ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕಿದೆ
Team Udayavani, Mar 11, 2020, 5:59 AM IST
ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದ ತ್ಯಾಜ್ಯ ಕುಸಿತದ ಪರಿಣಾಮ ಮಂದಾರ ಪ್ರದೇಶ
ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆ ನಗರದಲ್ಲಿರುವ ಹಲವು ವರ್ಷಗಳ ಹಳೆಯ ಸಮಸ್ಯೆ. ಅದನ್ನು ಬರೀ ತಾತ್ಕಾಲಿನ ನೆಲೆಯಲ್ಲಿ ಬಗೆಹರಿಸುತ್ತಿದ್ದೇವೆಯೇ ಹೊರತು ಶಾಶ್ವತವಾಗಿಯಲ್ಲ. ಹೊಸ ಆಡಳಿತ ಶಾಶ್ವತ ಪರಿಹಾರದತ್ತ ಕಾಯೋನ್ಮುಖವಾದರೆ ಅದೇ ಬಹುದೊಡ್ಡ ಕೊಡುಗೆಯಾಗುವುದರಲ್ಲಿ ಸಂಶಯವಿಲ್ಲ.
ಮಹಾನಗರ: ಸ್ವಚ್ಛತೆಯ ಮೂಲಕ ರಾಜ್ಯಕ್ಕೇ ಗುರುತಿಸಿಕೊಂಡ ಮಂಗಳೂರು ನಗರದಲ್ಲಿ ತ್ಯಾಜ್ಯ ನಿರ್ವಹಣೆ ಚಾಲ್ತಿಯಲ್ಲಿದ್ದರೂ ಸಂಸ್ಕರಣೆಗೆ ಹೆಚ್ಚು ಆದ್ಯತೆ ನೀಡದಿರುವುದರಿಂದ ತ್ಯಾಜ್ಯದ ಸಮಸ್ಯೆ ಸವಾಲಾಗಿ ಪರಿಣಮಿಸಿದೆ.
ಮನೆ-ಮನೆಯಿಂದ ತ್ಯಾಜ್ಯ ಸಂಗ್ರಹಿಸಿ ಪಚ್ಚನಾಡಿಯಲ್ಲಿರುವ ಡಂಪಿಂಗ್ ಯಾರ್ಡ್‌ಗೆ ಸುರಿಯಲಾಗುತ್ತಿದೆ. ಅಲ್ಲಿ ತ್ಯಾಜ್ಯ ಸಂಸ್ಕರಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹಾಗಾಗಿ ಸಂಸ್ಕರಣೆ, ಬಳಿಕ ಉಳಿಯುವ ತ್ಯಾಜ್ಯ ವಿಲೇವಾರಿಯಲ್ಲಿ ಬಹುದೊಡ್ಡ ಲೋಪಗಳಾಗುತ್ತಿವೆ. ತ್ಯಾಜ್ಯವನ್ನು ಮಣ್ಣಿ ನಲ್ಲಿ ಮುಚ್ಚುವಂಥ ಅವೈಜ್ಞಾನಿಕ ಕಾರ್ಯ ವಿಧಾನದಿಂದಲೇ ಮಂದಾರ ವೆಂಬ ಸುಂದರ ಪ್ರದೇಶ ಕಳೆದ ವರ್ಷ ತ್ಯಾಜ್ಯರಾಶಿಯಿಂದ ಮುಳುಗಡೆಗೆ ಎದುರಾಯಿತು.
ಇದೀಗ, ತ್ಯಾಜ್ಯ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಇತ್ತೀಚೆಗೆ ಸುಳಿವು ನೀಡಿದ್ದಾರೆ. ಆದರೆ ಘಟಕದ ಸ್ಥಳಾಂತರ ಇದಕ್ಕೆ ಪರಿಹಾರವಲ್ಲ. ಯಾಕೆಂದರೆ ಇಲ್ಲಿಯ ಸಮಸ್ಯೆಯನ್ನು ಮತ್ತೂಂದು ಪ್ರದೇಶಕ್ಕೆ ಸ್ಥಳಾಂತರಿಸಿದಂತೆ ಆಗುತ್ತದೆ ಎಂಬುದು ಸಾರ್ವಜನಿಕರ ವಾದ. ಬದಲಾಗಿ, ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆಗೆ ಆಡಳಿತ ವ್ಯವಸ್ಥೆ ಹೆಚ್ಚು ಗಮನ ನೀಡಬೇಕು.
ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ತ್ಯಾಜ್ಯ ಸಾಗಣೆಯ ಹೊಣೆ ಹೊತ್ತಿದೆ. ಇದು ಬಹುತೇಕ ಭಾಗದಲ್ಲಿ ಸೂಕ್ತವಾಗಿ ನಡೆಯುತ್ತಿದೆ. ಆದರೆ ಕೆಲವೆಡೆ ತ್ಯಾಜ್ಯ ನಿರ್ವಹಣೆ ಆಗುತ್ತಿಲ್ಲ ಎಂಬ ಆರೋಪವಿದೆ. ಈ ಮಧ್ಯೆ ಸಂಸ್ಥೆಗೆ ಪಾಲಿಕೆ ಯು ಪ್ರತೀ ತಿಂಗಳು ನಿಗದಿತ ಪ್ರಮಾಣದಲ್ಲಿ ಹಣ ನೀಡುತ್ತಿಲ್ಲ ಎಂಬ ಅಪವಾದವೂ ಇದೆ. ಹೀಗಾಗಿ ಕಾರ್ಮಿಕರಿಗೆ ಸಕಾಲಕ್ಕೆ ಸಂಬಳ ಸಿಗದೆ ಅವರು ಪ್ರತಿಭಟನೆ ನಡೆಸಿ ಕಸ ಸಾಗಣೆ ಸ್ಥಗಿತಗೊಳಿಸಿದ ಉದಾಹರಣೆಯೂ ಇದೆ. ಇದಕ್ಕೆಲ್ಲ ಪಾಲಿಕೆಯಲ್ಲಿನ ಹಣಕಾಸಿನ ಕೊರತೆಯೇ ಕಾರಣ ಎಂದೂ ಹೇಳಲಾಗುತ್ತಿದೆ. ತ್ಯಾಜ್ಯ ನಿರ್ವ ಹಣೆಗೆ ಸರಕಾರ ಯಾವುದೇ ರೀತಿಯ ಅನುದಾನ ನೀಡುವುದಿಲ್ಲ. ಬದಲಿಗೆ ಪಾಲಿಕೆಯೇ ತನ್ನ ಆದಾಯ ಮೂಲದಲ್ಲಿ ನಿರ್ವಹಿಸಬೇಕಾದ ಸವಾಲೂ ಇದೆ.
ಎಕರೆಗಟ್ಟಲೆಯಲ್ಲಿದೆ ಭೂಗತ ತ್ಯಾಜ್ಯ!
ನಗರ ವ್ಯಾಪ್ತಿಯಿಂದ ನಿತ್ಯ ಸುಮಾರು 250ರಿಂದ 300 ಟನ್‌ನಷ್ಟು ಕಸ ಸಂಗ್ರಹಿಸಲಾಗುತ್ತದೆ. ಇದನ್ನು ಸಂಸ್ಕರಣಾ ಘಟಕಕ್ಕೆ ತಂದು ಸಂಸ್ಕರಿಸಿ ಉಳಿದ ಸುಮಾರು 50 ಟನ್‌ನಷ್ಟು ತ್ಯಾಜ್ಯವನ್ನು ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನಲ್ಲಿ ಸುರಿಯಲಾಗುತ್ತದೆ.
