ನೋಂದಣಿಯಾದರೂ ಕಾರ್ಮಿಕರಿಗೆ ಸಿಗದ ಸ್ಮಾರ್ಟ್ ಕಾರ್ಡ್ ನರೇಗಾ: ಶುಲ್ಕ ಪಡೆದು ವಂಚನೆ?
Team Udayavani, Oct 3, 2019, 5:49 AM IST
ಸುಳ್ಯ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾರ್ಮಿಕರಿಂದ ರಾಜ್ಯ ಮಟ್ಟದ ಖಾಸಗಿ ಸಂಸ್ಥೆಯೊಂದು ನೋಂದಣಿ ಹೆಸರಿನಲ್ಲಿ ತಲಾ 75 ರೂ. ಪಡೆದು ಒಂದು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸುವುದಾಗಿ ಹೇಳಿದ್ದು, ತಿಂಗಳು ಎಂಟು ಕಳೆದರೂ ಫಲಾನುಭವಿಗಳ ಕೈ ಸೇರಿಲ್ಲ.
ದ.ಕ., ಉಡುಪಿ ಜಿಲ್ಲೆ ಸೇರಿದಂತೆ ನಾನಾ ಜಿಲ್ಲೆಗಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಕಾರದ ಸೂಚನೆಯಂತೆ ಏಜೆನ್ಸಿಯು ನರೇಗಾ ಉದ್ಯೋಗ ಚೀಟಿ ಹೊಂದಿರುವ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ ಅಡಿ ನೋಂದಾಯಿಸಿ ಸವಲತ್ತು ನೀಡುವುದಾಗಿ ಹಣ ಪಡೆದಿತ್ತು.
ಏನಿದು ಯೋಜನೆ?
ನರೇಗಾ ಯೋಜನೆಯಡಿಯ ಕಾರ್ಮಿಕರನ್ನು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ ಅಡಿ ನೋಂದಾಯಿಸಿ ಕುಟುಂಬ ಸದಸ್ಯರ ಸಹಿತ ವಿವಿಧ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯ ನೀಡಲು 2018ರಲ್ಲಿ ರಾಜ್ಯ ಸರಕಾರ ಆದೇಶಿಸಿತ್ತು. ಇದರನ್ವಯ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಸರಕಾರಿ ಸ್ವಾಮ್ಯದ ಕಿಯೋನಿಕ್ಸ್ ಸಂಸ್ಥೆಗೆ ಕಾರ್ಯಾದೇಶ ನೀಡಿತ್ತು. ಕಿಯೋನಿಕ್ಸ್ ಟೆಂಡರ್ ಮೂಲಕ ಐಕ್ಯ ಎಂಬ ಸಂಸ್ಥೆಗೆ ನೋಂದಣಿ ಗುತ್ತಿಗೆ ನೀಡಿತ್ತು.
ಹಣ ತೆತ್ತರೂ ಕಾರ್ಡ್ ಸಿಗಲಿಲ್ಲ
ಐಕ್ಯ ಬ್ಯುಸಿನೆಸ್ ಸೊಲ್ಯೂಶನ್ ಪ್ರೈ.ಲಿ. ಸಂಸ್ಥೆ ಗ್ರಾ.ಪಂ.ಗಳಿಗೆ ತೆರಳಿ ಪ್ರತಿ ಫಲಾನುಭವಿಗಳಿಂದ ತಲಾ 75 ರೂ. ಪಡೆದು ನೋಂದಾಯಿಸಿದೆ. ಜಿಲ್ಲೆಯ ಬಹುತೇಕ ಪಂ.ಗಳ ವ್ಯಾಪ್ತಿಯಲ್ಲಿ ಸರಾಸರಿ 100 ಮಂದಿ ಹಣ ಪಾವತಿಸಿದ್ದಾರೆ. ಸ್ಮಾರ್ಟ್‌ಕಾರ್ಡ್ ಬಾರದಿರುವ ಬಗ್ಗೆ ಗ್ರಾಮ ಸಭೆಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಗ್ರಾ.ಪಂ.ಗಳಿಂದ ತಾ.ಪಂ.ಗೆ ದೂರು ನೀಡಲಾಗಿದೆ.
ಜವಾಬ್ದಾರಿ ಯಾರು ಎಂಬ ಗೊಂದಲ
ಸರಕಾರದ ಸುತ್ತೋಲೆ ಪ್ರಕಾರ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮೂಲಕ ನೋಂದಣಿ ಅನುಷ್ಠಾನದ ಜವಾಬ್ದಾರಿ ಹೊಂದಿದೆ. ಜಿಲ್ಲಾ ಅಥವಾ ತಾಲೂಕು ಮಟ್ಟದ ಇಲಾಖೆಗಳಿಗೆ ಹೊಣೆಗಾರಿಕೆ ಇಲ್ಲ. ನೋಂದಣಿ ಸಂಸ್ಥೆಗೆ ಸಂಪರ್ಕ ಮಾಹಿತಿ ಮಾತ್ರ ನೀಡಲು ಸೂಚಿಸಲಾಗಿದೆ.
