ಮತದಾನ ಜವಾಬ್ದಾರಿ, ಸಾಮಾಜಿಕ ಹೊಣೆಗಾರಿಕೆ
Team Udayavani, May 6, 2018, 1:14 PM IST
ಪುತ್ತೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಪ್ರಮುಖ ಪ್ರಕ್ರಿಯೆ. ಈ ಬಾರಿ ಎಲ್ಲರನ್ನೂ ಒಳಪಡಿಸಿದ ಚುನಾವಣೆಗಾಗಿ ಚುನಾವಣಾ ಆಯೋಗವು ಅನೇಕ ಪೂರಕ ಕ್ರಮಗಳನ್ನು ಕೈಗೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ| ಎಂ.ಆರ್. ರವಿ ಹೇಳಿದರು. ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗಾಗಿ ಶನಿವಾರ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ ಮತದಾನ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಉತ್ತಮ ಸಮಾಜವನ್ನು ಕಟ್ಟಲು ಒಂದು ದಿನದಲ್ಲಿ ಅಥವಾ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಮತದಾನದ ಅಸ್ತ್ರವನ್ನು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಬಳಸಿದಾಗ ಮಾತ್ರ ಉತ್ತಮ ಆಡಳಿತ ವ್ಯವಸ್ಥೆಯನ್ನು ನಿರೀಕ್ಷೆ ಮಾಡಲು ಸಾಧ್ಯ. ಮತದಾನ ವೆಂಬುದು ಹಕ್ಕು, ಕರ್ತವ್ಯಕ್ಕಿಂತಲೂ ನಮ್ಮ ಜವಾಬ್ದಾರಿ ಹಾಗೂ ಸಾಮಾಜಿಕ ಹೊಣೆ ಗಾರಿಕೆಯಾಗಿದೆ. ಜವಾಬ್ದಾರಿ ಇಲ್ಲದವರು ಮಾತ್ರ ನುಣುಚಿ ಕೊಳ್ಳವುದು. ಸದೃಢ ದೇಶ ಕಟ್ಟುವ ಅವಕಾಶದಿಂದ ನಾವೇ ವಂಚಿತರಾಗಬಾರದು ಎಂದು ಹೇಳಿದರು.
ಶೇ. 90 ಮತದಾನಕ್ಕಾಗಿ
ರಾಜ್ಯದಲ್ಲೇ ದ.ಕ. ಜಿಲ್ಲೆ ಅತ್ಯಂತ ಸುಶಿಕ್ಷಿತರನ್ನು ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ. 75ರಷ್ಟು ಮಾತ್ರ ಮತದಾನವಾಗಿದೆ. ಅಂದರೆ ಶೇ. 25ರಷ್ಟು ಮಂದಿ ಮತ ಚಲಾವಣೆ ನಡೆಸಿಲ್ಲ. ಮಂಗಳೂರು ದಕ್ಷಿಣದಲ್ಲಿ ಶೇ. 65ರಷ್ಟು ಮಾತ್ರ ಮತದಾನವಾಗಿದೆ. ಜಿಲ್ಲೆಯಲ್ಲಿ ಶೇ. 90 ಮತದಾನವಾಗಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ಎಲ್ಲ ಪ್ರಯತ್ನ, ಜಾಗೃತಿಯನ್ನು ನಡೆಸುತ್ತಿದೆ. ಇದಕ್ಕೆ ಮತದಾರರ ಬೆಂಬಲ ಅಗತ್ಯ ಎಂದು ಹೇಳಿದರು.