ಇದು ಲೆಕ್ಕಕ್ಕೆ ಸಿಗುವಂಥದ್ದು. ಲೆಕ್ಕವಿಲ್ಲದೆ ಉಳ್ಳಾಲ, ಬಂಟ್ವಾಳದಿಂದ ಪ್ರತೀದಿನ ಸುಮಾರು 50 ಟನ್‌ನಷ್ಟು ಕಸವನ್ನು ನೇರ ವಾಗಿ ಡಂಪಿಂಗ್ ಯಾರ್ಡ್‌ನಲ್ಲಿ ಸುರಿಯಲಾಗುತ್ತಿದೆ. ಕೇರಳ ನೋಂದಣಿ ವಾಹನದಿಂದಲೂ ತ್ಯಾಜ್ಯ ಡಂಪ್ ಮಾಡಲಾಗುತ್ತಿದೆ. ಸ್ಥಳೀಯರು ಈ ಬಗ್ಗೆ ಪಾಲಿಕೆಗೆ ಎಷ್ಟು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಸುಮಾರು 77.93 ಎಕರೆ ಜಾಗವಿದೆ. ಇದರಲ್ಲಿ 10 ಎಕರೆ ವ್ಯಾಪ್ತಿಯಲ್ಲಿ ಕಸ ತುಂಬಿಸಿ ಅದನ್ನು ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಅದರ ಬಳಿಯಲ್ಲೇ ಇದೀಗ ಸುಮಾರು 12 ಎಕರೆ ಜಾಗದಲ್ಲಿ 10 ವರ್ಷಗಳಿಂದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಲಕ್ಷಗಟ್ಟಲೆ ತ್ಯಾಜ್ಯ-ಕಸ ಸುರಿದು ಮಣ್ಣುಹಾಕಲಾಗುತ್ತಿದೆ. ತ್ಯಾಜ್ಯಕ್ಕೆ ಬೇಸಗೆಯಲ್ಲಿ ಬೆಂಕಿ ಬಿದ್ದು ಹೊರ ಹೊಮ್ಮುವ ವಿಷಪೂರಿತ ಹೊಗೆಯಿಂದ ಮಂಗಳನಗರ, ಮಂಗಳಜ್ಯೋತಿ ವ್ಯಾಪ್ತಿಯ ಹಲವು ಜನರು ಅಸ್ವಸ್ಥರಾಗುತ್ತಿದ್ದ ಸಮ ಸ್ಯೆಗೂ ಪರಿಹಾರ ಸಿಗಬೇಕಿದೆ.
ಈ ಮಧ್ಯೆ ನಗರದಲ್ಲಿರುವ ವಸತಿ ಸಮುಚ್ಚಯ, ಮಾಲ್, ಕಲ್ಯಾಣ ಮಂಟಪ ಸಹಿತ ಜನವಸತಿ ಕೇಂದ್ರಗಳಿಗೆ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಕಡ್ಡಾಯವಾಗಿ ಸ್ಥಾಪಿಸಲು ಪಾಲಿಕೆ ಸೂಚಿಸಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ದಂಡ ಪ್ರಯೋಗವೂ ಮಾಡಲಾಗಿದೆ. ಪೂರಕವಾಗಿ ಸ್ವತ್ಛ ಮಂಗಳೂರು ಮೂಲಕ ದೇಶವ್ಯಾಪಿ ಜನಮನ್ನಣೆ ಪಡೆದ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ವಸತಿ ಸಮುಚ್ಚಯಗಳಿಗೆ ಮಣ್ಣಿನ ಮಡಕೆ ನೀಡುವ ಮೂಲಕ ತ್ಯಾಜ್ಯ ಸಂಸ್ಕರಣೆಯ ಹೊಸ ಅಭಿಯಾನವನ್ನು ಚಾಲ್ತಿಯಲ್ಲಿದೆ. ಅಲ್ಲದೆ, ಮನೆ-ಅಪಾರ್ಟ್‌ಮೆಂಟ್‌ಗಳಿಂದ ಒಣ, ಹಸಿ ಕಸವನ್ನು ವಿಂಗಡಿಸಬೇಕೆಂಬ ನಿಯಮ ಜಾರಿಗೆ ಬಂದರೂ ಪರಿಣಾಮಕಾರಿಯಾಗಿ ಅದು ಅನು ಷ್ಠಾನ ವಾಗಿಲ್ಲ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ಸಂಗ್ರಹ ಮತ್ತು ಅದರ ವೈಜ್ಞಾನಿಕ ವಿಲೇವಾರಿಗೆ ಶಾಶ್ವತ ಪರಿಹಾರವನ್ನು ಹುಡುಕುವ ಬಹುದೊಡ್ಡ ಸವಾಲು ಕೂಡ ಮೇಯರ್ ಮತ್ತು ಅವರ ತಂಡದ ಮೇಲಿದೆ.
