ನೀರಿಲ್ಲದ ಬಾವಿ; ಬೀಳುವಂತಾದ ಹಳೆಯ ಕಟ್ಟಡದಲ್ಲೇ ಶಾಲೆ!
Team Udayavani, May 27, 2018, 3:43 PM IST
ಸವಣೂರು: ಪಾಲ್ತಾಡಿ ಗ್ರಾಮದ ಮಂಜುನಾಥನಗರ ಹಿ.ಪ್ರಾ. ಶಾಲೆಯಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ಕುಡಿಯುವ ನೀರಿನದ್ದೇ ದೊಡ್ಡ ಸಮಸ್ಯೆಯಾಗಿದೆ. ಒಂದರಿಂದ 7ನೇ ತರಗತಿಯ ವರೆಗೆ ಇರುವ ಈ ಶಾಲೆಯಲ್ಲಿ 72 ಮಕ್ಕಳಿದ್ದು, ಒಬ್ಬರು ಗೌರವ ಶಿಕ್ಷಕಿ ಸಹಿತ ಐವರು ಶಿಕ್ಷಕಿಯರಿದ್ದಾರೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲೂ ಮಕ್ಕಳು ಮುಂದಿದ್ದಾರೆ.
ಅಕ್ಷರ ದಾಸೋಹ ಕೊಠಡಿ ಬೇಕು
ಈಗಿರುವ ಕೊಠಡಿ ಸೋರುತ್ತಿರುವ ಕಾರಣ, ಈ ಶಾಲೆಗೆ ಅಕ್ಷರ ದಾಸೋಹ ಕೊಠಡಿ ನಿರ್ಮಾಣವಾಗಬೇಕಿದೆ. ಹೊಸ ಕೊಠಡಿ ಕಟ್ಟಿಸಿಕೊಡುವಂತೆ ಶಾಲೆಯ ವತಿಯಿಂದ ಶಿಕ್ಷಣ ಇಲಾಖೆಗೂ ಮನವಿ ಮಾಡಲಾಗಿದೆ.
ಕುಡಿಯಲು ನೀರಿಲ್ಲ
ಈ ಶಾಲೆಯಲ್ಲಿ ಕುಡಿಯುವ ನೀರಿಗೆ ಆವರಣದಲ್ಲಿರುವ ಬಾವಿಯನ್ನೇ ಆಶ್ರಯಿಸಿದ್ದು, ಈಗ ಅದು ಸಂಪೂರ್ಣ ಬತ್ತಿಹೋಗಿದೆ. ಹೀಗಾಗಿ, ಶಾಲೆ ಆರಂಭವಾದರೂ ವಿದ್ಯಾರ್ಥಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸಲಿದ್ದಾರೆ. ಶಾಲೆ ಆವರಣದಲ್ಲಿರುವ ಕೊಳವೆ ಬಾವಿಯೂ ಬತ್ತಿಹೋಗಿದೆ. ಹೀಗಾಗಿ, ಶಾಲೆ ಈಗ ಆಶ್ರಯಿಸಿರುವುದು ಗ್ರಾ.ಪಂ. ಪೂರೈಸುವ ನೀರನ್ನೇ. ವಿದ್ಯುತ್ ಸಂಪರ್ಕವೂ ಇಲ್ಲದೆ ಇಲ್ಲಿನವರ ಪಾಡು ಹೇಳತೀರದು.
ಈ ಶಾಲೆಗೆ ಅಗತ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಈ ಕುರಿತು ಎಲ್ಲ ಜನಪ್ರತಿನಿಧಿಗಳಿಗೂ ಅಧಿಕಾರಿಗಳಿಗೂ ಶಾಲಾಭಿವೃದ್ಧಿ ಸಮಿತಿಯಿಂದ ಮನವಿ ಮಾಡಲಾಗಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ. ಆದರೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಇನ್ನೂ ಸಿಕ್ಕಿಲ್ಲ.
