ಪಡಿತರ ಗೋಣಿಯಲ್ಲಿ ತೂಕ ವ್ಯತ್ಯಾಸ
Team Udayavani, Jan 18, 2018, 12:09 PM IST
ಬೆಳ್ತಂಗಡಿ: ತಾಲೂಕಿನಲ್ಲಿ ಪಡಿತರ ಚೀಟಿ ಅಂಗಡಿಗಳಿಗೆ ಅಕ್ಕಿ ಸರಬರಾಜು ಮಾಡುವ ವೇಳೆ ತೂಕದಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ಇದರಿಂದ ಪಡಿತರ ಅಂಗಡಿಗಳಿಗೆ ನಷ್ಟ ಉಂಟಾಗುತ್ತಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಆಗ್ರಹಿಸಿದರು. ಅವರು ಬುಧವಾರ ಇಲ್ಲಿನ ಬೆಳ್ತಂಗಡಿ ತಾ.ಪಂ. ಸಭಾಭವನದಲ್ಲಿ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.
ಕ್ರಮಕ್ಕೆ ಸೂಚನೆ
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ವಸಂತ ಬಂಗೇರ, ಪ್ರತೀ ಕೆಡಿಪಿ ಸಭೆಯಲ್ಲಿ ಇಂತಹ ಆರೋಪ ಬರುತ್ತಿದೆ. ತತ್‌ಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಗೋಣಿ ಚೀಲದಲ್ಲಿದ್ದ ಅಕ್ಕಿಯನ್ನು ಯಾರು ತೆಗೆಯುತ್ತಾರೆ, ಎಲ್ಲಿ ತೆಗೆಯುತ್ತಾರೆ ಎಂಬುದನ್ನು ಪತ್ತೆಹಚ್ಚಬೇಕು. ಪಡಿತರ ಅಕ್ಕಿ ಸಾಗಿಸುವ ವಾಹನದ ಹಿಂದೆ ಅಧಿಕಾರಿಗಳು ಹೋಗಿ ಪತ್ತೆಹಚ್ಚಬೇಕು. ಮುಂದೆ ಇಂತಹ ಘಟನೆ ನಡೆದರೆ ಅ ಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೆಸ್ಕಾಂ
ಕಳೆಂಜ, ನಿಡ್ಲೆ, ಶಿಶಿಲ ಮುಂತಾದೆಡೆ ಹಳೆ ವಿದ್ಯುತ್ ವಯರ್‌ಗಳನ್ನು ಬದಲಾಯಿಸಲು ಸಭೆಯಲ್ಲಿ ಅನೇಕ ಬಾರಿ ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಕೊರಗಪ್ಪ ನಾಯ್ಕ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತ ಶಿವಶಂಕರ್, ಈಗಾಗಲೇ 1.3 ಕೋಟಿ ರೂ. ಮಂಜೂರಾಗಿದ್ದು, ಇದಕ್ಕೆ ಅತ್ಯಾಧುನಿಕ ಉಪಕರಣಗಳು ಬರಬೇಕಾಗಿವೆ. ಈಗಾಗಲೇ ಟೆಂಡರ್ ಮುಗಿದಿದೆ. 2 ತಿಂಗಳೊಳಗಕಾಮಗಾರಿ ಪೂರ್ಣಗೊಳ್ಳಲಿದೆ. ಅಲ್ಲದೆ ತಾಲೂಕಿಗೆ 360 ಟ್ರಾನ್ಸ್‌ಫಾರ್ಮರ್ ಮಂಜೂರಾಗಿದ್ದು, ಶೀಘ್ರ ಅಳವಡಿಸಲಾಗುವುದು ಎಂದರು.
ಟ್ರಾಫಿಕ್
ಉಜಿರೆ-ಗುರುವಾಯನಕೆರೆ ಮಧ್ಯೆ ಟ್ರಾಫಿಕ್ ಸಮಸ್ಯೆ ಬಗ್ಗೆ ಸದಸ್ಯರು ಅತೃಪ್ತಿ ಸೂಚಿಸಿದರು. ಇದಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ಅವರಿಗೆ ಶಾಸಕ ಬಂಗೇರ, ರಸ್ತೆ ಮಧ್ಯದಲ್ಲಿ ವಾಹನ ನಿಲ್ಲಿಸುವವರಿಗೆ ಕೇಸು ದಾಖಲಿಸಬೇಕು. ಸಮರ್ಥ ಪೊಲೀಸ್ ಸಿಬಂದಿಯನ್ನು ಟ್ರಾಫಿಕ್ ನಿಯಂತ್ರಣಕ್ಕೆ ನೇಮಿಸಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದರು. ಅನೇಕ ಬಾರಿ ಈ ಕುರಿತು ಸೂಚಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಅಪಾಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ
ಅರಸಿನಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಅಪಾಯಕಾರಿ ಮರ ಬಿದ್ದು ಕಟ್ಟಡಕ್ಕೆ ತೊಂದರೆಯಾಗುತ್ತಿದೆ.