ತ್ಯಾಜ್ಯಪಾಲಾದ ಮಂದಾರದಲ್ಲಿ ಮತ್ತೆ ಬದುಕು ಕಟ್ಟೋಣ…
ಪಚ್ಚನಾಡಿ ಡಂಪಿಂಗ್‌ಯಾರ್ಡ್‌ನಿಂದ ತ್ಯಾಜ್ಯ ಕುಸಿತದ ಪರಿಣಾಮ ತೆಂಗು-ಕಂಗುಗಳ ಹಸುರು ಸಿರಿಯಿಂದ ಕಂಗೊಳಿಸುತ್ತಿದ್ದ ಕುಡುಪು ಸಮೀಪದ “ಮಂದಾರ’ ಎಂಬ ಸುಂದರ ಪ್ರದೇಶವೇ ಈಗ ತ್ಯಾಜ್ಯರಾಶಿಯಿಂದ ಮುಳುಗಿದೆ. ಸುಮಾರು ಎರಡು ಕಿ.ಮೀ.ನಷ್ಟು ಉದ್ದಕ್ಕೆ ತ್ಯಾಜ್ಯವು ಜಾರಿಬಂದ ಕಾರಣದಿಂದ ಇಲ್ಲಿನ 27 ಮನೆಗಳ ನಿವಾಸಿಗಳ ಬದುಕು ಬೀದಿಗೆ ಬಿದ್ದಿದ್ದು-ಸುದೀರ್ಘ ವರ್ಷದಿಂದ ನೆಲೆಸಿದ್ದ ಮನೆಯನ್ನೇ ಖಾಲಿ ಮಾಡಿದ್ದಾರೆ. ಒಂದೆರಡು ಮನೆಗಳು, ದೈವಸ್ಥಾನ, ನಾಗಬನವು ತ್ಯಾಜ್ಯ ರಾಶಿಯೊಳಗೆ ಮರೆಯಾಗಿದ್ದು, ಸುಮಾರು 5,000ಕ್ಕೂ ಅಧಿಕ ಅಡಿಕೆ-ತೆಂಗಿನ ಮರಗಳು ನಾಶವಾಗಿವೆ, ಪರಿಸರದ ಕುಡಿಯುವ ನೀರು ಹಾಳಾಗಿದೆ. ತೋಡಿನಲ್ಲಿ ಹರಿಯುವ ನೀರು ಫಲ್ಗುಣಿ ಸೇರುತ್ತಿದೆ ಎಂಬ ಅಪವಾದವೂ ಇದೆ. ಸಂತ್ರಸ್ತರ ಪುನರ್ವಸತಿಗೆ 8 ಕೋ.ರೂ. ಬಿಡುಗಡೆಯಾಗಿದ್ದರೂ ಅದು ಅನುಷ್ಠಾನಕ್ಕೆ ಬಂದಿಲ್ಲ. ಸಚಿವರು, ಶಾಸಕರ ಆದಿಯಾಗಿ ಅಧಿಕಾರಿಗಳ ತಂಡ ಮಂದಾರಕ್ಕೆ ಭೇಟಿ ನೀಡಿದ್ದರೂ ಇನ್ನೂ ಪರಿಹಾರ ದೊರಕಿಲ್ಲ. ಮಳೆಗಾಲದಲ್ಲಿ ಮತ್ತೆ ಆತಂಕ ಎದುರಾಗುವ ಭೀತಿಯೂ ಇದೆ. ಹೀಗಾಗಿ ಮಂದಾರ ಪರಿಸರದಲ್ಲಿ ಮತ್ತೆ ಬದುಕು ಕಟ್ಟುವ ಕೆಲಸಕ್ಕೆ ಪಾಲಿಕೆ ಮುಂದಾಗಬೇಕಿದೆ.
