ಅಪ್ಪ-ಅಮ್ಮ ಹಾಕಿದ ಬುನಾದಿಯಲ್ಲೇ ಮಗ ಭದ್ರ!
Team Udayavani, Dec 5, 2017, 6:00 AM IST
ಕೊಣಾಜೆ: ಊರಲ್ಲಿ ಸರಿಯಾದ ಕೆಲಸವಿಲ್ಲದೆ 13 ವರ್ಷಗಳ ಹಿಂದೆ ಬಾಗಲಕೋಟೆಯಿಂದ ಮಂಗಳೂರಿಗೆ ವಲಸೆ ಬಂದ ದಂಪತಿ, ಮೊದಲಿಗೆ ಇಲ್ಲಿ ಮಾಡಿದ್ದು ಪೊಲೀಸ್ ಠಾಣೆಯ ನೂತನ ಕಟ್ಟಡದ ಪಾಯ ಅಗೆಯುವ ಕೆಲಸ. ಈಗ ಅದೇ ಠಾಣೆಯಲ್ಲಿ ಮಗ ಪೊಲೀಸ್ ಅಧಿಕಾರಿ! ತಾವೂ ಕೂಲಿ ಕೆಲಸ ಮಾಡುತ್ತಲೇ ಎಂಜಿನಿಯರಿಂಗ್ ಪದವಿ ಪೂರೈಸಿರುವ ರವಿ, ಕೊಣಾಜೆ ಪೊಲೀಸ್ ಠಾಣೆಯ ನೂತನ ಸಬ್ ಇನ್‌ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಬೀಳಗಿ ತಾಲೂಕಿನ ಸುನಗ ಗ್ರಾಮದ ಪೀರೂ ಪವಾರ್ ಹಾಗೂ ಸುಮಿತ್ರಾ ದಂಪತಿ ಒಂದು ವರ್ಷ ಕಾಲ ಕೊಣಾಜೆ ಹಾಗೂ ಉರ್ವ ಪೊಲೀಸ್ ಠಾಣೆ ಹಾಗೂ ನೆಲ್ಯಾಡಿಯ ಸರಕಾರಿ ವಸತಿ ಗೃಹ ಕಟ್ಟಡದ ಪಾಯ ತೆಗೆಯುವ ಕೆಲಸ ಮಾಡಿದ್ದರು. ಪೀರೂ ಪವಾರ ಅವರ ನಾಲ್ವರು ಮಕ್ಕಳಲ್ಲಿ ಇಬ್ಬರು ಪುತ್ರಿಯರು ಸುನಗದಲ್ಲೇ ಉಳಿದಿದ್ದರು. ಏಳನೇ ತರಗತಿ ಓದುತ್ತಿದ್ದ ರವಿ ಪವಾರ ಹಾಗೂ ನಾಲ್ಕನೇ ತರಗತಿಯಲ್ಲಿದ್ದ ಮೋಹನ್, ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಕಾರಣಕ್ಕೆ ಪೋಷಕರೊಂದಿಗೆ ವಲಸೆ ಬಂದು ಬೈಕಂಪಾಡಿ ಕೈಗಾರಿಕ ಪ್ರದೇಶದ ಪಾಳುಬಿದ್ದ ಕಾರ್ಖಾನೆಯೊಂದರ ಕಟ್ಟಡದಲ್ಲಿ ವಾಸಿಸಲು ಆರಂಭಿಸಿದ್ದರು.
ರವಿ ಪವಾರ ಬೈಕಂಪಾಡಿಯ ಮೀನಕಳಿಯ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಗೆ ದಾಖಲಾದರೆ, ಸಹೋದರ ಅಲ್ಲೇ ಪಕ್ಕದ ಶಾಲೆಯಲ್ಲಿ 5ನೇ ತರಗತಿ ಸೇರಿದ. ಚಿಮಿಣಿ ದೀಪದಲ್ಲೇ ಓದಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ರವಿ 523
ಅಂಕಗಳೊಂದಿಗೆ ಶಾಲೆಗೆ ಮೊದಲಿಗರಾದರು.
