ಹೆಚ್ಚುತ್ತಿರುವ ಅಪಘಾತಗಳಿಗೆ ಯಾರು ಹೊಣೆ ?
ಒಂದೇ ವಾರದಲ್ಲಿ ಇಬ್ಬರು ಮಹಿಳೆಯರ ಸಾವು !
Team Udayavani, Dec 3, 2019, 4:23 AM IST
ಮಹಾನಗರ: ನಗರ ವ್ಯಾಪ್ತಿಯಲ್ಲಿ ಒಂದೇ ವಾರದೊಳಗೆ ಇಬ್ಬರು ಮಹಿಳೆಯರು ಸರಕು ವಾಹನ ಚಾಲಕರ ನಿರ್ಲಕ್ಷ್ಯದಿಂದಾಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಆ ಮೂಲಕ, ನಗರದಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರು, ಪಾದಚಾರಿಗಳಿಗೆ ಇಲ್ಲಿನ ರಸ್ತೆಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಎನ್ನುವ ಆತಂಕ ಎದುರಾಗಿದೆ.
ಏಕೆಂದರೆ ನ. 27ರಂದು ನಗರದ ಕುಂಟಿಕಾನದ ಬಳಿ ಟ್ರಕ್‌ವೊಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ 42 ವರ್ಷದ ಮಹಿಳೆಗೆ ಢಿಕ್ಕಿ ಹೊಡೆದ ಪರಿಣಾಮ ಆಕೆ ಸಾವನ್ನಪ್ಪಿದ್ದರು. ಈ ಅಪಘಾತದ ಬಳಿಕ “ಸುದಿನ’ ಅಲ್ಲಿ ಪದೇಪದೇ ಅಪಘಾತ ಸಂಭವಿಸಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿತ್ತು. ಅದಾದ ಕೇವಲ ಐದೇ ದಿನಕ್ಕೆ ನಗರದಲ್ಲಿ ಮನಕಲಕುವ ಮತ್ತೂಂದು ಅಪಘಾತ ಸಂಭವಿಸಿರುವುದು ಶೋಚನೀಯ.
ಕದ್ರಿ ಕಂಬಳ ರಸ್ತೆಯ ಜಂಕ್ಷನ್‌ನಲ್ಲಿ ರವಿವಾರ ಸಂಭವಿಸಿದ ಅಪಘಾತದಲ್ಲಿ ಟ್ರಕ್ ಚಾಲಕ ಎದುರುಗಡೆಯಿಂದ ಬರುತ್ತಿದ್ದ ಆಟೊರಿಕ್ಷಾಗೆ ಢಿಕ್ಕಿ ಹೊಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ 55 ವರ್ಷದ ಅಧ್ಯಾಪಿಕೆಯೊಬ್ಬರು ಮೃತಪಟ್ಟಿದ್ದಾರೆ. ಈ ಎರಡು ಅಪಘಾತಗಳನ್ನು ನೋಡಿದಾಗ, ನಗರದಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಅಮಾಯಕರ ಪ್ರಾಣಕ್ಕೆ ಸಂಚಕಾರ ತರುತ್ತಿರುವ ಇಂಥ ಘನ ವಾಹನಗಳ ಮೇಲೆ ಸಂಬಂಧಪಟ್ಟವರು ಸರಿಯಾಗಿ ಕಣ್ಗಾವಲು ವಹಿಸುತ್ತಿಲ್ಲವೇ ಎನ್ನುವ ಪ್ರಶ್ನೆ ಒಂದೆಡೆಯಾದರೆ, ಇನ್ನೊಂದೆಡೆ, ನಗರ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನ ಸವಾರರ ಸುರಕ್ಷತೆಗೆ ಆದ್ಯತೆ ವಹಿಸಲಾಗಿದೆಯೇ ಎನ್ನುವ ಪ್ರಶ್ನೆಯೂ ಮೂಡುತ್ತದೆ.