ವಿಶೇಷ ವ್ಯವಸ್ಥೆ
ಈ ಬಾರಿ ಚುನಾವಣೆಯಲ್ಲಿ ಹಿರಿಯ ನಾಗರಿಕರು, ಅಂಗವಿಕಲರಿಗೆ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಅವರನ್ನು ಪ್ರೀತಿ, ಗೌರವದಿಂದ ನಡೆದುಕೊಳ್ಳಲು ಸಿಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಕನ್ನಡಕದ ಆವಶ್ಯಕತೆ ಇರುವ ಹಿರಿಯರಿಗೆ ಭೂತಕನ್ನಡಿ ವಿತರಿಸಲಾಗುತ್ತದೆ. 135 ಗ್ರಾ.ಪಂ. ವ್ಯಾಪ್ತಿಯಲ್ಲಿ ಮತದಾನ ಕೇಂದ್ರಕ್ಕೆ ಬರಲು ಸಮಸ್ಯೆಯಾಗುವವರಿಗೆ ಮನೆಗೆ ಹೋಗಿ ಕರೆತರಲು ವಾಹನದ ವ್ಯವಸ್ಥೆ ಮಾಡಲಾಗುತ್ತದೆ. 310 ಮತಗಟ್ಟೆಗಳಲ್ಲಿ ಗಾಲಿ ಕುರ್ಚಿಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ಹಿರಿಯ ನಾಗರಿಕರ ಹಿತರಕ್ಷಣ ಸಮಿತಿಯ ಅಧ್ಯಕ್ಷರು ಮಾತನಾಡಿ, ಸಂಘದಲ್ಲಿ 600 ಸದಸ್ಯರಿದ್ದಾರೆ. ಜಾಗೃತಿ ಕಾರ್ಯಕ್ರಮದ ಕುರಿತಂತೆ ಮೊದಲೇ ಮಾಹಿತಿ ನೀಡಿದ್ದರೆ ಹೆಚ್ಚಿನ ಸಂಖ್ಯೆಯ ಹಿರಿಯರನ್ನು ಸೇರಿಸಬಹುದಿತ್ತು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಂಗವಿಕರು, ಹಿರಿಯರ ಕುರಿತ ಪ್ರಶ್ನೆಗಳಿಗೆ ಸ್ವೀಪ್ ಸಮಿತಿಯ ಅಧಿಕಾರಿಗಳು ಉತ್ತರ ನೀಡಿದರು. ಅನಂತರ ಮತದಾನದ ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಲಾಯಿತು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದ.ಕ. ಜಿಲ್ಲಾ ಉಪ ನಿರ್ದೇಶಕ ಸುಂದರ ಪೂಜಾರಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಯಮುನಾ ಡಿ., ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಸುಧಾಕರ್, ಜಿಲ್ಲಾ ಯೋಜನಾ ನಿರ್ದೇಶಕಿ ಮಂಜುಳಾ, ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಸಿಡಿಪಿಒ ಶಾಂತಿ ಹೆಗ್ಡೆ ಉಪಸ್ಥಿತರಿದ್ದರು. ಉದ್ಯೋಗ ಖಾತರಿ ಯೋಜನೆಯ ಅಧಿಕಾರಿ ನವೀನ್ ಭಂಡಾರಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಮಾಹಿತಿಗಾಗಿ
ನಡೆಯಲು ಸಾಧ್ಯವಾಗದ ಅಥವಾ ಇತರ ಸಮಸ್ಯೆಗಳ ಹಿರಿಯರು ಮತದಾನ ಮಾಡುವ ಸಂದರ್ಭದಲ್ಲಿ ಒಬ್ಬರು ಸಹಾಯಕರಿಗೆ ಅವಕಾಶ ನೀಡಲಾಗುತ್ತದೆ. ಜತೆಗೆ ಮತಗಟ್ಟೆಯ ಸಿಬಂದಿಯೂ ಸಹಕಾರ ನೀಡಲಿದ್ದಾರೆ. ಮತದಾನದ ಪಟ್ಟಿಯಲ್ಲಿ ಹೆಸರಿರುವ ಕುರಿತು ದೃಢಪಡಿಸಲು ಮೊ. 9731979899 ಸಂಖ್ಯೆಗೆ KAEPIC ಎಂದು ಟೈಪ್ ಮಾಡಿ ಎಪಿಕ್ ಕಾರ್ಡ್‌ನ ಸಂಖ್ಯೆಯನ್ನು ಎಸ್ ಎಂಎಸ್ ಮಾಡುವ ಮೂಲಕ ಎಲ್ಲ ವಿವರಗಳನ್ನು ತಿಳಿದುಕೊಳ್ಳಬಹುದು. ಚುನಾವಣಾ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕವೂ ಪರಿಶೀಲಿಸಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಎಂ.ಆರ್. ರವಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.