ಮೊದಲ ಹಂತದಲ್ಲಿ ಆಯ್ದ 8 ಜಿಲ್ಲೆಗಳಲ್ಲಿ ನೋಂದಣಿ ಪ್ರಾರಂಭಗೊಂಡಿತ್ತು. ಕೆಲವೆಡೆ ಶುಲ್ಕ ನೀಡಲು ಕಾರ್ಮಿಕರು ಹಿಂಜರಿದಿದ್ದರು. ಈ ಸಂದರ್ಭ ಸ್ಮಾರ್ಟ್‌ಕಾರ್ಡ್ ನೀಡಿ ಅನಂತರ ಶುಲ್ಕ ಪಡೆಯಲು ಸೂಚಿಸಲಾಗಿತ್ತು.
ಅರ್ಧದಲ್ಲೇ ಸ್ಥಗಿತ
ಉದ್ಯೋಗ ಖಾತರಿ ಕಾರ್ಮಿಕರು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ವ್ಯಾಪ್ತಿಗೆ ಬರುವುದಿಲ್ಲ ಎಂಬ ಸುಪ್ರಿಂ ಕೋರ್ಟ್ ಆದೇಶ ಇದೆ ಎಂದು ನೋಂದಣಿ ಪ್ರಕ್ರಿಯೆಯನ್ನೇ ರದ್ದುಗೊಳಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಮಿಕ ಇಲಾಖೆ ಅಥವಾ ಜಿಲ್ಲಾಡಳಿತವನ್ನು ಪ್ರಶ್ನಿಸಿದರೆ, ಇದು ಜಿಲ್ಲಾಮಟ್ಟದ ಆದೇಶ ಅಲ್ಲ, ಸರಕಾರದ ಕಾರ್ಯದರ್ಶಿ ಆದೇಶದ ಪ್ರಕಾರ ಸಂಸ್ಥೆ ನೋಂದಣಿ ಮಾಡಿದೆ ಎನ್ನುತ್ತಾರೆ.
ನಮ್ಮಲ್ಲಿ ಗ್ರಾ.ಪಂ.ಗಳಿಗೆ ತೆರಳುವ ಬಗ್ಗೆ ಒಪ್ಪಿಗೆ ಪಡೆದುಕೊಂಡಿದ್ದು ಮಾತ್ರ. ಕಾರ್ಮಿಕ ಇಲಾಖೆ ಮೂಲಕ ಏಜೆನ್ಸಿ ಬರುವ ಸುತ್ತೋಲೆ ಇತ್ತು. ಕಳಂಜ ಗ್ರಾ.ಪಂ.ನಿಂದ ಸ್ಮಾರ್ಟ್ ಕಾರ್ಡ್ ಸಿಗದಿರುವ ಬಗ್ಗೆ ತಾ.ಪಂ. ಸಭೆಗಳಲ್ಲಿ ಪ್ರಸ್ತಾವವಾಗಿದೆ.
– ಭವಾನಿಶಂಕರ್ ಎನ್. ಕಾರ್ಯನಿರ್ವಾಹಕ ಅಧಿಕಾರಿ, ಸುಳ್ಯ
ಕಳಂಜ ಗ್ರಾ.ಪಂ.ನಲ್ಲಿ 2018ರ ನ. 24ರಂದು ಐಕ್ಯ ಸಂಸ್ಥೆ ನರೇಗಾ ಉದ್ಯೋಗ ಚೀಟಿ ಹೊಂದಿರುವ 100 ಮಂದಿಯಿಂದ ತಲಾ 75 ರೂ.ಪಡೆದು ನೋಂದಣಿ ಮಾಡಿತ್ತು. ಎಂಟು ತಿಂಗಳು ಕಳೆದರೂ ಕಾರ್ಡ್ ಬಂದಿಲ್ಲ. ಇಂತಹ ದೂರು ಹಲವು ಗ್ರಾ.ಪಂ. ವ್ಯಾಪ್ತಿಯಲ್ಲಿದೆ.
ಜಾಹ್ನವಿ ಕಾಂಚೋಡು, ಸುಳ್ಯ ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ
ರಾಜ್ಯ ಮಟ್ಟದಲ್ಲಿ ಆದೇಶ ಪಡೆದು ಏಜೆನ್ಸಿ ಸಂಸ್ಥೆಯೊಂದು ನೇರ ನೋಂದಣಿ ಜವಾಬ್ದಾರಿ ಪಡೆದಿತ್ತು. ಜಿಲ್ಲಾ ಮಟ್ಟದಲ್ಲಿ ಕಾರ್ಮಿಕ ಇಲಾಖೆಗೆ ಇದರ ಹೊಣೆಗಾರಿಕೆ ಇಲ್ಲ. ಅದರ ಕಾರ್ಯವ್ಯಾಪ್ತಿಯೂ ತಿಳಿದಿಲ್ಲ. ಜಿಲ್ಲಾ ಮಟ್ಟದ ಇಲಾಖೆಗಳಿಗೆ ನಾವು ನಿರ್ದೇಶನ ನೀಡಿಲ್ಲ. ಸಂಸ್ಥೆ ಹಣ ಪಡೆದುಕೊಂಡ ಬಗ್ಗೆಯೂ ನಮಗೆ ಮಾಹಿತಿ ನೀಡಿಲ್ಲ.
– ನಾಗರಾಜ, ಅಸಿಸ್ಟೆಂಟ್ ಲೇಬರ್ ಕಮಿಷನರ್, ಕಾರ್ಮಿಕ ಇಲಾಖೆ
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.