ನಿರ್ವಹಣೆ ನಿರ್ಲಕ್ಷ್ಯ ಗುಣಮಟ್ಟ ಕಳೆದುಕೊಳ್ಳುತ್ತಿವೆ ರಸ್ತೆಗಳು!
Team Udayavani, Jun 23, 2018, 3:00 AM IST
ಪುತ್ತೂರು: ಉತ್ತಮ ರಸ್ತೆ ಹಾಗೂ ಸಮರ್ಪಕ ಸಾರಿಗೆ ವ್ಯವಸ್ಥೆ ಯಾವುದೇ ಊರಿನ ಅಭಿವೃದ್ಧಿಗೆ ಪೂರಕ. ಪ್ರಸ್ತುತ ಎಲ್ಲ ಊರುಗಳಿಗೆ ರಸ್ತೆ ವ್ಯವಸ್ಥೆ ಇದೆಯಾದರೂ ರಸ್ತೆಗಳ ಸಮರ್ಪಕ ನಿರ್ವ ಹಣೆಯ ಕೊರತೆಯಿಂದ ರಸ್ತೆಗಳ ಬಾಳ್ವಿಕೆ ಕಡಿಮೆಯಾಗುತ್ತಿದೆ. ಸ್ಥಳೀಯವಾಗಿ ಇರುವ ಜಿ. ಪಂ. ರಸ್ತೆಗಳಿಂದ ಹಿಡಿದು ಲೋಕೋಪಯೋಗಿ ರಸ್ತೆ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳಲ್ಲೂ ಮಳೆಗಾಲದಲ್ಲಿ ನೀರು ಹರಿಯುತ್ತಿದೆ. ಇದರಿಂದ ರಸ್ತೆ ಅಲ್ಲಲ್ಲಿ ಗುಳಿಬಿದ್ದು, ಸಂಚಾರಕ್ಕೆ ತೊಡಕಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವಾಗಿ ಗೋಚರಿಸುವುದು ಸಮರ್ಪಕ ಚರಂಡಿ ವ್ಯವಸ್ಥೆಯ ಅಭಾವ.
ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಹಾದು ಹೋಗುವ, ಈಗ ರಾಷ್ಟ್ರೀಯ ರಸ್ತೆಯಾಗಿ ಮೇಲ್ದರ್ಜೆಗೇರಿರುವ ಮಾಣಿ -ಮೈಸೂರು ಹೆದ್ದಾರಿಯ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಈ ಹೆದ್ದಾರಿಯ ಕಾಮಗಾರಿ ಮುಗಿದು 3 ವರ್ಷ ಕಳೆದರೂ ಮಳೆಗಾಲದಲ್ಲಿ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಈ ಕಾರಣದಿಂದ ಪುತ್ತೂರಿನಿಂದ ಕೌಡಿಚ್ಚಾರು ತನಕ 15 ಕಿ.ಮೀ. ವ್ಯಾಪ್ತಿಯನ್ನು ತೆಗೆದುಕೊಂಡರೂ ಕನಿಷ್ಠ 50ಕ್ಕೂ ಮಿಕ್ಕಿ ಹೊಂಡಗಳಿವೆ. ದೊಡ್ಡ ಗಾತ್ರದ ಹೊಂಡ ಸಂಚಾರಕ್ಕೆ ಸವಾಲಾಗಿದೆ.
ಹೆದ್ದಾರಿ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿರುವ ಕೆ.ಆರ್.ಡಿ.ಸಿ.ಎಲ್. ಸಂಸ್ಥೆಗೆ ನಿರ್ವಹಣೆಯ ಜವಾಬ್ದಾರಿಯೂ ಇದೆ. ಲೋಕೋಪಯೋಗಿ ರಸ್ತೆಗಳ ನಿರ್ವಹಣೆಗೆ ಹಲವು ಎಂಜಿನಿಯರ್ ಗಳಿರುವ ಲೋಕೋ ಪಯೋಗಿ ಇಲಾಖೆ ಇದೆ. ಇನ್ನು ಜಿ.ಪಂ. ಎಂಜಿನಿಯರಿಂಗ್ ಇಲಾಖೆಯೂ ಇದೆ. ಅಸಮರ್ಪಕ ಚರಂಡಿಯಿಂದ ಮಳೆಗೇ ಗುಂಡಿಗಳು ಬಿದ್ದು, ಸಂಚಾರ ವ್ಯವಸ್ಥೆ ಅಲ್ಲೋಲ ಕಲ್ಲೋಲ ಆಗುವ ಸ್ಥಿತಿ ಮುಂದುವರೆಯುತ್ತಲೇ ಇದೆ.
