ಪ್ರೋತ್ಸಾಹವಿಲ್ಲದೆ ಪ್ರತಿಭಾವಂತರು ವಿದೇಶದ ಪಾಲಾಗುತ್ತಾರೆ!
Team Udayavani, Nov 18, 2017, 4:27 PM IST
ಪುತ್ತೂರು ತಾಲೂಕಿನ ಕೆದಿಲ ಗ್ರಾಮದ ಮುರ್ದಜೆ ಶ್ರೀರಾಂ ಭಟ್ ಮತ್ತು ಮಲ್ಲಿಕಾ ಅವರ ಪುತ್ರ, ನಗರದ ವಿವೇಕಾನಂದ ಪ.ಪೂ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸ್ವಸ್ತಿಕ್ ಪದ್ಮ ವಿಜ್ಞಾನ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ ಯುವ ಸಂಶೋಧಕ. ಇಲ್ಲಿಯ ತನಕ 12 ಪ್ರಾಜೆಕ್ಟ್ ರೂಪಿಸಿದ್ದು, ಹಲವು ರಾಷ್ಟ್ರೀಯ ಪ್ರಶಸ್ತಿಗಳು, ಅಮೆರಿಕದಲ್ಲಿ ನಡೆದ ಐಸೆಫ್‌ನಲ್ಲಿ ವಿಶೇಷ ಆವಾರ್ಡ್ ಸೇರಿದಂತೆ ಎರಡು ಅಂತಾರಾಷ್ಟ್ರೀಯ ಗೌರವ ಸಂದಿವೆ. ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಅಸಾಧರಣ ಪ್ರತಿಭಾ ಪುರಸ್ಕಾರ ಪಡೆದ ಸಾಧಕರು. ಈ ಹಿನ್ನೆಲೆಯಲ್ಲಿ ‘ಉದಯವಾಣಿ ಸುದಿನ’ ‘ದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ವಿಜ್ಞಾನ ಮಾದರಿ ನಿರ್ಮಾಣದ ಬಗ್ಗೆ ಆಸಕ್ತಿ ಮೂಡಲು ಕಾರಣ ಏನು?
ಎಳೆವೆಯಿಂದಲೇ ಸಂಶೋಧನೆ ಬಗ್ಗೆ ಆಸಕ್ತಿ ಇತ್ತು. ಈ ತೆರನಾಗಿ ಮಾಡಿದರೆ ಏನಾಗಬಹುದು? ಏನು ಫಲಿತಾಂಶ ಬರಬಹುದು? ಎಂದು ತಿಳಿದುಕೊಳ್ಳುವ ಉತ್ಸಾಹವೇ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಮೂಡಲು ಕಾರಣ. ನನಗೆ ಮೂಲ ವಿಜ್ಞಾನ ಬಗೆಗಿನ ಆಸಕ್ತಿ ಕಡಿಮೆ ಇತ್ತು. ಈಗಿರುವುದಕ್ಕಿಂತಲೂ ಹೊಸತಾಗಿ ಏನನ್ನು ಸೃಷ್ಟಿಸಬಹುದು ಎಂಬ ಕುತೂಹಲ ಮೂಡುತಿತ್ತು. ಅದೇ ಪ್ರವೃತ್ತಿ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ತೊಡಗಿಕೊಳ್ಳು ವಂತಾಯಿತು. ಯಾವ ವಯಸ್ಸಿನಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರಿ? ಐದನೆ ತರಗತಿಯಿಂದಲೇ ಪ್ರಾಜೆಕ್ಟ್ ತಯಾರಿಸುವ ಆಸಕ್ತಿ ಮೂಡಿತ್ತು. ಅದು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಮಾಡಿದ್ದಲ್ಲ. ಬಾಲ್‌ಗೆ ನೀರು ಹಾಕಿ ಅದನ್ನು ರಾಕೆಟ್ ತರಹ ಮಾಡಿ ಹಾರಿಸುವುದು ಇತ್ಯಾದಿ ಮಾದರಿಗಳನ್ನು ತಯಾರಿಸಿದ್ದೆ. 7 ನೇ ತರಗತಿಯಲ್ಲಿದ್ದಾಗ ಪ್ರಾಜೆಕ್ಟ್ ತಯಾರಿಯಲ್ಲಿ ತೊಡಗಿಕೊಂಡೆ. ನಾಚಿಕೆ ಮುಳ್ಳಿನಿಂದ ಸುಟ್ಟ ಗಾಯಗಳಿಗೆ ಹಚ್ಚಲು ಪೇಸ್ಟ್ ತಯಾರಿಸಿದ್ದು ಮೊದಲ ಸಂಶೋಧನ ಪ್ರಾಜೆಕ್ಟ್.
