ಸದ್ಯಕ್ಕಿಲ್ಲ ನೀರಿನ ಆತಂಕ; ಭವಿಷ್ಯಕ್ಕೆ ಯೋಜನೆ ಅಗತ್ಯ
Team Udayavani, Jan 31, 2019, 12:30 AM IST
ಪುತ್ತೂರು: ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಅಂತರ್ಜಲ ಮಟ್ಟ ಸಹಜವಾಗಿ ಆತಂಕ ಸೃಷ್ಟಿಸುತ್ತಿದೆ. ಆದರೆ ಸದ್ಯದ ಮಟ್ಟಿಗೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಪುತ್ತೂರು ತಾಲೂಕನ್ನು ನಗರ ಹಾಗೂ ಗ್ರಾಮಾಂತರ ಎಂದು ವಿಂಗಡಿಸಿದ್ದು, ನಗರ ಪ್ರದೇಶಕ್ಕೆ ಅವಶ್ಯ ಎನಿಸುವಷ್ಟು ನೀರಿನ ಪೂರೈಕೆಗೆ ಸ್ವತಂತ್ರ ವ್ಯವಸ್ಥೆ ಮಾಡಲಾಗಿದೆ. ಆದರೆ ಗ್ರಾಮಾಂತರ ಭಾಗಗಳಿಗೆ ಯಾವುದೇ ಶಾಶ್ವತ ಯೋಜನೆ ತರುವ ಯತ್ನ ಆಗಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ಹಲವು ಅಡ್ಡಿಗಳಿವೆ.
ಈ ವರ್ಷ ಉತ್ತಮ ಮಳೆಯಿಂದಾಗಿ ಜಲಮೂಲಗಳು ಸಮೃದ್ಧವಾಗಿವೆ. ಆದರೆ ಬೇಸಗೆ ಪ್ರಖರವಾಗಿದ್ದರೆ ನೀರಿನ ಮೂಲಗಳು ಬತ್ತಿ ಹೋಗುವ ಆತಂಕ ಇದೆ. ಹಿಂದಿನ ವರ್ಷ ನೀರಿನ ಸಮಸ್ಯೆ ಬಹುವಾಗಿ ಕಾಡಿದ್ದು ಮೇ ತಿಂಗಳಿನಲ್ಲಿ. ಮಾರ್ಚ್ – ಎಪ್ರಿಲ್‌ನಲ್ಲಿ ಕೊಂಚ ಮಳೆ ಬಂದಿದ್ದರಿಂದ ಕೊರತೆಯ ತೀವ್ರತೆ ಕಡಿಮೆಯಾಗಿತ್ತು. ಇದೇ ಪರಿಸ್ಥಿತಿ ಈ ಬಾರಿಯೂ ಮರುಕಳಿಸೀತು ಎಂಬ ಭರವಸೆ ಇಲ್ಲ. ಈ ಹಿನ್ನೆಲೆಯಲ್ಲಿ ಆಡಳಿತಗಳು ಎಚ್ಚೆತ್ತುಕೊಂಡು, ಈಗಲೇ ಕ್ರಮ ಕೈಗೊಳ್ಳುವ ಅಗತ್ಯ ಇದೆ.
ತಾಲೂಕಿನ ಗ್ರಾಮಾಂತರ ಭಾಗದ ಒಂದು ಮಗ್ಗುಲಿ ನಲ್ಲಿ ಕುಮಾರಧಾರಾ, ನೇತ್ರಾವತಿ ಇನ್ನೊಂದು ಮಗ್ಗುಲಿ ನಲ್ಲಿ ಸೀರೆ ನದಿಗಳು ಹರಿಯುತ್ತಿವೆ. ಅವುಗಳಲ್ಲಿ ಹರಿವು ಇರುವಷ್ಟು ದಿನ ಆಸುಪಾಸಿನ ಕೆರೆ, ಬಾವಿ, ಕೊಳವೆಬಾವಿಗಳಲ್ಲಿ ನೀರಿನ ಕೊರತೆ ಎದುರಾಗುವುದಿಲ್ಲ. ಸೀರೆ ನದಿ ಈಗಾಗಲೇ ಸಾಕಷ್ಟು ಬತ್ತಿದೆ. ಅಣೆಕಟ್ಟುಗಳು ಮೇಲೆದ್ದಿವೆ. ಇವೆಲ್ಲವೂ ತೋಟಗಳಿಗೆ ನೀರು ಹಾಯಿಸಲಷ್ಟೇ ಸೀಮಿತ.
ನಗರಸಭೆ ವ್ಯಾಪ್ತಿಗೆ ಕುಮಾರಧಾರೆಯಿಂದ ದಿನಕ್ಕೆ 6.5 ಮಿಲಿಯ ಲೀ. ನೀರು ತೆಗೆದುಕೊಳ್ಳಲಾಗುತ್ತಿದೆ. ಬೋರ್‌ವೆಲ್‌ಗಳಿಂದ ದಿನಕ್ಕೆ 1.5 ಮಿಲಿಯ ಲೀ. ನೀರು ಪೂರೈಕೆ ಯಾಗುತ್ತಿದೆ. ಮುಂದೆ ಜಲಸಿರಿ 24×7 ಕುಡಿಯುವ ನೀರಿನ ಯೋಜನೆ ಜಾರಿಗೆ ಬರಲಿದೆ. ಆದ್ದರಿಂದ ಕುಡಿಯುವ ನೀರಿನ ಶಾಶ್ವತ ಯೋಜನೆ ಬೇಕಾಗಿರುವುದೇ ಗ್ರಾಮಾಂತರ ಪ್ರದೇಶಕ್ಕೆ. 2.53 ಮೀ. ಕುಸಿತ ಕಂಡಿರುವ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲೂ ಆಡಳಿತ ಗಮನಹರಿಸಬೇಕಾಗಿದೆ.