ಗ್ಯಾಂಗ್‌ಮೆನ್ ವ್ಯವಸ್ಥೆ ದೂರ
ಹಿಂದೆ ಲೋಕೋಪಯೋಗಿ ರಸ್ತೆಗಳ ನೈರ್ಮಲ್ಯ ಕಾಪಾಡಲು ‘ಗ್ಯಾಂಗ್ ಮೆನ್’ ಎಂಬ ತಂಡವೂ ಇಲಾಖೆಯಲ್ಲಿತ್ತು. ಪುತ್ತೂರು ಉಪವಿಭಾಗದ ಲೋಕೋಪಯೋಗಿ ಇಲಾಖೆಯಲ್ಲಿ 60 ಮಂದಿ ಗ್ಯಾಂಗ್‌ಮೆನ್‌ಗಳಿದ್ದರು. ಲೋಕೋಪಯೋಗಿ ಇಲಾಖೆಯಡಿಯಲ್ಲಿ ಬರುವ ಪ್ರತಿಯೊಂದು ರಸ್ತೆಗೂ 4ರಿಂದ 5 ಮಂದಿ ಗ್ಯಾಂಗ್ ಮೆನ್ ಗಳಿದ್ದು, ಮಳೆಗಾಲ ಆರಂಭವಾದರೆ ಸಾಕು ಹಾರೆ ಪಿಕ್ಕಾಸು ಹಿಡಿದುಕೊಂಡು ರಸ್ತೆಯ ಎರಡೂ ಭಾಗದ ಚರಂಡಿಗಳನ್ನು ರಿಪೇರಿ ಮಾಡುತ್ತಿದ್ದರು. ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಇವರದ್ದಾಗಿತ್ತು. ಆದರೆ ಈಗ ಪುತ್ತೂರು ಉಪವಿಭಾಗದ ಗ್ಯಾಂಗ್‌ಮೆನ್‌ಗಳ ಸಂಖ್ಯೆ ಕೇವಲ 2 ಕ್ಕೆ ಇಳಿಕೆಯಾಗಿದೆ. ಗ್ಯಾಂಗ್ ಮೆನ್ ವ್ಯವಸ್ಥೆ ಇಲಾಖೆಯಿಂದ ದೂರವಾಗುತ್ತಿದ್ದು, ಗ್ಯಾಂಗ್ ಮೆನ್ ಗಳು ಹುದ್ದೆಯಿಂದ ನಿವೃತ್ತಿ ಗೊಂಡರೆ ಆ ಹುದ್ದೆಯೇ ರದ್ದುಗೊಳ್ಳುವಂತೆ ನಿಯಮ ಬಂದು ಬಿಟ್ಟಿದೆ. ಚರಂಡಿ ದುರಸ್ತಿಗೂ ಟೆಂಡರ್ ಕರೆದು ಗುತ್ತಿಗೆದಾರರು ಈ ಕಾಮಗಾರಿ ನಡೆಸಬೇಕು. ಮಳೆಗಾಲದ ಮೊದಲು ಮಾಡಬೇಕಾದ ಈ ಚರಂಡಿ ದುರಸ್ತಿ ಕಾಮಗಾರಿ ಗುತ್ತಿಗೆದಾರರಿಗೆ ಸಮಯ ಸಿಕ್ಕಾಗ ನಡೆಸುವ ಕಾಮಗಾರಿಯಾಗಿ ಮಾರ್ಪಟ್ಟಿದೆ. ಹೀಗಾಗಿ ರಸ್ತೆಗಳು ಹಾಳಾಗುವುದನ್ನು ತಡೆಯುವಲ್ಲಿ ಇಲಾಖೆ ವೈಫಲ್ಯ ಕಂಡಿದೆ.
ಸೂಕ್ತ ಕ್ರಮ
ಕೆಲವು ಭಾಗಗಳಲ್ಲಿ ಈಗಾಗಲೇ ಚರಂಡಿಯನ್ನು ಸಮರ್ಪಕಗೊಳಿಸುವ ಕೆಲಸ ಮಾಡಲಾಗಿದೆ. ಈಗ ಗುತ್ತಿಗೆದಾರರೇ ಈ ಕೆಲಸ ಮಾಡಬೇಕಾಗಿರುವುದರಿಂದ ಅನನುಕೂಲ ಉಂಟಾಗುತ್ತಿದೆ. ಆದ್ಯತೆಯ ಜಾಗಗಳನ್ನು ಗಮನಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು.
– ಪ್ರಮೋದ್ ಕುಮಾರ್, ಎಂಜಿನಿಯರ್, PWD
ಸರಕಾರಕ್ಕೆ ಒತ್ತಾಯ
ಎಲ್ಲಿ ಹೋದರೂ ರಸ್ತೆಯಲ್ಲಿ ನೀರು ಹರಿದು ರಸ್ತೆ ಹಾಳಾಗಿರುವ ದೃಶ್ಯಗಳು ಕಂಡುಬರುತ್ತಿವೆ. ರಸ್ತೆಗಳ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕನಿಷ್ಟ ಹೊರಗುತ್ತಿಗೆ ಆಧಾರದಲ್ಲಿಯಾದರೂ ಗ್ಯಾಂಗ್‌ಮೆನ್‌ಗಳ ನೇಮಕಾತಿ ನಡೆಯಬೇಕು. ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಸರಕಾರವನ್ನು ಒತ್ತಾಯಿಸಬೇಕು.
– ನಾಗರಾಜ್, ಶಿಕ್ಷಕರು
— ರಾಜೇಶ್ ಪಟ್ಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.