ಸತ್ಕರ್ಮದಿಂದ ಲೋಕ ಕಲ್ಯಾಣ: ಶೃಂಗೇರಿ ಶ್ರೀ
Team Udayavani, Dec 13, 2017, 11:35 AM IST
ಉಳ್ಳಾಲ: ಸತ್ಕರ್ಮದೊಂದಿಗೆ ಸತ್ಯ, ಧರ್ಮದ ಹಾದಿಯಲ್ಲಿ ಸಾಗಿದಾಗ ಲೋಕ ಕಲ್ಯಾಣವಾಗುತ್ತದೆ ಎಂದು ಶ್ರೀ ಶೃಂಗೇರಿ ಶಾರದಾ ಪೀಠಾಧಿಪತಿ ಶ್ರೀ ಭಾರತೀತೀರ್ಥ ಸ್ವಾಮೀಜಿ ನುಡಿದರು.
ಕೋಟೆಕಾರು ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶೃಂಗೇರಿ ಶಾರದಾ ಪೀಠದ 35ನೇ ಪೀಠಾಧಿಪತಿ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಜನ್ಮ ಶತಮಾನೋತ್ಸವ ಪ್ರಯುಕ್ತ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಶ್ರೀ ಶಂಕರರು ತನ್ನ ಅನಂತರವೂ ಧರ್ಮದ ಪ್ರಚಾರ ಗಂಗೆಯಂತೆ ಹರಿಯಬೇಕು ಎನ್ನುವ ಉದ್ದೇದಿಂದ ನಾಲ್ಕು ಪೀಠ ಸ್ಥಾಪಿಸಿದರು. ಶ್ರೀ ವಿದ್ಯಾತೀರ್ಥ ಸ್ವಾಮಿಗಳು ತಮ್ಮ ಕಾಲದಲ್ಲಿ ಧರ್ಮದ ಪ್ರಚಾರವನ್ನು ಉತ್ತಮ ರೀತಿಯಲ್ಲಿ ನಡೆಸಿದ್ದರು. ವಿದ್ಯಾ ತೀರ್ಥರು ಪೀಠಾಧಿಪತಿಯಾಗಿದ್ದ ಕಾಲವನ್ನು ಸುವರ್ಣ ಅಕ್ಷರದಲ್ಲಿ ಬರೆಯುವಂಥದ್ದು ಎಂದ ಅವರುಗುರು ವಿದ್ಯಾತೀರ್ಥರ ಬಹುದೊಡ್ಡ ಕನಸಾಗಿದ್ದ ಕೋಟೆಕಾರು ಶಾಖಾ ಮಠವನ್ನು ಅಭಿವೃದ್ಧಿ ಪಡಿಸಲು ಮಂಗಳೂರಿನ ಆಸ್ತಿಕ ಜನತೆ ಮುಂದಾಗಬೇಕು ಎಂದರು.
ತತ್ಕರಕಮಲಸಂಜಾತ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿ ಮಾತನಾಡಿ, ಗುರು ಅನುಗ್ರಹ ಹಾಗೂ ಮಾರ್ಗದರ್ಶನ ಇದ್ದರೆ ಮಾತ್ರ ನಾವು ಬದುಕಿನಲ್ಲಿ ಉನ್ನತಿಗೇರಲು ಸಾಧ್ಯ ಎಂದರು.
ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷ ಕೆ. ಜಯರಾಮ್ ಭಟ್, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಹಾಬಲೇಶ್ವರ ಭಟ್, ಶ್ರೀ ಶೃಂಗೇರಿ ಶಂಕರ ಪೀಠದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಆಡಳಿತಾಧಿಕಾರಿ ಡಾ| ವಿ.ಆರ್. ಗೌರೀಶಂಕರ್ ಮಾತನಾಡಿದರು. ಸಮಿತಿಯ ಕೆ.ಸಿ. ನಾಯ್ಕ, ಉತ್ಸವ ಸಮಿತಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಫಲ ಸಮರ್ಪಿಸಿದರು. ಕೋಟೆಕಾರು ಶ್ರೀ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಪ್ರಸ್ತಾವನೆಗೈದು, ಸ್ವಾಗತಿಸಿದರು. ವೇ|ಮೂ| ಬ್ರಹ್ಮಶ್ರೀ ಟಿ. ಶಿವಕುಮಾರ್ ಶರ್ಮ ಶೃಂಗೇರಿ ವಿದ್ಯಾತೀರ್ಥ ಸ್ವಾಮಿಗಳ ಕುರಿತು ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ವತಿಯಿಂದ ಉಭಯ ಸ್ವಾಮಿಗಳಿಗೆ ಪೌರ ಸನ್ಮಾನ ನಡೆಯಿತು. ಜನ್ಮಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯ ದರ್ಶಿ, ನಿವೃತ್ತ ತಹಶೀಲ್ದಾರ್ ಕೊಯ್ಲ ಮೋಹನ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.