ವೈರಿಂಗ್ ಮುಗಿದು 8 ತಿಂಗಳು: ವಿದ್ಯುತ್ತಿಲ್ಲದೆ ಕಂಗಾಲು
Team Udayavani, Nov 3, 2018, 10:20 AM IST
ಉಪ್ಪಿನಂಗಡಿ: ಬಡ ವಿಧವೆಯೊಬ್ಬರಿಗೆ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ವಿದ್ಯುತ್ ಸೌಲಭ್ಯ ಮಂಜೂರಾಗಿದ್ದು, ಕಾಮಗಾರಿ ನಡೆದು ಎಂಟು ತಿಂಗಳಾದರೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಮನೆಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ.
ಕರಾಯ ಗ್ರಾಮದ ಪೇರಲ್ಕೆ ನಿವಾಸಿ ಬೇಬಿ ಅವರ ಕುಟುಂಬ ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿದೆ. ಇವರ ಪತಿ ನಿಧನರಾಗಿದ್ದಾರೆ. ಮಕ್ಕಳೂ ಇಲ್ಲ. ಪೇರಲ್ಕೆಯ ಸಣ್ಣ ಮನೆಯಲ್ಲಿ ವಾಸವಿದ್ದಾರೆ. ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದು, ದೀನ್‌ದಯಾಳ್ ಉಪಾಧ್ಯಾಯ ಯೋಜನೆಯಡಿ ಮನೆಗೆ ಉಚಿತ ವಿದ್ಯುತ್ ಸೌಲಭ್ಯ ಲಭಿಸಿತ್ತು. ಗುತ್ತಿಗೆದಾರರು ವೈರಿಂಗ್ ಕೆಲಸ ನಿರ್ವಹಿಸಿ, ಮೀಟರ್ ಅಳವಡಿಸಿದ್ದಾರೆ. ಇದಾಗಿ ಎಂಟು ತಿಂಗಳು ಕಳೆದರೂ ಮನೆಗೆ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ಬೇಬಿ ಅವರ ಸಹೋದರ ಸುರೇಶ್ ತಿಳಿಸಿದ್ದಾರೆ.
ಗ್ರಾಮಸಭೆಯಲ್ಲಿ ಪ್ರಸ್ತಾವ
ಉಪ್ಪಿನಂಗಡಿ – ಕರಾಯ ಗ್ರಾಮದ ಶಿವಗಿರಿ ಪೇರಲ್ಕೆ ನಿವಾಸಿ ಬೇಬಿ ಅವರು ಚಿಮಿಣಿ ದೀಪದ ಬೆಳಕಿನಲ್ಲೇ ಕಾಲ ಕಳೆಯುವಂತಾಗಿದೆ. ಗುತ್ತಿಗೆದಾರರು ಕೆಲಸ ಮುಗಿಸಿದ್ದರೂ ದಾಖಲೆಗಳನ್ನು ಮೆಸ್ಕಾಂಗೆ ಒದಗಿಸದ ಕಾರಣ ವಿದ್ಯುತ್ ಸಂಪರ್ಕ ನೀಡಿಲ್ಲ ಎಂಬುದು ಗೊತ್ತಾಗಿದೆ. ಈ ಕುರಿತು ಗ್ರಾಮಸಭೆಯಲ್ಲಿ ಮೆಸ್ಕಾಂ ಕಿರಿಯ ಎಂಜಿನಿಯರ್ ಅವರ ಗಮನಕ್ಕೆ ತರಲಾಗಿತ್ತು. ತತ್‌ಕ್ಷಣ ವ್ಯವಸ್ಥೆ ಮಾಡುವುದಾಗಿ ಹೇಳಿ ಹಲವು ತಿಂಗಳೇ ಕಳೆದಿವೆ. ಈ ವರೆಗೂ ಮಹಿಳೆಯ ಮನೆಗೆ ವಿದ್ಯುತ್ ಸಂಪರ್ಕ ಆಗಿಲ್ಲ ಎಂದು ಸ್ಥಳೀಯ ನಿವಾಸಿ ಜಯರಾಮ ಆಚಾರ್ಯ ಆರೋಪಿಸಿದ್ದಾರೆ.
ಅಗತ್ಯ ದಾಖಲೆಗಳನ್ನು ಒದಗಿಸಿಲ್ಲ
ಕಾಮಗಾರಿ ಪೂರ್ತಿಗೊಳಿಸಿದ ದಾಖಲೆ ಪತ್ರಗಳನ್ನು ಗುತ್ತಿಗೆದಾರರು ಮೆಸ್ಕಾಂಗೆ ನೀಡದಿರುವುದೇ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಗ್ರಾಮಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಪಂಚಾಯತ್ ನೀಡಿರುವ ಫಲಾನುಭವಿಗಳ ಪಟ್ಟಿಯಲ್ಲಿರುವ ಕುಟುಂಬಗಳಿಂದ ದಾಖಲಾತಿಗಳನ್ನು ಪಡೆದುಕೊಂಡು ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಬೇಕು. ದ.ಕ. ಜಿಲ್ಲೆಯಲ್ಲಿ ಮಂಗಳೂರಿನ ಜ್ಯೋತಿ ಎಲೆಕ್ಟ್ರಿಕಲ್ಸ್ ಸಂಸ್ಥೆ ಗುತ್ತಿಗೆ ವಹಿಸಿಕೊಂಡಿದೆ. ಕಾಮಗಾರಿಯನ್ನೂ ನಿರ್ವಹಿಸಿದೆ. ಆದರೆ, ಮೆಸ್ಕಾಂಗೆ ದಾಖಲಾತಿ ನೀಡಿದ ಬಳಿಕ ಅಧಿಕಾರಿಗಳು ಪರಿಶೀಲಿಸಿ, ಮನೆಗೆ ಯುಡಿಆರ್ ನಂಬರ್ ನೀಡಿ, ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. ವೈರಿಂಗ್ ಮುಗಿದಿದ್ದರೂ ಅಗತ್ಯ ದಾಖಲೆಗಳನ್ನು ಮೆಸ್ಕಾಂಗೆ ನೀಡದ ಕಾರಣ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಮೆಸ್ಕಾಂನ ಕಲ್ಲೇರಿ ವಿಭಾಗದ ಜೆ.ಇ. ಪ್ರಸನ್ನ ತಿಳಿಸಿದ್ದಾರೆ.
ಎಂ. ಎಸ್. ಭಟ್ ಉಪ್ಪಿನಂಗಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.