ಆಣೆ – ಪ್ರಮಾಣದಲ್ಲೂ ಸತ್ಯ ಒಪ್ಪಿಕೊಳ್ಳದ ಅಡ್ಡ ಮತದಾರರು
Team Udayavani, May 4, 2019, 5:36 AM IST
ಸುಳ್ಯ: ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿ ಸಹಕಾರಿ ಭಾರತಿ ಅಭ್ಯರ್ಥಿ ಸೋಲಿಗೆ ಕಾರಣ ವಾಗಿರುವ ಸ್ವ-ಪಕ್ಷದ ಅಡ್ಡ ಮತದಾರರು ಸ್ವಯಂ ಪ್ರೇರಿತರಾಗಿ ತಪ್ಪು ಒಪ್ಪಿಕೊಳ್ಳಲು ಮುಂದೆ ಬಾರದ ಕಾರಣ ಗುಪ್ತ ಸರ್ವೆ ನಡೆಸಿ ಪಟ್ಟಿ ಸಿದ್ಧಪಡಿಸಲಾಗಿದ್ದು, ಹತ್ತು ದಿನದೊಳಗೆ ಶಿಸ್ತು ಕ್ರಮಕ್ಕೆ ಬಿಜೆಪಿ ಮುಂದಾಗಿದೆ.
ತಪ್ಪು ಒಪ್ಪಿಕೊಳ್ಳಲು ಕಾಲವಕಾಶ ನೀಡಿದ್ದರೂ, ಒಪ್ಪಿಕೊಳ್ಳದ ಕಾರಣ ಬಿಜೆಪಿ, ಸಂಘ ಪರಿವಾರ ಕಾರ್ಯಕರ್ತರ ಅಭಿಪ್ರಾಯಕ್ಕೆ ಮಣಿದು 7 ಮಂದಿಗೆ ಗೇಟ್ಪಾಸ್ ನೀಡಲು ತಯಾರಿ ನಡೆಸಿದೆ. ಜತೆಗೆ ಅಡ್ಡ ಮತದಾನಕ್ಕೆ ಸೂತ್ರಧಾರನಂತೆ ಕಾರ್ಯ ನಿರ್ವಹಿಸಿದ ಪಕ್ಷದ ಮುಖಂಡರ ವಿರುದ್ಧ ಕೂಡ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದೆ ಎನ್ನುವ ಮಾಹಿತಿ ದೊರೆತಿದೆ.
ನಾಲ್ವರು ಒಪ್ಪಿಕೊಂಡಿಲ್ಲ!
ಮಾರ್ಚ್‌ನಲ್ಲಿ ನಡೆದ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ 17 ಮಂದಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಮತದಾರರ ಪೈಕಿ 7 ಮಂದಿ ಅಡ್ಡ ಮತ ಚಲಾಯಿಸಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿ ಸೋಲಿಗೆ ಕಾರಣಕರ್ತರಾಗಿದ್ದರು. ಈ 7 ಮಂದಿ ಯಾರು ಎನ್ನುವ ಬಗ್ಗೆ ಪಕ್ಷದೊಳಗೆ ಚರ್ಚೆ ನಡೆದು, ಅಭಿಪ್ರಾಯ ಸಂಗ್ರಹಿಸಲು ತೀರ್ಮಾನಿಸಲಾಗಿತ್ತು. ಪಕ್ಷದ ಮಾಹಿತಿ ಪ್ರಕಾರ 3 ಮಂದಿ ಅಡ್ಡ ಮತ ಚಲಾಯಿಸಿರುವುದನ್ನು ಒಪ್ಪಿಕೊಂಡಿದ್ದು, ಉಳಿದ ನಾಲ್ವರು ಇನ್ನೂ ಒಪ್ಪಿಕೊಂಡಿಲ್ಲ. ಕಾರಣಿಕ ದೈವಸ್ಥಾನದಲ್ಲಿ ಪ್ರಮಾಣದ ವೇಳೆ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಶಿಸ್ತು ಕ್ರಮ ಯಾರ ವಿರುದ್ಧ ಎನ್ನುವ ಅನುಮಾನ ಕೂಡ ವ್ಯಕ್ತವಾಗಿತ್ತು.
ಕ್ರಮಕ್ಕೆ ಪಟ್ಟಿ ರೆಡಿ!