ಇದನ್ನು ತೆರವುಗೊಳಿಸುವಂತೆ ಕಳೆದ ಎರಡು ಕೆಡಿಪಿ ತ್ತೈಮಾಸಿಕ ಸಭೆಯಲ್ಲಿ ಪ್ರಸ್ತಾವಿಸಿದರೂ ಕ್ರಮ ಕೈಗೊಂಡಿಲ್ಲ
ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಉಪ್ಪಿನಂಗಡಿ ಅರಣ್ಯ ವಲಯಾಧಿಕಾರಿ
ಸೌಮ್ಯಲತಾ, ಕೋರ್ಟ್ ಆದೇಶದಂತೆ ಸರಕಾರಿ ಪ್ರದೇಶದ ಮರವನ್ನು ಕಡಿಯಬೇಕಾದರೆ 10 ಗಿಡಗಳನ್ನು ನೆಡಬೇಕು
ಮತ್ತು ಅದರ 5 ವರ್ಷ ನಿರ್ವಹಣೆಗೆ ಹಣ ಠೇವಣಿ ಇಡಬೇಕು ಎಂಬ ನಿಯಮವಿದ್ದು, ಇದರಿಂದ ವಿಳಂಬವಾಗಿದೆ.
ಇದೀಗ ಆ ನಿಯಮಕ್ಕೆ ತಡೆಯಾಜ್ಞೆ ಬಂದಿದ್ದು, ಮುಂದೆ ಕಾನೂನಿನಡಿಯಲ್ಲಿ ತೆರವುಗೊಳಿಸಲಾಗುವುದು ಎಂದರು.
ಇದಕ್ಕೆ ಶಾಸಕ ಬಂಗೇರ, ತತ್‌ಕ್ಷಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ರಾಜಕೀಯ ಭಾಷಣ
ಶಾಲಾ ವಾರ್ಷಿಕೋತ್ಸವದಲ್ಲಿ ಸ್ಥಳೀಯ ಜನಪ್ರತಿನಿಧಿಗಳಲ್ಲದೆ ಹೊರಗಿನವರನ್ನು ಪಕ್ಷದ ಹುದ್ದೆಯಲ್ಲಿದ್ದವರನ್ನು ಸಭೆಗೆ ಕರೆಸಿ ದಿಕ್ಸೂಚಿ ಭಾಷಣ ಮಾಡಿಸುತ್ತಿದ್ದಾರೆ. ಇದು ಶಿಕ್ಷಣ ಇಲಾಖೆ ನಿಯಮ ಮೀರಿ ಮಾಡುವ ಕೆಲಸವಾಗಿದೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಜಿ.ಪಂ. ಶಿಕ್ಷಣ ಮತ್ತು ಸ್ಥಾಯೀಸಮಿತಿ ಅಧ್ಯಕ್ಷ ಶಾಹುಲ್ ಸಮೀದ್ ಆಗ್ರಹಿಸಿದರು. ಈ ಬಗ್ಗೆ ಶಾಸಕ ಬಂಗೇರ ಶಿಕ್ಷಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ಶಿಕ್ಷಣಾಧಿಕಾರಿ ಗುರುಪ್ರಸಾದ್, ಕೆಲವೊಂದು ಕಡೆ ಇಂತಹ ಎಡವಟ್ಟು ನಡೆದಿದೆ. ಮುಂದೆ
ಸರಿಪಡಿಸಲಾಗುವುದು ಎಂದಾಗ ಮತ್ತೆ ಆಕ್ರೋಶಗೊಂಡ ಶಾಸಕರು, ಶಾಲೆಯ ವಾರ್ಷಿಕೋತ್ಸವ ವಿದ್ಯಾರ್ಥಿಗಳಿಗೆ
ಪ್ರಯೋಜನವಾಗಬೇಕೆ ಹೊರತು ರಾಜಕೀಯ ಉದ್ದೇಶಕ್ಕೆ ಬಳಕೆಯಾಗಬಾರದು. ಮುಂದೆ ಇಂತಹ ಘಟನೆ ಸಂಭವಿಸಿದರೆ ನಿಮ್ಮ ಇರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಡಿಪೋ ಆಗಿಲ್ಲ