ಮಂಗಳೂರಿನ ವೈದ್ಯ ಡಾ| ಚಂದ್ರಶೇಖರ್ ಅವರ ಸಲಹೆಯಂತೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು, ಮಂಗಳೂರಿನ ಗೋಕರ್ಣನಾಥ ಕಾಲೇಜಿನಲ್ಲಿ ವ್ಯಾಸಂಗ ನಡೆಸಿದರು. ಸಿಇಟಿ ಪರೀಕ್ಷೆಯಲ್ಲೂ ಉತ್ತಮ ಅಂಕಗಳಿಸಿದ್ದರಿಂದ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೈನ್ಸ್ ಓದಲು ಅವಕಾಶ ಸಿಕ್ಕಿತು. ಈ ಒಂಬತ್ತು ವರ್ಷ ಶುಕೂರು ಅವರ ಪಾಳುಬಿದ್ದ ಪ್ಲಾಸ್ಟಿಕ್ ಫ್ಯಾಕ್ಟರಿಯ ಕಟ್ಟಡದಲ್ಲೇ ವಾಸ. ಕಟ್ಟಡದ ಒಂದು ಸಣ್ಣ ಕೋಣೆಗೆ ಬಾಗಿಲೂ ಇರಲಿಲ್ಲ.ಚಿಮಣಿ ದೀಪವೇ ಈ ಮನೆ ಬೆಳಗಬೇಕಿತ್ತು. ಕೊನೆಯ ವರ್ಷ ಪಕ್ಕದ ಫ್ಯಾಕ್ಟರಿಯ ವಿದ್ಯುದ್ದೀಪದ ಬೆಳಕಿನಲ್ಲಿ ಓದಲು ಅವಕಾಶ ಸಿಕ್ಕಿತು ಎಂದು ರವಿ ಪವಾರ ನೆನಪಿಸಿಕೊಳ್ಳುತ್ತಾರೆ.
ಶಾಲೆ ಮುಗಿದ ಬಳಿಕ ಕೂಲಿ: ಏಳನೇ ತರಗತಿಯಿಂದಲೇ ರವಿ ಪವಾರ ಅವರು ತಮ್ಮ ತಂದೆ ಮತ್ತು ತಮ್ಮನೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದರು. ಬಳ್ಳಾರಿಯಿಂದ ಎನ್‌ಎಂಪಿಟಿಗೆ ರೈಲಿನಲ್ಲಿ ಬರುತ್ತಿದ್ದ ಅದಿರನ್ನು ಖಾಲಿ ಮಾಡಿದರೆ ಒಂದು ಬೋಗಿಗೆ 900 ರೂ. ಸಿಗುತ್ತಿತ್ತು. ಯೂರಿಯಾ ಅನ್‌ಲೋಡ್ ಮಾಡುವ ಕೆಲಸವನ್ನೂ ಮಾಡಿದ್ದರು. ಪದವಿ ಪೂರೈಸಿದ ಮೇಲೆ ಬೆಂಗಳೂರಿನಲ್ಲಿ ಕೆಲವು ತಿಂಗಳ ಕಾಲ ಖಾಸಗಿ ಸಂಸ್ಥೆಯೊಂದರಲ್ಲಿ ನೌಕರಿ ಮಾಡಿದ್ದರು.
ಮಗನ ಕಲಿಕೆಗೆ ಗುಜರಿ ಹೆಕ್ಕಿದ ತಾಯಿ: ಎಂಜಿನಿಯರಿಂಗ್ ಕಾಲೇಜಿಗೆ ಸೇರಿದ ಮೊದಲಿಗೆ ಕೂಲಿ ಕೆಲಸ ಇರಲಿಲ್ಲ. ಸಹೋದರಿ ಹಾಗೂ ಪುತ್ರಿಯರ ಮದುವೆ ಮಾಡಿ ತಂದೆ ಪೀರೂ ಪವಾರ ಸಾಲದಲ್ಲಿದ್ದರು. ಹಣದ ಅಡಚಣೆಯಿಂದ ಶಿಕ್ಷಣ ಮೊಟಕಾಗಬಾರದೆಂದು ರವಿ ಕೂಲಿ ಕೆಲಸ ಮಾಡಿದರು. ತಾಯಿ ಸುಮಿತ್ರಾ ದಿನವಿಡೀ ಅಲೆದಾಡಿ ಗುಜರಿ ಹೆಕ್ಕಿ, ಮಗನ ಕಲಿಕೆಗೆ ಆಸರೆಯಾದರು. ರವಿ ಎಂಜಿನಿಯರಿಂಗ್ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪೂರೈಸಿದರೆ, ಸಹೋದರ ಮೋಹನ್ ಎಸೆಸೆಲ್ಸಿಗೇ ಶಿಕ್ಷಣ ನಿಲ್ಲಿಸಿ ಕುಟುಂಬದ ನೆರವಿಗೆ ನಿಂತರು. ಬದುಕಿಗೆ ಗುರಿಯೇ ಇರಲಿಲ್ಲ. ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಿದಾಗಲೂ ಕೆಲಸ ಸಿಗುತ್ತೆ ಎನ್ನುವ ನಂಬಿಕೆ ಇರಲಿಲ್ಲ. ಆದರೆ, ಜನರಲ್ ಮೆರಿಟ್‌ನಲ್ಲಿ 22ನೇ ಸ್ಥಾನ ಪಡೆದಿದ್ದರಿಂದ ಸಬ್ ಇನ್‌ಸ್ಪೆಕ್ಟರ್ ಆಗಿದ್ದೇನೆ. ಅಸೈಗೋಳಿಯ ಪೊಲೀಸ್ ವಸತಿ ಗೃಹದಲ್ಲಿ ಹೆತ್ತವರೊಂದಿಗೆ ವಾಸವಿದ್ದೇನೆ. ಸಹೋದರ ಶಿವಮೊಗ್ಗದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ರವಿ ವಿವರಿಸಿದರು.