ತಪ್ಪು ಒಪ್ಪಿಕೊಳ್ಳಲು ಅವಕಾಶ ನೀಡಿದರೂ, ಒಪ್ಪಿಕೊಳ್ಳದ ಕಾರಣ ಅಡ್ಡ ಮತದಾರರ ಪತ್ತೆಗೆ ಬಿಜೆಪಿ ಗುಪ್ತ ಸರ್ವೆ ನಡೆಸಿದೆ. ಯಾರು ಪಕ್ಷ ವಿರೋಧಿಯಾಗಿ ವರ್ತಿಸಿರಬಹುದು ಎನ್ನುವ ಬಗ್ಗೆ ವಿಶ್ವಾ ಸಾರ್ಹ ತಳಮಟ್ಟದ ಕಾರ್ಯಕರ್ತರ ಅಭಿ ಪ್ರಾಯ ಪಡೆದು ಅಡ್ಡ ಮತದಾರ ಏಳು ಮಂದಿಯ ಹೆಸರನ್ನು ಅಂತಿಮಗೊಳಿಸಿದೆ. ಅವರ ವಿರುದ್ಧ ಹತ್ತು ದಿನದೊಳಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ ಎಂದು ಪಕ್ಷದ ಮುಖಂಡರು ‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಹುಡುಕಾಟ ನಡೆದಿತ್ತು
ಬೆಳ್ಳಾರೆ, ಐವರ್ನಾಡು, ಅರಂತೋಡು, ಆಲೆಟ್ಟಿ, ಚೊಕ್ಕಾಡಿ, ಗುತ್ತಿಗಾರು, ಕಳಂಜ- ಬಾಳಿಲ, ಕನಕಮಜಲು, ಮಂಡೆಕೋಲು, ಮರ್ಕಂಜ, ಮುರುಳ್ಯ-ಎಣ್ಮೂರು, ನೆಲ್ಲೂರು ಕೆಮ್ರಾಜೆ, ಪಂಬೆತ್ತಾಡಿ, ಪಂಜ, ಉಬರಡ್ಕ ಮಿತ್ತೂರು, ಸುಳ್ಯ ಸಿ.ಎ.ಬ್ಯಾಂಕ್‌ನಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಬೆಂಬಲಿತರ ಆಡಳಿತ ಮಂಡಳಿಯಿದೆ. ಈ 17 ಬ್ಯಾಂಕ್ ಅಧ್ಯಕ್ಷರುಗಳಲ್ಲಿ ಅಡ್ಡ ಮತದಾನ ಮಾಡಿದ 7 ಮಂದಿ ಯಾರು ಎಂಬ ಹುಡುಕಾಟ ನಡೆದಿದೆ.
ಫಲಿತಾಂಶ ಪ್ರಕಟವಾದ ಬಳಿಕ ಅಡ್ಡ ಮತದಾನದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಈಡು ಮಾಡಿದೆ. ಬಿಜೆಪಿ ಬೆಂಬಲಿತ ಕಾರ್ಯಕರ್ತರು, ಮುಖಂಡರು, ಅಡ್ಡ ಮತದಾನ ಮಾಡಿ ದವರ ವಿರುದ್ಧ ಕಿಡಿ ಕಾರಿದ್ದರು. ಸ್ವ ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ಪ್ರತಿಭಟನೆ ನಡೆಸುವ ಬಗ್ಗೆಯೂ ಸೂಚನೆ ನೀಡಿದ್ದರು.
ಏನಿದು ಅಡ್ಡ ಮತದಾನ
ತಾಲೂಕಿನ 23 ಸಹಕಾರ ಸಂಘಗಳ ಪೈಕಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 17 ಹಾಗೂ ಕಾಂಗ್ರೆಸ್ ಬೆಂಬಲಿತ 6 ಮಂದಿ ಮತದಾರರು ಇದ್ದರು. ಹೀಗಾಗಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿ ವೆಂಕಟ್ ದಂಬೆಕೋಡಿ ಅವರ ಗೆಲುವು ನಿಶ್ಚಿತ ಎಂದು ಭಾವಿಸಲಾಗಿತ್ತು. ಆದರೆ ಫಲಿತಾಂಶ ಪ್ರಕಟವಾದಾಗ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಬೆಂಬಲಿತ ಅಭ್ಯರ್ಥಿ, ಕಾಂಗ್ರೆಸ್ ಮುಖಂಡ ದೇವರಾಜ್ ಕೆ.ಎಸ್. ಅವರು 13 ಮತ ಪಡೆದು ಗೆಲುವು ಸಾಧಿಸಿದ್ದರು. ವೆಂಕಟ್ 10 ಮತಗಳನ್ನಷ್ಟೇ ಗಳಿಸಿದ್ದರು. ಇದರಿಂದ ಸಹಕಾರ ಭಾರತಿಯ 7 ಮಂದಿ ಅಡ್ಡ ಮತದಾನ ಮಾಡಿರುವುದು ಸ್ಪಷ್ಟವಾಗಿತ್ತು.
ಶೀಘ್ರ ಕ್ರಮ
ಅಡ್ಡ ಮತದಾರರಿಗೆ ತಪ್ಪು ಒಪ್ಪಿಕೊಳ್ಳಲು ಅವಕಾಶ ನೀಡಲಾಗಿದ್ದರೂ, ಕೆಲವರು ಒಪ್ಪಿಕೊಂಡಿಲ್ಲ. ಇನ್ನು ಕಾಯುವುದಿಲ್ಲ. ಅಡ್ಡ ಮತದಾರರು ಯಾರು ಎನ್ನುವುದನ್ನು ಪಕ್ಷ ಗುರುತಿಸಿ, ಕೆಲವೇ ದಿನಗಳಲ್ಲಿ ಕ್ರಮ ಕೈಗೊಳ್ಳುವುದು ನಿಶ್ಚಿತ. ನಮಗೆ ಕಾರ್ಯಕರ್ತರ ಅಭಿಪ್ರಾಯ ಮುಖ್ಯ.
– ವೆಂಕಟ ವಳಲಂಬೆ ಅಧ್ಯಕ್ಷರು, ಬಿಜೆಪಿ ಮಂಡಲ ಸಮಿತಿ ಸುಳ್ಯ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.