ನಿಮ್ಮ ಆಸಕ್ತಿಗೆ ಮನೆ ಮಂದಿಯ ಸಹಕಾರ ಹೇಗಿತ್ತು?
ನನ್ನ ಕುಟುಂಬದಲ್ಲಿ ವಿಜ್ಞಾನ ಸಂಶೋಧನೆಯಲ್ಲಿ ತೊಡಗಿಸಿಕೊಂಡವರು ಇಲ್ಲ. ಬಹುಶಃ ನಾನೇ ಮೊದಲಿಗನಿರಬಹುದು. ಅಪ್ಪ ಉಪನ್ಯಾಸಕ. ತಾಯಿ ಗೃಹಿಣಿ. ಅಜ್ಜಿ ಇದ್ದಾರೆ. ನನ್ನ ಸಂಶೋಧನಾ ಆಸಕ್ತಿಗೆ ಪೂರ್ಣ ಸ್ವಾತಂತ್ರ್ಯ ಮತ್ತು ಪ್ರೋತ್ಸಾಹ ಸಿಕ್ಕಿದೆ. ಶಾಲೆಯಲ್ಲಿಯೂ ಬೆಂಬಲವಿದೆ. ಅವೆಲ್ಲವೂ ನನ್ನ ಸಾಧನೆಗೆ ಕಾರಣ.
ಸಂಶೋಧನ ನಿರತ ಸೈನ್ಸ್ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳ ಕೊರತೆ ಇದೆ ಎಂಬ ಮಾತು ಇದೆ, ನಿಜವಾ?
ಪುತ್ತೂರಿನಂತಹ ಪ್ರದೇಶದಲ್ಲಿ ಸಂಶೋಧನಾ ನಿರತ ವಿದ್ಯಾರ್ಥಿಗಳಿಗೆ ಬೇಕಾದ ಪೂರಕ ವ್ಯವಸ್ಥೆಗಳು ಇಲ್ಲ. ಹಾಗಾಗಿ ಲ್ಯಾಬ್‌ಗಾಗಿ ಮಂಗಳೂರು ಅಥವಾ ಇತರ ಭಾಗಗಳಿಗೆ ತೆರಳಬೇಕಿದೆ. ಪ್ರತಿ ವರ್ಷವೂ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುತ್ತೂರಿನಿಂದ ಪ್ರಾಜೆಕ್ಟ್ ಮಂಡನೆ ಆಗುತ್ತಿದೆ. ಇಲ್ಲಿ ಸಂಶೋಧನಾ ನಿರತ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಇಲ್ಲಿ ಸುಸಜ್ಜಿತ ಲ್ಯಾಬ್, ಗೈಡ್‌ಗಳ ಸೌಲಭ್ಯ ಸಿಕ್ಕರೆ ಗ್ರಾಮೀಣ ಪ್ರದೇಶದ ನಮ್ಮಂಥವರಿಗೆ ಅನುಕೂಲವಾಗುತ್ತದೆ.
ಸಂಶೋಧನೆಗೆ ಖರ್ಚು ಅಧಿಕ; ಸರಕಾರದ ನೆರವು ಸಿಗುತ್ತದಾ?