ಉಜಿರೆ ಅರಳಿ ಎಂಬಲ್ಲಿ ಕೆಎಸ್‌ಆರ್‌ಟಿಸಿ ಡಿಪ್ಪೋಗೆ ಜಮೀನು ಮಂಜೂರಾತಿ ಬಗ್ಗೆ ಕಳೆದ ಮೂರು ಸಭೆಗಳಲ್ಲಿ ಪ್ರಸ್ತಾವವಾದರೂ ಕ್ರಮ ಕೈಗೊಂಡಿಲ್ಲ ಎಂದು ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ತಿಳಿಸಿದರು. ಇದಕ್ಕೆ ಮಧ್ಯ ಪ್ರವೇಶಿಸಿದ ಜಿ.ಪಂ. ಸದಸ್ಯೆ ನಮಿತಾ, ಇದು ನನ್ನ ವ್ಯಾಪ್ತಿಗೆ ಒಳಪಟ್ಟ ವಿಚಾರ. ಇದನ್ನು ನಾನೇ ಸಭೆಯಲ್ಲಿ ಪ್ರಸ್ತಾವಿಸುತ್ತೇನೆ. ನಿಮ್ಮ ವ್ಯಾಪ್ತಿಯನ್ನು ನೀವು ನೋಡಿಕೊಳ್ಳಿ ಎಂದಾಗ ಸ್ವಲ್ಪ ಮಾತಿನ ಚಕಮಕಿ ನಡೆಯಿತು. ಇದಕ್ಕೆ ಉತ್ತರಿಸಿದ ಕೊರಗಪ್ಪ ನಾಯ್ಕ, ತಾಲೂಕಿನ ಅಭಿವೃದ್ಧಿ ಹಿತದೃಷ್ಟಿಯಲ್ಲಿ ಯಾರೂ ಎಲ್ಲಿಯ ವಿಚಾರವನ್ನೂ ಈ ಸಭೆಯಲ್ಲಿ ಪ್ರಸ್ತಾವಿಸಬಹುದು ಎಂದು ಮಾತು ಮುಂದುವರಿಸಿದರು.
ಶಾಸಕರು, ಅರಣ್ಯ ಇಲಾಖೆಯವರು ಸರಕಾರಕ್ಕೆ ತಪ್ಪುಮಾಹಿತಿ ನೀಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಮರುಪರಿಶೀಲನೆ
ಮಾಡಿ ನಿವೇಶನ ಒದಗಿಸುವಂತೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ, ಇದು
ಡೀಮ್ಡ್ ಫಾರೆಸ್ಟ್ ಜಮೀನಾಗಿದ್ದು, ಇದರ ಪಹಣಿಪತ್ರ ನಮ್ಮ ಹೆಸರಿಗೆ ಆಗಿದೆ. ಕೊಡಲು ಸಾಧ್ಯವಿಲ್ಲ ಎಂದಾಗ
ಮತ್ತೆ ತರಾಟೆಗೆ ತೆಗೆದುಕೊಂಡ ಶಾಸಕರು, ಅರಣ್ಯ ಫಾರೆಸ್ಟ್ ಮತ್ತು ಡೀಮ್ಡ್ ಫಾರೆಸ್ಟ್ ಗೆ ವ್ಯತ್ಯಾಸವಿದ್ದು, ಇದು ನಿಮ್ಮ
ತಪ್ಪಿನಿಂದಲೇ ಈ ರೀತಿಯಾಗಿದೆ. ಕೂಡಲೇ ಇದಕ್ಕೆ ಮರು ಪ್ರಸ್ತಾವನೆ ಕಳಿಸಿ ಕೆಎಸ್‌ಆರ್‌ಟಿಸಿ ಡಿಪ್ಪೋಗೆ ನಿವೇಶನ
ಒದಗಿಸಲು ಆದೇಶಿಸಿದರು.
ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ
ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ತಾ.ಪಂ
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಸವರಾಜ್ ಕೆ. ಅಯ್ಯಣ್ಣನವರ್ ಉಪಸ್ಥಿತರಿದ್ದರು. ತಾ.ಪಂ. ಸಂಯೋಜಕ ಜಯನಂದ್ ಹಾಗೂ ಮ್ಯಾನೇಜರ್ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.
ಅಧಿಕಾರಿಗಳಿಗೆ ಕೃತಜ್ಞತೆ
ಸಭೆ ಪ್ರಾರಂಭವಾಗುತ್ತಿದ್ದಂತೆ ಜ. 7ರಂದು ತಾಲೂಕಿಗೆ ಮುಖ್ಯಮಂತ್ರಿ ಆಗಮನದ ವೇಳೆ ಮುತುವರ್ಜಿಯಿಂದ ಅತ್ಯಂತ ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿಗಳಿಗೆ ಶಾಸಕ ವಸಂತ ಬಂಗೇರ ಅಭಿನಂದನೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.