ಹಳದಿ ರೋಗ ವ್ಯಾಪಕ: ಪರಿಹಾರವಿಲ್ಲದೆ ತತ್ತರಿಸಿದ ಕೃಷಿಕ
Team Udayavani, Feb 5, 2018, 11:49 AM IST
ಸುಳ್ಯ : ತಾಲೂಕಿನ ಸಂಪಾಜೆ ಪರಿಸರದಲ್ಲಿ 44 ವರ್ಷಗಳ ಹಿಂದೆ ಅಡಿಕೆ ಕೃಷಿಗೆ ಕಾಣಿಸಿಕೊಂಡ ಹಳದಿ ಎಳೆ ರೋಗ ಸರ್ವವ್ಯಾಪ್ತಿಯಾಗಿ ಹಬ್ಬುತ್ತಿದ್ದು, ರೋಗ ನಿಯಂತ್ರಣಕ್ಕೆ ಪರಿಹಾರ ಸಿಗದ ಕಾರಣ ಕೃಷಿ ಕುಟುಂಬಗಳು ತತ್ತರಿಸಿವೆ.
ಸಂಪಾಜೆ, ಚೆಂಬು, ಪೆರಾಜೆ ಮೊದಲಾದ ಗ್ರಾಮದಲ್ಲಿ ಅಡಿಕೆ ಕೃಷಿ 90 ಶೇ.ದಷ್ಟು ನಾಶವಾಗಿದ್ದು, ಪರ್ಯಾಯ ಬೆಳೆಯತ್ತ ಜನರು ಮುಖ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ತೋಟಗಳಿಗೆ ರೋಗ ಹಬ್ಬುತ್ತಿದ್ದು, ಅಡಿಕೆಯನ್ನು ವಾಣಿಜ್ಯ ಬೆಳೆಯನ್ನಾಗಿ ನಂಬಿರುವ ಕುಟುಂಬಗಳು ಬೀದಿಗೆ ಬೀಳುವ ಅಪಾಯದಲ್ಲಿವೆ.
ಹಳದಿ ರೋಗ
44 ವರ್ಷದ ಹಿಂದೆ ಆರಂಭಗೊಂಡ ಈ ಹಳದಿ ರೋಗ ಅಡಿಕೆಗೆ ತಗಲಿರುವ ಲಕ್ಷಣ ಕಾಣಿಸುಕೊಳ್ಳುವುದು ನಾಶದ ಅಂಚಿನಲ್ಲಿ. ಆರಂಭಿಕ ರೋಗ ಲಕ್ಷಣ ಬಿಟ್ಟುಕೊಡದ ಕಾರಣ, ಇದಕ್ಕೆ ಪರಿಹಾರ ಏನು ಎಂಬ ಬಗ್ಗೆ ಉತ್ತರ ಸಿಕ್ಕಿಲ್ಲ. ಅಡಿಕೆ ಹಣ್ಣಾಗದಿರುವುದು, ಹಣ್ಣಾದ ಅಡಿಕೆ ಗುಣಮಟ್ಟ ಇಲ್ಲದಿರುವುದು, ಫಸಲು ಕಡಿಮೆ ಆಗುವುದು, ಕ್ರಮೇಣ ಎಲೆಯು ಹಳದಿ ಬಣ್ಣಕ್ಕೆ ತಿರುಗಿ ಅಡಿಕೆ ಗಿಡ ನಶಿಸುವುದು ಇದರ ಲಕ್ಷಣ. ರೋಗ ಸಾಂಕ್ರಾಮಿಕವಾಗಿದ್ದು, ಒಂದು ಗಿಡಕ್ಕೆ ತಗಲಿತೆಂದರೆ ಉಳಿದೆಲ್ಲ ಗಿಡಗಳಿಗೂ ವ್ಯಾಪ್ತಿಸುತ್ತದೆ.
ಸಂಪಾಜೆ, ಅರಂತೋಡು, ತೊಡಿಕಾನ, ಅಲೆಟ್ಟಿ, ಮರ್ಕಂಜ, ಮಡಪ್ಪಾಡಿ, ಕಲ್ಮಕಾರುಗಳಲ್ಲಿ ಕಾಣಿಸಿಕೊಂಡಿರುವ ಹಳದಿ
ರೋಗ, ಈಗ ನೆರೆಯ ಗ್ರಾಮಗಳಲ್ಲಿಯೂ ಗೋಚರಿಸಿದೆ. ಒಟ್ಟು 5000 ಎಕರೆ ತೋಟ ನಾಶವಾಗಿದೆ. ಪುತ್ತೂರು ತಾಲೂಕಿನ ಬೆಳಂದೂರು ಜಿ.ಪಂ. ಕ್ಷೇತ್ರದ ವ್ಯಾಪ್ತಿಯ ಕೆಲ ತೋಟಗಳಲ್ಲಿ ಹಳದಿ ರೋಗದ ಲಕ್ಷಣ ಕಂಡು ಬಂದಿದೆ ಎಂಬ ಕುರಿತು ಸುದ್ದಿ ಹರಡಿತ್ತು. ಅದಿನ್ನೂ ಖಾತರಿ ಆಗಿಲ್ಲ.