ಸಂಶೋಧನೆಗೆ ಲಕ್ಷಾಂತ ರೂ. ಖರ್ಚು ಬರುತ್ತದೆ. ಬೇರೆ-ಬೇರೆ ಪ್ರಾಜೆಕ್ಟ್ ತಯಾರಿ ಸಂದರ್ಭ ಅದಕ್ಕೆ ಬೇಕಾದ ಪರಿಕರಗಳ ಆಧಾರದಲ್ಲಿ ಖರ್ಚು ಅವಲಂಬಿಸಿರುತ್ತದೆ. ಆದರೆ ರಾಜ್ಯ ಅಥವಾ ಕೇಂದ್ರ ಸರಕಾರದಿಂದ ಸಂಶೋಧನಾ ನಿರತರಿಗೆ ನಯಾಪೈಸೆ ಸಹಾಯಧನ ಸಿಗದು. ನ್ಪೋರ್ಟ್ಸ್ ಕೋಟಾ, ಜನರಲ್ ಕೋಟಾ ಮೊದಲಾದವುಗಳಿವೆ. ಆದರೆ ವಿಜ್ಞಾನಕ್ಕೆ ಸಂಬಂಧಿಸಿ ಯಾವುದೇ ಕೋಟಾ ಇಲ್ಲ. ಮೀಸಲಾತಿ ಇಲ್ಲ. ಕೊನೆಯ ಪಕ್ಷ, ಸಹಾಯಧನ, ಪ್ರೋತ್ಸಾಹಧನ ಕೊಡದಿದ್ದರೂ, ಸಂಶೋಧನೆ ಮಾಡುವ ಯುವ ವಿಜ್ಞಾನಿಗಳ ಉನ್ನತ ವ್ಯಾಸಂಗದ ಸಂದರ್ಭದಲ್ಲಿ ಮೀಸಲು, ಸೀಟು ಕಾದಿರಿಸುವಿಕೆಯಂತಹ ಅವಕಾಶ ಕಲ್ಪಿಸಬೇಕು. ಭಾರತದಲ್ಲಿ ಯುವ ಸಂಶೋಧಕರಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಹಾಗಾಗಿ ಬಹುತೇಕರು ವಿದೇಶಕ್ಕೆ ತೆರಳುತ್ತಾರೆ. ಇಲ್ಲಿ ಪ್ರೋತ್ಸಾಹ ಕೊಟ್ಟರೆ, ಸಂಶೋಧಕರು ಸೃಷ್ಟಿಯಾಗುತ್ತಾರೆ. ಅದರಿಂದ ದೇಶಕ್ಕೂ ಲಾಭವಾಗುತ್ತದೆ.
ನಿಮ್ಮ ಸಾಧನೆಯಲ್ಲಿ ಯಾರನ್ನು ನೆನೆಪಿಸಿಕೊಳ್ಳುತ್ತೀರಿ?
ಮೊದಲಿಗೆ ನಾನು ನೆನಪಿಸಿಕೊಳ್ಳುವುದು ‘ನಿನ್ನಿಂದ ಇದು ಆಗಲಿಕ್ಕೆ ಇಲ್ಲ ಎಂದವರನ್ನು’. ಕಾರಣ ಅವರ ಮಾತಿನಿಂದಲೇ ನನಗೆ ಯಾಕೆ ಆಗದು ಎಂಬ ಛಲ ಮೂಡಿದ್ದು. ಸಾಧನೆ ಮಾಡಬೇಕು ಎಂದೆನಿಸಿದ್ದು. ಹಾಗಾಗಿ ಮೊದಲಿಗೆ ಸಾಧ್ಯವಿಲ್ಲ ಎಂದು ಹೇಳಿದವರನ್ನು ನೆನಪಿಸಿಕೊಳ್ಳುವೆ. ಅನಂತರ ಆಗುತ್ತೆ ಎಂದು ಪ್ರೋತ್ಸಾಹಿಸಿದವರನ್ನು ಸ್ಮರಿಸಿಕೊಳ್ಳುತ್ತೇನೆ. ಎಲ್‌ಕೆಜಿಯಿಂದ ಹತ್ತನೇ ತರಗತಿ ತನಕ ಓದಿದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎಲ್ಲ ವಿಜ್ಞಾನ ಶಿಕ್ಷಕರನ್ನು, ಮುಖ್ಯವಾಗಿ, ಶಾಲಾ ಮುಖ್ಯಗುರು ಸತೀಶ್ ರೈ, ವಿಜ್ಞಾನ ಶಿಕ್ಷಕಿಯರಾದ ಶಾರದಾ, ಸಿಂಧೂ, ಪೂರ್ಣಲತಾ, ರೇಖಾ ಮೊದಲಾದವರನ್ನು ನೆನಪಿಸಿಕೊಳ್ಳಲೇಬೇಕು.
ಯುವ ಸಂಶೋಧನೆಗೆ ತೊಡಗಿಸಿ ಕೊಳ್ಳುವವರಿಗೆ ನಿಮ್ಮ ಕಿವಿ ಮಾತು ಏನು?