ಹಳೆ ಕಟ್ಟಡ ತೆರವುಗೊಳಿಸಬೇಕು
ಶಾಲೆಯ ಪಕ್ಕದಲ್ಲಿರುವ ಶಿಥಿಲಾವಸ್ಥೆಗೆ ತಲುಪಿದ ಕಟ್ಟಡವನ್ನು ತೆರವುಗೊಳಿಸುವಂತೆ ಜಿ.ಪಂ.ಗೆ ಪತ್ರ ಬರೆಯಲಾಗಿತ್ತು. ಆ ಕಟ್ಟಡದ ಸಾಮಗ್ರಿಗಳನ್ನು ಏಲಂ ಮಾಡುವ ಕುರಿತು ಜಿ.ಪಂ.ನಿಂದ ದರಪಟ್ಟಿಯನ್ನೂ ನೀಡಲಾಗಿತ್ತು. ಬಳಿಕ ಕೆಲ ಕಾರಣಗಳಿಂದ ಅದು ಏಲಂ ಆಗದೆ ಹಾಗೆಯೇ ಉಳಿದುಕೊಂಡಿದ್ದು, ಪಕ್ಕಾಸು ಹಾಳಾಗಿವೆ. ಹಂಚುಗಳು ಕೆಳಕ್ಕೆ ಬಿದ್ದು ಹಾನಿಯಾಗುತ್ತಿವೆ. ಕೂಡಲೇ ತೆರವುಗೊಳಿಸುವ ಕಾರ್ಯವಾಗಬೇಕು.
ಬೇಡಿಕೆಗಳು
.400 ಮೀಟರ್ ಟ್ರಾಫಿಕ್ ಹೊಂದಿರುವ ಶಾಲಾ ಆಟದ ಮೈದಾನ.
. ಕಂಪ್ಯೂಟರ್ ಕಲಿಕಾ ಕೊಠಡಿಗೆ ವಿದ್ಯುತ್ ಸಂಪರ್ಕ ಹಾಗೂ ಕಂಪ್ಯೂಟರ್ ದುರಸ್ತಿ.
.ಬಾವಿ, ಪಂಪ್‌ಹೌಸ್ ನಿರ್ಮಾಣ, ಮೂರು ಎಚ್‌ಪಿಯ ಪಂಪ್ ಅಳವಡಿಕೆ.
. ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ.
. ಕ್ರೀಡಾ ಕೊಠಡಿಯ ಆವಶ್ಯಕತೆ ಇದೆ. ಲಭ್ಯವಿರುವ 10 ಕೊಠಡಿಗಳ ಪೈಕಿ ಎರಡು ಕೊಠಡಿಗಳ ದುರಸ್ತಿ.
. ದಾನಿಗಳ ಸಹಕಾರದಲ್ಲಿ ನಿರ್ಮಾಣಗೊಂಡ ರಂಗಮಂದಿರವೂ ಸೋರುತ್ತಿದ್ದು, ದುರಸ್ತಿಯಾಗಬೇಕಿದೆ.
ನೀರಿನ ವ್ಯವಸ್ಥೆ ಆಗಬೇಕು
ಶಾಲಾ ದೈನಂದಿನ ಚಟುವಟಿಕೆಗೆ ಕುಡಿಯುವ ನೀರಿನ ತೀರಾ ಆವಶ್ಯಕತೆ ಇದೆ. ಆದರೆ ಶಾಲಾ ಆವರಣದಲ್ಲಿನ ಬಾವಿ ಸಂಪೂರ್ಣ ಬತ್ತಿಹೋಗಿದೆ. ಜತೆಗೆ ಹಳೆಯ ಕೊಳವೆ ಬಾವಿಯೂ ನೀರಿಲ್ಲದೆ ಉಪಯೋಗ ಶೂನ್ಯವಾಗಿದೆ. ಜತೆಗೆ ಒಂದು ಹಳೆ ಕೊಠಡಿ ತೆರವು, ಕೊಠಡಿಗಳ ದುರಸ್ತಿ, ಅಕ್ಷರ ದಾಸೋಹ ಕಟ್ಟಡದ ಆವಶ್ಯಕತೆ ಇದೆ. ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ.
– ಹೊನ್ನಪ್ಪ ಗೌಡಜಾರಿಗೆತ್ತಡಿ,
ಅಧ್ಯಕ್ಷರು ಎಸ್‌ಡಿಎಂಸಿ, ಮಂಜುನಾಥನಗರ
ಹಿ.ಪ್ರಾ. ಶಾಲೆ
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.