ತ್ಯಾಜ್ಯದಿಂದ ವಿದ್ಯುತ್-ಇನ್ನಾದರೂ ಕಾರ್ಯರೂಪಕ್ಕೆ ಬರಲಿ
ಪಚ್ಚನಾಡಿಯಲ್ಲಿ 100 ಕೋ.ರೂ. ವೆಚ್ಚದಲ್ಲಿ ತ್ಯಾಜ್ಯದಿಂದ ಇಂಧನ ತಯಾರಿ ಘಟಕ ಸ್ಥಾಪನೆಯ ಪ್ರಸ್ತಾವನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಡಂಪಿಂಗ್ ಯಾರ್ಡ್‌ಗೆ ದಿನಂಪ್ರತಿ ಬರುವ ಸುಮಾರು 350 ಟನ್ ತ್ಯಾಜ್ಯವನ್ನು ಹಸಿ, ಒಣ ತ್ಯಾಜ್ಯವಾಗಿ ವಿಂಗಡಿಸಿ ಹಸಿ ತ್ಯಾಜ್ಯದಿಂದ ಸಿಎನ್‌ಜಿ ಇಂಧನ, ಒಣ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವುದಾಗಿದೆ. ಸಿಎನ್‌ಜಿ ಇಂಧನವನ್ನು ಕೇಂದ್ರ ಸರಕಾರಕ್ಕೆ, ಒಣ ತ್ಯಾಜ್ಯದಿಂದ ಉತ್ಪಾದನೆಯಾಗುವ ಸುಮಾರು 2 ಮೆ.ವಾ. ವಿದ್ಯುತ್‌ನ್ನು ಮೆಸ್ಕಾಂಗೆ ನೀಡುವ ಪ್ರಸ್ತಾವಯಿತ್ತು. ಪ್ಲಾಸ್ಲಿಕ್ ತ್ಯಾಜ್ಯಗಳನ್ನು ಸಂಸ್ಕರಿಸಿ ಮರುಬಳಕೆ ಮಾಡುವ, ಫರ್ನಿಸ್ ಆಯಿಲ್ ಹಸಿ ಕಸದಿಂದ ಇಂಧನ ತಯಾರಿ ಮಾಡುವಾಗ ಉತ್ಪಾದನೆಯಾಗುವ ನೀರನ್ನು ಸಂಸ್ಕರಿಸಿ ಘಟಕಕ್ಕೆ ಬಳಸಲು, ಒಣ ಕಸ ಉರಿದು ಉಂಟಾಗುವ ಬೂದಿ (ಪೋಟಾಷಿಯಂನ್ನು) ಮಾರಾಟ ಮಾಡುವ ಪ್ರಸ್ತಾವನೆ ಕಾರ್ಯರೂಪಕ್ಕೆ ಬರಬೇಕಿದೆ.
ಸಾರ್ವಜನಿಕರೇ ನಿರ್ವಹಣೆ ಮಾಡಲಿ
ಘನತ್ಯಾಜ್ಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸದೇ ಪಚ್ಚನಾಡಿ, ಮಂದಾರಬೈಲ್ ಪ್ರದೇಶಗಳನ್ನು ಹಾಳು ಮಾಡಿದ್ದೇವೆ. ಈಗಲಾದರೂ ಪಾಲಿಕೆ ಎಚ್ಚೆತ್ತು ಸಾರ್ವಜನಿಕರಿಗೆ ಸೂಕ್ತಮಾರ್ಗದರ್ಶನದಿಂದ ಸಾರ್ವಜನಿಕರು ಅವರವರೇ ನಿರ್ವಹಿಸಿಕೊಳ್ಳುತ್ತಾರೆ. ಪಚ್ಚನಾಡಿಯ ತ್ಯಾಜ್ಯವನ್ನು ವೈಜ್ಞಾನಿಕ ವಿಧಾನಗಳ ಮೂಲಕ ವಿಂಗಡಿಸಿ ಸಾವಯವ ಗೊಬ್ಬರ ಮಾಡುವುದು, ಪ್ಲಾಸ್ಟಿಕ್ ಸಹಿತ ಇನ್ನಿತರ ವಸ್ತುಗಳನ್ನು ಮರು ಉತ್ಪಾದನೆಗೆ ಕಳುಹಿಸುವ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ.
- ಸ್ವಾಮಿ ಏಕಗಮ್ಯಾನಂದ, ರಾಮಕೃಷ್ಣ ಮಠ, ಮಂಗಳೂರು
- ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.