಆಧಾರದಲ್ಲಿ ನಾಲ್ಕು ಮಂದಿಯಿದ್ದಾರೆ. ಅವರ ಗುತ್ತಿಗೆ ಡಿಸೆಂಬರ್‌ಗೆ ಕೊನೆಗೊಳ್ಳುತ್ತಿದೆ. ಮುಂದುವರಿಸಿದರೆ ಮಾತ್ರ ಇರುವ ಮೂರು-ನಾಲ್ಕು ಸಿಬಂದಿಯ ಭಾರ ಕಡಿಮೆಯಾಗುತ್ತದೆ.
ವಿಟ್ಲದಲ್ಲಿ ಔಷಧ ವಿತರಣೆ
ವಿಟ್ಲ ಆಸ್ಪತ್ರೆಯಲ್ಲಿ ಹಸುವಿನ ಅನಾರೋಗ್ಯ, ನಾಯಿ, ಕೋಳಿ, ಆಡು ಮತ್ತಿತರ ಸಾಕುಪ್ರಾಣಿಗಳ ಅನಾರೋಗ್ಯ ನಿವಾರಣೆಗೆ ಸರಕಾರದಿಂದ ಸಾಕಷ್ಟು ಔಷಧ ವಿತರಣೆ ಮಾಡಲಾಗುತ್ತಿದೆ. ಉಚಿತವಾಗಿ ಲಭ್ಯವಿದೆ. ಹೆಚ್ಚಿನ ಸಾರ್ವಜನಿಕರು, ಹೈನುಗಾರರು ಇವುಗಳ ಪ್ರಯೋಜನ ಪಡೆದು ಕೊಳ್ಳುತ್ತಾರೆ. ಆದರೆ ಔಷಧಿ ವಿತರಣೆಗೆ ಜಾನುವಾರು ಅಧಿಕಾರಿ, ಪರೀಕ್ಷಕರು ವ್ಯವಸ್ಥೆ ಮಾಡುತ್ತಾರೆ. ಸ್ಥಳದಲ್ಲಿ ಆಗಬೇಕಾದ ಚಿಕಿತ್ಸೆಗೆ ಕರ್ತವ್ಯದಲ್ಲಿರುವ ಸಿಬಂದಿ ಭೇಟಿ ನೀಡಿ, ಈ 14 ಗ್ರಾಮಗಳನ್ನು ನಿಭಾಯಿಸುವ ವಿಧಾನ ಸಾಕಷ್ಟು ಮೆಚ್ಚುಗೆ ಪಡೆದಿದೆ. ಆದರೆ ಒತ್ತಡದ ಪರಿಣಾಮ ಇವರೆಲ್ಲರ ಆರೋಗ್ಯ ಏರುಪೇರಾಗುತ್ತಿದೆ.
50 ಸೆಂಟ್ಸ್ ಜಾಗ
ವಿಟ್ಲ ಪಶುವೈದ್ಯ ಆಸ್ಪತ್ರೆಗೆ 50 ಸೆಂಟ್ಸ್ ಜಾಗವಿದೆ. ಅದರಲ್ಲಿ ಪುರಾತನ ಹಂಚಿನ ಮಾಡಿನ ಕಟ್ಟಡವಿದೆ. ಕುಡ್ತಮುಗೇರು ಕೇಂದ್ರಕ್ಕೆ ಸರಕಾರದಿಂದ ಮಂಜೂರಾದ 5 ಸೆಂಟ್ಸ್ ಜಾಗವಿದೆ. ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪುಣಚ ಮತ್ತು ಅಡ್ಯನಡ್ಕದಲ್ಲಿಯೂ ಸ್ವಂತ ಜಾಗವಿದೆ. ಅಡ್ಯನಡ್ಕದಲ್ಲಿ ಕಟ್ಟಡವಿದೆ. ಕನ್ಯಾನದಲ್ಲಿ ಗ್ರಾ.ಪಂ. ಕಟ್ಟಡದಲ್ಲಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.