ನಗರದ ಎಲ್ಲ ರಸ್ತೆಗಳಲ್ಲಿಯೂ ವಾಹನ ದಟ್ಟನೆ ಕಂಡುಬರುತ್ತಿದೆ. ಹಾಗೆಯೇ ನಾಲ್ಕು ಕಡೆಗೆ ವಾಹನಗಳು ಹಾದು ಹೋಗುವ ಜಂಕ್ಷನ್‌ಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಹೀಗಿರುವಾಗ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ಅನುಗುಣವಾಗಿ ನಗರದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆಯೇ; ಅಂಥ ರಸ್ತೆಗಳಲ್ಲಿ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಸೂಚನ ಫಲಕ ಅಥವಾ ವೈಜ್ಞಾನಿಕ ಹಂಪ್ಸ್ ಅಳವಡಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದರೆ, ವಾಸ್ತವ ಚಿತ್ರಣವೇ ಬೇರೆಯಿದೆ.
ಹಲವೆಡೆ ಸೂಚನ ಫಲಕಗಳಿಲ್ಲ
ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಕಾರಣಕ್ಕೆ ಒಂದಷ್ಟು ವಾಹನ ಸವಾರರನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಸಾವಿರಾರು ರೂ. ದಂಡ ಹಾಕಿದ ಮಾತ್ರಕ್ಕೆ ಅಪಘಾತಗಳ ಸಂಖ್ಯೆ ಕಡಿಮೆಯಾಗುವುದಿಲ್ಲ. ಅದರ ಜತೆಗೆ ನಗರದ ಯಾವೆಲ್ಲ ಜಂಕ್ಷನ್‌ಗಳು-ಸಿಗ್ನಲ್‌ಗಳು ಪ್ರಯಾಣಕ್ಕೆ ಅಪಾಯಕಾರಿಯಾಗಿವೆಯೋ ಅಂಥ ಕಡೆ ಅಗತ್ಯ ಕ್ರಮ ತೆಗೆದುಕೊಳ್ಳುವುದಕ್ಕೆ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಪಾಲಿಕೆಯವರು ಮುತುವರ್ಜಿ ವಹಿಸಬೇಕು. ಆದರೆ ಈ ವಿಚಾರದಲ್ಲಿ ಪಾಲಿಕೆ ಹಾಗೂ ಸಂಚಾರಿ ಪೊಲೀಸರ ನಡುವೆ ಹೊಂದಾಣಿಕೆ ಕೊರತೆಯಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ನಗರದ ಬಹುತೇಕ ಪ್ರಮಖ ರಸ್ತೆಗಳು, ಸಿಗ್ನಲ್-ಜಂಕ್ಷನ್‌ಗಳಲ್ಲಿ ಸುರಕ್ಷತಾ ಸೂಚನ ಫಲಕಗಳೇ ಇಲ್ಲ. ಈ ಬಗ್ಗೆ ಸಂಚಾರಿ ಪೊಲೀಸರನ್ನು ಕೇಳಿದರೆ, “ಅದು ಪಾಲಿಕೆ ಮಾಡಬೇಕಾದ ಕೆಲಸ’ ಎನ್ನುವ ಉತ್ತರ ಬರುತ್ತಿದೆ. ಅತ್ತ, ಪಾಲಿಕೆಯವರು ನಗರದಲ್ಲಿನ ಅಪಘಾತಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ.
ಕೋನ್ಸ್‌ಗಳು ಕಿತ್ತು ಹೋಗಿವೆ
ಸುಗಮ ವಾಹನ ಸಂಚಾರದ ನಿಟ್ಟಿನಲ್ಲಿ ವಿವಿಧ ರಸ್ತೆಗಳಲ್ಲಿ ಅಳವಡಿಸಿದ್ದ ಕೋನ್ಸ್‌ಗಳು ಬಹುತೇಕ ಕಡೆಗಳಲ್ಲಿ ಕಿತ್ತು ಹೋಗಿ ಈಗ ಅದಕ್ಕೆ ಜೋಡಿಸಿದ್ದ ಮೊಳೆಗಳು ಮಾತ್ರ ಉಳಿದಿವೆ.
