ಮಳೆಗಾಲದಲ್ಲೇ ನೀರಿಲ್ಲ ಬೇಸಗೆ ಬಲು ಭಾರ!
Team Udayavani, Oct 8, 2017, 2:54 PM IST
ಆಲಂಕಾರು: ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವುದು ನಿರೀಕ್ಷಿತ. ಆದರೆ, ಅಲಂಕಾರು ಗ್ರಾಮದ ಕೊಂಡಾಡಿಕೊಪ್ಪ ಜನತೆಗೆ ಮಳೆಗಾಲದಲ್ಲೇ ನೀರಿನ ಅಭಾವ ತಲೆದೋರಿದೆ. ಈಗಲೇಹೀಗಾದರೆ, ಬೇಸಗೆಯಲ್ಲಿ ಇನ್ನೆಂತಹ ಸ್ಥಿತಿ ನಿರ್ಮಾಣವಾಗಬಹುದು ಎಂದು ಜನತೆ
ಚಿಂತಿಸುವಂತಾಗಿದೆ.
ಕೊಳವೆ ಬಾವಿಯ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ, ಪೂರೈಕೆಯಾಗುತ್ತಿರುವ ನೀರು ಸಂಪೂರ್ಣ ಕೆಸರಾಗಿದೆ. ಇದರಿಂದ ಈ ಭಾಗದ ಜನತೆ ಇಕ್ಕಟ್ಟಿಗೆ ಸಿಲುಕಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ.
15 ವರ್ಷ ಹಳೆಯ ಕೊಳವೆ ಬಾವಿ
ಹದಿನೈದು ವರ್ಷ ಹಳೆಯ ಕೊಳವೆ ಬಾವಿ ಇದಾಗಿದ್ದು, ಕೇಸಿಂಗ್ ಪೈಪ್ ತುಕ್ಕು ಹಿಡಿದು ರಂಧ್ರ ಬಿದ್ದಿರುವುದೇ ಕೆಸರು ನೀರು ಬರಲು ಕಾರಣ ಎನ್ನಲಾಗಿದೆ. ಸದ್ಯ ಮಳೆಗಾಲ ಮುಗಿಯುತ್ತಿದ್ದು, ಈಗಲೇ ನೀರಿನ ಒರತೆ ಕಡಿಮೆಯಾಗಿದೆ. ಬೇಸಗೆ ಕಾಲಿಡುವ ವೇಳೆಗೆ ಈ ಕೊಳವೆ ಬಾವಿಯಲ್ಲಿ ನೀರು ಸಂಪೂರ್ಣವಾಗಿ ಬತ್ತಿ ಹೋಗಿ, ಈ ಭಾಗದಲ್ಲಿ ಕುಡಿಯುವ ನೀರಿಗೆ ಬಹಳಷ್ಟು ಸಮಸ್ಯೆ ಎದುರಾಗಲಿದೆ ಎಂದು ಸ್ಥಳೀಯರು ಆತಂಕದಿಂದಲೇ ಹೇಳುತ್ತಿದ್ದಾರೆ.
44 ಮನೆ, ಶಾಲೆ,ಅಂಗನವಾಡಿಗೆ ಕೆಸರು ನೀರು:
ಈ ಕೊಳವೆ ಬಾವಿಯಿಂದ ಸರಬರಾಜಾಗುವ ನೀರನ್ನು ಕೊಂಡಾಡಿ ಕೊಪ್ಪ ಸರಕಾರಿ ಶಾಲೆ ಬಳಿಯಿರುವ ಟ್ಯಾಂಕ್ ಮತ್ತು ಏಂತಡ್ಕ ಎಂಬಲ್ಲಿ ನಿರ್ಮಿಸಿರುವ ಟ್ಯಾಂಕ್‌ನಲ್ಲಿ ತುಂಬಿಸಿ 44 ಮನೆಗಳಿಗೆ ಕುಡಿಯುವ ನೀರಿನ ವ್ಯಸ್ಥೆಯಡಿ ಸರಬರಾಜು ಮಾಡಲಾಗುತ್ತಿದೆ. ಈ ಭಾಗದಲ್ಲಿರುವ ಒಂದು ಸರಕಾರಿ ಶಾಲೆ ಮತ್ತು ಅಂಗನವಾಡಿಗೂ ಇದೇ ಕೊಳವೆ ಬಾವಿಯಿಂದ ನೀರು ಪೂರೈಕೆ ಆಗುತ್ತಿದೆ. ನಿತ್ಯ ಕೆಸರುಮಿಶ್ರಿತ ನೀರು ಬರುತ್ತಿದ್ದು, ರೋಗಭೀತಿಯಲ್ಲಿ ಜನ ಅನಿವಾರ್ಯವಾಗಿ ಅದನ್ನೇ ಸೇವಿಸುತ್ತಿದ್ದಾರೆ.