ರೋಗ ಏನು ಅನ್ನುವ ಬಗ್ಗೆ ಇನ್ನು ಖಚಿತ ಉತ್ತರ ಬಂದಿಲ್ಲ. ವಿಟ್ಲದ ಸಿಪಿಸಿಆರ್‌ಐ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅವರಿಂದಲೂ ರೋಗ ಅಥವಾ ನಿಯಂತ್ರಣಕ್ಕೆ ಬೇಕಾದ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಕಾಂಡದಲ್ಲಿ ಬೇರು ಹುಳ ರೋಗ ಕಾಣಿಸಿಕೊಂಡ ಸಂದರ್ಭದಲ್ಲಿಯು ಮೈಸೂರಿನಿಂದ ವಿಜ್ಞಾನಿಗಳು ಬಂದು ಪರಿಶೀಲಿಸಿದ್ದಾರೆ. ಅವರಿಂದಲೂ ಉತ್ತರ ಸಿಗಲಿಲ್ಲ.
ಬೆಳೆಯೂ ಇಲ್ಲ, ಪರಿಹಾರವೂ ಇಲ್ಲ
ಹಳೆ ಅಡಿಕೆ ಕಡಿದು ಹೊಸ ನಾಟಿ ಮಾಡಿದರೂ ಅದರಿಂದ ಪ್ರಯೋಜನ ಸಿಕ್ಕಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಅಡಿಕೆ ಗಿಡ ಬೆಳವಣಿಗೆ ಕಂಡಿಲ್ಲ. ಇನ್ನೂ ಈ ರೋಗದಿಂದ ನಾಶಗೊಂಡಿದ್ದಕ್ಕೆ ಪರಿಹಾರ ಕೊಡಿ ಎಂದು ರೈತರು ವಿವಿಧ ಇಲಾಖೆ, ಸರಕಾರಗಳಿಗೆ ಬೇಡಿಕೆ ಇಟ್ಟಿದ್ದರೂ ಪರಿಹಾರ ಸಿಕ್ಕಿಲ್ಲ. ಜನಪ್ರತಿನಿಧಿಗಳು ಸ್ಪಂದಿಸುವ ಉತ್ಸಾಹ ತೋರಿಸಿಲ್ಲ. ಇದರ ಮಧ್ಯೆ ಜೀವನ ನಿರ್ವಹಣೆಯ ಅನಿವಾರ್ಯತೆಗಾಗಿ ಕೆಲ ರೈತರು, ಪರ್ಯಾಯ ಬೆಳೆಯತ್ತ ಚಿಂತನೆ ನಡೆಸಿ, ತಾಳೆಬೆಳೆಯನ್ನು ನಾಟಿ ಮಾಡಿದ್ದಾರೆ.
ಭೀಮ್ ಫಸಲ್ ವ್ಯಾಪ್ತಿಗೆ
ಹಳದಿ ರೋಗದಿಂದ ಕೃಷಿಕರು ಸಂಕಷ್ಟಕ್ಕೆ ಒಳಗಾಗಿರುವುದು ಗಮನದಲ್ಲಿದೆ. ಅದಕ್ಕಾಗಿ ಪ್ರಧಾನಮಂತ್ರಿ ಫಸಲ್ ಭೀಮ್
ಯೋಜನಾ ವ್ಯಾಪ್ತಿಗೆ ಅಡಿಕೆ ಮತ್ತು ತೆಂಗು ಬೆಳೆಯನ್ನು ಸೇರ್ಪಡೆಗೊಳಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರವೇ ಆ ಬೇಡಿಕೆ ಈಡೇರಲಿದೆ.
– ನಳಿನ್ ಕುಮಾರ್ ಕಟೀಲು, ಸಂಸದ
ಪ್ರತಿಭಟನೆಗೆ ತೀರ್ಮಾನ
ದ.ಕ. ಮತ್ತು ಕೊಡಗು ಜಿಲ್ಲೆಯಲ್ಲಿ 3000 ಹೆಕ್ಟೇರಿಗಿಂತಲೂ ಅಧಿಕ ತೋಟಗಳು ಹಳದಿ ರೋಗದಿಂದ ನಾಶ ಹೊಂದಿದ್ದು, ರೈತರಿಗೆ ಎಕರೆಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಮಂಗನ ಉಪಟಳದಿಂದ 1250 ಕೋಟಿ ರೂ. ನಷ್ಟ ಉಂಟಾಗಿದ್ದು, ಮಂಕಿ ಪಾರ್ಕ್ ಸ್ಥಾಪಿಸಬೇಕು. ರಬ್ಬರ್ ಬೆಳೆಗೆ ಕೇರಳ ಮಾದರಿಯಲ್ಲಿ ಕಿಂಟಲ್‌ಗೆ 16,000 ರೂ. ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ರೈತ
ಸಂಘ-ಹಸಿರುಸೇನೆಯ ಆಶ್ರಯದಲ್ಲಿ ಫೆ. 9ರಂದು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದೇವೆ.
– ತೀರ್ಥರಾಮ ಗೌಡ, ಅಧ್ಯಕ್ಷರು, ರೈತ
ಸಂಘ, ಹಸಿರುಸೇನೆ, ತೊಡಿಕಾನ ಘಟಕ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.