ಈಗ ಅದೇ ಮೊಳೆಗಳು ಸವಾರರಿಗೆ ಅಪಾಯದ ಮುನ್ಸೂ ಚನೆಯನ್ನೂ ನೀಡುತ್ತಿವೆ. ಅಲ್ಲದೆ ಝೀಬ್ರಾ ಕ್ರಾಸ್‌ಗಳಿಗೆ, ಹಂಪ್‌ಗ್ಳಿಗೆ ಬಳಿದಿದ್ದ ಬಣ್ಣ ಬಹುತೇಕ ರಸ್ತೆಗಳಲ್ಲಿ ಮಾಸಿವೆ. ಬಹಳಷ್ಟು ರಸ್ತೆಗಳಲ್ಲಿ, ಜಂಕ್ಷನ್‌ಗಳಲ್ಲಿದ್ದ ಸೂಚನ ಫಲಕಗಳು ಕಣ್ಮರೆಯಾಗಿದ್ದು, ಇನ್ನೂ ಕೆಲವು ಕಡೆಗಳಲ್ಲಿ ಸೂಚನ ಫಲಕಗಳನ್ನು ಅಳವಡಿಸಿಯೇ ಇಲ್ಲ. ಹಲವು ಕಡೆಗಳಲ್ಲಿ ಕಾಮಗಾರಿಗಳು ನಡೆಯುತ್ತಿದ್ದರೂ ನಿಯಮಾನುಸಾರ ಅಲ್ಲಿ ಸವಾರರಿಗೆ ಅನುಕೂಲವಾಗುವಂತೆ ಯಾವುದೇ ಸೂಚನ ಫಲಕಗಳನ್ನು ಹಾಕಿರುವುದಿಲ್ಲ.
ನಗರ ವ್ಯಾಪ್ತಿಯಲ್ಲಿ ವಾಹನಗಳ ವೇಗ ಮಿತಿ ಗಂಟೆಗೆ 45ರಿಂದ 50 ಕಿ.ಮೀ. ಎಂದು ನಿಗದಿ ಪಡಿಸಿದ್ದರೂ ಬಹಳಷ್ಟು ಮಂದಿ ವಾಹನ ಚಾಲಕರು ಈ ನಿಯಮವನ್ನು ಕಡೆಗಣಿಸುತ್ತಿರುವುದು ಕಂಡು ಬರುತ್ತಿದೆ.
ಮಿತಿ ಮೀರಿದ ವೇಗದ ಚಾಲನೆಯ ಜತೆಗೆ ರಸ್ತೆಯ ಎಲ್ಲೆಂದರಲ್ಲಿ ಯು- ಟರ್ನ್ ತೆಗೆದುಕೊಳ್ಳುವ ವಾಹನ ಚಾಲಕರಿಗೂ ಕೊರತೆ ಇಲ್ಲ. ಬಂಟ್ಸ್ ಹಾಸ್ಟೆಲ್- ಪಿವಿಎಸ್ ಜಂಕ್ಷನ್ ರಸ್ತೆಯಲ್ಲಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಆದರೆ ಸುಮಾರು ಅರ್ಧ ಕಿ.ಮೀ. ಉದ್ದದ ಈ ರಸ್ತೆಯಲ್ಲಿ 5-6 ಕಡೆ ಯು- ಟರ್ನ್ ತೆಗೆದುಕೊಳ್ಳಲು ಅವಕಾಶವಿದೆ.
ಕಾರು, ಆಟೋ ರಿಕ್ಷಾ, ದ್ವಿಚಕ್ರ ವಾಹನ ಸವಾರರು ಎಲ್ಲೆಂದರಲ್ಲಿ ಯು- ಟರ್ನ್ ತೆಗೆದುಕೊಳ್ಳುತ್ತಿದ್ದು, ಇದರಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರ ಮತ್ತಷ್ಟು ನಿಧಾನಗೊಳ್ಳುತ್ತಿದೆ ಮಾತ್ರವಲ್ಲ, ಅಪಘಾತಗಳಿಗೂ ಕಾರಣವಾಗುತ್ತಿರುವುದು ಕಂಡು ಬಂದಿದೆ.
10 ದಿನಗಳಲ್ಲಿ 4 ಮಂದಿ ಸಾವು!