ಪ್ರಾಜೆಕ್ಟ್ ಮಾಡುವ ಯೋಚನೆ ಬಂದಾಗ, ಇತರರಿಗೆ ಕಾಯಬಾರದು. ಅವರು ಬೇಕು-ಬೇಡ ಎಂದಾಗ ನಮ್ಮ ತಲೆಯೊಳಗೆ ನಕಾರಾತ್ಮಕ ಭಾವನೆ ಮೂಡುತ್ತದೆ. ಹಾಗಾಗಿ ಪ್ರಥಮವಾಗಿ ತಲೆಯೊಳಗೆ ಹೊಳೆದ ಯೋಚನೆಯನ್ನು ಕಾರ್ಯಗತಗೊಳಿಸಲು ಮುಂದಡಿಯಿಡಬೇಕು. ಇದು ನನ್ನ ಸ್ವ ಅನುಭವದ ಮಾತು. ಸಂಶೋಧನೆ ಇಂತಿಷ್ಟು ಸಮಯದಲ್ಲಿ ಮುಗಿಯುತ್ತದೆ ಎಂದು ಸಮಯ ನಿಗದಿ ಪಡಿಸಲು ಸಾಧ್ಯವಿಲ್ಲ. ಸಂಶೋಧನಾ ಹಾದಿಯಲ್ಲಿ ಸೋಲು- ಗೆಲುವು ಎದುರಾಗುತ್ತದೆ. ಸೋತಾಗ ಎದೆ ಗುಂದದೆ ಅಂತಿಮ ಫಲಿತಾಂಶದ ತನಕ ಕಾಯುವ ತಾಳ್ಮೆ ಬೇಕು. ಆಗ ಗುರಿ ತಲು ಪಲು ಸಾಧ್ಯವಿದೆ.
ಪ್ರೋತಾಹ ಹೇಗಿದೆ?
ಇಲ್ಲಿ ಪ್ರೋತ್ಸಾಹ ನೀಡುವವರ ಕೊರತೆ ಹೆಚ್ಚು. ಉದಾಹರಣೆಗೆ ನಾನೊಂದು ಪ್ರಾಜೆಕ್ಟ್ ಮಾಡಿದರೆ, ಅದಕ್ಕೆ ಸಂಬಂಧಿಸಿ 100 ಮಂದಿಯನ್ನು ಸಂಪರ್ಕಿಸುತ್ತೇನೆ. ಅವರಲ್ಲಿ 90 ಜನ ಅದಾಗದು. ಸುಮ್ಮನೆ ಯಾಕೆ ಪ್ರಯತ್ನ ಮಾಡುವುದು ಅನ್ನುತ್ತಾರೆ. ಉಳಿದ ಹತ್ತು ಮಂದಿ ಪ್ರಯತ್ನಿಸು ಎನ್ನುತ್ತಾರೆ. ನಮಗೆ ಬೇಕಿರುವುದು 90 ಜನ ಮಾಡು, ಆಗುತ್ತೆ ಅನ್ನುವವರು. ಆಗ ನಮ್ಮಲ್ಲಿ ಇನ್ನಷ್ಟು ಆಸಕ್ತಿ ಮೂಡುತ್ತದೆ.
ಮುಂದಿನ ಗುರಿಯೇನು?
ಎಲ್ಲರಿಗೂ ಪ್ರಯೋಜನವಾಗುವ, ಕಡಿಮೆ ಖರ್ಚಿನಲ್ಲಿ ದೊರೆಯುವ, ಹೆಚ್ಚು ಯೋಗ್ಯವಾಗಿರುವ ಪ್ರಾಜೆಕ್ಟ್ ವೊಂದನ್ನು ತಯಾರಿಸುವ ಬಯಕೆ ಇದೆ. ನನ್ನ ಸಂಶೋಧನೆಗಳನ್ನು ಉತ್ಪನ್ನವಾಗಿ ಮಾರ್ಪಡಿಸಿ ಮಾರುಕಟ್ಟೆಗೆ ತರುವ ಬಗ್ಗೆಯೂ ಅಧ್ಯಯನ ನಡೆಸಲಿದ್ದೇನೆ. ಓರ್ವ ಸಂಶೋಧಕನಾಗಿ, ಈ ದೇಶದ ಜನರಿಗೆ ಸಹಕಾರ ಆಗುವ ಪ್ರಾಜೆಕ್ಟ್ ರೂಪಿಸುವತ್ತ ಆಸಕ್ತಿ ಹೊಂದಿದ್ದೇನೆ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.