ಕಟ್ಟಡ ನಿರ್ಮಾಣ ಸ್ಥಗಿತ
ವಿಟ್ಲ ಪಶುವೈದ್ಯ ಆಸ್ಪತ್ರೆಗೆ 18.90 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. 14 ಗ್ರಾಮಗಳ ಪ್ರಮುಖ ಕೇಂದ್ರವಾಗಿರುವ ವಿಟ್ಲಕ್ಕೆ ಈ ಕಟ್ಟಡ ಚಿಕ್ಕದಾಯಿತೆಂಬ ಅಭಿಪ್ರಾಯ ಕೃಷಿಕರದ್ದು. ಜತೆಗೆ, ಅದರ ಕಾಮಗಾರಿಯೂ ಐದು ತಿಂಗಳಿಂದ ಸ್ಥಗಿತಗೊಂಡಿದೆ. ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲೆಪ್‌ಮೆಂಟ್ ಲಿಮಿಟಿಡ್ (ಕೆಆರ್‌ಐಡಿಎಲ್) ಈ ಕಟ್ಟಡದ ಗುತ್ತಿಗೆದಾರರು. ಆರ್‌ಐಡಿಎಫ್ ಸ್ಕೀಮ್‌ನಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಕೆಆರ್‌ಐಡಿಎಲ್ ಉಪಗುತ್ತಿಗೆದಾರರನ್ನು ನೇಮಿಸಿದ್ದು, ಅನುದಾನ ಬಿಡುಗಡೆ ಆಗದಿರುವುದೇ ಕಾಮಗಾರಿ ಸ್ಥಗಿತಗೊಳಿಸಲು ಕಾರಣ ಎಂಬ ಮಾತು ಕೇಳಿಬರುತ್ತಿದೆ.
ಗ್ರಾಮ 14, ಚಿಕಿತ್ಸಕರು ಮೂವರು
ಹಿರಿಯ ಪಶು ವೈದ್ಯಕೀಯ ಪರೀಕ್ಷಕರೊಬ್ಬರಿಗೆ ಕುಡ್ತಮುಗೇರು ಕೇಂದ್ರಕ್ಕೆ 3 ದಿನ ಮತ್ತು ವಿಟ್ಲಕ್ಕೆ 3 ದಿನ ಓಡಾಡಬೇಕು. ಕನ್ಯಾನದ ಪರೀಕ್ಷಕರು 2 ದಿನ ಪುಣಚಕ್ಕೆ ಓಡಾಡಬೇಕು. ಪಶು ವೈದ್ಯಾಧಿಕಾರಿ ಮತ್ತು ಹಿರಿಯ ಪಶುವೈದ್ಯಕೀಯ ಪರೀಕ್ಷಕರು 14 ಗ್ರಾಮಗಳಿಗೂ ಓಡಾಡಬೇಕು. ಜಾನುವಾರುಗಳ ಆರೋಗ್ಯ ಕಾಪಾಡಲು ಇವರು ಹಗಲು ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸಬೇಕು. ಸರಕಾರದ ಕೆಲವೊಂದು ಯೋಜನೆಗಳಿಗೆ ಸಂಬಂಧಪಟ್ಟಂತೆ
ಸಹಾಯಧನ ಅರ್ಜಿ ಆಹ್ವಾನಿಸಿ, ಅವುಗಳ ಮಾರ್ಗದರ್ಶನ ಮಾಡಬೇಕು. ದಾಖಲೆಗಳನ್ನು ಸಿದ್ಧಪಡಿಸಬೇಕು. ಹೈನು
ಗಾರರ, ಸಾಕುಪ್ರಾಣಿಗಳ ಮಾಲಕರ ದೂರವಾಣಿ ಕರೆಗಳನ್ನು ಸ್ವೀಕರಿಸಿ, ತತ್ ಕ್ಷಣದ ಪರಿಹಾರ ಸೂಚಿಸಬೇಕು. ಕಠಿನ
ಪರಿಸ್ಥಿತಿಯಲ್ಲಿ ಸ್ಥಳಕ್ಕೆ ಧಾವಿಸಬೇಕು. ಹುಚ್ಚು ನಾಯಿ ನಿರೋಧಕ ಲಸಿಕೆ ಹಾಕಲು ಶಿಬಿರಗಳನ್ನು ಆಯೋಜಿಸಬೇಕು. ಜತೆಗೆ 14 ಗ್ರಾಮಗಳ ಗ್ರಾಮಸಭೆಗಳಲ್ಲಿ ವರ್ಷಕ್ಕೆ ಎರಡು ಬಾರಿ ಭಾಗಿಯಾಗಬೇಕು. ಪ್ರತೀ ತಿಂಗಳ ಸಭೆ, ವಿಶೇಷ ಸಭೆಗಳಲ್ಲಿ ಭಾಗವಹಿಸಬೇಕು.
ಕೆಆರ್‌ಐಡಿಎಲ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿಲ್ಲ ಎಂಬ ಆರೋಪವಿದೆ. ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುವುದು, ಸಿಬಂದಿ ಕೊರತೆಗಳ ಬಗ್ಗೆ ಮೇಲಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ.
– ಡಾ| ಹೆನ್ರಿ ಲಸ್ರಾದೋ
ಸಹಾಯಕ ನಿರ್ದೇಶಕರು, ಬಂಟ್ವಾಳ ತಾಲೂಕು ಪಶುಸಂಗೋಪನೆ ಇಲಾಖೆ
ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.