ಕೊರತೆಗೆ ಕಾರಣ
ಜನಸಂಖ್ಯೆ ಹಾಗೂ ಮನೆಗಳ ಸಂಖ್ಯೆ ಏರಿಕೆ ಕೊರತೆಗೆ ಕಾರಣ. ಎಪ್ರಿಲ್, ಮೇಯಲ್ಲಿ ಅಂತರ್ಜಲ ಮಟ್ಟ ಕುಸಿತ ಸಾಮಾನ್ಯ; ಆ ಹೊತ್ತಿನಲ್ಲಿ ಅಂತರ್ಜಲದ ಬಹುಪಾಲು ನೀರು ಅಡಿಕೆ ತೋಟಗಳಿಗೆ ಬಳಕೆಯಾಗುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು ಮಳೆಕೊಯ್ಲು, ನೀರಿಂಗಿಸುವುದು, ಕಾಡು ಬೆಳೆಸುವ ಕಡೆಗೆ ಜನರ ಮುತುವರ್ಜಿ ಹೆಚ್ಚು ಬೇಕಾಗಿದೆ.
ಗ್ರಾ.ಪಂ.ಗಳಿಗೆ ಸೂಚನೆ
ಎಲ್ಲೆಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ ಎಂದು ಮಾಹಿತಿ ನೀಡಲು ಗ್ರಾ.ಪಂ.ಗಳಿಗೆ ಸೂಚಿಸಲಾಗಿದೆ. ಹೆಚ್ಚು ಸಮಸ್ಯೆ ಕಾಣುವ ಪ್ರದೇಶಗಳಲ್ಲಿ ಹಿಂದಿನ ವರ್ಷದಂತೆ ಈ ವರ್ಷವೂ ಕ್ರಮ ಕೈಗೊಳ್ಳಬೇಕಾಗಿದೆ. ಬರಿದಾಗಲಿರುವ ಬೋರ್‌ವೆಲ್‌ಗಳ ಪಟ್ಟಿ ನೀಡಲು ತಿಳಿಸಿದೆ. ಅಂತಹ ಪ್ರದೇಶಗಳಲ್ಲಿ ದಿನಬಿಟ್ಟು ದಿನ ನೀರು ಪೂರೈಕೆ ಮಾಡುವ ಬಗ್ಗೆ ಚಿಂತಿಸಲಾಗಿದೆ.
-ಜಗದೀಶ್, ಇಒ, ಪುತ್ತೂರು ತಾ.ಪಂ.
ಟ್ಯಾಂಕರ್ ಸಿದ್ಧ
ಪುತ್ತೂರು ನಗರಸಭೆ ವ್ಯಾಪ್ತಿಗೆ ಕುಮಾರಧಾರೆ ನೀರನ್ನು ಬಳಸಲಾಗುತ್ತಿದೆ. ಇಲ್ಲಿ ನೀರಿನ ಕೊರತೆ ಇಲ್ಲ. ಕೆಲವು ಎತ್ತರದ ಪ್ರದೇಶಗಳಿಗೆ ಬೋರ್‌ವೆಲ್ ನೀರು ತಲುಪುತ್ತಿಲ್ಲ. ಅಂತಹ ಪ್ರದೇಶಗಳಿಗೆ ಟ್ಯಾಂಕರ್ ವ್ಯವಸ್ಥೆ ಸಿದ್ಧವಾಗಿದೆ.
– ರೂಪಾ ಶೆಟ್ಟಿ, ಪೌರಾಯುಕ್ತೆ, ಪುತ್ತೂರು ನಗರಸಭೆ
ಕೊರತೆ ಇಲ್ಲ
ಒಂದು ಪ್ರದೇಶದ ಸರಾಸರಿ ತೆಗೆದರೆ ಕುಡಿಯುವ ನೀರಿನ ಕೊರತೆ ಇಲ್ಲ. ಹಿಂದೆ ಓರ್ವ ನಿಗೆ ದಿನವೊಂದಕ್ಕೆ 55 ಲೀ. ನೀರು ಪೂರೈಸಬೇಕೆಂಬ ನಿರ್ದೇಶನವಿತ್ತು. ಈ ಬಾರಿ ಅದನ್ನು 85 ಲೀ.ಗೆ ಏರಿಸಿದ್ದಾರೆ. ಈ ಹಿನ್ನೆಲೆಯಲ್ಲಿ 43.63 ಲೀ. ಕೊರತೆ ಕಾಣುತ್ತದೆ. ಇದು ಕೂಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ ಸಂದರ್ಭ ಸರಿದೂಗುತ್ತದೆ.
-ಶಿವಶಂಕರ ಸ್ವಾಮಿ, ಕಾರ್ಯನಿರ್ವಾಹಕ ಎಂಜಿನಿಯರ್, ನೀರು ಮತ್ತು ನೈರ್ಮಲ್ಯ ವಿಭಾಗ
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.