ನ. 21ರಿಂದ ಡಿ. 1ರ ವರೆಗಿನ 10 ದಿನಗಳಲ್ಲಿ ನಗರದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮಹಿಳೆಯರ ಸಹಿತ ನಾಲ್ವರು ಸಾವನ್ನಪ್ಪಿದ್ದಾರೆ. ನ. 21ರಂದು ಉಜೊjàಡಿಯಲ್ಲಿ ಸ್ಕೂಟರಿಗೆ ಹಿಂಬದಿ ಯಿಂದ ಸಿಟಿ ಬಸ್ ಢಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ್ದರು. ನ. 22ರಂದು ನೀರು ಮಾರ್ಗದಲ್ಲಿ ಹಟ್ಟಿ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮಗುಚಿ ಬಿದ್ದು ಓರ್ವ ಕಾರ್ಮಿಕ ಮೃತಪಟ್ಟಿದ್ದರು. ನ. 27ರಂದು ಕುಂಟಿಕಾನ್‌ನ ಬಳಿ, ರವಿವಾರ ಕದ್ರಿ ಕಂಬಳದಲ್ಲಿನ ಅಪಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ.
11 ತಿಂಗಳಲ್ಲಿ 106 ಸಾವು, 700 ಮಂದಿ ಗಾಯ
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 2019 ಜನವರಿಯಿಂದ ನವೆಂಬರ್ ವರೆಗಿನ 11 ತಿಂಗಳ ಅವಧಿಯಲ್ಲಿ ನಗರದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 106 ಮಂದಿ ಸಾವನ್ನಪ್ಪಿದ್ದು, 700 ಜನರು ಗಾಯಗೊಂಡಿದ್ದಾರೆ. ಕಳೆದ ನವೆಂಬರ್ ತಿಂಗಳೊಂದರಲ್ಲಿಯೇ 9 ಮಂದಿ ಸಾವನ್ನಪ್ಪಿದ್ದು, 63 ಜನರು ಗಾಯಗೊಂಡಿದ್ದಾರೆ.
ಪರಿಶೀಲಿಸಿ ಕ್ರಮ
ಸಂಚಾರ ವ್ಯವಸ್ಥೆಗೆ ಸಂಬಂಧಿಸಿ ಹಂಪ್, ಸೂಚನಾ ಫಲಕ, ನೋ ಪಾರ್ಕಿಂಗ್ ಫಲಕ, ಝೀಬ್ರಾ ಕ್ರಾಸ್ ಮತ್ತಿತರ ಕಾಮಗಾರಿಗಳ ಪಟ್ಟಿ ಇದೆ. ಅದನ್ನು ಪರಿಶೀಲಿಸಿ, ಸಭೆಯೊಂದನ್ನು ನಡೆಸಿ ಚರ್ಚಿಸಿ ಅನುಷ್ಠಾನ ಮಾಡುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
- ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಮನಪಾ ಆಯುಕ್ತರು
ಸಂಚಾರ ನಿಯಮ ಲಘುವಾಗಿ ಪರಿಗಣಿಸದಿರಿ
ಕೆಲವು ಚಾಲಕರು ವಾಹನ ಚಾಲನೆ, ಸಂಚಾರ ನಿಯಮಗಳನ್ನು ಲಘುವಾಗಿ ಪರಿಗಣಿಸುತ್ತಾರೆ. ಇದು ಅಪಘಾತಕ್ಕೆ ಕಾರಣವಾಗುತ್ತದೆ. ಇದನ್ನು ಗಮನಿಸಿ ಡಿ. 1ರಂದು ಕದ್ರಿ ಕಂಬಳ ಜಂಕ್ಷನ್‌ನಲ್ಲಿ ರಿಕ್ಷಾಕ್ಕೆ ಲಾರಿ ಢಿಕ್ಕಿ ಹೊಡೆದು ಶಿಕ್ಷಕಿ ಸಾವಿಗೆ ಕಾರಣನಾದ ಲಾರಿ ಚಾಲಕನ ವಿರುದ್ಧ ಅಪಘಾತ ಸಾವು ಪ್ರಕರಣದ ಜತೆಗೆ ಕೊಲೆಯಲ್ಲದ ಮಾನವ ಹತ್ಯೆ ಪ್ರಕರಣವನ್ನೂ ದಾಖಲಿಸಿ ಆತನನ್ನು ಜೈಲಿಗೆ ಕಳುಹಿಸಲಾಗಿದೆ.
– ಡಾ| ಹರ್ಷಾ ಪಿ.ಎಸ್., ಮಂಗಳೂರು ಪೊಲೀಸ್ ಆಯುಕ್ತರು
– ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.