ಕೆಎಎಸ್ ಪರೀಕ್ಷೆ ತಯಾರಿಯಲ್ಲಿ: ಕೆಎಎಸ್ ಪರೀಕ್ಷೆ ತಯಾರಿಯಲ್ಲಿರುವ ರವಿ, ಅರ್ಹತಾ ಪರೀಕ್ಷೆ ತೇರ್ಗಡೆಯಾಗಿದ್ದು, ಡಿ. 16ರಂದು ನಡೆಯಲಿರುವ ಮುಖ್ಯ ಪರೀಕ್ಷೆ ಬರೆಯಲಿದ್ದಾರೆ. ಎರಡು ವರ್ಷಗಳ ಕಾಲ ಪ್ರೊಬೆಷನರಿ ಮುಗಿಸಿ ಈಗ ಪೂರ್ಣ ಪ್ರಮಾಣದ ಎಸ್‌ಐ ಆಗಿರುವ ಕಾರಣ, ಓದಿಗೆ ಸಮಯ ಸಾಲುತ್ತಿಲ್ಲ. ಆದರೂ ಕೆಎಎಸ್ ಉತ್ತೀರ್ಣರಾಗುವ ಭರವಸೆ ಹೊಂದಿದ್ದಾರೆ.
ವರದಿ: ವಸಂತ ಕೊಣಾಜೆ
ಕೂಲಿ ಕೆಲಸಕ್ಕೆ 50ರಿಂದ 60 ರೂ. ಕೊಡುತ್ತಿದ್ದರು. ಗುಜರಿ ಆರಿಸಿದರೆ 300ರಿಂದ 400 ರೂ. ವರೆಗೆ ಸಿಗುತ್ತಿತ್ತು. ಎಷ್ಟು ಕಷ್ಟವಾದರೂ ಮಕ್ಕಳನ್ನು ಓದಿಸಬೇಕು ಎನ್ನುವ ಹಂಬಲ ಇತ್ತು. ಹಣದ ಸಮಸ್ಯೆ ಆದಾಗ ಅಪ್ಪ ಶಾಲೆ ಬಿಡಿಸಲು ಹೇಳಿದ್ದರು. ಆದರೆ ನಾನು ಬೇರೆಯವರ ಮನೆಯಲ್ಲಿ ಜೀತ ಮಾಡಿಯಾದರೂ ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಶಿಕ್ಷಣ ನೀಡುತ್ತೇನೆ ಎಂದಿದ್ದೆ. ಈಗ ದೇವರು ಕಣ್ಣು ಬಿಟ್ಟಿದ್ದಾರೆ. ನಾವು ಪಟ್ಟ ಶ್ರಮಕ್ಕೆ ಫಲ ಸಿಕ್ಕಿದೆ.
– ಸುಮಿತ್ರಾ ಪವಾರ, ರವಿ ಪವಾರ ತಾಯಿ
ಇಪ್ಪತ್ತು ವರ್ಷಗಳಿಂದ ಅಪ್ಪ, ಅಮ್ಮ ಕಷ್ಟ ಪಟ್ಟದನ್ನು ಕಂಡಿದ್ದೇನೆ. ಅವರೊಂದಿಗೆ ನಾನೂ ದುಡಿದಿದ್ದೇನೆ. ಪೊಲೀಸ್ ಇಲಾಖೆಗೆ ಸೇರಿದ ದಿನವೇ ಅಪ್ಪ, ಅಮ್ಮನನ್ನು ಕೆಲಸಕ್ಕೆ ಕಳುಹಿಸುವುದನ್ನು ನಿಲ್ಲಿಸಿದ್ದೇನೆ. ಅವರಿಗೆ ನೆಮ್ಮದಿಯ ಜೀವನ ನೀಡುವುದೇ ನನ್ನ ಆದ್ಯ ಕರ್ತವ್ಯ.
– ರವಿ ಪವಾರ ಪಿಎಸ್‌ಐ,ಕೊಣಾಜೆ ಪೊಲೀಸ್ ಠಾಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.