ನಿರ್ಲಕ್ಷ್ಯ: ಸದಸ್ಯರ ಆರೋಪ
ಮೂರು ವರ್ಷದಿಂದ ಈ ಭಾಗ ದಲ್ಲಿ ನೀರಿನ ಸಮಸ್ಯೆ ನಿರಂತ ರವಾಗಿ ಜನತೆಯನ್ನು ಕಾಡುತ್ತಿದೆ. ಬೇಸಗೆಯಲ್ಲಿ ವಿದ್ಯುತ್ ಅಭಾವವಿದ್ದರೆ, ಈ ವರ್ಷ ಮಳೆಗಾಲದಲ್ಲೇ ನೀರಿಲ್ಲದಂತಾಗಿದೆ. ಈ ಭಾಗದಲ್ಲಿ ನೂತನ ಕೊಳವೆ ಬಾವಿ ನಿರ್ಮಿಸಬೇಕೆಂದು ಹಲವು ಬಾರಿ ಸಾಮಾನ್ಯ ಸಭೆಯಲ್ಲಿ ನಿರ್ಣ ಯಿಸಿ ಜಿಲ್ಲಾ ಪಂಚಾಯತ್‌ಗೆ ಕಳುಹಿಸಿದ್ದರೂ ಫಲಿತಾಂಶ ಮಾತ್ರ ಶೂನ್ಯ. ಶಾಸಕರು, ಜಿ.ಪಂ. ಹಾಗೂ ತಾ.ಪಂ. ಸದಸ್ಯರಿಗೂ ಮನವಿ ಮಾಡಲಾಗಿದೆ. ಆದರೆ ನಮ್ಮ ನಿರ್ಣಯ, ಮನವಿಗಳನ್ನು ಇಲ್ಲಿ ನಿರ್ಲಕ್ಷಿಸಲಾಗಿದೆ ಎಂದು ವಾರ್ಡ್‌ನ ಸದಸ್ಯ ಸದಾನಂದ ಆಚಾರ್ಯ ಆರೋಪಿಸಿದರು.
ಬಹುಗ್ರಾಮ ಯೋಜನೆಯಡಿ ಸೇರ್ಪಡೆ
ಕುಡಿಯುವ ನೀರಿನ ಯೊಜನೆಗಳಿಗೆ ಸರಕಾರ ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಕೊಂಡಾಡಿಕೊಪ್ಪ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ
ಸಮಸ್ಯೆಯ ಪರಹಾರಕ್ಕಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸೇರಿಸಿ, ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಕ್ರಮ ಕೈಗೊಳ್ಳಲಾಗುವುದು.
– ಎಸ್. ಅಂಗಾರ, ಶಾಸಕ, ಸುಳ್ಯ
ಅನುದಾನವಿಲ್ಲ
ಗ್ರಾಮ ಪಂಚಾಯತ್‌ಗೆ ಬಂದಷ್ಟು ಅನುದಾನಗಳು ಜಿ.ಪಂ. ಸದಸ್ಯರಿಗೆ ಬರುತ್ತಿಲ್ಲ. ವರ್ಷದಲ್ಲಿ 2 ಲಕ್ಷ ಅನುದಾನ ಬಿಡುಗಡೆಯಾಗುತ್ತಿದೆ. 14ನೇ ಹಣಕಾಸಿನ ಯೋಜನೆಯಡಿ ಗ್ರಾ.ಪಂ. ಈ ಸ್ಥಳದಲ್ಲಿ ಹೊಸ ಕೊಳವೆಬಾವಿ ನಿರ್ಮಿಸಿಕೊಳ್ಳಬಹುದು.
– ಪ್ರಮೀಳಾ ಜನಾರ್ದನ್,
ಜಿ.ಪಂ. ಸದಸ್ಯೆ, ಬೆಳಂದೂರು ಕ್ಷೇತ್ರ
ಸದಾನಂದ ಆಲಂಕಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.