ಬ್ಯಾಟ್- ಚೆಂಡಿನೊಂದಿಗೆ ಆಡಿ ಸಂಭ್ರಮಿಸಿದ ಮಹಿಳಾ ಮಣಿಗಳು
Team Udayavani, Jun 4, 2018, 10:51 AM IST
ಮಹಾನಗರ : ಇಂದಿನ ದಿನಗಳಲ್ಲಿ ಕ್ರಿಕೆಟ್ ಹೆಚ್ಚಿನ ಜನಪ್ರಿಯತೆಗಳಿಸುತ್ತಿದ್ದು, ಬೇರೆ ಬೇರೆ ಸಂಘಟನೆ ಗಳು ದೊಡ್ಡ ಮಟ್ಟದ ಪಂದ್ಯವನ್ನು ಆಯೋಜಿಸುತ್ತಲೇ ಇರುತ್ತವೆ. ಅದೆಲ್ಲವೂ ಪುರುಷರಿಗೆ ಮೀಸಲಾದ ಪಂದ್ಯಗಳಾಗಿವೆ. ಆದರೆ ರವಿವಾರ ನಗರದ ಉರ್ವ ಮೈದಾನ ಮಹಿಳೆಯರ ಕ್ರಿಕೆಟ್ ಪಂದ್ಯಾಟವೊಂದಕ್ಕೆ ಸಾಕ್ಷಿಯಾಗಿದೆ.
ಇದೇ ಮೊದಲ ಬಾರಿಗೆ ಪಂದ್ಯಾಟ
ನಗರದ ಪಾತ್‌ವೇ ಸಂಸ್ಥೆಯು ಇದೇ ಮೊದಲ ಬಾರಿಗೆ ‘ಫಸ್ಟ್ ವಿಮೆನ್ಸ್ ಕ್ರಿಕೆಟ್ ಚಾಂಪಿಯನ್‌ಶಿಪ್- 2018’ ಅನ್ನು ಆಯೋಜಿಸುವ ಮೂಲಕ ಮಹಿಳೆಯರೂ ಕ್ರಿಕೆಟ್‌ನಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡಿದೆ. ಈ ಹಿಂದೆ ಲಗೋರಿ ಪಂದ್ಯ ವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಿ, ಗ್ರಾಮೀಣ ಕ್ರೀಡೆಗೆ ಆಧುನಿಕ ಸ್ಪರ್ಶ ನೀಡುವ ಕಾರ್ಯವನ್ನು ಪಾತ್‌ವೇ ಮಾಡಿತ್ತು.
‘ಕ್ರಿಕೆಟ್‌ದ ಗೊಬ್ಬು…’
ಬ್ಯಾಟ್ ಬೀಸುವಾಗ, ಚೆಂಡು ಹಿಡಿಯುವಾಗ ಒಂದೆರಡು ಸಣ್ಣಪುಟ್ಟ ತಪ್ಪುಗಳಾದರೂ ಉಳಿದಂತೆ ಪುರುಷರಿಗೆ ಯಾವ ರೀತಿಯಲ್ಲೂ ಕಡಿಮೆ ಇಲ್ಲದಂತೆ ಪಾಲ್ಗೊಂಡರು. ಈ ಪಂದ್ಯಾಟಕ್ಕಾಗಿಯೇ ‘ಕ್ರಿಕೆಟ್‌ದ ಗೊಬ್ಬು’ ಎಂಬ ತುಳು ಸಾಹಿತ್ಯದ ಹಾಡೊಂದನ್ನು ಸಂಯೋಜಿಸಿ, ಪಂದ್ಯಾಟದ ಮಧ್ಯೆ ಪದೇ ಪದೇ ಈ ಹಾಡನ್ನು ಹಾಕುವುದರ ಮೂಲಕ ಆಟಗಾರ್ತಿಯರಲ್ಲಿ ಉತ್ಸಾಹ ತುಂಬುವ ಕಾರ್ಯ ಮಾಡಲಾಗುತ್ತಿತ್ತು. ವಿಜೇತರಿಗೆ ಟ್ರೋಫಿಯ ಜತೆಗೆ ನಗದು ಬಹುಮಾನ, ಮೂರು ಉತ್ತಮ ಆಟಗಾರರಿಗೆ ಮೊಬೈಲ್ ಹೀಗೆ ಆಕರ್ಷಕ ಬಹುಮಾನಗಳೂ ಅಲ್ಲಿದ್ದವು.
