ನಾಗಾರಾಧನೆ ಸಂಸ್ಕೃತಿಯ ಭಾಗ ‘
Team Udayavani, Jul 28, 2017, 9:40 AM IST
ವಿಟ್ಲ: ಮೂಲನಂಬಿಕೆ ಎಂದರೆ ಪ್ರಕೃತಿಯಷ್ಟೇ ಸತ್ಯ. ಪ್ರಕೃತಿಯಲ್ಲಿ ಸಹಜವಾಗಿ ಮತ್ತು ನಿರಂತರ ಪರಿವರ್ತನೆಯನ್ನು ಕಾಣಬಹುದು. ಪ್ರಕೃತಿಯನ್ನು ಮರೆತರೆ ಬದುಕಿಲ್ಲ. ಅದನ್ನು ಮೂಢನಂಬಿಕೆ ಎಂದು ಪರಿಗಣಿಸಿದರೆ ಅನಾಹುತವಿದೆ. ನಾಗರ ಪಂಚಮಿ ತುಳುನಾಡಿನ ಆರಂಭದ ಜ್ಯೇಷ್ಠ ಹಬ್ಬ. ನಾಗಾರಾಧನೆ ಸಂಸ್ಕೃತಿಯ ಭಾಗ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಗುರುವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಾಗರಪಂಚಮಿ ಮಹೋತ್ಸವದ ಪ್ರಯುಕ್ತ ವಿಶೇಷ ಸಂದೇಶ ನೀಡಿದರು.
ಸ್ವಾಸ್ಥ್ಯ ಕಾಪಾಡುವುದಕ್ಕೆ ಸ್ವಚ್ಛವಾಗಿರಬೇಕು. ಶಾರೀರಿಕ, ಮಾನಸಿಕ ಸ್ವಚ್ಛತೆಯಿಂದ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಧರ್ಮವು ಅರ್ಥಪೂರ್ಣ ಬದುಕು ರೂಪಿಸಿಕೊಳ್ಳಲು ರಾಜ ಮಾರ್ಗವಾಗಿದೆ. ಯುವಕರು ರಾಷ್ಟ್ರ ಸೇನಾನಿಗಳಾಗುವುದರ ಜತೆಗೆ ಧರ್ಮ ಸೇನಾನಿಗಳಾಗಬೇಕಾಗಿದೆ. ಧರ್ಮ ಸಂರಕ್ಷಣೆಗೆ ಯುವ ಶಕ್ತಿ ಜಾಗೃತವಾಗುವುದು ಅನಿವಾರ್ಯ ಎಂದು ಹೇಳಿದರು. ಬದುಕು ಯಾಂತ್ರಿಕವಾಗಬಾರದು. ಮೊಬೈಲ್, ಟಿವಿ, ಇತರ ಆಧುನಿಕ ತಂತ್ರಜ್ಞಾನಗಳು ಅವಶ್ಯವಿದ್ದಷ್ಟೇ ಬಳಸಬೇಕು. ಆಧ್ಯಾತ್ಮಿಕ ಒಲವು ಇರಬೇಕು. ಆ ಮೂಲಕ ಸಂಸ್ಕೃತಿ, ಸಂಸ್ಕಾರದ ಉಳಿವು ಸಾಧ್ಯ ಎಂದರು.
ಸಾಧ್ವೀ ಶ್ರೀ ಮಾತಾನಂದಮಯಿ ಉಪಸ್ಥಿತರಿದ್ದರು. ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸ್ವಯಂಭೂ ನಾಗಸನ್ನಿಧಿಯಲ್ಲಿ ನಾಗತಂಬಿಲ, ಪಂಚಾಮೃತ ಅಭಿಷೇಕ, ಆಶ್ಲೇಷ ಬಲಿಪೂಜೆ ನಡೆಯಿತು. ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ ಮೂಲಕಾಸುರ ಕಾಳಗ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.