ಕ್ರಿಕೆಟ್ ಉದ್ಘಾಟನೆ
ಪಂದ್ಯಾಟವನ್ನು ಎಂಆರ್‌ಎಸ್ ಇಂಡಿಯಾದ ನಿರ್ದೇಶಕಿ ಪ್ರತಿಭಾ ಉದ್ಘಾಟಿಸಿದ್ದು, ಅತಿಥಿಗಳಾಗಿ ಉದ್ಯಮಿ ಮರ್ಸಿ ವೀಣಾ ಡಿ’ಸೋಜಾ, ಸಂವೇದನಾ ಟ್ರಸ್ಟ್‌ನ ಜಯಲತಾ ಎಸ್. ಅಮೀನ್, ಪರಿವರ್ತನಾ ಚಾರಿಟೆಬಲ್ ಟ್ರಸ್ಟ್‌ನ ಸಂಸ್ಥಾಪಕಿ ವಾಯಿಲೇಟ್ ಪಿರೇರಾ, ಕಾರ್ಯದರ್ಶಿ ಸಂಜನಾ ಎಸ್., ಮಹಿಳಾ ಕ್ರಿಕೆಟ್ ಚಾಂಪಿಯನ್‌ಶಿಪ್ ಮಂಡಳಿಯ ಅಧ್ಯಕ್ಷೆ ಮೊನಿಕಾ ಅಂದ್ರಾದೆ, ಲಾಲ್‌ಬಾಗ್ ಜೇಸಿಐ ಅಧ್ಯಕ್ಷೆ ಸೌಜನ್ಯಾ ಹೆಗ್ಡೆ, ಜಯಶ್ರೀ, ವರ್ಷಿಲ್ ಅಂಚನ್ ಮೊದಲಾದವರು ಪಾಲ್ಗೊಂಡಿದ್ದರು.
ಒಟ್ಟು ಎಂಟು ತಂಡಗಳು
ವಿಮೆನ್ಸ್ ಕ್ರಿಕೆಟ್ ಚಾಂಪಿಯನ್ ಶಿಪ್‌ನಲ್ಲಿ ಒಟ್ಟು ಎಂಟು ತಂಡಗಳು ಪಾಲ್ಗೊಂಡಿದ್ದು, ಸುಮಾರು ನೂರಕ್ಕೂ ಅಧಿಕ ಮಹಿಳಾ ಆಟಗಾರರು ಕ್ರಿಕೆಟ್‌ನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಂಗಳೂರು ಸೇರಿದಂತೆ ಉಡುಪಿ, ವಿಟ್ಲ, ಮಣಿಪಾಲ ಆಟಗಾರರಿದ್ದರು. ಕ್ವೀನ್ ಇಲೆವೆನ್ ಕುಡ್ಲ, ವಂಡರ್ ಗರ್ಲ್ಸ್ ತುಳುನಾಡು, ಕುಡ್ಲ ರಾಕರ್, ಪಿಂಕ್ ಪ್ಯಾಂಥರ್ ಕಲ್ಮಾಡಿ, ಮಂಗಳಸ್ಪೋರ್ಟ್ಸ್, ಎಂ.ಎಂಡಬ್ಲ್ಯೂ ವಾರಿಯರ್, ರಾಕ್‌ಸ್ಟಾರ್ ಮಣಿಪಾಲ್, ಜಸ್ಟ್ ಫಾರ್
ಯೂ ತಂಡಗಳು ಭಾಗವಹಿಸಿದ್ದವು.
ಉತ್ತಮ ಸ್ಪಂದನೆ
ತಾಯಂದಿರ ದಿನದ ಅಂಗವಾಗಿ ಈ ಕ್ರಿಕೆಟ್ ಪಂದ್ಯ ವನ್ನು ಆಯೋಜಿಸಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಬೇಕಾಯಿತು. ಈ ಪಂದ್ಯಾಟಕ್ಕೆ ತಂಡಗಳಿಂದ ಉತ್ತಮ ಸ್ಪಂದನೆ ದೊರಕಿದ್ದು, ಮಹಿಳಾ ಉದ್ಯಮ ಸಂಸ್ಥೆಗಳ ಜತೆಗೆ ಸಂವೇದನಾ ಟ್ರಸ್ಟ್ ಕೂಡ ನಮಗೆ ಸಹಕಾರ ನೀಡಿದೆ.
– ದೀಪಕ್ ಗಂಗೂಲಿ, ಮುಖ್ಯಸ್ಥ, ಪಾತ್‌ವೇ ಸಂಸ್ಥೆ
ದಾಂಡೇಲಿಯಿಂದ ಆಗಮಿಸಿದ್ದೇನೆ
ಮಹಿಳೆಯರಿಗಾಗಿ ಕ್ರಿಕೆಟ್ ಆಯೋಜಿಸಿದ ಪಾತ್‌ವೇ ಸಂಸ್ಥೆಗೆ ವಂದನೆಯನ್ನು ಸಲ್ಲಿಸುತ್ತಿದ್ದೇವೆ. ತಾನು ಜಿಎಸ್‌ಬಿ ತಂಡದಲ್ಲಿ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದು, ಈಗ ದಾಂಡೇಲಿಯಿಂದ ಈ ಪಂದ್ಯಾಟಕ್ಕಾಗಿಯೇ ಆಗಮಿಸಿದ್ದೇನೆ. ಇಲ್ಲಿ ಸುರೇಖಾ ಅವರು ನಾಯಕಿಯಾಗಿರುವ ಕುಡ್ಲ ರಾಕರ್ ತಂಡದಲ್ಲಿದ್ದೇನೆ.
- ಸಹನಾ ಕಾಮತ್,
ಆಟಗಾರ್ತಿ, ಕುಡ್ಲ ರಾಕರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.